Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನೃತ್ಯ ವಿಮರ್ಶೆ | ಲಯಾತ್ಮಕ ನರ್ತನ – ವೈಷ್ಣವಿ ಹೆಜ್ಜೆ-ಗೆಜ್ಜೆಗಳ ವೈಶಿಷ್ಟ್ಯ 
    Bharathanatya

    ನೃತ್ಯ ವಿಮರ್ಶೆ | ಲಯಾತ್ಮಕ ನರ್ತನ – ವೈಷ್ಣವಿ ಹೆಜ್ಜೆ-ಗೆಜ್ಜೆಗಳ ವೈಶಿಷ್ಟ್ಯ 

    June 13, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ರಂಗಪ್ರವೇಶ ಪ್ರತಿ ನೃತ್ಯ ಕಲಾವಿದೆಯ ಕನಸು. ಅಂದು ವೈಷ್ಣವೀ ಜಯಶಂಕರ್ ಪಾಲಿಗೆ ಅತ್ಯಂತ ಸುದಿನ. ಖ್ಯಾತ ‘ಕಲಾವಾಹಿನಿ ಡ್ಯಾನ್ಸ್ ಅಕಾಡೆಮಿ’ಯ ಉತ್ತಮ ನೃತ್ಯಗುರು ವಿದುಷಿ ಪರಿಮಳ ಹನ್ಸೋಗೆ ಅವರ ಶಿಷ್ಯೆ ಪುಟಾಣಿ ಕಲಾವಿದೆಯಾದ ಕುಮಾರಿ ವೈಷ್ಣವಿ ತನ್ನ ಲಯಾತ್ಮಕ ನರ್ತನದಿಂದ ಕಣ್ಮನ ಸೆಳೆದಳು. ನಗರದ ಎ.ಡಿ.ಎ. ರಂಗಮಂದಿರದಲ್ಲಿ ನಡೆದ ವೈಷ್ಣವಿಯ ವಿದ್ಯುಕ್ತ ರಂಗಪ್ರವೇಶ ಅತ್ಯಂತ ಯಶಸ್ವಿಯಾಗಿ ನಡೆಯಿತು.
    ಬಟ್ಟಲುಗಣ್ಣುಗಳ ಕಲಾವಿದೆ ಅತ್ಯಂತ ಆತ್ಮವಿಶ್ವಾಸ- ನಗುಮೊಗದಿಂದ ರಂಗಪ್ರವೇಶಿಸಿ ‘ಪುಷ್ಪಾಜಲಿ’ಯೊಂದಿಗೆ ತನ್ನ ಪ್ರಸ್ತುತಿಯನ್ನು ಶುಭಾರಂಭಿಸಿದಳು. ಶ್ರೀ ಬಾಲಮುರಳೀಕೃಷ್ಣ ರಚನೆಯ ಅರಭಿ ರಾಗ- ಆದಿತಾಳದ ಕೃತಿಗೆ ಗುರು ಪರಿಮಳ, ಬಾಲಪ್ರತಿಭೆಗೆ ಅನುಗುಣವಾಗಿ ಸರಳ- ಸುಂದರವಾಗಿ ನೃತ್ಯ ಸಂಯೋಜಿಸಿದ್ದರು. ದೇವಾನು ದೇವತೆಗಳು- ಗುರು ಹಿರಿಯರು-ಸಂಗೀತ ಕಲಾವಿದರು ಮತ್ತು ಪ್ರೇಕ್ಷಕರಿಗೆ ನೃತ್ಯಾರಾಧನೆಯ ಖಚಿತ ನೃತಗಳ ಮೂಲಕ ನಮನ ಸಲ್ಲಿಸಿದಳು. ನಂತರ ಪ್ರಸ್ತುತಿಪಡಿಸಿದ ಮಯೂರ ‘ಅಲರಿಪು’ –ನವಿಲು ಗರಿಬಿಚ್ಚಿ ನರ್ತಿಸಿದ ಮನಮೋಹಕತೆಯನ್ನು ಪಸರಿಸಿ, ಕಲಾವಿದೆಯ ಪ್ರತಿಯೊಂದು ಅಡವು- ಅಂಗಿಕಾಭಿನಯವೂ ಸಂಪ್ರದಾಯದ ಚೌಕಟ್ಟಿನಲ್ಲಿ ಸುಂದರ ಅಡವುಗಳ ಗುಚ್ಚದೊಂದಿಗೆ ಮಯೂರ ಲಾಸ್ಯದೊಂದಿಗೆ ಪ್ರಫುಲ್ಲವಾಗಿ ಹೂವಿನಂತೆ ಅರಳಿತು.
    ಮುಂದಿನ ವಸಂತ ರಾಗ- ರೂಪಕ ತಾಳದ ‘ಜತಿಸ್ವರ’ ವೈಷ್ಣವಿಗಿರುವ ಉತ್ತಮ ತಾಳ-ಲಯಜ್ಞಾನಕ್ಕೆ ಸಮರ್ಥವಾಗಿ ಕನ್ನಡಿ ಹಿಡಿಯಿತು. ಅವಳು ಪ್ರದರ್ಶಿಸಿದ ಸುಂದರ ಪಾದಭೇದಗಳು, ಹದವಾದ ಜಮಿತ್ರಿಯ ಚಲನಾ ಸೌಂದರ್ಯ, ಹೊಸ ವಿನ್ಯಾಸದ ಜತಿಗಳ ನಿರೂಪಣೆ ಸೊಗಸಾಗಿ ಮೂಡಿಬಂತು. ನಂತರ ದೈವಭಕ್ತೆ ಅಂಡಾಳ್ ಕುರಿತ ಮಲಯ ಮಾರುತ ರಾಗದ ‘ಕೊಡೈ ಕೌತ್ವಂ’ ಭಕ್ತಿರಸದಿಂದ ಕೂಡಿದ್ದು, ಕಲಾವಿದೆಯ ಸುಂದರಾಭಿನಯ ‘ಮಾರ್ಗಂ’ ಸಂಪ್ರದಾಯದ ಪ್ರಸ್ತುತಿಯಲ್ಲಿ ಮೊದಲಬಾರಿಗೆ ಅನಾವರಣಗೊಂಡಿತು. ಗುರು ಪರಿಮಳ ಅವರ ಅಸ್ಖಲಿತ ಪ್ರವಾಹೋಪಾದಿಯ ನಟುವಾಂಗ ಕಲಾವಿದೆಯ ಹೆಜ್ಜೆ- ಗೆಜ್ಜೆಗಳಿಗೆ ಪ್ರೇರಣೆ ನೀಡಿತು.
    ಪ್ರಸ್ತುತಿಯ ಹೃದಯ ಭಾಗ ಅಷ್ಟೇ ಹೃದ್ಯವಾದ ಘಟ್ಟ – ‘ವರ್ಣ’. ನೃತ್ತ ಮತ್ತು ಅಭಿನಯ ಎರಡರಲ್ಲೂ ಸಮಾನ ಪ್ರಭುತ್ವ ನಿರೀಕ್ಷಿಸುವ ಈ  ‘ವರ್ಣ’ – ದೀರ್ಘಬಂಧವಾಗಿದ್ದು ಕಲಾವಿದರಿಗೊಂದು ಸವಾಲು ಎಂದರೂ ಅತಿಶಯೋಕ್ತಿಯಲ್ಲ. ಅಂದು ವೈಷ್ಣವಿ ನಿರೂಪಿಸಿದ್ದು ಶ್ರೀ ವೆಂಕಟಾದ್ರಿಯನ್ನು ಕುರಿತ ತೋಡಿರಾಗದ ಭಕ್ತಿಪ್ರಧಾನ ವರ್ಣ. ಕಲಿಯುಗದ ಪ್ರತ್ಯಕ್ಷ ದೈವ ಶ್ರೀನಿವಾಸ ದೇವರ ಬದುಕಿನ ಮುಖ್ಯ ಘಟನೆಗಳ ಮೇಲೆ ಬೆಳಕು ಚೆಲ್ಲಿದ ಈ ‘ವರ್ಣ’ ಸಪ್ತಗಿರಿಯ ಮಹಿಮೆ- ವೈಶಿಷ್ಟ್ಯಗಳನ್ನು ಎತ್ತಿಹಿಡಿದು ಮನಸೆಳೆಯಿತು. ಶ್ರೀಕೃಷ್ಣನು ತಾಯಿ ಯಶೋದೆಗೆ ತನ್ನ ಬಾಯೊಳಗೆ ಮೂರು ಜಗವನ್ನು ತೋರಿಸಿದ ಸಂಚಾರಿ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂತು. ಭೃಗುಮುನಿಯ ಗರ್ವಭಂಗ, ಶ್ರೀನಿವಾಸ ಕಲ್ಯಾಣ ಮುಂತಾದ ಅನೇಕ ಸುಂದರ ಸಂಚಾರಿ ಕಥಾನಕಗಳನ್ನು ವೈಷ್ಣವಿ ಪ್ರದರ್ಶಿಸಿದಳು. ನಡು ನಡುವೆ ಲಯಾತ್ಮಕವಾಗಿ ಜ್ಹೆಂಕರಿಸಿದ ಗುರು ಪರಿಮಳರ ಸ್ಪಷ್ಟ- ಸ್ಫುಟವಾದ ನಟುವಾಂಗದ ಬನಿ, ತಾಳಬದ್ಧವಾಗಿ ಹರಿದ ಕಲಾವಿದೆಯ ನೃತ್ತಗಳ ಜಲಪಾತವೂ ಮುದ ನೀಡಿತು. ಜಿ. ಗುರುಮೂರ್ತಿ ಅವರ ರಚನೆಯ ಕೃತಿಗೆ ಅಭಿಷೇಕ್ ಸಂಗೀತ ಸಂಯೋಜಿಸಿದ್ದು ವಿಶೇಷವಾಗಿತ್ತು. ದೀರ್ಘಬಂಧವನ್ನು ಕಲಾವಿದೆ ನಿರಾಯಾಸವಾಗಿ ನಿರೂಪಿಸಿದ್ದು ಹಾಗೂ ಪ್ರದರ್ಶಿಸಿದ ಅನೇಕ ಮನೋಜ್ಞ ಭಂಗಿಗಳು ಮೆಚ್ಚುಗೆ ಪಡೆದವು.
    ಅನಂತರ- ಶಕ್ತಿಶಾಲಿ ನೃತ- ಭಂಗಿಗಳಿಂದ ಪರಿಣಾಮ ಬೀರಿದ ಆದಿ ಶಂಕರಾಚಾರ್ಯ ವಿರಚಿತ ಕಾಶೀನಾಥ ‘ಕಾಲ ಭೈರವಾಷ್ಟಕ’ವನ್ನು ವೈಷ್ಣವಿ ಸೊಗಸಾಗಿ ಭಕ್ತಿಪೂರ್ಣವಾಗಿ ನಿವೇದಿಸಿದಳು. ಅಭಿಷೇಕರ ಭಾವಪೂರ್ಣ ಗಾಯನ, ಕಿಕ್ಕೇರಿ ಜಯರಾಮರ ಮೈ ಮರೆಸುವ ಮುರಳೀಗಾನ- ಜಿ. ಗುರುಮೂರ್ತಿಯವರ ಮೃದಂಗದ ಝೇಂಕಾರ, ವಿದ್ವಾನ್ ಗೋಪಾಲರ ಮನನೀಯ ವೇಣುವಾದನ ಮತ್ತು ಡಿ.ವಿ. ಪ್ರಸನ್ನ ಕುಮಾರರ ವಿವಿಧ ನಾದ ತರಂಗಿಣಿಯ ಸಂಗೀತದ ಸಾಂಗತ್ಯ ಬಹು ಸಮರ್ಥವಾಗಿತ್ತು. ಮುಂದಿನ ಜಾನಪದ ಧಾಟಿಯಲ್ಲಿ ಮನರಂಜಿಸಿದ ‘ಕಾವಡಿ ಚಿಂದು’ – (ಸೆಂಜುರುಟಿ ರಾಗ- ಆದಿ ತಾಳ) ಮುರುಗನ ಆರಾಧಕರು ಬೆನ್ನ ಮೇಲೆ ಕಾವಡಿ ಹೊತ್ತ ತೀರ್ಥಯಾತ್ರ ಪ್ರವಾಸಿಗರು ಅದೊಂದು ದೀಕ್ಷೆಯಂತೆ ಕಾವಡಿಯ ಪದ್ಧತಿಯನ್ನು ಅನುಸರಿಸುತ್ತಾರೆ. ಅವರ ಉತ್ಸಾಹದ ಪ್ರಯಾಣ- ಚಲನೆಯನ್ನು ವೈಷ್ಣವಿ ಬಹು ಲವಲವಿಕೆಯಿಂದ ಲೀಲಾಜಾಲವಾಗಿ ಕುಣಿತದ ಹೆಜ್ಜೆ ಲಯದಲ್ಲಿ ಇಡೀ ರಂಗದ ತುಂಬಾ ನಲಿಯುತ್ತ ನರ್ತಿಸಿದ್ದು ಕಣ್ಮನಕ್ಕೆ ಆನಂದ ತಂದಿತು. ಮಿಂಚಿನ ಸಂಚಾರದ ವಿವಿಧ ಪಾದಭೇದಗಳ ನೃತ್ತಗಳ ಸಂಭ್ರಮದ ‘ತಿಲ್ಲಾನ’ದೊಂದಿಗೆ ವೈಷ್ಣವಿಯ ನೃತ್ಯಪ್ರಸ್ತುತಿ ಬಹು ಅಚ್ಚುಕಟ್ಟಾಗಿ ಸಂಪನ್ನಗೊಂಡಿತು.
    *** ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಳಗಾವಿಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ ಪ್ರದರ್ಶನ | ಜೂನ್ 14
    Next Article ಕಲಾಂಗಣದಲ್ಲಿ ರಾಜ್ಯ ಮಟ್ಟದ ಸಿಮೆಂಟ್‌ ಶಿಲ್ಪ ಶಿಬಿರ ಆರಂಭ
    roovari

    Add Comment Cancel Reply


    Related Posts

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.