ಸುಳ್ಯ : ಚಂದನ ಸಾಹಿತ್ಯ ವೇದಿಕೆಯ 21ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಚಂದನ ಕವಿಗೋಷ್ಠಿ, ಯೋಗ ಪ್ರದರ್ಶನ ಮತ್ತು ಸಾಹಿತ್ಯ ಕೃತಿ ಬಿಡುಗಡೆ ಸಮಾರಂಭವು ದಿನಾಂಕ 21 ಜೂನ್ 2026ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಿತು.
ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಗೌರವ ಅಧ್ಯಕ್ಷರಾದ, ನಟ, ನಿರ್ದೇಶಕ, ಸಾಹಿತಿ, ಜ್ಯೋತಿಷಿಯಾದ ಎಚ್. ಭೀಮರಾವ್ ವಾಷ್ಠರ್ ಇವರು ವಹಿಸಿದ್ದರು. ಚಂದನ ಕವಿಗೋಷ್ಠಿ 2026 ಇದರ ಅಧ್ಯಕ್ಷತೆಯನ್ನು ಪುತ್ತೂರಿನ ಸಾಹಿತಿ ಫ್ಲಾವಿಯಾ ಅಲ್ಬುಕರ್ಕ್ ಅವರು ವಹಿಸಿದ್ದರು. ಹಿರಿಯ ಸಾಹಿತಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರು ಉದ್ಘಾಟಿಸಿದರು. ಖ್ಯಾತ ಕಲಾವಿದ ಪಟ್ಟಾಭಿರಾಮ್ ಸುಳ್ಯ, ಸಾಹಿತಿ ಅನುರಾಧಾ ಶಿವಪ್ರಕಾಶ್, ಸುದ್ದಿ ಬಿಡುಗಡೆ ವಾರಪತ್ರಿಕೆಯ ಪ್ರಧಾನ ವ್ಯವಸ್ಥಾಪಕರಾದ ಯಶ್ವಿತ್ ಕಾಳಮ್ಮನೆ, ಅಮರ ಸುಳ್ಯ ಸುದ್ದಿ ವಾರಪತ್ರಿಕೆಯ ಮುರಳೀಧರ ಅಡ್ಡನಪಾರೆರವರು ಮುಖ್ಯ ಅತಿಥಿಗಳಾಗಿದ್ದರು. ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಸುಬ್ರಹ್ಮಣ್ಯದ ಖ್ಯಾತ ಯೋಗಪಟು ಗೌರಿತ ಕೆ.ಜಿ.ರವರು ಯೋಗ ಪ್ರದರ್ಶನ ನೀಡಿದರು. ಕಲಾವಿದ ಪಟ್ಟಾಭಿರಾಮ ಸುಳ್ಯ ಇವರು ವಿವಿಧ ಹಾಸ್ಯದ ತುಣುಕುಗಳನ್ನು ಮಿಮಿಕ್ರಿ ಮೂಲಕ ಮನರಂಜಿಸಿದರು. ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ 273ನೇ ಸಾಹಿತ್ಯ ಕೃತಿ ‘ಮನಸು ಮಾತಾಡಿತು’ ಈ ಕೃತಿಯನ್ನು ಅಧ್ಯಕ್ಷರು ಬಿಡುಗಡೆ ಮಾಡಿದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ ಫ್ಲಾವಿಯಾ ಅಲ್ಬುಕರ್ಕ್ ಇವರಿಗೆ, ಯೋಗ ಪ್ರದರ್ಶನ ನೀಡಿದ ಗೌರಿತ ಸುಬ್ರಹ್ಮಣ್ಯ ಇವರಿಗೆ, ಮಿಮಿಕ್ರಿ ಮಾಡಿ ನಗಿಸಿದ ಪಟ್ಟಾಭಿರಾಮ ಸುಳ್ಯ ಇವರಿಗೆ ಮತ್ತು ಸಾಹಿತಿ ಸ್ವಾಮೀಜಿ ಇವರಿಗೆ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗಾಯಕಿ ರಶ್ಮಿತಾ ಸುಳ್ಯ ಮತ್ತು ಗಾಯಕ ಸಾಯಿ ಪ್ರಶಾಂತ್ ಕೋಳಿವಾಡರವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ನಡೆದ ಚಂದನ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗಳಾದ ಎಂ.ಎ. ಮುಸ್ತಫ ಬೆಳ್ಳಾರೆ, ಸುಮಂಗಲ ಲಕ್ಷ್ಮಣ್ ಕೋಳಿವಾಡ, ಹರೀಶ್ ಕಜೆ, ಪೂರ್ಣಿಮಾ ಸಾಲೆತ್ತೂರು, ಆಕಾಶ್ ಉಳ್ಳಾಲ ಮಂಗಳೂರು, ಅನಾರ್ಕಲಿ ಸಲೀಂ ಮಂಗಳೂರು, ಪೂರ್ಣಿಮಾ ತೋಟಪ್ಪಾಡಿ, ಪೆರುಮಾಳ್ ಐವರ್ನಾಡು, ಪುಷ್ಪ ಡಿ. ಎಡಮಂಗಲ, ವಿಜಯಕುಮಾರ್ ಕಾಣಿಚ್ಚಾರ್, ಅನುರಾಧಾ ಶಿವಪ್ರಕಾಶ್, ಪ್ರಣವಿ ಎಂ. ಅಜ್ಜಾವರ ಮತ್ತು ಸುರೇಶ್ ಬಿಳಿಯೂರು ಕವನ ವಾಚನ ಮಾಡಿದರು. ಭಾಗವಹಿಸಿದ ಎಲ್ಲಾ ಕವಿಗಳಿಗೂ ಅಭಿನಂದನ ಪತ್ರ ನೀಡಿ ಗೌರವಿಸಲಾಯಿತು. ಪುಷ್ಪ ನೆರಮಂಗಲ ಇವರು ಪ್ರಾರ್ಥನೆ ಗೀತೆ ಹಾಡಿದರು. ಸುಮಂಗಲ ಕೋಳಿವಾಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ತೋಟಪ್ಪಾಡಿಯವರು ಸರ್ವರನ್ನು ಸ್ವಾಗತಿಸಿ, ಅನಾರ್ಕಲಿ ಸಲೀಂ ವಂದಿಸಿ, ಸಾಹಿತಿ ವಿಜಯಕುಮಾರ್ ಕಾಣಿಚಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

