ಮಂಗಳೂರು : ಬಿ.ಎಂ. ರೋಹಿಣಿ ಅಭಿನಂದನಾ ಸಮಿತಿ, ಮಂಗಳ ಗಂಗೋತ್ರಿ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಿವೃತ್ತ ಶಿಕ್ಷಕಿ ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಇವರಿಗೆ ಅಭಿನಂದನೆ ಮತ್ತು ‘ಆರೋಹಿಣಿ’ ಗ್ರಂಥ ಗೌರವ ಸಮಾರಂಭವು ದಿನಾಂಕ 21 ಫೆಬ್ರವರಿ 2026ರಂದು ಹಂಪನಕಟ್ಟೆಯ ಮಂಗಳೂರು ವಿ.ವಿ. ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಿತು.
ಈ ವೇಳೆ ಬಿ.ಎಂ. ರೋಹಿಣಿಯವರನ್ನು ಅಭಿನಂದಿಸಿ, ‘ಆರೋಹಿಣಿ ಗ್ರಂಥ’ ಸಮರ್ಪಣೆ ಮಾಡಲಾಯಿತು. ಗ್ರಂಥಾವಲೋಕನ ಮಾಡಿದ ಹಿರಿಯ ಲೇಖಕಿ, ಸಂಘಟಕಿ ಡಾ. ಎಚ್.ಎಸ್. ಅನುಪಮಾ, “ಇರುವೆ ಗೋಡೆಯ ಮೇಲೆ ಒಬ್ಬಂಟಿಯಾಗಿದ್ದರೂ ಮುಂದೆ ತನ್ನವರ ಜತೆ ಸೇರುವೆನೆಂದು ನಿರ್ಭೀತಿಯಿಂದ ನಿರಂತರ ಚಲನೆಯನ್ನು ಮುಂದುವರಿಸುತ್ತದೆ. ಅಂತಹ ಇರುವೆಯ ರೀತಿಯ ಬದುಕು-ಸಾಧನೆ ಬಿ.ಎಂ. ರೋಹಿಣಿ ಅವರದ್ದು. ಕೌಟುಂಬಿಕ ಮಹಿಳೆ ಸಾಮಾಜಿಕ ಮಹಿಳೆಯಾಗಿ ಮಹಾ ಜಿಗಿತವನ್ನು ಕಂಡುಕೊಂಡ ಬದುಕು ರೋಹಿಣಿಯವರದ್ದು. ಬಾಲ್ಯದಿಂದಲೇ ಹೆತ್ತವರ ಪಾಲಿನ ‘ಒಳ್ಳೆಯ ಹುಡುಗಿ’ ಗುಡ್ ಗರ್ಲ್ ಎಂಬ ಹಣೆಪಟ್ಟಿಯಿಂದಾಚೆಗೆ ಸರಿದು, ನಿರ್ಭೀತಿ, ನಿರಂತರ ಚಲನೆಯ ಬದುಕನ್ನು ರೂಪಿಸಿಕೊಂಡು ಸಮಾಜದ ಜತೆ ಗುರುತಿಸಿಕೊಂಡವರು ರೋಹಿಣಿ. ಬದುಕಿನ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿಯೂ ಎದೆಗುಂದದೆ, ಬೌದ್ಧಿಕ ಸಮಗ್ರತೆಯನ್ನು ಕಳೆದುಕೊಳ್ಳದೆ ಮುನ್ನಡೆದಿರುವ ಅವರ ಬದುಕನ್ನು ಆರೋಹಿಣಿ ಗ್ರಂಥ ತೆರೆದಿಟ್ಟಿದೆ” ಎಂದು ಅನುಪಮಾ ಗ್ರಂಥದ ಬಗ್ಗೆ ವಿವರ ನೀಡಿದರು.



ಗ್ರಂಥ ಅನಾವರಣಗೊಳಿಸಿದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗಪ್ಪ ಗೌಡ ಆರ್. “ಸಾಧನೆಯ ಮೆಟ್ಟಿಲು ಏರುತ್ತ ಔನ್ನತ್ಯದ ಸ್ಥಾನ ಪಡೆದುಕೊಳ್ಳುವ ರೋಹಿಣಿಯವರ ಅಭಿನಂದನಾ ಗ್ರಂಥದ ಹೆಸರು ಅನ್ವರ್ಥಕವಾಗಿದೆ. ಪ್ರಶ್ನಿಸುವ, ಚಿಂತಿಸುವ ಅವರ ಗುಣ ಈ ಗ್ರಂಥದಲ್ಲಿ ಢಾಳಾಗಿ ಕಾಣುತ್ತದೆ. ಇಂದು ಪ್ರಶ್ನಿಸುವುದನ್ನೇ ನಿಲ್ಲಿಸುವ ಸಂಕೀರ್ಣ ಸಾಮಾಜಿಕ ಸಂದರ್ಭದಲ್ಲಿ ನಾವಿದ್ದೇವೆ. ಮನುಷ್ಯ ಪ್ರಶ್ನಿಸದೆ, ಚಿಂತನೆ ಮಾಡದೆ ಬೆಳೆಯಲು ಸಾಧ್ಯವಿಲ್ಲ ಎಂದು ರೋಹಿಣಿ ಪ್ರತಿಪಾದಿಸುತ್ತಾರೆ” ಎಂದು ಶುಭ ಹಾರೈಸಿದರು.


ಕೆಥೋಲಿಕ್ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ತಲಿನೋ ಅಭಿನಂದನಾ ನುಡಿಗಳನ್ನಾಡಿದರು. ಅತಿಥಿಗಳಾಗಿ ಪ್ರಜ್ಞಾ ರೋಹನ್ ಕುಮಾರ್ ನೆಲ್ಲಿಂಗೇರಿ, ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಪ್ರಣೀತಾ ಮೊಂತೆರೋ ಭಾಗವಹಿಸಿದ್ದರು. ಮಂಗಳೂರು ವಿ.ವಿ. ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಗೌಡ ಶುಭಹಾರೈಸಿದರು. ಬಿ.ಎಂ. ರೋಹಿಣಿ ಅಭಿಂದನಾ ಸಮಿತಿ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಸುವರ್ಣ, ರೆನ್ನಿ ಡಿಸೋಜ, ಸಿಂತಿಯಾ, ಗೋಕುಲ್‌ದಾಸ್, ಮಂಜುಳಾ ಸುನಿಲ್, ನರೇಶ್, ವಾಣಿ ಪೆರಿಯೋಡಿ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಡಾ. ಜ್ಯೋತಿ ಚೇಳ್ಯಾರು ಕೃತಿ ತಯಾರಿ ಕುರಿತು ಮಾತನಾಡಿದರು. ಮರ್ಲಿನ್ ಮಾರ್ಟಿಸ್ ಸ್ವಾಗತಿಸಿ, ಸುಮಲತಾ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

