ಬೆಂಗಳೂರು : ಹಿರಿಯ ಕಥೆಗಾರ ಡಾ. ರಾಜಶೇಖರ ನೀರಮನ್ವಿಯವರು ದಿನಾಂಕ 08 ಆಗಸ್ಟ್ 2024ರಂದು ನಿಧನರಾದರು ಅವರಿಗೆ 83ನೆಯ ವಯಸ್ಸಾಗಿತ್ತು. ನೀರಮಾನ್ವಿಯರು ಬರೆದಿದ್ದು ಕಡಿಮೆಯಾದರೂ ಅದರ ಗುಣಮಟ್ಟ ಬಹಳ ಹೆಚ್ಚಿನದು. ಅವರ ‘ಹಂಗಿನರಮನೆಯೊಳಗೆ’ ಮತ್ತು ‘ಕರ್ಪೂರದ ಕಾಯಕದಲ್ಲಿ’ ಸಂಕಲನದ ಕಥಾ ಸಂಕಲನದ ಕಥೆಗಳನ್ನು ಕನ್ನಡಿಗರು ಸದಾ ಸ್ಮರಿಸುತ್ತಾರೆ. ರಾಯಚೂರು ಜಿಲ್ಲೆಯ ನೀರಮಾನ್ವಿಯಲ್ಲಿ ಜನಿಸಿದ ರಾಜಶೇಖರ ನೀರಮಾನ್ವಿಯವರು ಮೂಲತ: ಭೂವಿಜ್ಞಾನದ ವಿದ್ಯಾರ್ಥಿ. ಈ ಕ್ಷೇತ್ರದಲ್ಲಿ ಕೂಡ ಅವರ ಸಾದನೆ ಮಹತ್ವದ್ದು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂ ವಿಜ್ಞಾನದಲ್ಲಿ ಸ್ನಾತಕೊತ್ತರ ಪದವಿಯನ್ನು ಹಾಗೂ ‘ಆರ್ಥಿಕ ಭೂವಿಜ್ಞಾನ’ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದ ಇವರು ನೀರಮಾನ್ವಿ ಮತ್ತು ಬಳ್ಳಾರಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ‘ಪ್ರತೀಕ’ ಎಂಬ ಸಾಹಿತ್ಯ ಪತ್ರಿಕೆಯನ್ನೂ ಕೂಡ ಹೊರ ತಂದಿದ್ದು, ಉತ್ತರ ಕರ್ನಾಟಕದ ಅದರಲ್ಲಿಯೂ ಮುಖ್ಯವಾಗಿ ರಾಯಚೂರು ಜಿಲ್ಲೆಯ ಬರಹಗಾರರನ್ನು ಪ್ರೋತ್ಸಾಹಿಸಿದ್ದರು.