ತಮ್ಮ ಗುಣಗ್ರಾಹಿ ಬರಹಗಳ ಮೂಲಕ ಈಗಾಗಲೇ ಕನ್ನಡ ಸಾಹಿತ್ಯ ವಲಯದಲ್ಲಿ ಗಮನಾರ್ಹವಾಗಿ ಗುರುತಿಸಿಕೊಂಡವರು ವಿಜಯಶ್ರೀ ಎಂ. ಹಾಲಾಡಿಯವರು. ಇವರ ಮೊದಲ ಕಥಾ ಸಂಕಲನ ‘ಉಮ್ಮಲ್ತಿ ಗುಡಿಯ ಸಾಕ್ಷಿ’. ಇಲ್ಲಿರುವ ಹೆಚ್ಚಿನ ಕಥೆಗಳೂ ಸಾಂಪ್ರದಾಯಿಕ ಸಮಾಜದಲ್ಲಿ ಸ್ತ್ರೀಯರು ಒಂದಿಲ್ಲೊಂದು ರೀತಿಯಲ್ಲಿ ಅನುಭವಿಸುವ ಕಷ್ಟ-ಸಂಕಟ-ಯಾತನೆಗಳ ಕುರಿತಾಗಿಯೇ ಇವೆ. ಗ್ರಾಮೀಣ ಸ್ತ್ರೀ ಪಾತ್ರಗಳೇ ತುಂಬಿರುವ ಈ ಕಥೆಗಳಲ್ಲಿ ಪುರುಷರು ನೆರಳುಗಳಂತಷ್ಟೇ ಬರುತ್ತಾರೆ. ವೈದೇಹಿಯವರ ಕಥೆಗಳನ್ನು ಕಾರಂತರ ಕಾದಂಬರಿಗಳ ಸ್ತ್ರೀ ಪಾತ್ರಗಳನ್ನು ನೆನಪಿಸುವ ಈ ಕಥೆಗಳು ಸಂಪ್ರದಾಯದ ಹೆಸರಿನಲ್ಲಿ ಹೆಣ್ಣನ್ನು ತಾತ್ಸಾರದಿಂದ ನೋಡುವ ಮತ್ತು ಮಾನಸಿಕವಾಗಿಯೂ ದೈಹಿಕವಾಗಿಯೂ ಸದಾ ಹಿಂಸಿಸುವ ಪುರುಷ ಪ್ರಧಾನ ಸಮಾಜದ ಕರಾಳ ಮುಖವನ್ನು ನಮ್ಮ ಮುಂದಿಡುತ್ತವೆ.
ಶೀರ್ಷಿಕೆಯ ಕಥೆಯೇ ಇಲ್ಲಿ ಮೊದಲ ಕಥೆ. ಕಥೆಯ ನಿರೂಪಕಿ ಅಪಾರವಾಗಿ ಇಷ್ಟ ಪಡುವ ಸ್ನೇಹಪೂರ್ಣ ವ್ಯಕ್ತಿತ್ವದ ಬಾಗಿಯತ್ತೆ ತನ್ನ ಯಾವುದೇ ತಪ್ಪಿಲ್ಲದೆ ಎಲ್ಲರಿಂದ ಭರ್ತ್ಸನೆಗೊಳಗಾದವಳು. ಬಡತನ ಹಾಗೂ ವಿಷಮ ದಾಂಪತ್ಯದ ಅಸಹನೀಯ ಸಂಕಟಗಳಿಂದ ನೊಂದು ಬೆಂದಿರುವ ಅವಳು ಗಂಡನಿಂದ ಸದಾ ದೌರ್ಜನ್ಯಕ್ಕೊಳಗಾದವಳು. ನಿರೂಪಕಿಯ ಅಪ್ಪ ಮತ್ತು ಅವಳ ನಡುವೆ ಸಂಬಂಧವಿದೆ ಅನ್ನುವ ಸಂದೇಹ ನಿರೂಪಕಿಯ ಅಮ್ಮ-ದೊಡ್ಡಮ್ಮರಿಗಿದೆ. ಆದ್ದರಿಂದಲೇ ಅವರು ಸದಾ ಅವಳ ಬಗ್ಗೆ ಕುಹಕವಾಡುತ್ತಿರುತ್ತಾರೆ. ಹಾಗೆ ಅವರ ನಡುವೆ ಪ್ರೀತಿ ಇರುವುದೂ ನಿಜವೆನ್ನುವುದು ಬಾಗಿಯತ್ತೆ ಹೇಳುವ ಉಮ್ಮಲ್ತಿ-ಬೊಬ್ಬರ್ಯರ ನಡುವಣ ವಿಫಲ ಪ್ರೇಮಕಥೆ ಕೇಳಿದಾಗ ಖಚಿತವಾಗುತ್ತದೆ. ಅವರ ನಡುವಣ ಪ್ರೀತಿ ಅಂದರೆ ಅದು ಇಬ್ಬರಿಗೂ ಕೊಡುವುದು ನೋವು ಮಾತ್ರ. ಅದು ಕಥೆಯ ಕೊನೆಯಲ್ಲಿ ಬಾಗಿಯತ್ತೆಯ ಮೈಮೇಲೆ ಬರುವ ಉಮ್ಮಲ್ತಿ ದೈವದ ರೂಪಕವು ಇದನ್ನು ಒಂದು ಗಟ್ಟಿಯಾದ ಪ್ರಾತಿನಿಧಿಕ ಕಥೆಯನ್ನಾಗಿಸಿದೆ.
‘ಗರಡಿ ಬೆಟ್ಟಿನದೊಂದಿ ಬೆಳಕಿನಲ್ಲಿ’ ಒಂದು ಕ್ರಾಂತಿಕಾರಿ ಕಥೆ. ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾದ ಮೊಬೈಲ್ ಕೂಡಾ ಹೆಣ್ಣನ್ನು ಅತ್ಯಂತ ಕ್ರೂರವಾಗಿ ಯಾತನೆಯ ಕೂಪಕ್ಕೆ ತಳ್ಳಲು ಹೇಗೆ ಬಳಕೆಯಾಗಬಹುದು ಎಂಬುದನ್ನು ಹೇಳುವ, ನಾಗರಿಕತೆಯ ಗಂಧಗಾಳಿಯೇ ಇಲ್ಲದ ಅಶಿಕ್ಷಿತ-ಅನಕ್ಷರಸ್ಥ ಹೆಂಗಸರೂ ಸಂಘಟಿತರಾದರೆ ಪುರುಷಾಹಂಕಾರವನ್ನು ಹೇಗೆ ಮೆಟ್ಟಿ ನಿಲ್ಲಬಲ್ಲರು ಅನ್ನುವುದನ್ನು ಅಚ್ಚರಿ ಪಡುವ ರೀತಿಯಲ್ಲಿ ಸಾಬೀತು ಪಡಿಸಿ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ ಈ ಕಥೆ. ಇಲ್ಲಿ ಹಳ್ಳಿಯ ಪೋಲಿ-ಪೊಗರಿನ ಹುಡುಗರು ಎಷ್ಟೊಂದು ಸಂವೇದನಾ ಶೂನ್ಯರಾಗಿರುತ್ತಾರೆಂದರೆ ಪಾಪದ ಹೆಣ್ಣು ಗುಲಾಬಿ ಮಡಲ ತಟ್ಟಿಯ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಅವಳ ನಗ್ನ ಫೋಟೋ ತೆಗೆದು ವಾಟ್ಸಾಪ್ ಮೂಲಕ ಎಲ್ಲರಿಗೂ ರವಾನಿಸಿ ರಕ್ಕಸರಂತೆ ಕೇಕೆ ಹಾಕುತ್ತಾರೆ. ಇದರಿಂದ ಊರಲ್ಲಿ ತಲೆಯೆತ್ತಲಾಗದ ಗುಲಾಬಿಗಾಗಿ ಅಲ್ಲಿ ಆರ್ಥಿಕ ವಿಷಯಕ್ಕಾಗಿ ಆಗಲೇ ರೂಪುಗೊಂಡಿದ್ದ ‘ದೇವಿ ಸಂಘ’ ಎಂಬ ಮಹಿಳಾ ಸಂಘಟನೆ ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಗುಲಾಬಿ ನಿರಾಳವಾಗುವುದೇ ಇಲ್ಲಿನ ಕಥೆ. ಊರಿನ ಹಿರಿಯರು, ಪಟೇಲರು, ಪೋಲೀಸರು ಯಾರೂ ಸಹಾಯಕ್ಕೆ ಬಾರದಿರಲು ಆ ಹುಡುಗರು ಕಿಸಿಕಿಸಿ ನಗುತ್ತಾ ಮಜಾ ಉಡಾಯಿಸುತ್ತಿರಲು ಮಹಿಳೆಯರು ಅವರ ಮುಂದೆ ತಮ್ಮ ರವಕೆಗಳನ್ನು ತೆಗೆದು ತೋರಿಸಿ ‘ಈಗ ನಮ್ಮ ಫೋಟೋ ತೆಗೆದುಕೊಳ್ಳಿರೋ..!’ ಎಂದು ಘರ್ಜಿಸುತ್ತಾರೆ. ಹುಡುಗರು ನಿರ್ವಿಣ್ಣರಾಗಲು ಇದು ಸಾಕಾಗುತ್ತದೆ.
‘ಚನ್ನೆಮಣೆ’ ಒಂದು ಲೈಂಗಿಕ ಅತ್ಯಾಚಾರದ ಕಥೆ. ಹಳ್ಳಿಯ ಹುಡುಗಿಯೊಬ್ಬಳು ತಾಯಿ ಮತ್ತು ಅಜ್ಜಿಯರ ಆರೈಕೆಯಲ್ಲಿ ಬೆಳೆದು ಚೆನ್ನಾಗಿ ಓದಿ ಡಾಕ್ಟರಾಗಲು ಪ್ರಯತ್ನಿಸುತ್ತಿದ್ದಂತೆ ಅವಳು ಮನೆಗೆ ಬರುವ ದಟ್ಟಾರಣ್ಯದ ದಾರಿಯಲ್ಲಿ ಕಿಡಿಗೇಡಿ ಹುಡುಗರು ಅವಳನ್ನು ಗ್ಯಾಂಗ್ ರೇಪ್ ಮಾಡಿದರೂ ಸೀತಕ್ಕನ ಅನುಭವದ ಮಾತುಗಳಿಂದ ಪ್ರಭಾವಿತಳಾಗಿ ಅವಳು ತನಗಾದ ಆಘಾತದಿಂದ ಚೇತರಿಸಿಕೊಂಡು ಮೇಲೇಳುವ ಈ ಕಥೆ ಇವತ್ತಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯನ್ನೀಯುತ್ತದೆ.
‘ಹೊಳೆ’ ಲೇಖಕಿಯು ಮುಕ್ತವಾಗಿ ಬರೆದ ಒಬ್ಬ ಹೆಣ್ಣಿನ ಮುಟ್ಟಿನ ಸಮಸ್ಯೆಯ ಕಥೆ. ಹೆಜ್ಜೆ ಹೆಜ್ಜೆಗೂ ಅತಿಯಾದ ರಕ್ತಸ್ರಾವದಿಂದ ಬಳಲಿ ಬೆಂಡಾಗುವ ಅವಳು ಕೊನೆಯಲ್ಲಿ ಪ್ರಕೃತಿ ಸಹಜವೆಂಬ ಸಮಧಾನದ ನಿರ್ಧಾರಕ್ಕೆ ಬರುತ್ತಾಳೆ. ‘ಏಕತಂತು’ ಈ ಜಗತ್ತಿನ ಸಕಲ ಜೀವಸಂಕುಲದ ಬಗೆಗೆ ಕಥಾನಾಯಕಿ ಬೆಳೆಸಿಕೊಳ್ಳುವ ಪ್ರೀತಿಯನ್ನು ಮನೆಗೆ ಆಕಸ್ಮಿಕವಾಗಿ ಬರುವ ಬೆಕ್ಕುಗಳನ್ನು ಪ್ರೀತಿಸುವ ಮೂಲಕ ತಿಳಿಯುತ್ತದೆ. ನಮ್ಮ ಸುತ್ತಮುತ್ತಲಿನ ಅನೇಕರಿಗೆ ಈ ಸತ್ಯದ ಅರಿವಿಲ್ಲವಲ್ಲ ಎಂಬ ಅವಳ ಚಿಂತೆಯೂ ಇಲ್ಲಿ ವ್ಯಕ್ತವಾಗಿದೆ. ‘ವಕ್ರಕೋಡಿನ ಬಸವ’ ಕಥಾನಾಯಕಿ ತನ್ನ ಚಿಕ್ಕಪ್ಪನಿಂದ ಎಳೆಯ ಹುಡುಗಿಯಾಗಿರುವಾಗಲೇ ಲೈಂಗಿಕ ಪೀಡನೆಗೆ ಗುರಿಯಾಗಿ ಅದನ್ನೆಂದೂ ಮರೆಯಲಾಗದೆ ದಿನವೂ ವಕ್ರಕೋಡಿನ ಬಸವನ ಕ್ರೌರ್ಯದ ಕನಸು ಕಾಣುತ್ತ ಮದುವೆಯೇ ಬೇಡವೆಂಬ ತಪ್ಪು ನಿರ್ಧಾರ ಕೈಗೊಂಡರೂ ಕೊನೆಗೆ ಬದಲಾಗುವ ಕಥೆ.
‘ದೇವಮ್ಮಕ್ಕ’ ಮೃದುಮನಸ್ಸಿನ ಹೆಂಗಸು. ಶಿಸ್ತುಬದ್ಧ ಬದುಕು ಅವಳದು. ವಿಷಮ ದಾಂಪತ್ಯದಲ್ಲಿ ಗಂಡನಿಂದ ಅಪಾರ ಹಿಂಸೆ ಅನುಭವಿಸಿರುವ ಅವಳು ಅವನು ಸತ್ತ ನಂತರ ತನ್ನನ್ನು ಬಹಳವಾಗಿ ಪ್ರೀತಿಸುವ ಶಂಕರಪ್ಪನ ಜತೆ ಬದುಕುತ್ತಾಳೆ. ಕಥಾ ನಿರೂಪಕಿ ವಾಸಿಸುವ ವಠಾರದಲ್ಲೇ ಇರುವವಳು. ನಿರೂಪಕಿಯ ಗಂಡನೂ ಅವಳನ್ನು ಹಿಂಸಿಸುತ್ತಲೇ ಇರುತ್ತಾನೆ. ಅವಳಿಗೆ ದೇವಮ್ಮಕ್ಕ ಸಹಾಯ ಮಾಡುತ್ತಾಳೆ. ‘ಪಾರ್ತಿಚಿಕ್ಕಿ’ಯೂ ‘ಉಮ್ಮಲ್ತಿ ಗುಡಿಯ ಸಾಕ್ಷಿ’ ಕಥೆಯ ಬಾಗಿಯಂತೆ ಶೋಷಣೆಗೊಳಗಾದ ಹೆಂಗಸು. ಮದುವೆಯಾದ ಕೂಡಲೇ ವಿಧವೆಯಾದ ಅವಳು ಮಕ್ಕಳಿಗಾಗಿ ಆಸೆಪಟ್ಟು ಊರಊರಿನ ಗಣ್ಯವ್ಯಕ್ತಿ ನಾರ್ಣಪ್ಪನ ತಾಯಿ ಇಲ್ಲದ ದುರ್ಬಲ ಮಗುವನ್ನು ಕಷ್ಟಪಟ್ಟು ಸಾಕಿ ದೊಡ್ಡದು ಮಾಡಿದರೆ ನಾರ್ಣಪ್ಪನ ಮಕ್ಕಳು ಅವಳಿಂದ ಆ ಮಗುವನ್ನು ಕ್ರೂರವಾಗಿ ಕಸಿದುಕೊಂಡು ಅವಳು ಮಾನಸಿಕ ಅಸ್ವಸ್ಥಳಾಗುತ್ತಾಳೆ.
‘ಮಹಾಪ್ರಸ್ಥಾನ’ದಲ್ಲಿ ನಾವು ಕಾಣುವ ಕ್ರೌರ್ಯ ಕೊರೋನಾ ರಕ್ಕಸನದ್ದು. ಅದು ಇಡೀ ಜಗತ್ತು ಎದುರಿಸಿದ ಸಂಕಟ. ಆದರೆ ಇಲ್ಲಿ ಅದು ಎರಗಿದ್ದು ಬಯಸಿ ಬಯಸಿ ಕನಸು ಕಂಡು ಬಸುರಿಯಾದ ಒಬ್ಬ ಬಡಹೆಣ್ಣಿನ ಮೇಲೆ. ಲಾಕ್‌ಡೌನ್ ಆಗಿ ಬದುಕು ದುಸ್ತರವಾದಾಗ ಕುಟುಂಬದವರೊಂದಿಗೆ ಊರಿಗೆ ಹೋಗುವ ಜನರ ಗುಂಪಿನಲ್ಲಿ ಸೇರಿ ಎಂಟು-ಹತ್ತು ದಿನಗಳ ಕಾಲ ನಿರಂತರವಾಗಿ ನೂರಾರು ಕಷ್ಟಗಳನ್ನು ಅನುಭವಿಸುತ್ತ ನಡೆಯುವ ಅವಳ ಗರ್ಭಸ್ರಾವವಾಗುತ್ತದೆ. ಒಬ್ಬ ಹೆಣ್ಣಿನ ಮೇಲಾಗುವ ಒಂದು ಮಾರಣಾಂತಿಕ ಆಘಾತವಿದು. ಮುಂದೆ ಒಂದು ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವಳು ಬದುಕಿಗೆ ಹೊಂದಿಕೊಳ್ಳುವ ಕತೆಯೂ ಮುಂದಿನ ಭಾಗದಲ್ಲಿದೆ. ನಿಜವಾದ ಮಹಾಪ್ರಸ್ಥಾನದ ಚಿತ್ರಣದೊಂದಿಗೆ ಬದುಕೇ ಒಂದು ಮಹಾಪ್ರಸ್ಥಾನವೆಂಬ ಸೂಚನೆಯೂ ಈ ಕಥೆಯಲ್ಲಿದೆ.
‘ಬುತ್ಯ ಬೆಂಗಳೂರಿಗೆ ಹೋದದ್ದು’ ಕತೆಯಲ್ಲಿ ಬಡಕುಟುಂಬದ ಅನಕ್ಷರಸ್ಥನಾದ ಬುತ್ಯ ಹೋಟೆಲ್ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿ ಅಲ್ಲಿ ದಾರಿ ತಪ್ಪಿ ಎಲ್ಲೆಲ್ಲೋ ಹೋಗಿ ಕೊನೆಗೆ ಹೇಗೋ ದಾರಿ ಹುಡುಕಿಕೊಂಡು ಊರಿಗೆ ಬರುತ್ತಾನೆ. ಅವನ ಹೆಂಡತಿ ಅವನ ಅನುಪಸ್ಥಿತಿಯಲ್ಲಿ ಬದುಕು ಕಟ್ಟಿಕೊಳ್ಳಲು ಕಷ್ಟಪಡುತ್ತಿರುವಾಗ ಗಂಡನ ಬರುವಿಕೆ ಅವಳನ್ನು ಸಮಾಧಾನಗೊಳಿಸುತ್ತದೆ. ಅವನು ಅಪ್ರಯೋಜಕನೆಂದು ತಿಳಿದಿದ್ದರೂ ತಾನು ಮಾಡುವ ಕೆಲಸಕ್ಕೆ ಅವನು ಜತೆಗಿದ್ದರೆ ಅದೇ ಸಾಕೆಂದು ಅವಳು ಅವನನ್ನು ಸ್ವೀಕರಿಸುತ್ತಾಳೆ.
‘ಕೆಮ್ಮಣ್ಣು’ ಕತೆಯಲ್ಲಿ ಕಥಾನಾಯಕ ಸಂಜೀವಣ್ಣನ ಪರಿಸರ ಕಾಳಜಿ ವ್ಯಕ್ತವಾಗುತ್ತದೆ. ತನ್ನ ಪರಿಶ್ರಮದಿಂದ ತೋಟ-ಗದ್ದೆಗಳು ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾನೆ ಸಂಜೀವಣ್ಣ. ಆದರೆ ವಿದ್ಯೆ ಕಲಿತು ಉದ್ಯೋಗ ಪಡೆದು ನಗರದಲ್ಲಿ ನೆಲೆಸುವ ಅವನ ಮಕ್ಕಳಿಗೆ ಭೂಮಿಯ ಮೇಲೆ ಪ್ರೀತಿಯಿಲ್ಲ. ಅದನ್ನು ಮಾರಿ ಬರುವ ಹಣದ ಮೇಲಷ್ಟೇ ಅವರ ಕಣ್ಣು. ಸಂಜೀವಣ್ಣನ ಆಸ್ತಿಯನ್ನು ಮೋಸದಿಂದ ಬರೆಸಿಕೊಂಡು ಅದನ್ನು ನಾಶಮಾಡಿ ಸೈಟುಗಳನ್ನಾಗಿ ವಿಭಜಿಸುವ ಹೃದಯವಿದ್ರಾವಕ ದೃಶ್ಯವನ್ನು ನೋಡಲಾಗದೆ ಅವನು ಆವೇಶದಿಂದ ತನ್ನ ಪ್ರೀತಿಯ ಚೆಂಡೆ ಬಾರಿಸುತ್ತ ಬಿದ್ದು ಸಾಯುವುದು ಚೋಮನ ದುಡಿಯ ಚೋಮನನ್ನು ನೆನಪಿಸುತ್ತದೆ.
ವಿಜಯಶ್ರೀ ಇವರ ನಿರೂಪಣಾ ಶೈಲಿ ತುಂಬಾ ಸೊಗಸಾಗಿದೆ. ಗ್ರಾಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಕೃಷಿ-ಬೇಸಾಯ, ಗಿಡ-ಮರ-ಬಳ್ಳಿಗಳ ಹಸುರು, ಪ್ರಕೃತಿಯ ಚೆಲುವು, ಸಾಕು ಪ್ರಾಣಿಗಳ ಮೇಲಿನ ಪ್ರೀತಿಗಳಿಂದ ಸಂಕಲನದ ಕಥೆಗಳು ಮೈದುಂಬಿ ನಿಂತಿವೆ. ಸಂಭಾಷಣೆಗೂ ಕೆಲವೊಮ್ಮೆ ನಿರೂಪಣೆಗೂ ಬಳಸಿರುವ ಕುಂದಾಪುರ ಆಡುಭಾಷೆಯ ವಿಶಿಷ್ಟ ಪದಗಳು-ಗಾದೆ ಮಾತುಗಳು ಮತ್ತು ಸಾಂಸ್ಕೃತಿಕ ವಿವರಗಳು ಕೃತಿಗೊಂದು ಅನನ್ಯತೆಯನ್ನು ನೀಡಿವೆ.

ವಿಮರ್ಶಕಿ : ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

ಲೇಖಕಿ : ವಿಜಯಶ್ರೀ ಹಾಲಾಡಿ
