Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ಎಸ್.ಎಲ್. ಭೈರಪ್ಪನವರ ‘ಮಂದ್ರ’
    Article

    ಪುಸ್ತಕ ವಿಮರ್ಶೆ | ಎಸ್.ಎಲ್. ಭೈರಪ್ಪನವರ ‘ಮಂದ್ರ’

    March 30, 2026No Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕನ್ನಡ ಸಾಹಿತ್ಯದಲ್ಲಿ ಸಂಗೀತ ಮತ್ತು ಸಂಗೀತಗಾರರನ್ನು ಪ್ರಧಾನವಾಗಿಟ್ಟುಕೊಂಡು ಕೆಲವು ಕಾದಂಬರಿಗಳು ಪ್ರಕಟವಾಗಿವೆ. ಮಾಸ್ತಿಯವರ ‘ಸುಬ್ಬಣ್ಣ’, ಅ. ನ. ಕೃ. ಅವರ ‘ಸಂಧ್ಯಾರಾಗ’, ತ. ರಾ. ಸು. ಅವರ ‘ಹಂಸಗೀತೆ’ ಕಾದಂಬರಿಗಳು ಇದಕ್ಕೆ ಉದಾಹರಣೆಗಳಾಗಿವೆ. ಇಂಥ ಕಥನಗಳು ಸಾಮಾನ್ಯವಾಗಿ ನಾಯಕ ಪ್ರಧಾನವಾಗಿದ್ದು ಆಯಾ ಕಲಾವಿದರ ವೈಯಕ್ತಿಕ ಜೀವನದ ಕಡೆಗೆ ಬೆಳಕು ಚೆಲ್ಲುತ್ತವೆ. ಎಸ್.ಎಲ್. ಭೈರಪ್ಪನವರ ಮಹತ್ವಾಕಾಂಕ್ಷಿ ಕಾದಂಬರಿ ‘ಮಂದ್ರ’ ಈ ಪರಂಪರೆಗೆ ಸೇರಿಯೂ ಹಲವು ನೆಲೆಗಳಲ್ಲಿ ಭಿನ್ನವೆನಿಸಿಕೊಳ್ಳುತ್ತದೆ.

    ಮೋಹನಲಾಲ ಎಂಬ ಸಂಗೀತಗಾರನ ಬದುಕನ್ನು ಹೆಣೆದ ‘ಮಂದ್ರ’ವು ಪಾತ್ರಪ್ರಧಾನವಾಗಿದ್ದರೂ, ಅದರಲ್ಲಿ ಇತರ ಸಂಗೀತಗಾರರ ವೈವಿಧ್ಯಮಯ ಚಿತ್ರಗಳು ದಾಖಲಾಗಿವೆ. ಸಂಗೀತದ ಪೋಷಕರು, ರಸಿಕರು, ವಿಮರ್ಶಕರು ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡು ಸಂಗೀತ ಪ್ರಪಂಚದ ಹಲವು ಮುಖಗಳು, ಕಲಾ ಜಗತ್ತಿನ ಒಳಸುಳಿಗಳು ಅನಾವರಣಗೊಂಡಿವೆ. ಹವ್ಯಾಸಕ್ಕಾಗಿ ಸಂಗೀತವನ್ನು ಕಲಿಯುವವರು, ಹಣ ಮತ್ತು ಕೀರ್ತಿಗಾಗಿ ಸಂಗೀತವನ್ನು ಆಶ್ರಯಿಸುವವರು, ಸಂಗೀತದ ಮೂಲಕ ಇತರರನ್ನು ಆಕ್ರಮಿಸುವವರು, ರಂಜಿಸಲೆಂದು ಹಾಡುವವರು, ಸಂಗೀತವು ಅಧ್ಯಾತ್ಮ ಸಾಧನೆಯ ಮಾರ್ಗವೆಂದು ತಿಳಿದವರು, ಹೀಗೆ ಹಲವು ಬಗೆಯ, ವಿವಿಧ ಮಟ್ಟದ ಸಾಧಕರನ್ನು ಕಾಣಲು ಸಾಧ್ಯವಿದೆ. ಲೌಕಿಕ ಯಶಸ್ಸಿಗಾಗಿ ಸಂಗೀತವನ್ನು ಬಳಸಿಕೊಂಡವರು, ಅದನ್ನು ಜೀವನೋಪಾಯದ ವೃತ್ತಿಯಾಗಿ ಸ್ವೀಕರಿಸಿಕೊಂಡವರು, ಅದರಿಂದ ಇತರರನ್ನು ಶೋಷಿಸಿದವರು, ಅದಕ್ಕಾಗಿ ತಮ್ಮ ಮಾನ ಮರ್ಯಾದೆಗಳನ್ನು ಬಲಿಗೊಟ್ಟವರು, ಅದರ ನೆಪದಲ್ಲಿ ಸಂಸಾರವನ್ನು ಕಟ್ಟಿಕೊಂಡವರು, ಸಂಸಾರವನ್ನು ನಾಶಮಾಡಿಕೊಂಡವರು ಈ ಕಾದಂಬರಿಯಲ್ಲಿ ಪಾತ್ರಗಳಾಗಿ ಬಂದಿದ್ದಾರೆ. ಕಾದಂಬರಿಯ ಕೆಲವು ಭಾಗಗಳನ್ನು ಸ್ವತಂತ್ರ ಕತೆಗಳಾಗಿ, ನೀಳ್ಗತೆಗಳಾಗಿಯೂ ಓದಬಹುದು.

    ಎರಡು ಮೂರು ಕಾದಂಬರಿಗಳಾಗಿ ಕವಲೊಡೆಯಬಹುದಾಗಿದ್ದ ಸಾಮಾಗ್ರಿಯು ತನ್ನ ಮುಕ್ತ ವಿನ್ಯಾಸದಿಂದಾಗಿ ಬೃಹತ್‌ ರೂಪವನ್ನು ತಾಳಿದೆ. ಮೇಲ್ನೋಟಕ್ಕೆ ಪ್ರತ್ಯೇಕವೆನಿಸುವ ಭಾಗಗಳನ್ನು ಸಂಗೀತವು ಕಾದಂಬರಿಯ ಒಟ್ಟು ಬಂಧದಲ್ಲಿ ಬೆಸೆಯುತ್ತದೆ. ಕೇಂದ್ರ ಪಾತ್ರವಾದ ಮೋಹನಲಾಲನು ಇತರ ಪಾತ್ರಗಳೊಂದಿಗೆ ವಿವಿಧ ರೀತಿಯಲ್ಲಿ ಸಂಬಂಧವನ್ನು ಇಟ್ಟುಕೊಂಡಿರುವುದರಿಂದ ಕಾದಂಬರಿಯ ಸಂವಿಧಾನದಲ್ಲಿ ಐಕ್ಯತೆಯಿದೆ. ಪಾತ್ರಗಳು ತಮ್ಮ ಸುತ್ತಲಿನ ಲೋಕವನ್ನು, ಅನುಭವಗಳನ್ನು ಪರಿಭಾವಿಸುವ ಮತ್ತು ಅಭಿವ್ಯಕ್ತಿಸುವ ರೀತಿಯು ಸಂಗೀತದ ಪರಿಭಾಷೆಯಿಂದ ಕೂಡಿದೆ. ರಾಗಗಳ, ರಾಗವಿನ್ಯಾಸಗಳ ನುಡಿಗಟ್ಟಿನಲ್ಲಿ ಅವರು ತಮ್ಮ ಭಾವಸ್ಥಿತಿಗಳನ್ನು, ಭಾವ ವೈಪರೀತ್ಯಗಳನ್ನು ವಿವರಿಸುತ್ತಾರೆ. ಈ ದೃಷ್ಟಿಯಿಂದ ಕಾದಂಬರಿಯು ಸಂಗೀತಮಯವಾಗಿದೆ. ಸಂಗೀತವೇ ಮುಖ್ಯ ವಸ್ತುವಾಗಿ, ಸಂಗೀತದ ನುಡಿಗಟ್ಟು ಭಾಷಿಕ ವಿನ್ಯಾಸದ ಭಾಗವಾಗಿರುವ ‘ಮಂದ್ರ’ವು ಈ ಬಗೆಯ ಇತರ ಕಾದಂಬರಿಗಳಿಗಿಂತ ವಿಶಿಷ್ಟವೆನಿಸುತ್ತದೆ.

    ಮಾಸ್ತಿಯವರ ‘ಸುಬ್ಬಣ್ಣ’ದಲ್ಲಿ ಸಂಗೀತವು ಸುಬ್ಬಣ್ಣನನ್ನು ಯೋಗಿಯ ಮಟ್ಟಕ್ಕೆ ತಲುಪಿಸುತ್ತದೆ. ಅ. ನ. ಕೃ. ಅವರ ‘ಸಂಧ್ಯಾರಾಗ’ದ ಲಕ್ಷ್ಮಣನ ಪಾತ್ರಕ್ಕೂ ಈ ಮಾತು ಅನ್ವಯವಾಗುತ್ತದೆ. ತ. ರಾ. ಸು. ಅವರ ‘ಹಂಸಗೀತೆ’ಯಲ್ಲಿ ವೆಂಕಟಸುಬ್ಬಯ್ಯನ ಪಾತ್ರವು ವರ್ಣರಂಜಿತವಾಗಿದೆ. ಮಹತ್ವಾಕಾಂಕ್ಷೆ, ಅಹಂಕಾರ, ಚಂದ್ರಾಸಾನಿಯ ಮೇಲಿನ ಮೋಹ ತೀವ್ರವಾಗಿದ್ದರೂ ಗರ್ವಭಂಗದ ಬಳಿಕ ಆತನು ವಿರಕ್ತನೂ, ವಿನಯಶೀಲನೂ ಆಗಿ, ಸಂಗೀತವನ್ನು ದೇವರ ಸೇವೆಯನ್ನಾಗಿಸಿಕೊಳ್ಳುತ್ತಾನೆ. ‘ಮಂದ್ರ’ದ ಮೋಹನಲಾಲನದ್ದು ಇವರಿಗಿಂತ ವಿಸ್ತಾರವಾದ, ಸಮೃದ್ಧ ವಿವರ ವರ್ಣನೆಗಳಲ್ಲಿ ಮೂಡಿದ ಪಾತ್ರವಾಗಿದೆ. ಸಂಗೀತದ ಮೂಲಕ ಆತನು ಗಳಿಸಿದ ಜನಪ್ರಿಯತೆ, ಲೌಕಿಕ ಯಶಸ್ಸು, ಲಂಪಟತನ, ನೈತಿಕ ಕಟ್ಟುಪಾಡುಗಳಿಗೆ ಒಗ್ಗದ ಬದುಕಿನ ಕಡೆಗೆ ಕಾದಂಬರಿಯು ಹೆಚ್ಚಿನ ಒತ್ತು ನೀಡುತ್ತದೆ. ಮಾಸ್ತಿ, ಅ. ನ. ಕೃ, ತ. ರಾ. ಸು ಮುಂತಾದವರ ನಾಯಕರು ಬದುಕಿನಲ್ಲಿ ಕಷ್ಟ ಸುಖಗಳನ್ನುಂಡು, ಸಂಗೀತಸಾಧನೆಯಲ್ಲಿ ಏರಿಳಿತಗಳನ್ನು ಕಂಡು, ಮಾಗುತ್ತಾ ಬೆಳೆದು, ಲೌಕಿಕ ಕಾಮನೆಗಳನ್ನು ತ್ಯಜಿಸಿ, ವೈರಾಗ್ಯದ ಅಂಚನ್ನು ತಲುಪುತ್ತಾರೆ. ಆದರೆ ಮೋಹನಲಾಲನು ಕೊನೆಯವರೆಗೂ ತನ್ನ ಅಹಂಕಾರ, ವ್ಯಾಮೋಹ ಮತ್ತು ಸ್ವಾರ್ಥಗಳನ್ನು ಬಿಡುವುದಿಲ್ಲ. ಎಲ್ಲರಿಂದ ತಿರಸ್ಕಾರಕ್ಕೊಳಗಾಗಿ, ಅವಮಾನಿತನಾಗಿ ಮುಂಬಯಿಯನ್ನು ತೊರೆಯಬೇಕಾಗಿ ಬಂದರೂ ಆತನಲ್ಲಿ ಪಶ್ಚಾತ್ತಾಪ, ಪಾಪಪ್ರಜ್ಞೆ ಹುಟ್ಟುವುದಿಲ್ಲ. ಆದ್ದರಿಂದ ಕಾದಂಬರಿಯಲ್ಲಿ ಭಾವುಕತೆ ಕಡಿಮೆಯಾಗಿದ್ದು, ಪಾತ್ರಚಿತ್ರಣ, ಘಟನೆಗಳ ನಿರೂಪಣೆಯಲ್ಲಿ ನಿಷ್ಠುರತೆಯು ಕಂಡು ಬರುತ್ತದೆ. ಮಾಸ್ತಿ, ತ. ರಾ. ಸು. ಅವರ ಕಾದಂಬರಿಗಳಲ್ಲಿ ನಿರೂಪಕರ ಮೆಚ್ಚುಗೆಯು ನಾಯಕ ಪಾತ್ರಗಳ ಕಡೆಗೆ ಹರಿದಿದ್ದರೆ ‘ಮಂದ್ರ’ವು ಮೋಹನಲಾಲನ ಮೇಲೆ ಮೆಚ್ಚುಗೆಯನ್ನು ತೋರುವ ಬದಲು ವಿಮರ್ಶಾತ್ಮಕ ನೋಟವನ್ನು ಹೊಂದಿದೆ. ಆದ್ದರಿಂದ ಮೋಹನಲಾಲನು ನಾಯಕನಾಗಿ ಕಾಣಿಸಿಕೊಳ್ಳುವುದಿಲ್ಲ. ಖಳನಾಯಕನೆಂದು ಹೇಳಲಾಗದಿದ್ದರೂ ಪ್ರತಿನಾಯಕ ಪಾತ್ರಕ್ಕೆ ಹತ್ತಿರವಾಗಿರುವ, ಸಾಂಪ್ರದಾಯಿಕ ನಾಯಕ ಪಾತ್ರಕ್ಕಿಂತ ಭಿನ್ನಮಾದರಿಯಾಗಿ ಗೋಚರಿಸುತ್ತಾನೆ.

    ಗಂಗಾಜಿಯ ದಡದಲ್ಲಿ ಭಜನೆ ಮಾಡಿದರೆ ಹೆಚ್ಚು ದುಡ್ಡು ಹಾಕುತ್ತಾರೆಂದು ಪತ್ತೆ ಮಾಡಿಕೊಂಡ ಜಾಣ ಹುಡುಗ ಮೋಹನಲಾಲನಿಗೆ ತನ್ನ ಬಾಲ್ಯದಿಂದಲೇ ಸಂಗೀತದ ಸ್ವರೂಪ ಮತ್ತು ಪರಿಣಾಮಗಳ ಕುರಿತ ಜಿಜ್ಞಾಸೆ ಉಂಟಾಗುತ್ತದೆ. ಅವನ ಹಾಡನ್ನು ಕೇಳಿದ ಓಂಕಾರ ಬಾಬಾ ಅವನನ್ನು ತನ್ನ ಆಶ್ರಮಕ್ಕೆ ಕರೆದೊಯ್ದು, ಅಲ್ಲೇ ಉಳಿಸಿಕೊಂಡು ಸಂಗೀತವನ್ನು ಹೇಳಿಕೊಡುತ್ತಾರೆ. ತನ್ನ ಹನ್ನೊಂದನೇ ವಯಸ್ಸಿನಿಂದ ತೊಡಗಿ ಹದಿನಾರರ ಹರೆಯದವರೆಗೆ ಮೋಹನಲಾಲನು ಅಲ್ಲಿರುತ್ತಾನೆ. ಪರಬ್ರಹ್ಮವು ನಾದದ ಮೂಲಕ ವ್ಯಕ್ತವಾಗುವ ಸಂಗೀತವೇ ಮುಕ್ತಿ ಎಂದು ದೃಢವಾಗಿ ನಂಬಿದ್ದ ಗುರುಗಳೊಂದಿಗೆ ಮೋಹನಲಾಲನು ಕಾಶಿಯಲ್ಲಿ ನಡೆದ ಸಂಗೀತ ಸಮ್ಮೇಳನಕ್ಕೆ ಹೋಗುತ್ತಾನೆ. ಅಲ್ಲಿ ಅವನ ಮನದ ಜಿಜ್ಞಾಸೆಗಳು ಹೆಚ್ಚು ಸ್ಪಷ್ಟವಾಗುತ್ತವೆ. “ಮೊಟ್ಟ ಮೊದಲ ಬಾರಿ ನನ್ನ ಗುರುಗಳ ಸಂಗೀತದ ಮಿತಿ ಅರ್ಥವಾದದ್ದು ಅಲ್ಲಿ. ಎಲ್ಲರೂ ಅವರನ್ನು ಗೌರವಿಸುತ್ತಿದ್ದುದು ಅವರು ನಡೆಸುತ್ತಿದ್ದ ಸಂಗೀತ ಗುರುಕುಲಾಶ್ರಮಕ್ಕಾಗಿ, ಸ್ವತಃಜೀವನದಲ್ಲಿ ಬಾಳುತ್ತಿದ್ದ ಸನ್ಯಾಸಿ ಜೀವನಕ್ಕಾಗಿ. ಸಮವಯಸ್ಕ ಗಾಯಕರೂ ಪಾದಸ್ಪರ್ಶ ಮಾಡುತ್ತಿದ್ದರು. ಅವರು ಹಾಡಿದ ತಿಲಂಗ್‌ ರಾಗವನ್ನು ‘ವಾಹ್! ವಾಹ್! ಕ್ಯಾ ಬಾತ್ ಹೈ’ ಅಂತ ತಲೆಬಾಗಿ ಮೆಚ್ಚಿದರೂ, ಮಧ್ಯಂತರದಲ್ಲಿ ಹೊರಗೆ ಚಹಾ ಕುಡಿಯುವಾಗ ‘ಭಜನ್ ಹಾಡುಕ್ಕೆ ಮಾತ್ರ ಲಾಯಖ್. ದೇವರ ಧ್ಯಾನ ಮಾಡ್ತಾ ಕೂತರೆ ರಾಗ ಸಂಗೀತ ಸಾಧಿಸುತ್ತದೆಯೇ?’ ಅಂತ ಹಲವು ಹಿರಿಯ ಗಾಯಕರು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದುದು ನನ್ನ ಕಿವಿಗೆ ಬಿದ್ದು, ಮನಸ್ಸಿನಲ್ಲಿ ಅಸ್ಪಷ್ಟವಾಗಿದ್ದ ತಿಳಿವು ಸ್ಪಷ್ಟವಾಗತೊಡಗಿತು. ಈ ಸಮ್ಮೇಳನದಲ್ಲಿ ಇತರ ಗಾಯಕರ, ವಾದಕರ ಸಂಗೀತ ಕೇಳುವ ಅವಕಾಶವೂ ಒದಗಿತು. ಒಬ್ಬೊಬ್ಬರದು ಒಂದೊಂದು ವೈಶಿಷ್ಟ್ಯ. ಆವಾಜಿನ ನಾಜೂಕು ಒಬ್ಬರದು. ಸ್ವರಶಾಂತಿ ಇನ್ನೊಬ್ಬರದು. ಭೋರ್ಗರೆದು ಅಪ್ಪಳಿಸುವಂಥ ತಾನಗಳು ಇನ್ನೊಬ್ಬರದು. ದೊಡ್ಡವರೆನಿಸಿಕೊಂಡ ಎಲ್ಲರೂ ರಾಗಾಲಾಪನೆಯಲ್ಲಿ ಮಾಡುತ್ತಿದ್ದ ವಿಸ್ತಾರ, ಅನಿರೀಕ್ಷಿತ ತಿರುವುಗಳು, ಎಲ್ಲೋ ಕಾಣದ ತಾಣದಿಂದ ಜಾರಿ, ರಾಗದ ನಾಡಿಸ್ಥಾನಕ್ಕೆ ಬಂದು ಭಾವಶ್ರೀಮಂತಿಕೆಯನ್ನು ವರ್ಧಿಸುವ ವಿಧಾನ. ಪ್ರತಿಯೊಬ್ಬರಿಗೂ ಸ್ವರವೇ ಸರ್ವಸ್ವವಾಗಿತ್ತು. ಸ್ವರದೊಂದಿಗೆ ಆಟವಾಡುತ್ತಿದ್ದರು. ಸ್ವರವನ್ನು ಆಟವಾಡಿಸುತ್ತಿದ್ದರು. ಸಖನಂತೆ, ಸಖಿಯಂತೆ ಮುದ್ದಿಸಿ, ಮುಲುಕಾಡಿಸಿ, ಶ್ಯಾವಿಗೆ ಎಳೆದಂತೆ ಹಿಂಜಿ, ಮಗ್ಗದ ಕೌಶಲದಂತೆ ನೇಯ್ದು ಲೀಲಾಕಾರರಾಗಿರುತ್ತಿದ್ದರು. ನನ್ನ ಗುರುವಿಗೆ ಸ್ವರವೆಂಬುದು ಭಕ್ತಿಯ ಸಾಧನ ಮಾತ್ರ. ದೇವರಿಗೆ ಅರ್ಪಿಸುವ ಹೂವು, ಹಣ್ಣು, ಧೂಪಗಳಿಗೂ ಅದಕ್ಕೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಅವರ ಸ್ವರವಿನ್ಯಾಸ ಬೇಗ ಮುಗಿದು ಹೋಗುತ್ತಿತ್ತು. ಸೌಖ್ಯ ವೈವಿಧ್ಯವೂ ಇರಲಿಲ್ಲ. ಹಿಂತಿರುಗಿ ಬರುವಾಗ ರೈಲಿನಲ್ಲಿ ನಾನು ಈ ಅನುಮಾನಗಳನ್ನು ನಿವೇದಿಸಿಕೊಂಡಾಗ ‘ಸ್ವರವನ್ನು ಆಟದ, ಭೋಗದ ವಸ್ತುವಾಗಿ ಮಾಡಿಕೊಂಡರೆ ಅದು ಮುಕ್ತಿಯ ಸಾಧನ ಹೇಗಾಗುತ್ತದೆ?” ಎಂದು ಪ್ರಶ್ನಿಸಿದರು. ಮುಕ್ತಿ ಅಂದರೆ ಏನಂತ ಗುರುಗಳು ಹೇಳುತ್ತಿದ್ದುದನ್ನು ಕೇಳಿದ್ದು ಬಿಟ್ಟರೆ ನನಗೆ ಸ್ವತಂತ್ರವಾದ ಕಲ್ಪನೆ ಇರಲಿಲ್ಲ. ಸಂಗೀತ ಹಾಡಿ ಸ್ಥಿತಿ ಪಡೆಯಬೇಕೆ? ಸಂಗೀತದ ಗಂಧಗಾಳಿಯಿಲ್ಲದ ಎಷ್ಟೋ ಸಾಧು ಸಂತರು ಹರಿದ್ವಾರ, ಹೃಷಿಕೇಶದಲ್ಲಿದ್ದಾರಲ್ಲ, ಅವರಲ್ಲಿ ಯಾರಿಗೂ ಮುಕ್ತನ ಗುಣಲಕ್ಷಣಗಳಿಲ್ಲವೇ?” ತನ್ನ ಅರುವತ್ತನೇ ವಯಸ್ಸಿನಲ್ಲಿ, ಸಂಗೀತ ಕ್ಷೇತ್ರದ ಬಹುದೊಡ್ಡ ಹೆಸರಾಗಿ ಬದಲಾದ ನಂತರವೂ ಮೋಹನಲಾಲನು ಇದನ್ನು ನೆನಪಿಸಿಕೊಳ್ಳುತ್ತಾನೆ. ಬಾಲ್ಯದಲ್ಲಿ ಕಾಡಿದ ಪ್ರಶ್ನೆಗಳು ಸಾಧಕನಾದ ಬಳಿಕವೂ ಆತನಲ್ಲಿ ಜೀವಂತವಾಗಿವೆ.

    ಸಂಗೀತಗಾರರನ್ನು ಮುಖ್ಯಪಾತ್ರಗಳನ್ನಾಗಿ ಹೊಂದಿದ ಹೆಚ್ಚಿನ ಕನ್ನಡ ಕಾದಂಬರಿಗಳಲ್ಲಿ ಸಂಗೀತವು ಸಮರ್ಪಣ ಭಕ್ತಿಯಾಗಿ ಬದಲಾಗುವ, ಕಲಾವಿದನನ್ನು ಯೋಗಿಯಾಗಿ ಪರಿವರ್ತಿಸುವ ಆಶಯ ಕಂಡು ಬರುತ್ತದೆ. ಆದ್ದರಿಂದ ನಿರೂಪಣೆಯು ಕಲೆ ಅಥವಾ ಕಲಾವಿದನ ಕುರಿತು ಆರಾಧನೆ, ಮೆಚ್ಚುಗೆ ಮತ್ತು ಗೌರವಭಾವಗಳನ್ನು ಪ್ರಕಟಿಸುತ್ತದೆ. ಸಂಗೀತಗಾರನ ವಿಕ್ಷಿಪ್ತತೆಯು ಸಾಂದರ್ಭಿಕವಾಗಿದ್ದು, ಆತನ ವ್ಯಕ್ತಿತ್ವವನ್ನು ಪರೀಕ್ಷಿಸುವ ಒರೆಗಲ್ಲಾಗಿರುತ್ತದೆ. ಸಂಗೀತಗಾರನ ಬದುಕು ಓದುಗರಿಗೆ ದಾರಿದೀಪವಾಗಿರುತ್ತದೆ. ಆದರೆ ‘ಮಂದ್ರ’ವು ಮೋಹನಲಾಲನ ಮೂಲಕ ಸಂಗೀತ ಮತ್ತು ಸಂಗೀತಗಾರರನ್ನು ಕುರಿತ ಕಲ್ಪನೆ, ನಿರೀಕ್ಷೆಗಳನ್ನು ಒಡೆಯುತ್ತದೆ. ಲಂಪಟ, ವಂಚಕ, ಶೋಷಕ, ದುರಹಂಕಾರಿ ಎನ್ನಬಹುದಾದ ಎಲ್ಲ ಗುಣಗಳೂ ಮೋಹನಲಾಲನಲ್ಲಿವೆ. ವೈಯಕ್ತಿಕ ಜೀವನದಲ್ಲಿ ಅವನ ನೈತಿಕತೆಯನ್ನು ಪ್ರಶ್ನಿಸುವ ಪ್ರಸಂಗಗಳಿವೆ. ಆದರೆ ಅವನಿಂದ ತೊಂದರೆಗೊಳಗಾದವರೂ ಸೇರಿದಂತೆ ಯಾರೂ ಆತನ ಸಾಧನೆಯನ್ನು ಪ್ರಶ್ನಿಸುವುದಿಲ್ಲ; ಅಲ್ಲಗೆಳೆಯುವುದಿಲ್ಲ. ಕಲಾವಿದನ ಪ್ರತಿಭೆ ಮತ್ತು ಸಾಧನೆಗಳಿಗೆ ಅವನ ವೈಯಕ್ತಿಕ ಬದುಕನ್ನು ತಳುಕು ಹಾಕಬಾರದು ಎಂಬ ಆಧುನಿಕ ನಿಲುವು ಇಲ್ಲಿದೆ. ಪೂರ್ವಸೂರಿಗಳಾದ ಸುಬ್ಬಣ್ಣ, ಲಕ್ಷ್ಮಣ, ವೆಂಕಟಸುಬ್ಬಯ್ಯರಿಗಿಂತ ಮೋಹನಲಾಲನು ಇಲ್ಲಿ ಬೇರೆಯಾಗುತ್ತಾನೆ. ಸಂಗೀತ ಮತ್ತು ಸಂಗೀತಗಾರರ ಕುರಿತು ಇತರ ಕಾದಂಬರಿಗಳು ನಂಬಿಸಲು ಯತ್ನಿಸುವ ಪಾವಿತ್ರ್ಯ, ಪರಿಶುದ್ಧತೆ, ಸಂಪೂರ್ಣತೆಯ ಪರಿಕಲ್ಪನೆಗಳನ್ನು ಪ್ರಶ್ನಿಸುವ ಮೂಲಕ ‘ಮಂದ್ರ’ವು ಕನ್ನಡ ಕಾದಂಬರಿಗಳು ಹಾಕಿಕೊಟ್ಟ ಸಂಪ್ರದಾಯಗಳನ್ನು ಮುರಿದಿದೆ. ಭೈರಪ್ಪನವರು ಸಂಪ್ರದಾಯ ಶರಣರೆಂಬ, ಆಧುನಿಕತೆಯ ವಿರೋಧಿಯೆಂಬ ಟೀಕೆಗೆ ಕಾದಂಬರಿಯು ತಕ್ಕ ಉತ್ತರವನ್ನು ನೀಡಿದೆ.

    ಕಾದಂಬರಿಯು ಮೋಹನಲಾಲನನ್ನು ವೈಭವೀಕರಿಸುವುದಿಲ್ಲ. ಆತನ ಮತ್ತೊಬ್ಬ ಗುರುಗಳಾದ ರಾಜಾಸಾಹೇಬರು ಆತನನ್ನು ಶಿಷ್ಯನನ್ನಾಗಿ ಸ್ವೀಕರಿಸುವ ಸಂದರ್ಭದಲ್ಲಿ ಹಾಡಿದ ಅನುಭವವನ್ನು ನಿರೂಪಿಸುವ ರೀತಿಯಲ್ಲಿ ಮೋಹನಲಾಲನ ಸಂಗೀತದ ಮಿತಿಗಳನ್ನು ಸೂಚಿಸುತ್ತದೆ. “ರಾಜಾಸಾಹೇಬರು ನಡುವೆ ಎರಡು ಕಡೆ ಸೂಕ್ಷ್ಮವಾಗಿ ತಲೆದೂಗಿದರು. ಅವರ ಕಣ್ಣುಗಳಲ್ಲಿ ಅಸಮ್ಮತಿಯ ಭಾವ ಕಾಣಿಸಿತು. ಅದೇ ರಾಗವನ್ನು ರಾಜಾಸಾಹೇಬರು ಹಾಡಲಾರಂಭಿಸಿದಾಗ ಷಡ್ಜಕ್ಕೂ, ಅವರ ಗಂಟಲಿಗೂ ಅದ್ವೈತವೇರ್ಪಟ್ಟಿದೆ. ಆ ಸೂಕ್ಷ್ಮವನ್ನು ಗ್ರಹಿಸಲು ಹೆಚ್ಚಿನ ಏಕಾಗ್ರತೆ ಬೇಕು. ಇವರ ಗಾಯನದ ರೀತಿಗೆ ಅಭ್ಯಸ್ಥವಾಗಿರಬೇಕು ಎಂದು ಅರ್ಥವಾಯಿತು. ಅವ್ಯಕ್ತದಿಂದ ವ್ಯಕ್ತ ಹುಟ್ಟುತ್ತದೆ ಎಂಬ ಆಧ್ಯಾತ್ಮಭಾವ ಒಸರುವಂತಾಯಿತು. ಇದು ಬರೀ ಸೂಕ್ಷ್ಮವಲ್ಲ. ಖಚಿತತೆ. ನಾನು ತೆಗೆಯುವ ಷಡ್ಜ ಅಂದಾಜಿನದ್ದು. ಇವರದದ್ದು ಮೂಲನಾಡಿಯದ್ದು. ನಂತರ ಅವರ ಷಡ್ಜ ಹೊರ ಕಿವಿಗಳಿಗೂ ಕೇಳಿಸತೊಡಗಿತು. ಇದು ಅಂದಾಜಿನ ಧ್ವನಿಯಲ್ಲ. ನಾದಬ್ರಹ್ಮನ ಸೂಕ್ಷ್ಮಾತಿಸೂಕ್ಷ್ಮ ಬಿಂದುವಿನಿಂದ ಪ್ರವಹಿಸುವ ಶಕ್ತಿ ಎನಿಸಿಬಿಟ್ಟಿತು. “ತೀರ ವೈಯಕ್ತಿಕವಾದ, ಕಠೋರ ನಿಯಮಗಳಿಗೆ ಬದ್ಧವಾದ ಸಾಧನೆಯನ್ನು ಮಾಡಿದ ರಾಜಾಸಾಹೇಬರು ಕಛೇರಿಗಳನ್ನು ಕೊಡುವವರಲ್ಲ. ಸಂಗೀತದಿಂದ ಲೌಕಿಕ ಪ್ರಯೋಜನವನ್ನು ಪಡೆಯುವವರಲ್ಲ. ಮಹದೇವಜಿ ಮಂದಿರದಲ್ಲಿದ್ದಾಗ, ತಮ್ಮೆದುರು ಬಂದ ಕೆಲವೇ ಸಾಧಕರ ಮುಂದೆ ಹಾಡಿದಷ್ಟರಿಂದಲೇ ಅವರ ಹೆಸರು ಸಂಗೀತಲೋಕದಲ್ಲಿ ಅಮರವಾಗಿದೆ. ಇದನ್ನು ಮೋಹನಲಾಲನ ಸಾಧನೆ, ಅವನು ಗಳಿಸಿಕೊಂಡ ಸಾರ್ವಜನಿಕ ಮನ್ನಣೆಯೊಡನೆ ಹೋಲಿಸಿದಾಗ ಕಾದಂಬರಿಯು ಸೂಚಿಸುವ ಮೌಲ್ಯಕಲ್ಪನೆಯು ಅರಿವಿಗೆ ಬರುತ್ತದೆ.

    ಸಂಗೀತಕ್ಕಾಗಿ ತನ್ನ ಕನ್ಯತ್ವ ಮತ್ತು ದಾಂಪತ್ಯವನ್ನು ಮೋಹನಲಾಲನಿಗೆ ಸಮರ್ಪಿಸಿಯೂ ಆತನಿಂದ ಹೆಚ್ಚೇನೂ ಕಲಿಯದ ಮಧುಮಿತಾ ಹಣ, ಕೀರ್ತಿ, ಗೌರವಕ್ಕಾಗಿ ಹಾಡುವವಳಲ್ಲ. ‘ಸಂಗೀತವೇ ಎಲ್ಲವೂ’ ಎಂಬ ನೆಲೆಯಿಂದ ಆಕೆಯು ‘ಸಂಗೀತವೇ ಎಲ್ಲವೂ ಅಲ್ಲ’ ಎಂಬ ವಿಚಾರದತ್ತ ಚಲಿಸುವುದನ್ನು ಕಾದಂಬರಿಯು ಸೂಕ್ಷ್ಮವಾಗಿ ದಾಖಲಿಸುತ್ತದೆ. ಮೋಹನಲಾಲನಿಗೆ ಸಾದೃಶ್ಯವೆಂಬಂತೆ ನರ್ತಕಿ ಮನೋಹರಿ, ಚಂಪಾ, ವೈದೃಶ್ಯವೆಂಬಂತೆ ಮಧುಮಿತಾ, ರಾಜಾಸಾಹೇಬ, ರಾಜರಾಮಟಿಪ್ನಿಸ್‌ ಮತ್ತು ಸಂಗೀತದ ಗಂಧಗಾಳಿಯಿಲ್ಲದ ರಾಮಕುಮಾರಿ, ಚುನ್ನಿಯ ಪಾತ್ರಗಳನ್ನು ಸೃಷ್ಟಿಸಿ, ಅವರ ಜೀವನಕ್ರಮ ಮತ್ತು ಮೌಲ್ಯಗಳನ್ನು ಮೋಹನಲಾಲನ ಬದುಕಿನ ರೀತಿಯೊಂದಿಗೆ ತುಲನೆ ಮಾಡುವ ಅವಕಾಶವನ್ನು ನೀಡುವ ಕಾದಂಬರಿಯು ಲೇಖಕರ ಜೀವನ ದೃಷ್ಟಿಯನ್ನು ವ್ಯಕ್ತಪಡಿಸುತ್ತದೆ. ಈ ಪಾತ್ರಗಳು ಸೂಚಿಸುವ ಬಹುಮುಖಿ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಗ್ರಹಿಸಿದರೆ ಕಾದಂಬರಿಯ ಮಹತ್ವ ತಿಳಿಯುತ್ತದೆ.
    ಪ್ರಸಿದ್ಧಿಯ ಉತ್ತುಂಗದಲ್ಲಿದ್ದ ಮೋಹನಲಾಲನು ಎಲ್ಲರಿಂದಲೂ ತಿರಸ್ಕೃತನಾಗಿ ಮುಂಬಯಿಯನ್ನು ಬಿಟ್ಟು, ಓಂಕಾರಾಶ್ರಮದ ಉಸ್ತುವಾರಿಯನ್ನು ನೋಡಿಕೊಂಡು, ಅಲ್ಲೇ ನೆಲೆಸಿ, ಆಸಕ್ತರಿಗೆ ಸಂಗೀತ ಪಾಠವನ್ನು ಹೇಳುತ್ತಾ ಜೀವನವನ್ನು ಕಳೆಯಬೇಕೆಂದುಕೊಂಡರೂ ಅದರಲ್ಲಿ ಅವನಿಗೇ ನಂಬಿಕೆಯಿರುವುದಿಲ್ಲ. ಬಲ್ಲವರೆಲ್ಲರೂ ಅವನ ನಿರ್ಧಾರವನ್ನು ಅನುಮಾನ, ಸಿನಿಕತನದಿಂದ ನೋಡುತ್ತಾರೆ. ಗಾಯನವನ್ನೇ ಬಿಟ್ಟುಬಿಡಬೇಕು ಎಂದೂ ಯೋಚಿಸುತ್ತಾನೆ. ತಾನು ಯಾವುದಕ್ಕೂ ನಾಲಾಯಕ್ಕು ಎಂಬ ಭಾವನೆಯಿಂದ ನಿರ್ವಿಣ್ಣನಾಗುತ್ತಾನೆ. ಅವನಿಗೆ ದೊಡ್ಡ ಮಟ್ಟದ ಬೀಳ್ಕೊಡುಗೆಯನ್ನು ನೀಡಲಾಗುತ್ತದೆ. ಮುಂಬಯಿಯಲ್ಲಿ ಅವನ ಕೊನೆಯ ಕಛೇರಿ. ಸಾವಿರಾರು ಪ್ರೇಕ್ಷರನ್ನು ನೇರವಾಗಿ ಸಂಧಿಸುವ, ರಂಜಿಸುವ, ಅವರ ಕಣ್ಣುಗಳಲ್ಲಿ ಆರಾಧನೆ ಪ್ರತಿಬಿಂಬಿಸುವಂತೆ ಮಾಡುವ ಕೊನೆಯ ಅವಕಾಶ. ಆದರೆ ಅವನಲ್ಲಿ ರಾಗದ ಭಾವ ಹತ್ತುವುದಿಲ್ಲ. ಅಭ್ಯಾಸಬಲದಿಂದ ಸ್ವರಗಳ ಮೇಲೆ ಸಂಚಾರ ಮಾಡಲು ಹೊರಟರೆ ರಾಗದ ನಾಡಿ ಸಿಗುವುದಿಲ್ಲ. ಐವತ್ತು ವರ್ಷಗಳಿಂದ ಮುಷ್ಠಿಗತ ಮಾಡಿಕೊಂಡಿದ್ದ ರಾಗವೂ ಕೈಬಿಡುತ್ತದೆ. ಸಭೆ ಅಸ್ತವ್ಯಸ್ತವಾಗುತ್ತದೆ. ಅವನು ಧ್ವನಿವರ್ಧಕವನ್ನು ಎಸೆದು ತೆರೆಮರೆಗೆ ನಡೆಯುತ್ತಾನೆ. ಆಮೇಲೆ ಅವನಿಗೆ ಏನಾಯಿತು ಎಂಬುದನ್ನು ಕಾದಂಬರಿಯು ಶೋಧಿಸುವುದಿಲ್ಲ. ಒಂದು ಕಾಲದಲ್ಲಿ ಮೋಹನಲಾಲನ ಶಿಷ್ಯೆಯಾಗಿದ್ದು, ಸ್ವತಂತ್ರ ಸಾಧಕಿಯಾಗಿ ಬೆಳೆಯುತ್ತಿರುವ ಮಧುಮಿತಾ ಭವಿಷ್ಯದಲ್ಲಿ ದೊಡ್ಡ ಗಾಯಕಿಯಾಗುತ್ತಾಳೆ ಎಂಬ ಸೂಚನೆಯೊಂದಿಗೆ ಕಾದಂಬರಿಯು ಮುಗಿಯುತ್ತದೆ.

    ಶಿವರಾಮ ಕಾರಂತರ ನಂತರ ಕನ್ನಡದಲ್ಲಿ ಅತಿ ಹೆಚ್ಚು ಬೃಹತ್ ಕಾದಂಬರಿಗಳನ್ನು ಬರೆದವರು ಬಹುಶಃ ಭೈರಪ್ಪನವರೊಬ್ಬರೇ. ಆದರೆ ಅವರ ಕಾದಂಬರಿಗಳು ಕೆಲವೊಮ್ಮೆ ಅನಗತ್ಯ ವಿವರಣೆಗಳು, ಪುನರಾವರ್ತನೆಗಳು ಮತ್ತು ಅತಿವಿಸ್ತಾರದಿಂದ ಬಳಲುತ್ತವೆ. ಅವರ ಅತ್ಯುತ್ತಮ ಕೃತಿಗಳಲ್ಲಿ ಇದು ಕಂಡುಬರದಿದ್ದರೂ ‘ಅಂಚು’, ‘ತಂತು’ ಎಂಬ ಕಾದಂಬರಿಗಳಲ್ಲಿ ಈ ದೋಷಗಳು ದಟ್ಟವಾಗಿ ಗೋಚರಿಸುತ್ತವೆ. ‘ಮಂದ್ರ’ದಲ್ಲಿ ಕೂಡ ಇಂಥ ಮಿತಿಗಳಿದ್ದರೂ ಭೈರಪ್ಪನವರ ಜೀವನಾನುಭವ, ವಿಸ್ತಾರವಾದ ಅಧ್ಯಯನ, ಆಳವಾದ ಸಂಗೀತಜ್ಞಾನ, ಕಾದಂಬರಿಯನ್ನು ಕಟ್ಟಿಕೊಟ್ಟಿರುವ ರೀತಿ ಮತ್ತು ಸತ್ವದ ದೃಷ್ಟಿಯಿಂದ ಕನ್ನಡದ ಅತ್ಯುತ್ತಮ ಕೃತಿಗಳ ಸಾಲಿಗೆ ಸೇರುತ್ತದೆ. ಈ ಕಾದಂಬರಿಗೆ ದೊರೆತ ‘ಸರಸ್ವತಿ ಸಮ್ಮಾನ್ ಪ್ರಶಸ್ತಿ’ಯು ಅದನ್ನು ಖಚಿತಪಡಿಸುತ್ತದೆ.

    ವಿಮರ್ಶಕರು | ಡಾ. ಸುಭಾಷ್ ಪಟ್ಟಾಜೆ

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಸಂವಾದ ಕಾರ್ಯಕ್ರಮ
    Next Article ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿಯವರಿಂದ ‘ಪಾರ್ಟಿ’ ನಾಟಕ ಕೃತಿ ಲೋಕಾರ್ಪಣೆ
    roovari

    Add Comment Cancel Reply


    Related Posts

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026

    ಸುರತ್ಕಲ್ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಾಮ ಸಂಕೀರ್ತನ ಕಾರ್ಯಾಗಾರ | ಜುಲೈ 18, 19, 25 ಮತ್ತು 26

    July 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.