Subscribe to Updates

    Get the latest creative news from FooBar about art, design and business.

    What's Hot

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ನಾಳೆಯ ಬದುಕಿಗೆ ಹೊಸ ಹುರುಪು ತರುವ ‘ನನ್ನ solo ಟ್ರಿಪ್’
    Article

    ಪುಸ್ತಕ ವಿಮರ್ಶೆ | ನಾಳೆಯ ಬದುಕಿಗೆ ಹೊಸ ಹುರುಪು ತರುವ ‘ನನ್ನ solo ಟ್ರಿಪ್’

    June 3, 2026No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಾನವ ಪ್ರವಾಸಿಪ್ರಿಯ. ಕುಟುಂಬದೊಡನೆ ಪ್ರವಾಸಕ್ಕೆ ಹೋಗಲು ಎಲ್ಲರ ರಜಾದಿನಗಳು, ಮಕ್ಕಳ‌ ಪರೀಕ್ಷಾ ಸಮಯ, ಕುಟುಂಬದವರ ಕಾರ್ಯಕ್ರಮಗಳು ಹೀಗೆ ಎಲ್ಲವನ್ನು ಪರಿಗಣಿಸಿ ಪ್ರಯಾಣ, ಉಳಿದುಕೊಳ್ಳಲು ವ್ಯವಸ್ಥೆ ಎಲ್ಲವನ್ನೂ ಮುಂಚಿತವಾಗಿ ಕಾದಿರಿಸಿ ಹೋಗಬೇಕಾಗುತ್ತದೆ. ಆದರೆ ಈ ಎಲ್ಲವನ್ನು ಹೊಂದಿಸಿಕೊಂಡು ಹೋಗುವಷ್ಟರಲ್ಲಿ ಪ್ರವಾಸಕ್ಕೆ ಸುಮಾರು ಮುಂಚಿತ ತಯಾರಿ, ಸಮಯವೂ ಬೇಕು. ಅದಕ್ಕಾಗಿ ಇಂದಿನ‌ ಯುವಜನಾಂಗ ‘ಸೋಲೋ ಟ್ರಿಪ್’ ಎಂಬ ಹೊಸ ರೀತಿಯ ಪ್ರಯಾಣದ ಬಗ್ಗೆ ಆವಿಷ್ಕಾರ ಮಾಡಿದ್ದಾರೆ. ಒಬ್ಬರೇ ಹೋಗುವುದರಿಂದ ಪ್ರಯಾಣದ ಟಿಕೆಟ್ ಹೇಗೋ ಗಳಿಸಬಹುದು, ಉಳಿದುಕೊಳ್ಳಲು ಒಂದು ಸಣ್ಣ ವ್ಯವಸ್ಥೆಯೂ ಆಗಬಹುದು, ಪ್ರಯಾಣಕ್ಕೆ‌ ಸೈಕಲ್ ಬಳಸಬಹುದು, ಕೊಂಡುಹೋಗುವ ಲಗೇಜು ಕೂಡ ಕಡಿಮೆಮಾಡಿಕೊಂಡು ಯಾರ ರಜೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ಆರಾಮಾಗಿ ಹೋಗಿಬರಬಹುದು.

    ಈ ಸದ್ಯ ಶಶಿಧರ ಹಾಲಾಡಿಯವರ ‘ನನ್ನ solo ಟ್ರಿಪ್’ ಪುಸ್ತಕ ಓದಿದೆ. ಅವರು ಬಹಳ‌ ವರ್ಷಗಳ ಹಿಂದೆಯೇ ಸೋಲೋ ಟ್ರಿಪ್ ಆರಂಭಿಸಿದ್ದರು. ಕುಂದಾಪುರದಲ್ಲಿ ಕಾಲೇಜು ಮುಗಿಸಿ ರಸ್ತೆಯ ಮೇಲೆ 22 ಕಿಮೀ ದೂರದ ಹಾಲಾಡಿಗೆ ನಡೆದುಕೊಂಡು ಹೋಗುವ ಅವರ ಸಾಹಸಮಯ ಪ್ರಯಾಣದ ವರ್ಣನೆಯನ್ನು ಅದ್ಭುತವಾಗಿ ಮಾಡಿದ್ದಾರೆ. ಅವರ ಪ್ರಯಾಣದ ನಡುವೆ ಹೊಳೆಯ ಆಸುಪಾಸಿನ‌ ಸೌಂದರ್ಯವನ್ನುಣ್ಣುತ್ತಾ ಸಾಗುವ ಲೇಖಕರು ನಮ್ಮನ್ನು ಅಷ್ಟು ದೂರ ಅವರು ಹೇಗೆ ನಡದುಕೊಂಡು ಹೋಗುವ ಸಾಹಸಮಾಡಿದರು ಎಂಬುದನ್ನೆಲ್ಲಾ‌ ವಿವರಿಸಿದ್ದಾರೆ. ಈಗಿನ ಕಾಲದಲ್ಲಾದರೆ ಪ್ರಯಾಣಕ್ಕೂ ಮುಂಚೆ ಆಹಾರ, ನೀರು, ಇನ್ನೂ ಜಾಗೃತೆಗಾಗಿ ನಾನಾ ಪರಿಕರಗಳನ್ನು ಕೊಂಡುಹೋಗಿ ಪ್ರವಾಸ ಮಾಡುವ ಯುವಜನಾಂಗಕ್ಕೆ ಒಬ್ಬರೇ ಅವುಗಳಾವುದರ ಪೂರ್ವ ಸಿದ್ದತಾ ಕ್ರಮವಿಲ್ಲದೇ ಲೇಖಕರು ಅಷ್ಟು ದೂರ ಒಬ್ಬರೇ ಪ್ರಯಾಣಿಸಿದ್ದನ್ನು ಬಣ್ಣಿಸುವ ಸನ್ನಿವೇಶ ನಮ್ಮನ್ನು ಬೆಕ್ಕಸ ಬೆರಗಾಗಿಸುತ್ತವೆ.

    ಆ ಪ್ರಯಾಣ ಅವರನ್ನು ಇನ್ನೂ ಹಲವಾರು ಸೋಲೋ ಟ್ರಿಪ್ ಗಳಿಗೆ ಪ್ರೇರೇಪಿಸಿದನ್ನು ಅವರು ಹೇಳಲು ಮರೆಯುವುದಿಲ್ಲ. ಕೆಲಸಕ್ಕೆ ಸೇರಲು ಬ್ಯಾಂಕಿನವರ ಪತ್ರ ಸಿಕ್ಕಿ ದೂರದ ಬಯಲುಸೀಮೆಯ ಪುಟ್ಟಹಳ್ಳಿಗೆ ಸೇರಲು ಅವರ ಪ್ರಯಾಣದ ವರ್ಣನೆಯಂತೂ ಓದಿ ನಮಗೆ ರೋಮಾಂಚನವಾಗುತ್ತದೆ. ಮಾರ್ಗದಲ್ಲಿ ಅವರಿಗೆ ದೊರೆತ ಪಕ್ಷಿಕಾಶಿಯ ವಿವಿಧ ಪಕ್ಷಿ ಸಂಕುಲ, ಹಾರ್ನ್ ಬಿಲ್ ಪಕ್ಷಿಯ ವಿಶೇಷತೆ ಹೀಗೆ ವರ್ಣಿಸುತ್ತಾ ಸಾಗುವ ಲೇಖಕರು ಮಾರ್ಗ ಮಧ್ಯೆ ಬಾಯಾರಿಕೆಯಾದಾಗ ದಾರಿ ತೋರಿಸಲು ಬಂದ ಮಹಾಬಲ‌ಶೆಟ್ಟಿಗಾರರು ಕತ್ತಿಯಿಂದ ಬಳ್ಳಿಯೊಂದನ್ನು ಕತ್ತರಿಸಿ‌ ಅದರಿಂದ ಸುಮಾರು ಎರಡು ಲೋಟದಷ್ಟು ನೀರು ಅವರಿಗೆ ಕುಡಿಯಲು ಒದಗಿಸುವ ದೃಶ್ಯ ಓದಿ ಬೆರಗಾಗದಿರೆವು.

    ಮಾರ್ಗ ಮಧ್ಯದಲ್ಲಿ ಕುಳಿತು ವಿಶ್ರಮಿಸಲು ಕೂಡ ಲೇಖಕರಿಗೆ ಒಂದು ರೀತಿಯ ಅಳುಕು. ಯಾರಾದರೂ ಮಾರ್ಗ ಮಧ್ಯದಲ್ಲಿ ಸಿಕ್ಕಿ ಎಲ್ಲಿಗೆ ಹೊರಟಿದ್ದು? ಯಾಕೆ ನಡೆದು ಬಂದೆ ಎಂದು ಕೇಳಿದರೆ ಎಂಬ ಅಂಜಿಕೆ. ಹಾಲಾಡಿಯ ಅಕ್ಕಪಕ್ಕ ಬರುವಷ್ಟರಲ್ಲಿ ಸಿಕ್ಕ ಪರಿಚಿತನೊಬ್ಬ ಅದೇ ಪ್ರಶ್ನೆ ಕೇಳಲು ಇಲ್ಲೇ ಹತ್ತಿರ ಎಂಬ ಉತ್ತರ ನೀಡಿದ ಸಂದರ್ಭ ಹೀಗೆ ಸೋಲೋ‌ಟ್ರಿಪ್ ಬಗ್ಗೆ ಮುಚ್ಚಿಡಲು ಅವರ ಪ್ರಯತ್ನ ಎಷ್ಟು ದಿನ‌ ನಡೆದೀತು? ಬಾಳೆಬರೆ ಘಟ್ಟದ ನಡುವೆ ಸಾಗುವಾಗ ಬಸ್ಸಿನಲ್ಲಿ‌ ಹೋಗುವ ಅವರ ಅತ್ತೆ ಮಗ ರಾಜಣ್ಣ ಗಮನಿಸಿ, ಮನೆಯವರಿಗೆ ‘ಬಾಳೆಬರೆ ರಸ್ತೆಯಲ್ಲಿ ಶಶಿಧರ ಒಬ್ಬನೇ ನಡೆಯುತ್ತಿದ್ದುದು ಏಕೆ?’ ಎಂದು ಬರೆದಾಗ ಮನೆಯಲ್ಲಿ ರಹಸ್ಯ ಬಯಲಾದಾಗ ಅವರ ಪಾಡೇ!

    ಹಂದಿಮನೆಬರೆ ಹೀಗೆ ಹಲವಾರು ಕಡೆ ಸೋಲೋಟ್ರಿಪ್, ಒಮ್ಮೊಮ್ಮೆ ಜೊತೆಗಾರರಿದ್ದರೂ ಅವರಿಗೆ ಏಕಾಂಗಿಯಾಗಿ ಪ್ರಯಾಣ ಮಾಡಿದ ಅನುಭವ ನೀಡಿದ ಪ್ರವಾಸದ ಸಾಹಸಮಯ ದೃಶ್ಯಗಳನ್ನು, ಪರಿಸರದ ಸೌಂದರ್ಯ, ಸಸ್ಯ, ಪಕ್ಷಿಗಳ ವರ್ಣನೆ‌ ನೀಡುತ್ತಾ, ಕಾಡಿನ‌ ನಡುವೆ ಇರುವ ಸುಂದರ ಗ್ರಾಮ ಕುಚ್ಚೂರಿನಲ್ಲಿಯ ಅವರ ಸಂಬಂಧಿಗಳ ಮನೆಯಲ್ಲಿ 100-150 ಜನ‌ವಾಸವಿದ್ದು ಆ ಮನೆಯವರಿಗಾಗಿಯೇ ಪಕ್ಕದಲ್ಲಿ ಶಾಲೆಯನ್ನು ತೆರೆದಂತ ಸನ್ನಿವೇಶ ಹೇಳುತ್ತಾ, ಶಾಲೆಯ ಏಕೋಪಾಧ್ಯಾಯರು ಆ ಮನೆಯಲ್ಲೇ ಉಳಿದುಕೊಳ್ಳುವ ವ್ಯವಸ್ಥೆಯ ಕುರಿತು ಹೇಳುತ್ತಾರೆ. ಇಲ್ಲದಿದ್ದರೆ ಆ ಕಾಲದಲ್ಲಿ 8 ಕಿ.ಮೀ. ದೂರದ ಹೆಬ್ರಿಗೆ ದಿನಾಲೂ ನಡೆದುಕೊಂಡು ಹೋಗಿಬರುವುದು ಸಾಧ್ಯವೇ?

    ವೃತ್ತಿ ಜೀವನ‌ ಆರಂಭಿಸಿದ ನಂತರ ಅವರು‌ ನಡೆಸುವ ಹಲವಾರು ಪ್ರವಾಸದ ಅನುಭವಗಳನ್ನು ನಮ್ಮ‌ ಮುಂದಿಡುತ್ತಾ ಸೈಕಲಿನಲ್ಲಿ ಹೋದ ಪ್ರವಾಸ, ಗುಡ್ಡ, ಬೆಟ್ಟ ಏರುವ ಸಾಹಸ, ಅಲ್ಲಿ ಅವರಿಗಾದ ತೊಂದರೆ, ತಪ್ಪಿ ಹೋದ ಅಂಡಮಾನ್ ಟ್ರಿಪ್, ಅದಕ್ಕಾಗಿ ಕಳೆದುಕೊಂಡ ದೊಡ್ಡ ಮೊತ್ತ, ಅವರಿಗೆ ‘ಅಬ್ಬೆ’ ಕಾದಂಬರಿ ಬರೆಯಲು ಆದ ಪ್ರಯಾಣದ ಪ್ರಭಾವ, ಬೈಂದೂರಿನಿಂದ‌ ಮರವಂತೆಗೆ ಲಾರಿಯ ಕ್ಯಾಬಿನ್ ನಲ್ಲಿ ಕುಳಿತು ಸಾಗಿದ ಅನುಭವ, ಕೋಟೇಶ್ವರ ಜಾತ್ರೆಯ ವೈಭವ ಹೀಗೆ ನಾನಾ ಪ್ರವಾಸದ ಅನುಭವಗಳನ್ನು ನಮಗೆ ಹೇಳುತ್ತಾ ನಾವೂ ಅವರೊಂದಿಗೆ ಪಯಣಿಸುತ್ತಿರುವ ಅನುಭವವಾಗುವುದರಲ್ಲಿ‌ ಎರಡು ಮಾತಿಲ್ಲ.

    ಕಾಲೇಜು‌ ದಿನಗಳಲ್ಲಿ ಅಶೋಕವರ್ಧನರವರು ಕಾಲೇಜು ಮಕ್ಕಳಲ್ಲಿ ಕಾಲ್ನಡಿಗೆ, ಶಿಲಾರೋಹಣದ ಪರಿಚಯ ಮಾಡಿಸಬೇಕೆಂದು ಪ್ರೇರೇಪಣೆ ನೀಡಲು ನಡೆಸುತ್ತಿದ್ದ ಹಲವಾರು ರಾತ್ರಿ ನಡಿಗೆ ಕ್ಯಾಂಪ್ ಗಳ ಕುರಿತು ಬರೆಯುತ್ತಾ, ಅವರೊಂದಿಗೆ ಮಾಡಿದ ಶಿಲಾರೋಹಣದ ವರದಿ ನೀಡಿ, ಅವರಿಗೆ ಸಿಕ್ಕ ಪ್ರೋತ್ಸಾಹ, ಪ್ರೇರೇಪಿತರಾಗಿ ಅವರು ನಡೆಸಿರುವ ಇನ್ನೂ ಹಲವಾರು ಶಿಲಾರೋಹಣ ಹೀಗೆ ಒಮ್ಮೆಯಾದರೂ ನಾವೂ ಕೂಡ ಇವನ್ನೆಲ್ಲ‌ ಪ್ರಯತ್ನಿಸಬೇಕು ಎಂದು ಇಂದಿನ ಯುವಕರನ್ನು ಪ್ರೇರೇಪಿಸುವುದರಲ್ಲಿ ಸಂಶಯವಿಲ್ಲ. ಬೆಂಗಳೂರಿನಲ್ಲಿ ‘ಸ್ಪಾರ್ಕ್ಸ್’ ಸಂಸ್ಥೆಯವರೊಂದಿಗೆ ಅವರು ನಡೆಸಿದ ಚಾರಣ ಶಿಲಾರೋಹಣಕ್ಕೂ ಆ ಪ್ರೇರೇಪಣೆಯೇ ಕಾರಣವೇನೋ?!

    ಅವರ ಮುಂಗೈಯಲ್ಲಿ ಸಿಬ್ಬು ಆದಾಗ ಅಮ್ಮಮ್ಮ ಕಂಬಳದ ದಿನ ಕಂಬಳದ ಸುತ್ತ ಅರ್ಧಸೇರು ಅಕ್ಕಿ ಚೆಲ್ಲಿ ಬಾ ಎಂದು ಕಟ್ಟಿಕೊಳ್ಳುವ ಹರಕೆ, ಅದರ ಹಿಂದಿರುವ ನಂಬಿಕೆಯನ್ನು ವರ್ಣಿಸುತ್ತಾ, ಕಂಬಳ, ಕೋಣಗಳು, ಅದರ ಬಗ್ಗೆ ವರ್ಣಿಸುತ್ತಾ ಕರಾವಳಿಯ ಕಂಬಳದ ವರ್ಣನೆಯನ್ನು ರಸಮಯವಾಗಿ ಮಾಡಿದ್ದಾರೆ.

    ಹೀಗೆ ಮಲೆನಾಡು, ಕರಾವಳಿ, ಬಯಲುಸೀಮೆಯ ಸುತ್ತಾ ಅವರ ಒಂಟಿ ಪ್ರವಾಸದ ಅನುಭವಗಳನ್ನು ಹೇಳುತ್ತಾ ನಮ್ಮ‌ ಕರ್ನಾಟಕದ ಪರಿಸರ, ಅಲ್ಲಿನ ಪ್ರಾದೇಶಿಕ ಪ್ರಾಮುಖ್ಯತೆ, ವಿಭಿನ್ನತೆ ಹೀಗೆ ವರ್ಣಿಸುತ್ತಾ ಲೇಖಕರು ನಮಗೂ ಪ್ರವಾಸ ಮಾಡಲು ಪರೋಕ್ಷವಾಗಿ ಕರೆ ನೀಡುತ್ತಾರೆ. ಪ್ರವಾಸದಿಂದ ಹೊಸಹೊಸ ಅನುಭವಗಳು, ಹೊಸ ಪರಿಚಯ, ಮನದಲ್ಲೂ ಹೊಸ ಚೈತನ್ಯ ಮೂಡಿ ನಾಳೆಯ ಬದುಕಿಗೆ ಹೊಸ ಹುರುಪು ತರುತ್ತದೆ. ಇಂದು ಹಲವಾರು ಸೌಲಭ್ಯಗಳು ಲಭ್ಯವಿದ್ದಯ ಒಂಟಿ ಪ್ರಯಾಣ ಸುಲಭಕರವಾಗಿರುವುದರಿಂದ ಯಾರಾದರೂ ಈ ಪ್ರಯತ್ನ ಮಾಡಬಹುದೇನೋ! ಹಾಗೆ ಕಷ್ಟಗಳು ಎದುರಾದರೆ ಲೇಖಕರ ಅನುಭವಗಳಿಂದ ಪ್ರೇರೇಪಿತರಾಗಿ ಅವನ್ನು ಎದುರಿಸಿ ಹೊಸ ಪ್ರಯಾಣಕ್ಕೆ ಹುರುಪನ್ನು ಪಡೆಯಬಹುದೇನೋ! ಒಮ್ಮೆ ‘ನನ್ನ ಸೋಲೋ ಟ್ರಿಪ್’ ಓದಿ ನೀವೂ ‘ಸೋಲೋ ಟ್ರಿಪ್’ ಪ್ರಯತ್ನಿಸಿ.

    ಪುಸ್ತಕ : ‘ನನ್ನ solo ಟ್ರಿಪ್’
    ಲೇಖಕರು : ಶಶಿಧರ ಹಾಲಾಡಿ
    ಬೆಲೆ : 100/-
    ಪುಟ : 90 + xviii
    ಪ್ರಕಾಶನ : ಸಪ್ನಾ ಬುಕ್ ಹೌಸ್

    ವಿಮರ್ಶಕಿ : ಸಾವಿತ್ರಿ ಶಾನುಭಾಗ್

    ಮಲೆನಾಡಿನ ಸಿರ್ಸಿ ಊರಿನವರಾದ ಸಾವಿತ್ರಿ ಶಾನುಭಾಗ್ ಬೆಂಗಳೂರಿನಲ್ಲಿ ಏಳು ವರುಷ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ ಈಗ ಗೃಹಿಣಿಯಾಗಿ ಓದುವ ಬರೆಯುವ ಹವ್ಯಾಸವನ್ನು ಮುಂದುವರಿದಿದ್ದಾರೆ. ಇದುವರೆಗೂ ಮಹಿಳೆಯರು, ಅವರ ಜೀವನದ ಬಗ್ಗೆ ಬರಹಗಳನ್ನು ಬರೆದು, ಅವುಗಳ ಕಿರುಪರಿಚಯ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಮಕ್ಕಳೊಂದಿಗೆ ಕಾಲ ಕಳೆಯುತ್ತಾ ಅವರ ಆಟೋಟಗಳಲ್ಲೇ ಸಮಯ ಕಳೆಯುತ್ತಾ ಅವರ ಕುರಿತು, ಅವರನ್ನು ನಿಭಾಯಿಸುವ ಕುರಿತು ಬರೆಯುವುದೆಂದರೆ ಅವರಿಗೆ ಅಚ್ಚುಮೆಚ್ಚು. ಇವರ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಐ.ವೈ.ಸಿ. ಸಭಾಭವನದಲ್ಲಿ ಉದ್ಘಾಟನೆಗೊಂಡ ‘ಯಕ್ಷಗಾನ ಮಾರ್ಗದರ್ಶಿ ಶಿಬಿರ’
    Next Article ಸೌಹಾರ್ದ ಸಾಹಿತ್ಯ ವೇದಿಕೆ ಮಂಗಳೂರು ಘಟಕದಿಂದ ‘ಕನ್ನಡದ ಕಂಪು ಸರಣಿ -10’ | ಜೂನ್ 07
    roovari

    Add Comment Cancel Reply


    Related Posts

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026

    ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್ ಪ್ರಶಸ್ತಿಗೆ ಲೇಖಕಿಯ ಆಯ್ಕೆ

    June 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.