ನಮ್ಮ ಕನ್ನಡ ನಾಡಿನ ನೃತ್ಯಕ್ಷೇತ್ರದಲ್ಲಿ ಅದೆಷ್ಟೋ ಮಂದಿ ಬದ್ಧತೆಯ, ಅತ್ಯುತ್ತಮ ನೃತ್ಯಗುರುಗಳು ಎಲೆಮರೆಯ ಕಾಯಿಯಾಗಿಯೇ ಉಳಿದುಬಿಟ್ಟಿದ್ದಾರೆ. ಇದಕ್ಕೆ ಕಾರಣ ಅವರ ಪ್ರತಿಭೆ- ಪರಿಶ್ರಮಗಳಲ್ಲ. ಇದಕ್ಕೆ ಅನುಕೂಲಕರವಾದ ಪರಿಸರ, ಪ್ರಚಾರ ಸೌಲಭ್ಯ ಹಾಗೂ ಇನ್ನಿತರ ಅನೇಕ ಅಂಶಗಳು ಕಾರಣವಾಗುತ್ತವೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬಂತಿರುವ ಹಲವು ಮಂದಿ ನೃತ್ಯಗುರುಗಳಲ್ಲಿ ವಿದುಷಿ ಪದ್ಮಜಾ ಜಯರಾಂ ಕೂಡ ಒಬ್ಬರು. ‘ಶ್ರೀ ನಾಟ್ಯಕಲಾರ್ಪಣ ನೃತ್ಯ ಕೇಂದ್ರ ಟ್ರಸ್ಟ್’ ನೃತ್ಯ ಸಂಸ್ಥೆಯನ್ನು ಸುಮಾರು ಎರಡು ದಶಕಗಳಿಗೂ ಮೀರಿದ ಕಾಲವಧಿಯಿಂದ ಯಶಸ್ವಿಯಾಗಿ ನಡೆಸುತ್ತ ಬಂದಿದ್ದು, ನೂರಾರು ಉತ್ತಮ ಕಲಾವಿದರನ್ನು ನೃತ್ಯಕ್ಷೇತ್ರಕ್ಕೆ ಅರ್ಪಿಸಿರುವ ಇವರು ಪ್ರತಿಭಾನ್ವಿತ ನೃತ್ಯ ಕಲಾವಿದೆ- ಗುರು ಮತ್ತು ಅಪೂರ್ವ ನೃತ್ಯ ಸಂಯೋಜಕಿ ಕೂಡ. ಕರ್ನಾಟಕ ಸರ್ಕಾರದ ‘ವಿದ್ವತ್’ ನೃತ್ಯ ಪರೀಕ್ಷೆಯಲ್ಲಿ ಶ್ರೇಷ್ಠ ಅಂಕಗಳನ್ನು ಗಳಿಸಿರುವುದಲ್ಲದೆ ಭರತನಾಟ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದ ಅಗ್ಗಳಿಕೆ ಇವರದಾಗಿದೆ. ಇವರು ರೂಪಿಸಿದ ನೃತ್ಯ ಕಲಾವಿದೆಯರಲ್ಲಿ ಅನೇಕರು ವಿದ್ವತ್ ಪದವಿ ಪಡೆದು ಗುರು ಪರಂಪರೆಯನ್ನು ಯಶಸ್ವಿಯಾಗಿ ಮುಂದುವರೆಸುತ್ತಿದ್ದಾರೆ.
ನಾಟ್ಯಾಚಾರ್ಯ ಪದ್ಮಜಾ ಜಯರಾಂ ಇವರ ನುರಿತ ಗರಡಿಯಲ್ಲಿ ತಯಾರಾದ ಮೂರು ಕಲಾಶಿಲ್ಪಗಳು ಬೆಂಗಳೂರಿನ ಕಲಾಗ್ರಾಮದ ರಂಗಮಂದಿರದಲ್ಲಿ ದಿನಾಂಕ 26 ಜೂನ್ 2026ರಂದು ಯಶಸ್ವಿಯಾಗಿ ತಮ್ಮ ಗೆಜ್ಜೆಪೂಜೆಯ ‘ನೂಪುರ ಆರಾಧನೆ’ಯನ್ನು ಅನೇಕ ದೈವೀಕ ಕೃತಿಗಳಿಂದ ಅರ್ಚಿಸಿ ನೆರವೇರಿಸಿದರು. ಕುಮಾರಿ ಹೆಚ್.ಡಿ. ಜ್ಞಾನಶ್ರೀ, ಎನ್. ದೇವಿಕಾ ಮತ್ತು ಸಾನ್ವಿ ಎ. ತಮ್ಮ ಪ್ರಥಮ ಪ್ರವೇಶದ ಸಂದರ್ಭದಲ್ಲಿ, ತಮ್ಮ ಪ್ರತಿಭಾಪೂರ್ಣ ನೃತ್ಯ ಸೌಂದರ್ಯವನ್ನು ಕಲಾರಸಿಕರ ಎದುರು ಪ್ರದರ್ಶಿಸಿ ಪ್ರಶಂಸೆ ಗಳಿಸಿದರು.


ಶುಭಾರಂಭಕ್ಕೆ ಮೂವರು ಕಲಾವಿದೆಯರು ಒಟ್ಟಿಗೆ ಪುಷ್ಪಾಂಜಲಿ, ಕೌತ್ವಂ ಮತ್ತು ಹನುಮಾನ್ ಚಾಲಿಸವನ್ನು ಬಹು ಸಾಮರಸ್ಯದಿಂದ ನಯನ ಮನೋಹರ ಭಂಗಿಗಳಿಂದ, ಸುಂದರ ಆಂಗಿಕಾಭಿನಯಗಳಿಂದ ವಿಶೇಷ ನೃತ್ತ ವಿನ್ಯಾಸಗಳನ್ನು ಪ್ರದರ್ಶಿಸಿದರು. ಅವರ ಆತ್ಮವಿಶ್ವಾಸದ ನಗುಮುಖದ ನೃತ್ಯ ಅಂಗಶುದ್ಧವಾಗಿದ್ದು ಪ್ರದರ್ಶಿಸಿದ ನೃತ್ತ ವಿನ್ಯಾಸಗಳು ಹೊಸ ಹೆಣಿಗೆಯಲ್ಲಿ ಮಿಂಚಿದವು. ಗುರು ಪದ್ಮಜಾ ಅವರ ನಿಖರ ಉಚ್ಚಾರಣೆಯ ನಿರರ್ಗಳ ನಟುವಾಂಗ ಕಲಾವಿದೆಯರ ಹೆಜ್ಜೆಗಳಿಗೆ ಕಸುವು ನೀಡಿತು. ಅವರ ಸುಂದರ ನೃತ್ಯದ ಹಿನ್ನಲೆಯಲ್ಲಿ ಅವರಿಗೆ ದೊರೆತ ಉತ್ಕೃಷ್ಟ ಮಟ್ಟದ ಶಿಕ್ಷಣ ದೃಗೋಚರವಾಗಿತ್ತು.


ಪ್ರಥಮ ಪೂಜಿತ ವಿಘ್ನ ವಿನಾಯಕನ ಅನೇಕ ವಿಶಿಷ್ಟ ರೂಪ -ಭಂಗಿಗಳನ್ನು ಅನಾವರಣಗೊಳಿಸಿದರು ಕಲಾವಿದೆಯರು. ಮುಂದೆ ಅಹೋಬಿಲದ ಉಗ್ರರೂಪಿಯಾದ ‘ನರಸಿಂಹನ ‘ಕೌತ್ವಂ’ – (ರಚನೆ- ವಿ.ಜಿ. ಗುರುಮೂರ್ತಿ) ಶಕ್ತಿಶಾಲಿಯಾಗಿ ಮೂಡಿಬಂದು ಭಕ್ತ ಪ್ರಹ್ಲಾದನ ಸಂಚಾರಿ ಕಥಾನಕವನ್ನು ದೃಶ್ಯಾತ್ಮಕವಾಗಿ ನಿರೂಪಿಸಿದ್ದು ವಿಶೇಷವಾಗಿತ್ತು. ಹರಿವಿರೋಧಿ ಹಿರಣ್ಯಕಶಿಪುವಿನ ಸಂಹಾರದ ದೃಶ್ಯವಂತೂ ಅತ್ಯಮೋಘವಾಗಿ ಜ್ಹೆಂಕರಿಸಿ, ‘ಕೌತ್ವಂ’ನ ಸಾಕಾರ ಕಲಾರಸಿಕರ ಕರತಾಡನ ಪಡೆಯಿತು. ಗುರು ಪದ್ಮಜಾರ ನೃತ್ಯಸಂಯೋಜನೆ ಹೊಸ ಮೆರುಗಿನಿಂದ ಗಮನ ಸೆಳೆಯಿತು. ಹಿನ್ನಲೆಯಲ್ಲಿ ಮೂಡಿಬಂದ ವಿ. ಲಕ್ಷ್ಮೀ ವರುಣ್ ಗಾಯನ ಕೃತಿಗೆ ತಕ್ಕ ಓಘದಲ್ಲಿತ್ತು.



ಹನುಮಂತನ ಭಕ್ತಿ- ಸಾಹಸ, ವೈಶಿಷ್ಟ್ಯಗಳನ್ನು ಸೊಗಸಾಗಿ ಚಿತ್ರಿಸಿದ ಶ್ರೀತುಳಸೀದಾಸರ ‘ಹನುಮಾನ್ ಚಾಲೀಸ್’ ಕುಣಿಸುವ ಲಯದಲ್ಲಿ, ರೋಮಾಂಚಕಾರಿಯಾಗಿ ಅಷ್ಟೇ ಭಕ್ತಿಪ್ರದವಾಗಿ ಹೊರಹೊಮ್ಮಿತು. ಕಲಾವಿದೆಯರ ಅಭಿನಯ ಪ್ರತಿಭೆಗೆ-ನೃತ್ತಗಳ ಕಲಾಕೌಶಲ್ಯಕ್ಕೆ ಕನ್ನಡಿ ಹಿಡಿಯಿತು. ಅನಂತರ ಶ್ರೀಶಂಕರಾಚಾರ್ಯರು ರಚಿಸಿದ ‘ಶ್ರೀ ರಾಜರಾಜೇಶ್ವರಿ ಅಷ್ಟಕಂ’ ಕೃತಿಯನ್ನು ಜ್ಞಾನಶ್ರೀ ಬಹು ರಮ್ಯವಾಗಿ ದೈವೀಕ ಆಯಾಮದಲ್ಲಿ ನರ್ತಿಸಿ ಕಣ್ಮನ ತುಂಬಿದಳು. ಮುಂದೆ- ದೇವಿಕಾ, ‘ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮ’ ಎಂಬ ಕವಿ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಇವರ ಪ್ರಸಿದ್ಧ ಭಾವಗೀತೆಯ ಮೂಲಕ ಕೃಷ್ಣನ ಬಾಲಲೀಲೆಗಳನ್ನು ಬಹು ಸೊಗಸಾಗಿ ಚಿತ್ರಿಸಿದಳು. ನಂತರ- ಸಾನ್ವೀ, ‘ಹನುಮಂತ ದೇವ ನಮೋ’ ಎಂದು ಪ್ರಾಣದೇವರನ್ನು ಕುರಿತಾದ ದೇವರನಾಮವನ್ನು ಭಕ್ತಿ ತಾದತ್ಮ್ಯತೆಯಿಂದ ಸಾಕ್ಷಾತ್ಕರಿಸಿ, ಶಕ್ತಿಶಾಲಿಯಾಗಿ ರಾಮನ ಭಂಟ ಹನುಮನ ಸಮಗ್ರ ಚಿತ್ರಣವನ್ನು ನಾಟಕೀಯ ಆಯಾಮದಲ್ಲಿ ಅಭಿನಯಿಸಿ ಚಪ್ಪಾಳೆ ಗಿಟ್ಟಿಸಿದಳು.

ತ್ರಿವಳಿ ರತ್ನಗಳಾದ ಈ ಬಾಲೆಯರು ಸಂಭ್ರಮದ ಹೆಜ್ಜೆ-ಗೆಜ್ಜೆಗಳ ‘ತಿಲ್ಲಾನ’ದೊಂದಿಗೆ ತಮ್ಮ ಪ್ರಸ್ತುತಿಯನ್ನು ಸಂಪನ್ನಗೊಳಿಸಿದರು. ಗುರು ಪದ್ಮಜಾ ಇವರ ಸ್ಫುಟವಾದ – ಪ್ರೇರಣಾದಾಯಕ ನಟುವಾಂಗ ಕಲಾವಿದೆಯರಿಗೆ ಸ್ಫೂರ್ತಿ ನೀಡಿತು. ಅವರ ಸೃಜನಾತ್ಮಕ ಮತ್ತು ಪ್ರಯೋಗಾತ್ಮಕ ಮನಮೋಹಕ ನೃತ್ಯಸಂಯೋಜನೆ ಕಲಾತ್ಮಕವಾಗಿತ್ತು. ಕಾರ್ಯಕ್ರಮದಲ್ಲಿ ಅಚ್ಚುಕಟ್ಟಾಗಿ ನಿರೂಪಣೆಯನ್ನು ಮಾಡಿ ಕೃತಿಗಳ ಸ್ವಾರಸ್ಯವನ್ನು ತಿಳಿಯಪಡಿಸಿದವರು ನೃತ್ಯ ಕಲಾವಿದೆ- ಗುರು ವಿದುಷಿ ಮಂಜುಭೈರವಿ ಪ್ರದೀಪ್.



ವಿಮರ್ಶಕಿ : ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
