ಬೆಂಗಳೂರು : ಸೂರ್ಯ ಕಲಾವಿದರು ಬೆಂಗಳೂರು ಆಯೋಜಿಸಿದ ‘ರಂಗಸಂಭ್ರಮ 2026’ ರಂಗಭೂಮಿಯ ಪ್ರಸಿದ್ಧ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 06 ಮಾರ್ಚ್ 2026ರಂದು ಜರುಗಿತು. ಉದಯ ಸಾರಂಗ ರಚಿಸಿ ನಿರ್ದೇಶಿಸಿದ ಸ್ವರ್ಗ ಭೂಮಿಕಾ ಸಂಡೇ ಥಿಯೇಟರ್ ಪ್ರದರ್ಶಿಸಿದ ‘ದಲಿಯನ ಡೋಲು’ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.
ಗ್ರಾಮೀಣ ರಂಗಭೂಮಿಯನ್ನು ಪೋಷಿಸುತ್ತಿರುವ ಈ ತಂಡದಲ್ಲಿ ವಿವಿಧ ವಲಯದ ಪ್ರತಿಭಾನ್ವಿತರು ಒಟ್ಟು ಸೇರಿರುವುದು ಸಂಡೇ ಥಿಯೇಟರ್ ನ ವಿಶೇಷತೆ. ಜಾನಪದ ಸೊಗಡಿನ ಸಂಸ್ಕಾರದ ಸೆಳೆ ಜಾಗತೀಕರಣದ ಮಾಯಾಲೋಕದಲ್ಲಿ ಹೋರಾಡುವ ಕಥಾಹಂದರವನ್ನು ಹೊಂದಿದ ಈ ನಾಟಕ ನೋಡುಗರಿಗೆ ಆಪ್ತವಾಗುತ್ತದೆ. ಪ್ರತೀ ದೃಶ್ಯಗಳು ಕೌತುಕವನ್ನು ಸೃಷ್ಠಿಸುವುದೇ ಇದರ ಪ್ರಧಾನ ಭೂಮಿಕೆ. ಸೂರ್ಯ ಕಲಾವಿದರು ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಚಲನಚಿತ್ರ ನಟ ವಿಕ್ರಂ ಸೂರಿ ಹಾಗೂ ರಂಗನಿರ್ದೇಶಕ ಮಹತೇಶ್ ಬಡಿಗೇರ ತಂಡದ ಅಭಿನಯವನ್ನು ನೋಡಿ ಅಭಿನಂದಿಸಿದ್ದಾರೆ. ದಲಿಯ ಕಥಾ ಪಾತ್ರದಲ್ಲಿ ಪ್ರಸ್ತುತ ಪಂಚಾಯತ್ ಸದಸ್ಯರಾಗಿರುವ ರಾಮಚಂದ್ರ ಮೊಳಕ್ಕಾಲ್, ಮಾಯಾವಿಯಾಗಿ ಯುವ ಉದ್ಯಮಿ ರಾಜೇಶ್ ಸ್ವರ್ಗ, ಊರಿನ ಜಮೀನ್ದಾರಿಯಾಗಿ ಉಪನ್ಯಾಸಕಿಯಾಗಿರುವ ಕವಯತ್ರಿ ನವ್ಯಾಶ್ರೀ ಸ್ವರ್ಗ, ಮಂಜನಾಗಿ ಬ್ಯಾಡ್ಮಿಂಟನ್ ಕೋಚ್ ಆಗಿರುವ ಕೃಷ್ಣ ಮೋಹನ ಪೊಸೊಳ್ಯ, ಊರಿನ ಜನಗಳಾಗಿ ಗುಣಾಜೆ ಅಂಗನವಾಡಿ ಅಧ್ಯಾಪಿಕೆ ಸುಮತಿ, ಕುಮಾರಿ ವೈಷವಿ ಪೊಸೊಳ್ಯ, ಕುಟುಂಬಶ್ರೀ ಸದಸ್ಯೆಯಾಗಿರುವ ಪೂರ್ಣಿಮ ಹಾಗೂ ಶಿಕ್ಷಕ ಅಶೋಕ ಕೊಡ್ಲಮೊಗರು ಪಾತ್ರಗಳಿಗೆ ಜೀವ ನೀಡಿದರು. ಸಂಗೀತ ಮಾಸ್ಟರ್ ಕಾರ್ತಿಕ್ ಪೆರಿಕ್ಕಾನ, ಮಾಸ್ಟರ್ ವೈಷವ್, ಮಾಸ್ಟರ್ ಮೋಕ್ಷಿತ್ ಮಾಡಿರುತ್ತಾರೆ. ರಂಗಪರಿಕರ ಪ್ರಸಾಧನ ಕಿರಣ್ ಕಲಾಂಜಲಿ ಹಾಗೂ ಶಂಕರ ಸ್ವಾಮಿಕೃಪಾ ನಾಟಕದ ಯಶಸ್ವಿಯ ಹಿಂದೆ ದುಡಿದಿದ್ದಾರೆ. ಇಡೀ ನಾಟಕದ ಸಂಯೋಜಕರಾಗಿ ತಂಡದ ನೇತೃತ್ವವನ್ನು ಕವಿ ಶ್ರೀನಿವಾಸ ಪೆರಿಕ್ಕಾನನವರು ನಿರ್ವಹಿಸಿದ್ದಾರೆ. ಗಡಿನಾಡು ಕಾಸರಗೋಡಿನ ರಂಗಭೂಮಿ ಚರಿತ್ರೆಯಲ್ಲಿ ಕನ್ನಡ ಭಾಷೆಯ ಪ್ರಥಮ ಸಂಡೇ ಥಿಯೇಟರ್ ಹೊಸ ರಂಗಭಾಷ್ಯವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಿರ್ಮಾಣ ಮಾಡಿ ಇತಿಹಾಸ ಸೃಷ್ಟಿಸಿತು. ಈ ಪ್ರದೇಶದಲ್ಲಿ ಹಿಂದಕ್ಕೆ ಸರಿದುಹೋದ ನಾಟಕರಂಗವನ್ನೂ ಸಾಂಪ್ರದಾಯಿಕ ಜನಪದ ಪ್ರಕಾರಗಳನ್ನೂ ಪುನಃ ಚೇತರಿಸುವಂತೆ ಮಾಡುವುದು ನಮ್ಮ ಉದ್ದೇಶ. ನಮ್ಮ ಬಲಿಷ್ಟ ನಡುಕಂಬ ರಂಗ ನಿರ್ದೇಶಕ ಉದಯ ಸಾರಂಗ್ ಎಂದು ಸಂಚಾಲಕ ಶ್ರೀನಿವಾಸ ಪೆರಿಕ್ಕಾನ ತಿಳಿಸಿದರು.

