ಪೆರಿಯ : ಬೇಕಲ್ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ವೈಶಾಖ ನೃತ್ಯ ರಾಷ್ಟ್ರೀಯ ನೃತ್ಯೋತ್ಸವದ ಒಂಬತ್ತನೇ ದಿನದ ಅಂಗವಾಗಿ, ದಿನಾಂಕ 09 ಮೇ 2026ರಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆಯೂ, ಅಕಾಡೆಮಿ ಸದಸ್ಯೆಯೂ ಆಗಿರುವ ವೈಜಯಂತಿ ಕಾಶಿ ಇವರು, ತಮ್ಮ ಪುತ್ರಿ ಪ್ರತೀಕ್ಷಾ ಕಾಶಿ ಇವರೊಂದಿಗೆ, ಧೇನುಮಂಟಪದಲ್ಲಿ ನೃತ್ಯಾರ್ಚನೆ ನಡೆಸಲಿದ್ದಾರೆ.

ಕರ್ನಾಟಕ ಚಲನಚಿತ್ರ ಹಾಗೂ ರಂಗಭೂಮಿ ಕ್ಷೇತ್ರದ ಖ್ಯಾತ ಕಲಾವಿದ ಗುಬ್ಬಿ ವೀರಣ್ಣ ಇವರ ಮೊಮ್ಮಗಳಾದ ವೈಜಯಂತಿ ಕಾಶಿ, ಭಾರತೀಯ ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಅಪ್ರತಿಮ ಸ್ಥಾನವನ್ನು ಹೊಂದಿರುವ ಪ್ರಮುಖ ನೃತ್ಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ, ಪ್ರಸಿದ್ಧ ನೃತ್ಯ ಕಲಾವಿದೆ ದಿವ್ಯ ಪ್ರಭಾತ್, ಆರು ವರ್ಷದ ಆದ್ಯ, ಮೈಸೂರಿನ ಡಾ. ಕೆ. ಕುಮಾರ್, ಶಾರ್ವರಿ ಮಯ್ಯ ಸೇರಿದಂತೆ, ಸುಮಾರು ಎರಡು ನೂರು ಕಲಾವಿದರು, ಗೋಶಾಲೆಯ ಧೇನುಮಂಟಪ ಮತ್ತು ನಂದಿಮಂಟಪಗಳಲ್ಲಿ ವಿವಿಧ ನೃತ್ಯ ಪ್ರದರ್ಶನಗಳನ್ನು ನೀಡಲಿದ್ದಾರೆ.
