ಮಂಗಳೂರು : ರಾಮಕೃಷ್ಣ ಮಠ, ಮಂಗಳೂರಿನಲ್ಲಿ ಅಮೃತ ವರ್ಷದ ಆಚರಣೆ ಅಂಗವಾಗಿ ‘ದಾಸ-ಗಾನ-ಚಿಂತನ’ ಎಂಬ ಭಕ್ತಿಮಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 15 ಮಾರ್ಚ್ 2026ರಂದು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವು ಸಂಜೆ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮದಿಂದ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ಬಸವನಗುಡಿ ರಾಮಕೃಷ್ಣ ಮಠದ ಅಧ್ಯಕ್ಷರಾಗಿರುವ ಸ್ವಾಮಿ ನಿತ್ಯಸ್ಥಾನಂದಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಇವರು ವಹಿಸಿದರು.

ಮುಖ್ಯ ಕಾರ್ಯಕ್ರಮವಾಗಿ ನಡೆದ ‘ದಾಸ-ಗಾನ-ಚಿಂತನ’ ಕಾರ್ಯಕ್ರಮದಲ್ಲಿ ಸುರಮಣಿ ಡಾ. ದತ್ತಾತ್ರೇಯ ಎಲ್. ವೇಲಣಕರ್ ಇವರ ಗಾಯನ, ಡಾ. ಎಚ್.ಎನ್. ಮುರಳೀಧರ ಇವರ ಅರ್ಥಪೂರ್ಣ ವ್ಯಾಖ್ಯಾನ ಹಾಗೂ ತಬಲಾದಲ್ಲಿ ಶ್ರೀ ಶ್ರೀದತ್ತ ಪ್ರಭು ಇವರ ಸಹಕಾರದಿಂದ ಭಕ್ತಿಭಾವ ಪೂರ್ಣ ವಾತಾವರಣ ನಿರ್ಮಾಣವಾಗಿ, ಶ್ರೋತೃಗಳನ್ನು ಆಧ್ಯಾತ್ಮಿಕ ಅನುಭವದೊಳಗೆ ಕರೆದೊಯ್ದಿತು. ದಾಸಸಾಹಿತ್ಯದ ಭಕ್ತಿಮಯ ಸಂದೇಶಗಳನ್ನು ಸಂಗೀತ ಮತ್ತು ವಿವರಣೆಗಳ ಮೂಲಕ ಮನೋಜ್ಞವಾಗಿ ಪರಿಚಯಿಸಿದ ಈ ಕಾರ್ಯಕ್ರಮವು ಎಲ್ಲರ ಮನಸೆಳೆಯಿತು. ಭಕ್ತರು, ಸಂಗೀತಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

