ಉಡುಪಿ : ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ದಿನಾಂಕ 17 ಮೇ 2026ರಂದು ಹುಕ್ಲಮಕ್ಕಿ ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರ ಮಂಡಳಿಯ ಶತಮಾನೋತ್ಸವ ಕಾರ್ಯಕ್ರಮವು ಜರುಗಿತು.

ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಹೆಗಡೆಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಲ್ಪೆ ಶಂಕರನಾರಾಯಣ ಸಾಮಗರು 85 ವರ್ಷದ ಹಿಂದೆ ಬರೆದ ಡಾ. ಶ್ರೀಪಾದ ಹೆಗಡೆ ಹುಕ್ಳಮಕ್ಕಿ ಸಂಪಾದಿಸಿ ಪ್ರಕಟಿಸಿದ ಅರ್ಥಸಹಿತ ‘ಅಂಗದ ಸಂಧಾನ’ ಪುಸ್ತಕವನ್ನು ವೇದಿಕೆಯ ಗಣ್ಯರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಸಾಧಕರಾದ ಡಾ. ಎಂ. ಪ್ರಭಾಕರ ಜೋಶಿ, ಪ್ರೊ. ಎಂ.ಎಲ್. ಸಾಮಗ, ಶ್ರೀ ಶ್ರೀಧರ ಡಿ.ಎಸ್., ಡಾ. ಜಿ.ಎಲ್. ಹೆಗಡೆ ಇವರನ್ನು ಸಮ್ಮಾನಿಸಲಾಯಿತು. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಪ್ರಧಾನ ಅಭ್ಯಾಗತರಾಗಿ ಭಾಗವಹಿಸಿದ್ದರು. ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.

ಆಯೋಜಕರು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗಕ್ಕೆ ತಮ್ಮ ಶತಮಾನ ಆಚರಣೆಯ ನೆನಪಿನ ಗೌರವವನ್ನು ಪ್ರದಾನ ಮಾಡಿ ಅಭಿನಂದಿಸಿದರು. ಸಂಸ್ಥೆಯ ಪರವಾಗಿ ಹಿರಿಯ ಉಪಾಧ್ಯಕ್ಷ ಶ್ರೀ ಎಸ್.ವಿ. ಭಟ್ ಗೌರವ ಪುರಸ್ಕಾರ ಸ್ವೀಕರಿಸಿದರು. ಶತಮಾನದ ಸಂಭ್ರಮದಲ್ಲಿರುವ ಹುಕ್ಲಮಕ್ಕಿ ಮೇಳವನ್ನು ಪ್ರಸ್ತುತ ಮುನ್ನಡೆಸುತ್ತಿರುವ ಸಿ.ಎಸ್. ಗೋಪಾಲಕೃಷ್ಣ, ಡಾ. ಶ್ರೀಪಾದ ಹೆಗಡೆ ಸಹೋದರರನ್ನು ಯಕ್ಷಗಾನ ಕಲಾರಂಗದ ವತಿಯಿಂದ ಶಾಲು, ಸ್ಮರಣಿಕೆಯೊಂದಿಗೆ ಅಭಿನಂದಿಸಲಾಯಿತು. ನ್ಯಾಯವಾದಿ ಸತೀಶ ಭಟ್ ಉಳಗೆರೆ ಸನ್ಮಾನಪತ್ರ ವಾಚಿಸಿದರು. ಶ್ರೀ ದತ್ತಾತ್ರಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ಅನಂತರ ಹುಕ್ಲಮಕ್ಕಿ ಮೇಳದ ಕಲಾವಿದರಿಂದ ‘ಕರಂಡಕಾಸುರ ಕಾಳಗ’ ಯಕ್ಷಗಾನ ಪ್ರಸ್ತುತಗೊಂಡಿತು.
