Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ಕಥೆಗಳಲ್ಲಿ ಮಹಿಳಾ ಮತ್ತು ದಮನಿತರ ಪರ ಚಿಂತನೆ
    Article

    ಪುಸ್ತಕ ವಿಮರ್ಶೆ | ಕಥೆಗಳಲ್ಲಿ ಮಹಿಳಾ ಮತ್ತು ದಮನಿತರ ಪರ ಚಿಂತನೆ

    June 19, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನರೇಂದ್ರ ಎಸ್. ಗಂಗೊಳ್ಳಿಯವರು ಈಗಾಗಲೇ ತಮ್ಮ ಸಣ್ಣಕಥೆ, ಕಾದಂಬರಿ ಮತ್ತು ವೈಚಾರಿಕ ಪ್ರಬಂಧ ಸಂಕಲನಗಳ ಮೂಲಕ ಸಶಕ್ತ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಇತ್ತೀಚಿನ ಪ್ರಬಂಧ ಸಂಕಲನ ‘ಅವಳ ನಿಟ್ಟುಸಿರು’ ಅವರ ಸ್ತ್ರೀಪರ ಚಿಂತನೆಯನ್ನು ಸಶಕ್ತವಾಗಿ ಪ್ರಕಟಪಡಿಸಿದೆ. ಈಗಷ್ಟೇ ಹೊರಗಿಳಿದಿರುವ ಅವರ ‘ರೂಮಿನೊಳಗಿಂದ’ ಎಂಬ ಕಥಾಸಂಕಲನವು ಅವರ ಮಹಿಳಾ ಚಿಂತನೆ ಮತ್ತು ದಮನಿತರ ಪರವಾದ ಧ್ವನಿಗಳಿಂದ ಇನ್ನಷ್ಟು ಕಳೆಗಟ್ಟಿದೆ.

    ಮೊದಲನೆಯದೇ ಶೀರ್ಷಿಕೆಯ ಕಥೆ ‘ರೂಮಿನೊಳಗಿಂದ’. ಇದರಲ್ಲಿ ರಮ್ಯಾ ಎನ್ನುವ ಕೆಳವರ್ಗದ ಹೆಣ್ಣುಮಗಳೊಬ್ಬಳು ತನ್ನ ಬದುಕಿನುದ್ದಕ್ಕೂ ಎದುರಿಸುವ ಕಷ್ಟಕೋಟಲೆಗಳ ಚಿತ್ರಣವಿದೆ. ಅವಳ ಬಡ ತಾಯ್ತಂದೆಯರು ಮಗಳು ಬುದ್ಧಿವಂತಳೂ ಪ್ರತಿಭಾನ್ವಿತೆಯೂ ಆಗಿದ್ದಾಳೆಂದು ತಿಳಿದಿದ್ದರೂ ಅವಳನ್ನು ತೀರಾ ಎಳೆಯ ವಯಸ್ಸಿನಲ್ಲಿ ಮಧ್ಯವಯಸ್ಕನಾದ ಕುಡುಕ ಗಂಡಸಿಗೆ ಕಟ್ಟುವುದರೊಂದಿಗೆ ಅವಳ ಕಷ್ಟಪರಂಪರೆಗಳು ಆರಂಭವಾಗಿ ಅವನು ಅವಳನ್ನು ವೇಶ್ಯಾಗೃಹಕ್ಕೆ ಮಾರುತ್ತಾನೆ. ಅಲ್ಲಿನ ನರಕವಾಸದಿಂದ ಹೇಗೋ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದು ವ್ಯಾಪಾರದಲ್ಲಿ ತೊಡಗಿಸಿಕೊಂಡು ಹಂತಹಂತವಾಗಿ ಮೇಲೇರುವ ಅವಳಿಗೆ ಕೊನೆಗೆ ತನಗೆ ಹೆಚ್.ಐ.ವಿ. ಸೋಂಕು ತಗುಲಿರುವುದು ಗೊತ್ತಾಗುತ್ತದೆ. ಆದರೂ ಧೃತಿಗೆಡದೆ ಅವಳು ತನ್ನ ಎಲ್ಲಾ ಸಂಪಾದನೆಯನ್ನು ಬಡಮಕ್ಕಳಿಗೋಸ್ಕರ ವ್ಯಯಿಸಲು ನಿರ್ಧರಿಸುತ್ತಾಳೆ.

    ‘ಆಲಣ್ಣನ ಆಲದ ಮರ’ ಪರಿಸರ ಸಂರಕ್ಷಣೆಯ ಕುರಿತಾದ ಕಥೆ. ಸಾರ್ವಕನಿಕರ ಸುಖಸ್ಕೋಸ್ಕರ ಅಲದಮರಗಳನ್ನು ಸ್ವತಃ ನೆಟ್ಟು ಸಾಕಿ ಬೆಳೆಸಿದ ಆಲಣ್ಣನನ್ನು ನಾಡು ಗುರುತಿಸಿ ಸನ್ಮಾನಿಸುವುದು ಒಂದು ಹೃದಯಂಗಮವಾದ ಸನ್ನಿವೇಶ. ಆರೋಗ್ಯ ಕೆಟ್ಟು ಅಪರೇಷನ್ ಮಾಡಬೇಕೆಂದು ಡಾಕ್ಟರ್ ಹೇಳಿದರೂ ಕೈಯಲ್ಲಿ ಸಾಕಷ್ಟು ದುಡ್ಡು ಇದ್ದರೂ ಅದು ಕುಟುಂಬದ ಒಳಿತಿಗಿರಲಿ ಎಂದು ನಿಸ್ವಾರ್ಥಿಯಾಗಿ ಅವನು ಸಾವನ್ನಪ್ಪುವ ದೃಶ್ಯ ಮನ ಕಲಕುತ್ತದೆ.

    ‘ಯಾರು ಒಳ್ಳೆಯವರು?’ ಕಥೆಯಲ್ಲಿ ಮನೆಗಾಗಿ ಬಹಳಷ್ಟು ದುಡಿದ ಅಕ್ಕನಿಗೆ ಮೂವತ್ನಾಲ್ಕು ವರ್ಷವಾದರೂ ಮದುವೆಯಾಗದೆ ಇದ್ದಾಗ ಅವಳ ಮೇಲೆ ಪ್ರೀತಿಯಿಟ್ಟು ಅವಳ ಕೈಹಿಡಿಯಲು ಬಂದ ಅನ್ಯ ಜಾತಿಯ ಹುಡುಗನನ್ನು ತಾಯಿ-ತಮ್ಮ ಕುಟುಂಬದ ಪ್ರತಿಷ್ಠೆಯ ಹೆಸರಿನಲ್ಲಿ ನಿರಾಕರಿಸಿದಾಗ ಬೇರೆ ದಾರಿ ಕಾಣದೆ ಅವಳು ಮನೆಬಿಟ್ಟು ಓಡಿ ಹೋಗಿ ಅವನನ್ನು ಮದುವೆಯಾಗಿ ಸುಖವಾಗಿರುತ್ತಾಳೆ.‌ ತಮ್ಮನೂ ಅನ್ಯ ಜಾತಿಯ ಹುಡುಗಿಯ ಪ್ರೀತಿಯಲ್ಲಿ ಬಿದ್ದಿದ್ದರೂ ಹೇಗೋ ಅಮ್ಮನನ್ನು ಸಮಜಾಯಿಸಿದರಾಯ್ತು ಎಂಬ ಉಡಾಫೆಯಲ್ಲಿರುತ್ತಾನೆ. ಆದರೆ ಆ ಹುಡುಗಿ ‘ಓಡಿ ಹೋದ ಅಕ್ಕನಿರುವ ಮನೆಗೆ’ ತಾನು ಬರುವುದಿಲ್ಲವೆಂದು ಹೇಳಿ ಅವನನ್ನು ನಿರಾಕರಿಸಿದಾಗ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ.

    ‘ನಿಶಾಚರ’ ಸಲಿಂಗಕಾಮದ ಕುರಿತಾದ ವಿಶಿಷ್ಟ ಕಥೆ. ಇದು ಒಂದು ಪತ್ತೇದಾರಿ ಕಥೆಯ ಶೈಲಿಯಲ್ಲಿ ಕುತೂಹಲ ಕೆರಳಿಸುತ್ತ ಸಾಗುತ್ತದೆ. ಹೈಸ್ಕೂಲಿನಲ್ಲಿ ಕಲಿಯುವ ಹೆಣ್ಣುಮಕ್ಕಳೂ ಈ ರೀತಿ ವರ್ತಿಸಲು ಸಾಧ್ಯವೇ ಅನ್ನಿಸುತ್ತದೆ.‌ ಈ ಕಠೋರ ಸತ್ಯವನ್ನು ಲೇಖಕರು ಇಲ್ಲಿ ಅನಾವರಣಗೊಳಿಸಿದ್ದಾರೆ. ಹೀಗೆ ಸಂಕಲನದಲ್ಲಿರುವ ಉಳಿದ ಆರು ಕಥೆಗಳಾದ ‘ಮಾತನಾಡದವರು’, ‘ದೋಣಿಯಮ್ಮನ ಸೇತುವೆ’, ‘ಒಂದು ಮಗು ಬೇಕಿತ್ತು’, ‘ಕಪ್ಪು ಹೃದಯ’, ‘ಅರಿವು’, ‘ಹರ್ಕಿ’ ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಬದುಕಿನ ವೈವಿಧ್ಯಮಯ ಬಣ್ಣಗಳನ್ನು ತೆರೆದಿಡುತ್ತವೆ.‌ ಬದುಕಿನ ಕುರಿತು, ಮನುಷ್ಯರ ಸ್ವಭಾವಗಳ ಕುರಿತು, ಮನುಷ್ಯ ಸಂಬಂಧಗಳ ವಿವಿಧ ಮುಖಗಳ ಕುರಿತು ಓದುಗರೊಂದಿಗೆ ಸಂವಾದ ನಡೆಸುತ್ತವೆ.

    ಆಕರ್ಷಕ ಕಥನ ಕಲೆ ನರೇಂದ್ರ ಗಂಗೊಳ್ಳಿಯವರಿಗೆ ಸಿದ್ಧಿಸಿದೆ. ಹಲವು ಕಥೆಗಳಲ್ಲಿ ಕುಂದಾಪುರದ ಆಡುಭಾಷೆಯನ್ನು ಬಳಸಿ ತಮ್ಮ ಭಾಷಾ ಪ್ರೌಢಿಮೆಯನ್ನು ಅವರು ಸಾಬೀತು ಪಡಿಸುತ್ತಾರೆ. ಕಥೆಯ ನಡುನಡುವೆ ನುರಿತ ಕಥೆಗಾರನಂತೆ ಗ್ರಾಮೀಣ ಸಾಂಸ್ಕೃತಿಕ ಬದುಕಿನ ಚಿತ್ರಣ, ರಾಜಕೀಯ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳು, ಪ್ರಕೃತಿಯ ವರ್ಣನೆ, ಕೊರೋನಾ ಕಾಲದಲ್ಲಿ ಜನರು ಅನುಭವಿಸಿದ ಕಷ್ಟಗಳು, ಹಳ್ಳಿಯ ಮಂದಿಗೆ ಆಧುನಿಕತೆ ತಂದೊಡ್ಡುವ ಆತಂಕಗಳು – ಹೀಗೆ ಹಲವಾರು ಸಂಗತಿಗಳನ್ನು ಸಂದರ್ಭೋಚಿತವಾಗಿ ತರುತ್ತಾರೆ. ಸಮಾಜದ ದೋಷಗಳತ್ತ ಬೊಟ್ಟು ಮಾಡುವ ಅವರ ಕಥೆಗಳು ಸಾಮಾಜಿಕ ಸುಧಾರಣೆಯೇ ತಮ್ಮ ಗುರಿ ಎಂದು ಸಾರಿ ಹೇಳುತ್ತವೆ. ಮುಂದೆಯೂ ಇವರಿಂದ ಇನ್ನಷ್ಟು ಇಂಥ ಒಳ್ಳೆಯ ಕಥೆಗಳನ್ನು ಖಂಡಿತಾ ನಿರೀಕ್ಷಿಸಬಹುದು.

    ವಿಮರ್ಶಕಿ : ಡಾ. ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    ಲೇಖಕ : ನರೇಂದ್ರ ಎಸ್. ಗಂಗೊಳ್ಳಿ

    ಪ್ರಸ್ತುತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರಹಗಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ವಾಗ್ಮಿಯಾಗಿ ನಿರೂಪಣಕಾರನಾಗಿ, ಅಂಕಣಕಾರರಾಗಿ, ತೀರ್ಪುಗಾರರಾಗಿ, ಕಿರುನಾಟಕಗಳ ರಚನೆ ಮತ್ತು ನಿರ್ದೇಶಕರಾಗಿ ಹಾಗೂ ಸಂಗೀತ ಕ್ಷೇತ್ರದಲ್ಲಿ ಸ್ಯಾಕ್ಸೋಫೋನಿಸ್ಟ್ ಆಗಿಯೂ ಇವರು ಗುರುತಿಸಿಕೊಂಡಿದ್ದಾರೆ. ಇವರ ರಚನೆಯ ಹೇಳದೆ ಹೋದ ಮಗಳಿಗೆ, ನಾಯಿ ನಾನು, ಸುರಗಂಗೆ ಹಾಗೂ ಪ್ರಸಿದ್ಧ ವಿಮರ್ಶಕಿ ಮತ್ತು ಅನುವಾದಕಿ ಡಾ. ಪಾರ್ವತಿ ಜಿ. ಐತಾಳ್ ಮತ್ತು ಇತ್ತೀಚಿಗೆ ಬಿಡುಗಡೆಯಾದ ಪತ್ತೆದಾರಿ ಕಾದಂಬರಿ ‘ನಿಭ್ರತ’ ಹೆಸರಿನ ಪುಸ್ತಕಗಳು ಅಪಾರ ಜನ ಮೆಚ್ಚುಗೆ ಗಳಿಸಿವೆ. ಇವರ ರಚನೆ ಮತ್ತು ನಿರ್ದೇಶನದ ಮೈಸೂರು ಮಲ್ಲಿಗೆ, ಬದುಕು ಸಾಗಲೇಬೇಕು, ಮರಣಿ ಮಾಂಟೆ, ಮೃಡ ಹಾಗೂ ಇತ್ತೀಚಿಗೆ ಪ್ರದರ್ಶನ ಕಂಡ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ ಹೆಸರಿನ ನಾಟಕಗಳು ದೊಡ್ಡ ಮಟ್ಟದ ಯಶಸ್ಸು ಕಂಡು ಅಪಾರ ಜನ ಮೆಚ್ಚುಗೆ ಪಡೆದಿವೆ. ಹಲವು ರಾಜ್ಯ ಪ್ರಶಸ್ತಿಗಳು ಸೇರಿದಂತೆ ಹಲವಾರು ಬಹುಮಾನಗಳಿಗೆ ಸನ್ಮಾನಗಳಿಗೆ ಭಾಜನರಾಗಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ನಾನು ಕಾರಂತ’ ಕನ್ನಡ ನಾಟಕ ಪ್ರದರ್ಶನ | ಜೂನ್ 19
    Next Article ಉಡುಪಿಯಲ್ಲಿ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಪ್ರದಾನ | ಜೂನ್ 20
    roovari

    Add Comment Cancel Reply


    Related Posts

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026

    ಸುರತ್ಕಲ್ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಾಮ ಸಂಕೀರ್ತನ ಕಾರ್ಯಾಗಾರ | ಜುಲೈ 18, 19, 25 ಮತ್ತು 26

    July 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.