ಕಾಸರಗೋಡು : ಸಕ್ಕಟ್ಟು ಲಕ್ಷೀನಾರಾಯಣಯ್ಯ ಜನ್ಮ ಶತಮಾನೋತ್ಸವದ ಪ್ರಯುಕ್ತ ದಿನಾಂಕ 20 ಮೇ 2026ರಂದು ಕಾಸರಗೋಡಿನ ಕೊಲ್ಲಂಗಾನ ದೇವಸ್ಥಾನದಲ್ಲಿ ಕೊಲ್ಲಂಗಾನ ಮೇಳದ ತಿರುಗಾಟದ ಕೊನೆಯ ಸೇವೆಯಾಟದಂದು ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಸಂಸ್ಮರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಕ್ಕಟ್ಟುರವರ ಸುಪುತ್ರ ಶ್ರೀ ಮಂಜುನಾಥಯ್ಯ ಸಕ್ಕಟ್ಟುರವರು ಮಾತನಾಡಿ “ಯಕ್ಷಗಾನವನ್ನು ಚೆನ್ನಾಗಿ ಅರಿತುಕೊಂಡವರಾದರೆ ತೆಂಕು-ಬಡಗು ಎಂಬ ಭೇಧವನ್ನು ತೋರುವುದಿಲ್ಲ. ಸೌಹಾರ್ದತೆಯಿಂದ ಸಮಭಾವದಿಂದ ಜೊತೆಯಾಗಿ ಸಾಗಬಹುದಾಗಿದೆ. ಅಂತಹಾ ಒಂದು ದೊಡ್ಡ ಕಾರ್ಯವನ್ನು ಖ್ಯಾತ ಬಣ್ಣದ ವೇಷಧಾರಿ ದಿ. ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಮಾಡಿತೋರಿಸಿದ್ದಾರೆ. ಮಾಸದ ಬಣ್ಣದ ದೈತ್ಯ ಪ್ರತಿಭೆಯಾಗಿದ್ದು ಇಪ್ಪತ್ತಾರು ಬಾರಿ ವಿದೇಶ ಸಂಚಾರವನ್ನು ಮಾಡಿ ‘ಯಕ್ಷ ಬಣ್ಣ’ವನ್ನು ಜಗತ್ತಿಗೇ ಪ್ರಸರಿಸಿದ ಮಹಾನ್ ಕಲಾವಿದರಾಗಿದ್ದರು. ಈ ಬಾರಿ ಅವರ ಜನ್ಮಶತಾಬ್ದಿಯ ಪ್ರಯುಕ್ತ ಶತ ಕಾರ್ಯಕ್ರಮಗಳ ಯೋಜನೆ ಸಿದ್ಧನಾಗಿದ್ದು ಸುಮಾರು ಅರ್ಧಶತಕದ ಸನ್ಮಾನ, ಆಟ – ಕೂಟಗಳು ಜರಗಿವೆ” ಎ೦ದು ಹೇಳಿದರು.
ದಿ. ಅನಂತ ಪದ್ಮನಾಭ ಉಪಾಧ್ಯಾಯರು; ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯರ ಸಂಸ್ಮರಣೆ ಹಾಗೂ ಭಾಗವತ ಮನೋಹರ ಬಲ್ಲಾಳ್, ಅಡ್ವಳ ; ಹಿಮ್ಮೇಳ ಕಲಾವಿದ ಕೊಲ್ಲಂಗಾನ ರವಿಶಂಕರ ಶೆಟ್ಟಿ ಹಾಗೂ ಬಣ್ಣದ ಕಲಾವಿದ ಕೆಡೆಂಜಿ ಸುಬ್ರಹ್ಮಣ್ಯ ಭಟರವರ ಅಭಿನಂದನಾ ಕಾರ್ಯಕ್ರಮವನ್ನು ಮೇಳದ ಪ್ರಧಾನ ಕಲಾವಿದ ವರ್ಕಾಡಿ ರವಿ ಅಲೆವೂರಾಯ ನಡೆಸಿಕೊಟ್ಟರು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯರು ಆಶೀರ್ವಚನವಿತ್ತರು. ಕಲಾವಿದ, ಯಕ್ಷಗುರು ಪಡುಮಲೆ ಜಯರಾಮ ಪಾಟಾಳಿಯವರು ಸಾಂದರ್ಭಿಕವಾಗಿ ಕಲಾವಿದರಿಗೆ, ಮೇಳಕ್ಕೆ ಶುಭವನ್ನು ಕೋರಿದರು. ಶ್ರೀಮತಿ ದೀಕ್ಷಾ ಸತೀಶ್ ಸ್ವಾಗತಿಸಿ, ಸುಂದರ ಶೆಟ್ಟಿ ಕೊಲ್ಲಂಗಾನರವರು ನಿರ್ವಹಿಸಿದರು. ಕಲಾವಿದ ಸುಮನ್ ರಾಜ್ ನೀಲೆಂಗಳರವರು ಧನ್ಯವಾದವಿತ್ತರು. ಬಳಿಕ ಮೇಳದ ವತಿಯಿಂದ ‘ಜಾಂಬವತಿ ಕಲ್ಯಾಣ -ರತಿ ಕಲ್ಯಾಣ’ ಗಳೆಂಬ ಕಲ್ಯಾಣದ್ವಯ ಪ್ರಸಂಗಗಳು ಪ್ರದರ್ಶನಗೊಂಡವು.
