ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸುರತ್ಕಲ್ ನ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 07 ಮಾರ್ಚ್ 2026ರಂದು ಹಮ್ಮಿಕೊಂಡಿದ್ದ ಎನ್.ಐ.ಟಿ.ಕೆ.ಯ ವಿದ್ಯಾರ್ಥಿಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಮತ್ತು ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅಶಯ ನುಡಿಗಳನ್ನಾಡಿದ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ “ಯುವ ಜನತೆ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳ ಕುರಿತು ವಿಶೇಷ ಆಸಕ್ತಿ ತೋರಿಸುತ್ತಿರುವುದು ಶ್ಲಾಘನೀಯ. ಎನ್.ಐ.ಟಿ.ಕೆ.ಯಲ್ಲಿ ನಡೆದ ಸ್ಪಿಕ್ ಮೆಕೆಯ ವಿರಾಸಾತ್ ಕಾರ್ಯಕ್ರಮವು ಆಸಕ್ತ ಸಹೃದಯರ ಒಳಗೊಳ್ಳುವಿಕೆಯೊಂದಿಗೆ ಯಶಸ್ವಿಯಾಗಿ ನಡೆದಿದೆ. ಶಾಸ್ತ್ರೀಯ ಸಂಗೀತ ಹಾಗೂ ನೃತ್ಯಗಳ ಕಮ್ಮಟಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಆಸಕ್ತಿಯಿಂದ ಕಲಿಕೆಯನ್ನು ಮುಂದುವರಿಸುತ್ತಿದ್ದಾರೆ. ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲಾವಿದರು ಕಾರ್ಯಕ್ರಮಗಳಲ್ಲಿ ಸಕಾರಾತ್ಮಕವಾಗಿ ತೊಡಗಿಸಿಕೊಂಡು ಕಲೆಯ ಬೆಳವಣಿಗೆಯಲ್ಲಿ ಪಾಲುದಾರರಾಗಬೇಕು. ಆಪ್ತ ರಂಗಭೂಮಿ ಕಲ್ಪನೆಯ ಏಕವ್ಯಕ್ತಿ ನೃತ್ಯ ಪ್ರದರ್ಶನದಲ್ಲಿ ಸೂಕ್ಷ್ಮ ಭಾವಾಭಿನಯಗಳಿಗೆ ಹೆಚ್ಚಿನ ಅವಕಾಶಗಳಿದ್ದು ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತವೆ” ಎಂದು ನುಡಿದರು.

ಎನ್.ಐ.ಟಿ.ಕೆ.ಯ ವಿದ್ಯಾರ್ಥಿ ಕಲಾವಿದರಾದ ಶ್ರೀವಾಸ ಎಸ್., ವಿಕ್ರಮ್. ಎಸ್., ಶ್ಯಾಮ ಪ್ರಮೋದ್ ಯು.ಎನ್. ಇವರುಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು. ವಿಜೇತ ಸುಬ್ರಹ್ಮಣ್ಯ ವಯಲಿನ್ ನಲ್ಲಿ ಹಾಗೂ ಸಂದೀಪ್ ರಾಮಮೂರ್ತಿ ಮೃದಂಗದಲ್ಲಿ ಸಹಕರಿಸಿದರು. ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ಮಹತಿ ಹೆಚ್. ಪಾವನಸ್ಕರ್ ಇವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್ ರಾವ್, ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಇವರು ಶುಭ ಹಾರೈಸಿದರು. ಸಂಗೀತ ಕಲಾವಿದೆ ವಿದುಷಿ ಪ್ರಾರ್ಥನಾ ರಾವ್ ಚೆನ್ನೈ ಮತ್ತು ವಿಭು ರಾವ್ ಉಪಸ್ಥಿತರಿದ್ದರು.
