Subscribe to Updates

    Get the latest creative news from FooBar about art, design and business.

    What's Hot

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನೃತ್ಯ ವಿಮರ್ಶೆ | ನಯನ ಮನೋಹರ ನೃತ್ಯಾಭಿನಯದ ‘ವಿಶ್ವನೇತ’ ನೃತ್ಯವಲ್ಲರಿ
    Article

    ನೃತ್ಯ ವಿಮರ್ಶೆ | ನಯನ ಮನೋಹರ ನೃತ್ಯಾಭಿನಯದ ‘ವಿಶ್ವನೇತ’ ನೃತ್ಯವಲ್ಲರಿ

    March 4, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ಮಾತಿಗೆ ಅನುಗುಣವಾಗಿ ತನ್ನ ಪ್ರತಿಭಾ ಪ್ರದರ್ಶನವನ್ನು ಅತ್ಯುತ್ತಮವಾಗಿ ಅರ್ಪಿಸಿದ ಕೇವಲ 13ರ ಬಾಲಪ್ರತಿಭೆ ಕುಮಾರಿ ವಿಶ್ವನೇತ ನಿನ್ನೆ ಬೆಂಗಳೂರಿನ ಯಲಹಂಕದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತನ್ನ ‘ರಂಗಪ್ರವೇಶ’ವನ್ನು ಯಶಸ್ವಿಯಾಗಿ ನೆರವೇರಿಸಿಕೊಂಡಳು.

    ‘ರಂಗಪ್ರವೇಶ’- ನೃತ್ಯ ಕಲಾವಿದರ ಜೀವನದಲ್ಲೊಂದು ಪ್ರಮುಖ, ಚಿರಸ್ಮರಣೀಯ ಘಟ್ಟ. ಭರತನಾಟ್ಯ ಪ್ರಸ್ತುತಿಯಲ್ಲಿ ಸಾಮಾನ್ಯವಾಗಿ ‘ಮಾರ್ಗಂ’ ಸಂಪ್ರದಾಯದ ಕೃತಿಗಳನ್ನು ಸಾಕಾರಗೊಳಿಸುವುದು ಪದ್ಧತಿ. ಇದನ್ನು ಚಾಚೂ ತಪ್ಪದೆ, ಅಚ್ಚುಕಟ್ಟಾಗಿ ನಿರ್ವಹಿಸಿ ಕಲಾರಸಿಕರಿಂದ ‘ಸೈ’ ಎನಿಸಿಕೊಳ್ಳುವುದು ಒಂದು ಪರೀಕ್ಷೆಯೇ ಇದ್ದಂತೆ. ಈ ‘ಅಗ್ನಿದಿವ್ಯ’ವನ್ನು ಹಾಯ್ದ ಕಲಾವಿದೆ ವಿಶ್ವನೇತಾ ಪುಟ್ಟ ವಯಸ್ಸಿನಲ್ಲಿ ಕಲಾ ನೈಪುಣ್ಯ ತೋರಿದ ಯಶಸ್ಸು ಅವಳದಾಗಿತ್ತು.

    ಖ್ಯಾತ ಕಲಾನಿಧಿ ಆರ್ಟ್ಸ್ ಅಕಾಡೆಮಿಯ ಹಿರಿಯ ಗುರು, ಉತ್ತಮ ನೃತ್ಯಪಟು- ಗಾಯಕಿ ಮತ್ತು ನಟುವನ್ನಾರ್ ಆಗಿ ಹಸರು ಮಾಡಿರುವ ಶ್ರೀಮತಿ ಪವಿತ್ರಾ ಶ್ರೀಧರ್ ಇವರ ನುರಿತ ಗರಡಿಯಲ್ಲಿ ರೂಪುಗೊಂಡ ನೃತ್ಯಶಿಲ್ಪ ಮತ್ತು ಶಿಷ್ಯೆ ‘ವಿಶ್ವನೇತ’ ಪ್ರತಿಭಾನ್ವಿತೆ. ಇವಳು ತನ್ನ ರಂಗಪ್ರವೇಶದಂದು ಬಹು ಲವಲವಿಕೆಯಿಂದ, ಆತ್ಮವಿಶ್ವಾಸದಿಂದ ‘ಮಾರ್ಗಂ’ ಸಂಪ್ರದಾಯದಲ್ಲಿ, ಗುರು ಪವಿತ್ರಾ ವಿಶಿಷ್ಟವಾಗಿ ನೃತ್ಯ ಸಂಯೋಜಿಸಿದ ಸುಮನೋಹರ ಕೃತಿಗಳನ್ನು ಮೆರಗು ತುಂಬಿದ ಆಯಾಮದಿಂದ ಅರ್ಪಿಸಿದಳು.

    ಆನಂದ ನರ್ತನ ಗಣಪತಿಯ ಸ್ತುತಿಯಿಂದ ತನ್ನ ಸುಂದರ ನೃತ್ಯ ಪ್ರಸ್ತುತಿಯನ್ನು ಶುಭಾರಂಭಿಸಿದ ಕಲಾವಿದೆ, ನಂತರ ರಾಗಮಾಲಿಕೆಯ ‘ಶಬ್ದಂ’ನಲ್ಲಿ ಬಾಲ ಮುರುಗನ ಮನಮೋಹಕ ಬಾಲ್ಯದ ಘಟನೆಗಳನ್ನು ತನ್ನ ರಮ್ಯ ಅಭಿನಯದಿಂದ, ಲಯಾತ್ಮಕ ಹೆಜ್ಜೆ-ಗೆಜ್ಜೆಗಳ ಮೋಡಿಯಿಂದ ಕುಮಾರನ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದಳು. ಮುಂದೆ ರೇವತಿ ರಾಗದಲ್ಲಿ ‘ಮಹಾದೇವ ಶಿವ ಶಂಭೋ- ‘ಶಿವ ಪದಂ’ ಅನ್ನು ತನ್ನ ಪರಿಣಾಮಕಾರಿಯಾದ ಅಭಿನಯದಿಂದ ಬೇಡರ ಕಣ್ಣಪ್ಪನ ಇಡೀ ಕಥಾನಕದ ಸಂಚಾರಿಯನ್ನು ಬಹು ಸೊಗಸಾಗಿ, ಸೂಕ್ಷ್ಮವಾಗಿ ಕಟ್ಟಿಕೊಟ್ಟಳು. ಸ್ತುತಿಯ ಪದ ಪದಗಳ ಅರ್ಥಕ್ಕೆ ಸ್ಫುಟವಾಗಿ, ಅಮೋಘವಾಗಿ ಅಭಿನಯಿಸಿದ್ದು ವಿಶೇಷ. ನಡುನಡುವೆ ಪವಿತ್ರಾರ ಶಕ್ತಿಶಾಲಿ ನಟುವಾಂಗ ಜಲಪಾತದಂತೆ ಭೋರ್ಗರೆಯಿತು. ಜೊತೆಗೆ ಅವರ ಗಾಯನವೂ ಕರ್ಣಾನಂದಕರವಾಗಿತ್ತು.

    ಅನಂತರ ಪ್ರಸ್ತುತಿಯ ಪ್ರಮುಖ ಘಟ್ಟ –‘ವರ್ಣ’- ‘ಕೋಲಾ ಮಾಯಿಲ್ ವಾಹನನೇ’- ಶ್ರೀ ಮಧುರೈ ಎನ್. ಕೃಷ್ಣನ್ ರಚನೆಯ ಭಕ್ತಿಪ್ರಧಾನ ‘ವರ್ಣ’ವನ್ನು ಕಲಾವಿದೆ ತನ್ನ ಅಪೂರ್ವ ನೃತ್ತ-ನೃತ್ಯ-ಸುಮನೋಹರ ಅಭಿನಯದಿಂದ ಕಣ್ಮನ ತಣಿಸಿದಳು. ಅತ್ಯುಚ್ಛ ಶಕ್ತಿಯ ಜಗನ್ನಿಯಾಮಕ ಸರ್ವ ವರದಾತ ಶಿವನ ಪುತ್ರ ಸುಬ್ರಹ್ಮಣ್ಯನ ಕ್ರಿಯಾಶಕ್ತಿಯ ದ್ಯೋತಕವಾದ ದೇವಲೋಕದ ಇಂದ್ರನ ಪುತ್ರಿ ‘ದೇವಯಾನಿ’ಯೊಂದಿಗಿನ ವಿವಾಹ ಮತ್ತು ಅವನ ಇಚ್ಚಾಶಕ್ತಿಯ ದ್ಯೋತಕವಾದ ಶುದ್ಧ ಪ್ರೀತಿಯನ್ನು ಮೆರೆದ ‘ವಳ್ಳಿ’ಯೊಂದಿಗಿನ ಸಂಗಮದ ಸಂಚಾರಿ ಕಥಾನಕವನ್ನು ಕಲಾವಿದೆ ನಾಟಕೀಯ ಆಯಾಮದಲ್ಲಿ, ದೃಶ್ಯಾತ್ಮಕವಾಗಿ ತನ್ಮಯತೆಯಿಂದ ಅರ್ಪಿಸಿದಳು.

    ವಿವಿಧ ವಿನ್ಯಾಸದ ನೃತ್ತ ಮಿಂಚಿನಿಂದ ಕೂಡಿದ, ಆಂಗಿಕಾಭಿನಯದ ವೈಶಿಷ್ಟ್ಯ ಅವಳ ಅಗಾಧ ನೆನಪಿನ ಶಕ್ತಿ, ತಾಳ-ಲಯ ಜ್ಞಾನಗಳನ್ನು ಸುವ್ಯಕ್ತಗೊಳಿಸಿದವು. ಕಲಾವಿದೆ ಅನಾಯಾಸವಾಗಿ, ಚೈತನ್ಯ ತುಂಬಿದ ಲಯಾತ್ಮಕ ನಡೆಯಲ್ಲಿ, ಸುಮಾರು ಮೂರು ಗಂಟೆಗಳ ಕಾಲ ಪಾದರಸದ ಚುರುಕಿನಿಂದ ನವಿಲಂತೆ ಕುಣಿಯುತ್ತ, ಚೆಂದದ ಆಂಗಿಕಾಭಿನಯದಿಂದ ನರ್ತಿಸುತ್ತ, ಷಣ್ಮುಖನ ದೈವೀಕ ಕಥೆಯನ್ನು, ಸುಂದರ ಸಂಚಾರಿಗಳೊಡನೆ ತನ್ಮಯತೆಯಿಂದ ಅಭಿನಯಿಸಿ ನೋಡುಗರನ್ನು ಚಕಿತಗೊಳಿಸಿದಳು. ಅವಳ ಮುಖಾಭಿವ್ಯಕ್ತಿ ವಯಸ್ಸಿಗೆ ಮೀರಿದ್ದು, ನವೋತ್ಸಾಹದ ಅಡವುಗಳಿಂದ ನುರಿತ ನರ್ತಕಿಯಂತೆ ಅವಳು ಕಲಾತ್ಮಕ ಯೋಗದ ಭಂಗಿಗಳಿಂದ ಮನಸೂರೆಗೊಂಡಳು. ನಂತರ ಮೂಡಿಬಂದ ಕಾಳಿಯ ದೈವೀಕತೆಯನ್ನು ಸಾಕ್ಷಾತ್ಕರಿಸಿದ ಕೃತಿಯಲ್ಲಿ ದೇವಿಯ ಮಹಿಮೆಯನ್ನು ನವರಸಗಳ ಝೇಂಕಾರದಿಂದ ಅಲಂಕರಿಸಿದಳು. ಆಕೆಯ ದುಷ್ಟ ಸಂಹಾರದ ರೌದ್ರ ಅಭಿನಯ, ಶಿಷ್ಟ ಪಾಲನೆಯ ಪ್ರಸನ್ನ ವರದ ಮುದ್ರೆಯ ಭಾವಗಳು ಪ್ರಪ್ಹುಲ್ಲತೆಯಿಂದ ಮುದ ನೀಡಿದವು.

    ಅಂತ್ಯದಲ್ಲಿ ಶ್ರೀ ಬಾಲಮುರಳೀ ಕೃಷ್ಣರ ಕದನ ಕುತೂಹಲ ರಾಗದ ‘ತಿಲ್ಲಾನ’ ಕೃತಿಯನ್ನು ಚೈತನ್ಯದಾಯಕವಾಗಿ ಪ್ರದರ್ಶಿಸಿ, ಶ್ರೀ ಅರುಣಗಿರಿನಾಥರ್ ರಚನೆಯ ‘ಮುಥೈ ಥರು’- ಕೃತಿಯಲ್ಲಿ ಮುರುಗನ ವಿಶಿಷ್ಟ ಸೌಂದರ್ಯ – ಶಕ್ತಿವೇಲನ ಮಹಿಮಾತೀತ ಗುಣಗಾನಕ್ಕೆ ಅರ್ಪಿತವಾದ ‘ಮಂಗಳ’ದ ಕೃತಿಯನ್ನು ಕಲಾವಿದೆ, ಕುಣಿತದ ಲಯದ ವಿಶೇಷ ನೃತ್ಯ ಸಂಯೋಜನೆಯ ಬೆಡಗಿನಲ್ಲಿ, ಮೆರುಗಿನಿಂದ ನರ್ತಿಸಿದಳು. ಅಂತಿಮ ದೃಶ್ಯದಲ್ಲಿ ಬಿಚ್ಚಿದ ನವಿಲ ಗರಿಗಳ ಅಡಿಯಲ್ಲಿ ಕುಳಿತ ಬಾಲ ಷಣ್ಮುಖನ ಆಶೀರ್ವಾದಪೂರ್ವಕ ನಗುಮೊಗದ ಅಭಿವ್ಯಕ್ತಿ ವಿಶೇಷ ಪ್ರಭಾವವನ್ನು ಬೀರಿತು. ಗುರು ಪವಿತ್ರಾರವರ ಅತ್ಯತ್ತಮ ನೃತ್ಯಶಿಕ್ಷಣ ರೂಪಿಸಿರುವ ಅನುಪಮ ನೃತ್ಯ ಕಲಾವಿದೆ ಕುಮಾರಿ ವಿಶ್ವನೇತಾ ಅಂದು ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದಳು.

    ಕಲಾವಿದೆಯ ನೃತ್ಯ ವೈಭವಕ್ಕೆ ಅಪೂರ್ವ ಪ್ರಭಾವಳಿ ನಿರ್ಮಿಸಿದ ವಾದ್ಯಗೋಷ್ಟಿಯಲ್ಲಿ ಗಾಯನ- ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್, ಮೃದಂಗ- ವಿದ್ವಾನ್ ಧನುಷ್ ನಾಟಂಪಲ್ಲಿ, ವೀಣೆ- ವಿದ್ವಾನ್ ಶ್ರೀಕಾಂತ್ ನಿಟ್ಟೂರ್, ಕೊಳಲು- ವಿದ್ವಾನ್ ಸ್ಕಂಧ ಕುಮಾರ್, ಡ್ರಮ್ ಪ್ಯಾಡ್- ವಿದ್ವಾನ್ ಮಿಥುನ್ ಶಕ್ತಿ ಮತ್ತು ಸಹ ಗಾಯನ ಮತ್ತು ನಟುವಾಂಗದಲ್ಲಿ ಗುರು ಪವಿತ್ರ ಶ್ರೀಧರ್ ಅಮೋಘ ಸಾಂಗತ್ಯ ನೀಡಿದರು.

    *** ನೃತ್ಯ ವಿಮರ್ಶೆ | ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    article baikady bharatanatyam dance Music review roovari
    Share. Facebook Twitter Pinterest LinkedIn Tumblr WhatsApp Email
    Previous Articleಅರೆಭಾಷಾ ಅಕಾಡೆಮಿಯಿಂದ 2025ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟ
    Next Article ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ : ತೃತೀಯ ದಿನ
    roovari

    Add Comment Cancel Reply


    Related Posts

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026

    ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್ ಪ್ರಶಸ್ತಿಗೆ ಲೇಖಕಿಯ ಆಯ್ಕೆ

    June 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.