ಬೆಂಗಳೂರು : ಮಹಿಳಾ ದಿನಾಚರಣೆ ಅಂಗವಾಗಿ ನಿರಂತರ ಮತ್ತು ನೃತ್ಯದರ್ಪಣ್ ಕಥಕ್ ನೃತ್ಯ ಸಂಸ್ಥೆಯ ಸಂಸ್ಥಾಪಕರು ಮತ್ತು ಹಿರಿಯ ಕಥಕ್ ನೃತ್ಯಗುರುಗಳು- ಕಲಾವಿದೆಯಾದ ವಿದುಷಿ ವೀಣಾ ಭಟ್ ಮತ್ತು ನೃತ್ಯಗುರು ಕರ್ಪಗಂ ಬಾಲಲತಿಕಾ ಇವರುಗಳ ನೇತೃತ್ವದಲ್ಲಿ ದಿನಾಂಕ 08 ಮಾರ್ಚ್ 2026ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ನೃತ್ಯದರ್ಪಣ್ ಆಕಾಡೆಮಿ ಸ್ಟುಡಿಯೋದಲ್ಲಿ ಶ್ರೀ ಬಾಲಲತಿಕಾ ಕುಚಿಪುಡಿ ಸೆಂಟರ್ ಸಹಯೋಗದೊಂದಿಗೆ ‘ದೀಪಧಾರಿಣಿ’ ಶೀರ್ಷಿಕೆಯಲ್ಲಿ ಮಹಿಳಾ ಕಲಾಪ್ರತಿಭೆಗಳ ವಿಶೇಷ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ.

ವಿದುಷಿ ಡಾ. ರಮ್ಯ ಸೂರಜ್, ಖ್ಯಾತ ನೃತ್ಯಗುರು ಹಾಗೂ ಸಂಗೀತ ಕಲಾವಿದರು ಇವರಿಂದ ಸುಗಮ ಸಂಗೀತದ ಮೂಲಕ ಮಾನಿನಿ ಗೀತಾ- ಸುಶ್ರಾವ್ಯ ಗೀತಧಾರೆ, ವಿದುಷಿ ದಿವ್ಯಾ ಗೋಸ್ವಾಮಿ ಎಕೋಸ್ ಆಫ್ ಡಿವೈನ್ ಫೆಮಿನೈನ್- ಕುರಿತ ವಿಷಯಾಧಾರಿತ ಕಥಕ್ ನೃತ್ಯ ಪ್ರಸ್ತುತಿ ಮತ್ತು ವಿದುಷಿ ರಶ್ಮೀ ಅಗ್ಗರವಾಲ್ ಶ್ಯಾಡೋಸ್ ಆಫ್ ವುಮನ್ ಹುಡ್ ವಸ್ತುವಿನ ಸುತ್ತ ಚಿಂತನೆಯನ್ನು ಹರಿಸುವ ಭರತನಾಟ್ಯದ ವೈವಿಧ್ಯಪೂರ್ಣ ಕಣ್ಣನ ಸೂರೆಗೊಳ್ಳುವ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಿಪಿಪ್ರಾಜ್ಞೆ ವೈ.ಕೆ. ಸಂಧ್ಯಾ ಶರ್ಮ, ಪ್ರಖ್ಯಾತ ಲೇಖಕಿ ರಂಗಕರ್ಮಿ ಅಂಕಣಕಾರ್ತಿ ಮತ್ತು ನೃತ್ಯ- ನಾಟಕಗಳ ವಿಮರ್ಶಕರು ಭಾಗವಹಿಸುತ್ತಾರೆ.




ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
