Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ‘ಮಾತು ಮದ್ದಳೆ’ ಅರ್ಥಗಾರಿಕೆಯ ವಿಶೇಷ ಜಿಜ್ಞಾಸೆ
    Article

    ಪುಸ್ತಕ ವಿಮರ್ಶೆ | ‘ಮಾತು ಮದ್ದಳೆ’ ಅರ್ಥಗಾರಿಕೆಯ ವಿಶೇಷ ಜಿಜ್ಞಾಸೆ

    June 13, 2026Updated:June 15, 2026No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವಿದ್ವಾನ್ ಗ.ನಾ. ಭಟ್ಟರು ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿ ಮತ್ತು ಕಲಾ ವಿಮರ್ಶಕರೂ ಹೌದು. ಅಂಕಣಕಾರರಾಗಿ, ಲೇಖಕರಾಗಿ ನಾಡಿಗೆ ಪರಿಚಿತರು. ‘ಮಾತು ಮದ್ದಳೆ’ (ತಾಳಮದ್ದಳೆ ಪಾತ್ರಗಳೊಡನೆ ಮುಖಾಮುಖಿ-ಒಂದು ಅನುಸಂಧಾನ) ಕೃತಿಯಲ್ಲಿ, ಶ್ರೀರಾಮ ಪಟ್ಟಾಭಿಷೇಕದಿಂದ ಆರಂಭಿಸಿ ಶ್ರೀರಾಮ ನಿರ್ಯಾಣದವರೆಗಿನ ಹದಿನಾಲ್ಕು ಪ್ರಸಂಗಗಳು ಮತ್ತು ವೀರಮಣಿ ಕಾಳಗ, ಒಟ್ಟೂ ಹದಿನೈದು ಪ್ರಸಂಗಗಳ ಅರ್ಥಗಾರಿಕೆಯನ್ನು ವಿಮರ್ಶೆಗೊಡ್ಡಿದ್ದಾರೆ. ಆಯ್ದುಕೊಂಡ ಪ್ರಸಂಗದ ಪದ್ಯಗಳನ್ನು ಮೂಲ ರಾಮಾಯಣದೊಡನೆ ಹೋಲಿಸಿ ಕವಿಯ ಕಾಣ್ಕೆಯನ್ನೂ ಒರೆಗೆ ಹಚ್ಚುತ್ತಾರೆ. ಅಂತೆಯೇ ಆ ಪ್ರಸಂಗಗಳ ಪ್ರಚಲಿತ ಅರ್ಥಗಾರಿಕೆಯ ಕೌಶಲವನ್ನು ವಿವರಿಸುತ್ತ ಅವುಗಳ ಔಚಿತ್ಯವನ್ನು ವಿಮರ್ಶಿಸುತ್ತಾರೆ. ಪ್ರಯೋಗಶೀಲ ಅರ್ಥಗಾರಿಕೆಯನ್ನು ಮೆಚ್ಚಿಕೊಳ್ಳುತ್ತಲೇ ಪ್ರತಿ ಪ್ರಸಂಗದ ಮುಖ್ಯ ಪಾತ್ರಗಳ ಅರ್ಥಗಾರಿಕೆಯನ್ನು; ಮೂಲಕಥೆ ಮತ್ತುಕಾವ್ಯ ಶಾಸ್ತçಗಳ ನೆರವಿನಿಂದ ವಿಸ್ತರಿಸುವ ಸಾಧ್ಯತೆಗಳನ್ನು ಚರ್ಚಿಸುತ್ತಾರೆ. ಇಲ್ಲೆಲ್ಲ ಅರ್ಥಗಾರಿಕೆಯ ಕುರಿತು ಗ.ನಾ. ಭಟ್ಟರಿಗಿರುವ ಅಧ್ಯಯನ, ಬದ್ಧತೆ, ಆಗ್ರಹಗಳೆಲ್ಲವೂ ಇವೆ. ಯಕ್ಷಗಾನದ ಅರ್ಥಗಾರಿಕೆಯಲ್ಲಿ ಭಾರತೀಯ ಪರಂಪರೆಯ ಮೌಲ್ಯಗಳು ಅಭಿವ್ಯಕ್ತವಾಗಬೇಕು ಎಂಬ ಬದ್ಧತೆ, ಮೂಲ ಕಾವ್ಯದ ಆಶಯಕ್ಕೆ ವ್ಯತಿರಿಕ್ತವಾದ ಸಂಗತಿಗಳು ನುಸುಳುತ್ತವೆಯೆಂಬ ಆತಂಕ, ಈ ದೃಷ್ಟಿಯಿಂದ ಕಲಾವಿದರು ಹೆಚ್ಚು ಅಧ್ಯಯನಶೀಲರಾಗಬೇಕು ಶಾಸ್ತ್ರ ಕಾವ್ಯಗಳನ್ನು ಗಮನಿಸಬೇಕು ಎಂಬ ಆಗ್ರಹ ಎಲ್ಲವೂ ಲೇಖಕರ ಆಶಯವಾಗಿ ಓದುಗರನ್ನು ತಟ್ಟುತ್ತವೆ.

    ‘ಮಾತು ಮದ್ದಳೆ’ ಕೃತಿಯು ತಾಳಮದ್ದಲೆಯ ವಾಚಿಕಕ್ಕೆ ಒಂದು ಉತ್ತಮ ಕೊಡುಗೆ. ಇಲ್ಲಿ ರಾಮಾಯಣದ ಕಥಾವಸ್ತುಗಳನ್ನು ಒಳಗೊಂಡ ವಿವಿಧ ಪ್ರಸಂಗಗಳ ಅನುಸಂಧಾನವಿದೆ. ಈ ಪ್ರಸಂಗಗಳು ತಾಳಮದ್ದಲೆಯ ಪ್ರಸ್ತುತಿಯಲ್ಲಿ ಹೊಂದುವ ವೈಚಾರಿಕ ವಿಸ್ತಾರ, ಆಕರಗಳ ಸೂಕ್ತ ಬಳಕೆ, ಮೂಲ ಮತ್ತು ಪ್ರಸಂಗ ಕೃತಿಗಳ ನಡುವಿನ ಮಾಹಿತಿಗಳಲ್ಲಿರುವ ವ್ಯತ್ಯಾಸಗಳು, ವಾಲ್ಮೀಕಿ ರಾಮಾಯಣವನ್ನು ಆಧರಿಸಿ ಅರ್ಥಗಾರಿಕೆಯನ್ನು ಮೆರೆದರೆ ಉಂಟಾಗುವ ವಿಶಿಷ್ಟ ಪರಿಣಾಮಗಳನ್ನು ಕುರಿತು ಚರ್ಚೆ ಇದೆ.” ಎಂದು ಈ ಕೃತಿಗೆ ಮುನ್ನುಡಿ ಬರೆದ ವಿದ್ವಾಂಸರಾದ ಶ್ರೀ ಗಣರಾಜ ಕುಂಬಳೆಯವರು ಪೀಠಿಕೆ ಹಾಕಿದ್ದಾರೆ.

    ಗ.ನಾ. ಭಟ್ಟರು ಪಟ್ಟಾಭಿಷೇಕದ ದಶರಥನ ಪೀಠಿಕೆಯಿಂದಲೇ ಅರ್ಥಗಾರಿಕೆಯ ಮರ್ಮವನ್ನು ತೆರೆದಿಡುವುದಕ್ಕೆ ತೊಡಗುತ್ತಾರೆ. ‘ವೀರ ದಶರಥ ನೃಪತಿ ಇನಕುಲ|ವಾರಿಧಿಗೆ ಪ್ರತಿಚಂದ್ರನು||’ ಎನ್ನುವ ಪದ್ಯಕ್ಕೆ ಪ್ರವೇಶ ಪಡೆಯುವ ದಶರಥನ ಪಾತ್ರದ ಪೀಠಿಕೆಯಲ್ಲಿ “ತನ್ನ ಪೂರ್ವಜರಾದ ಮನು, ಮಾಂಧಾತಾ, ಇಕ್ಷ್ವಾಕು, ಭಗೀರಥ ಮೊದಲಾದವರನ್ನು ಸ್ಮರಿಸಿಕೊಳ್ಳುತ್ತಾ ತಾನಿದುವರೆಗೂ ಹೇಗೆ ರಾಜ್ಯವಾಳಿದೆ ಅನ್ನುವುದನ್ನು ವಿವರಿಸುತ್ತಾ ತನಗೆ ಬಹುಕಾಲದಿಂದ ಮಕ್ಕಳಿಲ್ಲದಿದ್ದುದನ್ನೂ ಅನಂತರ ತನಗೆ ಮಕ್ಕಳಾಗಿ ಸಂತೋಷವಾದುದನ್ನೂ ಹೇಳಬೇಕು. ಜೊತೆ ಜೊತೆಗೆ ತನ್ನ ಆಂತರ್ಯದ ದುಗುಡ, ಬೇಗುದಿಯನ್ನೂ ವ್ಯಕ್ತಪಡಿಸಬೇಕು.” ಹೀಗೆ ಸೂಚನೆ ನೀಡುವಾಗ ದಶರಥನ ದುಗುಡ-ಬೇಗುದಿಗಳ ಪ್ರಕಟವಾಗುವಾಗ; ಈವರೆಗೆ ಯಾರಿಗೂ ಹೇಳದ “ನಿನ್ನ ಅಂತ್ಯಕಾಲದಲ್ಲಿ ಹೀಗೇ ಪುತ್ರಶೋಕಾರ್ತನಾಗಿ ಸಾಯಿ” ಎನ್ನುವ ಶಾಪ ವಾಕ್ಯವನ್ನೂ ಅದರ ಸಂದರ್ಭವನ್ನೂ ನೆನಪಿಸುತ್ತಾರೆ.

    “ದಶರಥನ ಜೀವನದ ದುಡುಕಿನ ಅತಿಮುಖ್ಯ ಈ ಘಟನೆಯನ್ನು ಕವಿ ಪಾರ್ತಿಸುಬ್ಬ ತನ್ನ ‘ಪಟ್ಟಾಭಿಷೇಕ’ ಪ್ರಸಂಗದಲ್ಲಿ ಎಲ್ಲಿಯೂ ಹೇಳುವುದಿಲ್ಲ. ಕಲಾವಿದರಂತೂ ಅದರ ಗೊಡವೆಗೇ ಹೋಗುವುದಿಲ್ಲ. ನೀವು ಯಾಕೆ ಇದನ್ನು ಹೇಳುವುದಿಲ್ಲ ಎಂದು ಕೇಳಿದರೆ, ಪ್ರಸಂಗ ಪಠ್ಯದಲ್ಲಿ ಇಲ್ಲ. ನಮಗೆ ಪ್ರಸಂಗ ಪಠ್ಯವೇ ಪ್ರಮಾಣ ಎಂದು ಹೇಳಿ ತಮ್ಮ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳುತ್ತಾರೆ. ವಾಸ್ತವಿಕವಾಗಿ ನೋಡಿದರೆ ದಶರಥ ಇದನ್ನು ಹೇಳಿದರೇನೇ ಆ ಪಾತ್ರಕ್ಕೆ ಜೀವಂತಿಕೆ ಬರುತ್ತದೆ. ಅದರ ಸಂಕೀರ್ಣತೆ, ಸಂಘರ್ಷ, ಬೇಗುದಿ ಎಲ್ಲವನ್ನೂ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ದಶರಥ ಒಬ್ಬ ದುರಂತ ನಾಯಕ. ಈ ಅಂಶವೇ ದುರಂತದ ಬೀಜ. ಇದನ್ನೇ ಹೇಳದಿದ್ದರೆ ಆ ಪಾತ್ರದ ದುರಂತ ಚಿತ್ರಣ ಆಗುವುದಾದರೂ ಹೇಗೆ? “ಹೀಗೆ ಆ ಪಾತ್ರದ ಸ್ಥಾಯೀ ಭಾವವನ್ನೂ ಸಂಚಾರಿ ಭಾವಗಳನ್ನೂ ಅಭಿವ್ಯಕ್ತಿಸುವ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ. ಸಂಗಡ ಶ್ರವಣಕುಮಾರನೆಂದೇ ಪ್ರಚಲಿತನಾಗಿರುವವನ ಕುರಿತು ರಾಮಾಯಣವನ್ನು ಆಧರಿಸಿ ಅಗತ್ಯ ವಿವರಗಳನ್ನು ನೀಡಿ, ಋಷಿಕುಮಾರ ಅಥವಾ ಮುನಿಬಾಲಕ ಎಂದು ಕರೆಯುವುದೇ ಸೂಕ್ತ ಎಂದು ಅಭಿಪ್ರಾಯಪಡುತ್ತಾರೆ. ಅಂತೆಯೇ ಮಂತ್ರಿಯಾದ ಸುಮಂತ್ರನಲ್ಲಿ ಅಂತರಂಗದ ಮಾತಾಡುವ ದಶರಥನಿಗೆ ತನ್ನ ವೃದ್ಧಾಪ್ಯ ಮುಖ್ಯವಲ್ಲ, ರಾಮನಿಗೆ ಪಟ್ಟಗಟ್ಟುವುದೇ ಮುಖ್ಯ ಎನ್ನುವುದನ್ನು ನೆನಪಿಸುತ್ತಾರೆ. ಒಂದೇ ಪದ್ಯದಲ್ಲಿ ಅಂತರಂಗ ಶಬ್ದ ಎರಡೆರಡು ಬಾರಿ ಬಂದುದರ ಔಚಿತ್ಯ ಸ್ಫುಟವಾಗುವಾಗ ದಶರಥ ತನ್ನ ಅಂತರಂಗದ ಮಾತನ್ನು ಹೇಳಬೇಕು ಎಂಬುದು ಲೇಖಕರ ಸಲಹೆ.

    ಪ್ರಸಂಗದ ಪರಿಣಾಮದ ದೃಷ್ಟಿಯಿಂದ; ಪ್ರಚಲಿತ ರಂಗತಂತ್ರದಲ್ಲಿಯೂ ಬೇಕಾದ ಬದಲಾವಣೆಯನ್ನು ಸೂಚಿಸಿದ್ದಾರೆ. ‘ಪನ್ನೀರ ರಾಮನಿಗೆ ಪಂಕಜಾಕ್ಷಿಯರೆರೆದು’ ಪದ್ಯಕ್ಕೆ ರಾಮನ ಪ್ರವೇಶ ಮಾಡಿಸುವ ಬದಲು ಅದನ್ನು ದಶರಥನ ಪದ್ಯವಾಗಿಸಬೇಕು. ರಾಮನನ್ನು ಕರೆದು ಅವನಿಗೆ ಪಟ್ಟಾಭಿಷೇಕಕ್ಕೆ ಸಿದ್ಧನಾಗೆಂದು ಸೂಚಿಸಿ, ರಾಜ್ಯ ನಿರ್ವಹಣೆಯ ಬಗ್ಗೆ ಕಿವಿ ಮಾತು ಹೇಳುವುದಕ್ಕೆ ಬಳಸಿಕೊಳ್ಳಬೇಕು ಎನ್ನುತ್ತಾರೆ. ಪದ್ಯಗಳ ಆಯ್ಕೆ, ಸಂವಾದದ ಕ್ರಮ, ಪ್ರತಿ ಪದ್ಯಕ್ಕೆ ಬಳಸಿಕೊಳ್ಳಬಾಕಾದ ಕಥಾ ವಿವರಗಳ ಕುರಿತು ವಿಸ್ತಾರವಾಗಿಯೇ ಹೇಳಿದ್ದಾರೆ. ಪಾದುಕಾ ಪ್ರದಾನದಲ್ಲಿಯೂ ಈ ರೀತಿಯ ಸಾಧ್ಯತೆಗಳನ್ನು ಪಟ್ಟಿಮಾಡಿ ನೀಡಿದ್ದಾರೆ. “ಪಾದುಕಾ ಪ್ರದಾನ ಪ್ರಸಂಗವೇ ಕಠಿಣವಾದುದು. ಒಂದು ಕಡೆ ಭರತನ ಧರ್ಮಬದ್ಧವಾದ, ನ್ಯಾಯಸಮ್ಮತವಾದ ಮಾತುಗಳೊಡನೆ ಭಾವಾವೇಶ, ಇನ್ನೊಂದು ಕಡೆ ಅಷ್ಟೇ ಧರ್ಮಬದ್ಧವೂ, ನ್ಯಾಯೋಚಿತವೂ, ತರ್ಕಸಮ್ಮತವೂ ಆಗಿ ಭಾವೋದ್ವೇಗಕ್ಕೆ ಒಳಗಾಗದ ರಾಮನ ವಿಷಯ ಮಂಡನೆ–ಇಂತಹವು ಮೇಳೈಸಿಕೊಂಡಿರಬೇಕು. ಈ ಸಂದರ್ಭದಲ್ಲಿ ಪ್ರೇಕ್ಷಕನಿಗೆ ದೊರೆಯಬೇಕಾದುದು ರಸದೌತಣವೇ ವಿನಾ ಮಾರಿ ಔತಣವಲ್ಲ. ಇದನ್ನು ಕಲಾವಿದರು ನೆನಪಿಟ್ಟುಕೊಳ್ಳಬೇಕು” ಎಂದು ಆ ಪ್ರಸಂಗ ಸಾಧಿಸಬೇಕಾದ ಭಾವ-ರಸದ ಪಾಕದ ಬಗ್ಗೆ ಎಚ್ಚರಿಸಿದ್ದಾರೆ.

    ಖಳ ಪಾತ್ರಗಳನ್ನು ವೈಭವೀಕರಿಸುವ ಯಕ್ಷಗಾನದ ನಡೆಯನ್ನು ಪ್ರಶ್ನಿಸುತ್ತ ಯಕ್ಷಗಾನದ ಕವಿಗಳನ್ನೂ ತರಾಟೆಗೆ ತೆಗೆದುಕೊಳ್ಳುತ್ತಾರೆ. ಪಂಚವಟೀ ಪ್ರಸಂಗದ ಚರ್ಚೆಯ ಕೊನೆಯಲ್ಲಿ ಸೀತಾಪಹಾರದ ಕುರಿತು ಮಂಡೋದರಿಯಲ್ಲಿ ಹೇಳಿ ಹೊರಡುವ ರಾವಣನ ಸಂದರ್ಭ; “ಇಲ್ಲಿ ಕವಿ ಪಾರ್ತಿಸುಬ್ಬ ರಾವಣನನ್ನು ಉದಾತ್ತೀಕರಿಸಲು ಹೊರಟಂತಿದೆ. ‘ರಾವಣ ಯಾವುದೇ ಕೆಲಸವನ್ನು ಮಾಡುವ ಮುನ್ನ ತನ್ನ ಹೆಂಡತಿಗೂ ತಿಳಿಸಿ ಮುಂದುವರಿಯುತ್ತಾನೆ. ಆತ ಒಳ್ಳೆಯವ, ಸಜ್ಜನ’ ಎಂದು ಪ್ರತಿಪಾದಿಸಲು ಹೊರಟಂತಿದೆ. ಆದರೆ ಅದು ರಾವಣನ ತೋರಿಕೆಯ ನಡವಳಿಕೆ ಎಂದು ಕೂಡಲೇ ಗೊತ್ತಾಗುತ್ತದೆ. ಮೂಲದಲ್ಲಿ ಇಂತಹ ಆಭಾಸ ನಡವಳಿಕೆ ಇಲ್ಲ. ತಂಗಿಯಿಂದ ವಿಷಯ ತಿಳಿದ ಕೂಡಲೇ ರಾವಣ ಮಾರೀಚಾಶ್ರಮಕ್ಕೆ ಹೊರಡುತ್ತಾನೆ ಎನ್ನುವುದನ್ನು ಉಲ್ಲೇಖಿಸುತ್ತಾರೆ. ರಾವಣನ ಕಾಮುಕತೆಯನ್ನು ವಿವರಿಸುವ ರಾಮಯಣದ ಉಲ್ಲೇಖಗಳನ್ನು ಮೂಲ ಶ್ಲೋಕಗಳೊಡನೆ ನೀಡಿದ್ದಾರೆ. ಹೀಗೆ ರಾವಣನನ್ನು ಉದಾತ್ತೀಕರಿಸುವವರ ತರ್ಕಗಳನ್ನು ತಿರಸ್ಕರಿಸುವುದಕ್ಕೆ ಆಧಾರಗಳನ್ನು ನೀಡಿದ್ದಾರೆ. ರಾಮಾಯಣದ ಪಾತ್ರಗಳ ಸ್ವಭಾವವನ್ನು ಬದಲಿಸುವ ಎಲ್ಲ ಪ್ರಯತ್ನಗಳನ್ನು ಪ್ರಶ್ನಿಸುತ್ತಾರೆ. ಮಹಾ ಜ್ಞಾನಿಯಾದ ಹನೂಮಂತನನ್ನು ಮಂಗನಂತೆ ನಡೆಸಿಕೊಳ್ಳುವ, ಎದುರು ಪಾತ್ರದ ಅರ್ಥಗಾರಿಕೆಯು ಕಥೆಯ ಮತ್ತು ಕಾವ್ಯದ ಮರ್ಯಾದೆಯನ್ನು ಕಾಯುವುದಿಲ್ಲ ಎಂದು ಎಚ್ಚರಿಸಿದ್ದಾರೆ. ತಾಳಮದ್ದಲೆ, ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸಬೇಕೆಂಬ ಹಂಬಲ ಲೇಖಕರಿಗೆ.

    ಸೀತಾಪಹಾರ ಪ್ರಸಂಗದಲ್ಲೂ “ಹೆಣ್ಣುಜನ್ಮವೇ ಸಾಕು ಎನಕಂಡು ಮರೆಯಿರೊ| ರಾಮರಾಮಾ||” ಎನ್ನುವ ಸೀತೆಯ ಪದ್ಯ ಸೀತೆಯ ಗಂಭೀರ ವ್ಯಕ್ತಿತ್ವವನ್ನೇ ಕೆಳಗಿಳಿಸಿಬಿಡುತ್ತದೆ, ಗ್ರಾಮ್ಯ ಹೆಣ್ಣನ್ನಾಗಿ ಮಾಡಿಬಿಡುತ್ತದೆ ಎಂದು ಆತಂಕಪಡುತ್ತಾರೆ. ಅಲ್ಲೆಲ್ಲ ಮೂಲ ರಾಮಾಯಣದ ಪಠ್ಯವನ್ನು ಉಲ್ಲೇಖಿಸಿ ಅರ್ಥಗಾರಿಕೆ ಹೀಗಿರಬೇಕು ಎಂದು ನಿರ್ದೇಶಿಸಿದ್ದಾರೆ. ಇಂತಹ ಸಲಹೆ ಸೂಚನೆಗಳನ್ನು ಎಲ್ಲ ಪ್ರಸಂಗಗಳ ಚರ್ಚೆಯಲ್ಲೂ ನೀಡಿದ್ದಾರೆ. ‘ಮಾತು ಮದ್ದಳೆ’ ಪುಸ್ತಕದಲ್ಲಿ ಲೇಖಕರು; ಅರ್ಥಗಾರಿಕೆಯ ಸಾಧ್ಯತೆಗಳನ್ನು ಹಲವು ಮುಖಗಳಲ್ಲಿ ಚರ್ಚಿಸುತ್ತಾರೆ. ಪ್ರಚಲಿತ ನಡೆಗಳಲ್ಲಿ ಅಪೇಕ್ಷಿತ ಬದಲಾವಣೆಗಳ ಬಗ್ಗೆ, ಪ್ರಸಂಗ ಪಠ್ಯದಲ್ಲಿ ನುಸುಳಿದ ಅನೌಚಿತ್ಯವನ್ನು ಸುಧಾರಿಸುವ ವಿಧಾನಗಳ ಬಗ್ಗೆ, ಮೂಲ ಕಾವ್ಯಕ್ಕೆ ಸಂವಾದಿಯಾಗಿ ಪ್ರಸಂಗದ ಪದ್ಯಗಳನ್ನು ಅರ್ಥೈಸುವ ಬಗ್ಗೆ, ಪಾತ್ರಗಳ ಅಂತರಂಗವನ್ನು ಭಾವಪೂರ್ಣವಾಗಿ ಅಭಿವ್ಯಕ್ತಿಸುವ ಬಗ್ಗೆ ವಿವರವಾಗಿ ಬರೆದಿದ್ದಾರೆ. ಅರ್ಥಧಾರಿಗಳು ಓದಬೇಕಾದ ಪೂರಕ ಸಾಹಿತ್ಯದ ಬಗೆಗೆ ವಿವರವನ್ನೂ ನೀಡಿದ್ದಾರೆ.

    ಅರ್ಥಧಾರಿಗಳಲ್ಲಿರುವ ಅಧ್ಯಯನದ ಕೊರತೆ, ಕುತರ್ಕ, ದುರ್ವಾದಗಳ ಮಂಡನೆ, ಚಪ್ಪಾಳೆ ಪಡೆಯುವ ಚಮತ್ಕಾರಗಳು, ಎದುರು ಅರ್ಥಧಾರಿಯ ತೇಜೋವಧೆ ಇಂತಹವುಗಳ ಬಗ್ಗೆ ಖಾರವಾಗಿಯೇ ಬರೆದಿದ್ದಾರೆ. “ಇದು ಕಲೆಯ ಮೇಲಿನ ಕಾಳಜಿಯೇ ವಿನಾ ಯಾರೊಬ್ಬರನ್ನೂ ಕೀಳುಗಳೆಯುವುದಕ್ಕಾಗಿ ಅಲ್ಲ. ಗುಣಗಳಿದ್ದಲ್ಲಿ ಕೊಂಡಾಡಿದ್ದೇನೆ, ಶ್ಲಾಘಿಸಿದ್ದೇನೆ, ಆನಂದಪಟ್ಟಿದ್ದೇನೆ. ಸಹೃದಯರು ಮುಖ್ಯವಾಗಿ ಇದನ್ನು ಗಮನಿಸಬೇಕು” ಎಂದು ಲೇಖಕನ ಬಿನ್ನಹದಲ್ಲಿ ವಿನಂತಿಸಿದ್ದಾರೆ. ಲೇಖಕರ ಆಕ್ಷೇಪಗಳನ್ನು ಬಿಟ್ಟು ಓದಿದರೂ ಪುಸ್ತಕ ಹಲವು ಹೊಸ ಹೊಳವುಗಳನ್ನು ಓದುಗರಿಗೆ ನೀಡುತ್ತದೆ. ಗ.ನಾ. ಭಟ್ಟರ ನಿರೀಕ್ಷೆ ಆದರ್ಶದ ಎತ್ತರದ್ದು. ತಾಳಮದ್ದಲೆ, ಎಲ್ಲ ಉತ್ಸಾಹಿಗಳಿಗೂ ಎಡೆ ನೀಡುವ ಕಲಾ ಪ್ರಕಾರ. ಎಲ್ಲೋ ಕೆಲವರು ಕಾವ್ಯ-ಶಾಸ್ತ್ರ-ಪುರಾಣಗಳ ಅಧ್ಯಯನದೊಂದಿಗೆ ಪೂರ್ಣ ಅರ್ಹತೆಯನ್ನು ಗಳಿಸಿಕೊಳ್ಳುತ್ತಾರೆ. ಜನಜನಿತವಾದ ಕಲೆಯೊಂದು ಬೆಳೆದು ನಿಲ್ಲಬಹುದಾದ ಎತ್ತರವನ್ನು ಈ ವಿಮರ್ಶೆ ತಿಳಿಸುತ್ತದೆ. ಇಲ್ಲಿ ನೀಡಿದ ಸಲಹೆ, ಮಾಡಿದ ಆಕ್ಷೇಪ, ಸೂಚಿಸಿದ ಸಾಧ್ಯತೆಗಳೆಲ್ಲ ಲೇಖಕರ ವೈಯಕ್ತಿಕ ಚಿಂತನೆ, ಅನುಭವಗಳ ಫಲ. ಒಪ್ಪುವ-ಬಿಡುವ ಸ್ವಾತಂತ್ರ್ಯ ಓದುಗರದ್ದು. ರಾಮಾಯಣದ ಪ್ರಸಂಗಗಳ ಪ್ರಸ್ತುತಿಯ ಕುರಿತು ಇಷ್ಟು ಸಾಂದ್ರವಾದ ವಿಮರ್ಶೆಯನ್ನು ತಾಳಮದ್ದಲೆಯ ಕ್ಷೇತ್ರಕ್ಕೆ ನೀಡಿರುವ ವಿದ್ವಾನ್ ಗ. ನಾ. ಭಟ್ಟರು ಅಭಿನಂದನಾರ್ಹರು. ಯಕ್ಷಗಾನ ಪ್ರಿಯರು ಈ ಪುಸ್ತಕವನ್ನು ಗಮನಿಸಲಿ ಎಂದು ಅಪೇಕ್ಷಿಸುತ್ತೇನೆ. ಮೈಸೂರಿನ ಮಹಿಮಾ ಪ್ರಕಾಶನದಿಂದ 2025ರಲ್ಲಿ ಪ್ರಕಟವಾಗಿರುವ 276 ಪುಟಗಳ ಮಾತು ಮದ್ದಳೆ ಪುಸ್ತಕದ ಬೆಲೆ 300 ರೂಪಾಯಿ.

    ವಿಮರ್ಶಕರು : ದಿವಾಕರ ಹೆಗಡೆ ಕೆರೆಹೊಂಡ

    ಮೂಲತಃ ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನವರಾದ ದಿವಾಕರ ಹೆಗಡೆ ಕೆರೆಹೊಂಡ ಇವರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ 35 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಕವಿ, ನಾಟಕಕಾರ, ಯಕ್ಷಗಾನ ನಟ, ಅರ್ಥಧಾರಿ ಏಕವ್ಯಕ್ತಿ ತಾಳಮದ್ದಲೆಯ ಏಕೈಕ ಕಲಾವಿದರಾದ ಇವರು ಹನ್ನೆರಡು ನಾಟಕಗಳು, ಹತ್ತು ಯಕ್ಷಗಾನ, ಇಪ್ಪತ್ತೆರಡು ನೃತ್ಯ ರೂಪಕಗಳು, ಎರಡು ಜೀವನ ವೃತ್ತಾಂತ ರಚಿಸಿದ್ದಾರೆ. ಇವರ ಆಕಾಶವಾಣಿಯಲ್ಲಿ 50ಕ್ಕೂ ಹೆಚ್ಚು ಬಾನುಲಿ ಸರಣಿಗಳು ಪ್ರಸಾರವಾಗಿದ್ದು, ಅನೇಕ ಬಹುಮಾನ, ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

    ಲೇಖಕ :  ವಿದ್ವಾನ್ ಗ.ನಾ. ಭಟ್ಟ

    ಗ. ನಾ. ಭಟ್ಟರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಶಿವಳ್ಳಿ ಗ್ರಾಮದ ನಾರಾಯಣ ಭಟ್ಟ ಮತ್ತು ಸರಸ್ವತಿ ಭಟ್ಟ ದಂಪತಿಗಳ ಸುಪುತ್ರ. ಬಹುಮುಖ ಪ್ರತಿಭೆಯುಳ್ಳ ಇವರ ಆಸಕ್ತಿ ಹಲವು ವಿಧ. ಓದು-ಬರಹ, ಪ್ರವಚನ, ಭಾಷಣ, ಸಂಘಟನೆ, ತಾಳಮದ್ದಳೆ ಅರ್ಥಗಾರಿಕೆ- ಇವೆಲ್ಲವೂ ಅವರ ಪ್ರೀತಿಯ ಕೆಲಸಗಳು. ಹಿಂದೂ ಸಂಸ್ಕೃತಿಯ ಬಗ್ಗೆ, ಸನಾತನ ಧರ್ಮದ ಬಗ್ಗೆ ಅವರಿಗೆ ಎಣೆಯಿಲ್ಲದ ಪ್ರೀತಿ-ಗೌರವಗಳು. ಸಂಸ್ಕೃತ, ವೇದ, ಉಪನಿಷತ್ತು, ರಾಮಾಯಣ, ಭಾರತ, ಭಾಗವತ, ಗೀತೆ ಮುಂತಾದ ಆರ್ಷ ಸಾಹಿತ್ಯಗಳಲ್ಲಿ ಒಂದಿಷ್ಟು ಪರಿಶ್ರಮ, ಅವುಗಳಲ್ಲಿ ಇನ್ನೂ ಸಾಧಿಸಬೇಕೆಂಬ ತುಡಿತ. ಜೊತೆ ಜೊತೆಗೆ ಆಧುನಿಕ, ಮೌಲಿಕ ಸಾಹಿತ್ಯಗಳ ಬಗ್ಗೆಯೂ ಅದೇ ಆದರ-ಪ್ರೀತ್ಯುತ್ಸಾಹ. ಸಮಕಾಲೀನ ಸುದ್ದಿ-ಸಂಗತಿಗಳ ಬಗ್ಗೆ ಜಾಗೃತ ಮನೋಭಾವ. ‘ಮಾತು ಮದ್ದಳೆ’ ಈ ಕೃತಿ ಇವರ ಇಪ್ಪತ್ತೈದು ಕೃತಿಗಳ ಜೊತೆಗೆ ಹೊಸ ಸೇರ್ಪಡೆಯಾಗಿದೆ.

     

    article baikady review roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಶರಣ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕ್ರಮಗಳಿಗೆ ಆಹ್ವಾನ | ಕೊನೆಯ ದಿನಾಂಕ ಜೂನ್ 15
    Next Article ಗುಂಡ್ಮಿ ಸಾಲಿಗ್ರಾಮದಲ್ಲಿ ಉಚಿತ ಯಕ್ಷಗಾನ ತರಬೇತಿ | ಜೂನ್ 20ರಿಂದ
    roovari

    Add Comment Cancel Reply


    Related Posts

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.