ಮೈಸೂರು : ಕರ್ನಾಟಕ ಏಕೀಕರಣ ಟ್ರಸ್ಟ್ ಮೈಸೂರು ವತಿಯಿಂದ ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಸಿದ್ದನಾಥ ಬಳ್ಳಾರಿ ಇವರ ಸ್ಮರಣಾರ್ಥ ಹಮ್ಮಿಕೊಂಡಿರುವ ಡಾ. ಸುಜಾತ ಅಕ್ಕಿ ಇವರ ಮೂರು ದಿನಗಳ ಏಕವ್ಯಕ್ತಿ ನಾಟಕೋತ್ಸವಕ್ಕೆ ದಿನಾಂಕ 26 ಜೂನ್ 2026ರ ಶುಕ್ರವಾರದಂದು ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಚಾಲನೆ ದೊರೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಎನ್.ಎಸ್. ಗೋಪಿನಾಥ್ ಅವರು, “ಇಂದಿನ ದಿನಗಳಲ್ಲಿ ನಾಟಕ ನಿರ್ಮಾಣವೇ ದುಸ್ತರವಾಗಿದೆ. ಮೈಸೂರಿನ ಅನೇಕ ರಂಗತಂಡಗಳು ಒಂದರಿಂದ ಎರಡು ತಿಂಗಳವರೆಗೆ ತರಬೇತಿ ಶಿಬಿರಗಳನ್ನು ನಡೆಸಿ ಗುಣಮಟ್ಟದ ನಾಟಕಗಳನ್ನು ಪ್ರದರ್ಶಿಸುತ್ತಿವೆ. ಆದರೆ ಸರ್ಕಾರದಿಂದ ದೊರೆಯುವ ಅನುದಾನ ಅತ್ಯಂತ ಕಡಿಮೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ರಂಗತಂಡಗಳಿಗೆ ಹೆಚ್ಚಿನ ಅನುದಾನ ನೀಡಿ ರಂಗಭೂಮಿಯ ಬೆಳವಣಿಗೆಗೆ ಉತ್ತೇಜನ ನೀಡಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ನಾ. ದಿವಾಕರ್ ಅವರು ಏಕವ್ಯಕ್ತಿ ನಾಟಕದ ಇತಿಹಾಸ ಮತ್ತು ಮಹತ್ವವನ್ನು ವಿವರಿಸಿದರು. “ಏಕಪಾತ್ರ ಅಭಿನಯವು ಪ್ರಾಚೀನ ಗ್ರೀಕ್ ರಂಗಭೂಮಿ ಹಾಗೂ ಭಾರತದ ಸಾಂಪ್ರದಾಯಿಕ ಕಥಾ-ಕಾಲಕ್ಷೇಪ ಪರಂಪರೆಯಲ್ಲಿ ಬೇರುಬಿಟ್ಟಿದೆ. ಕಡಿಮೆ ವೆಚ್ಚದಲ್ಲಿ ಒಬ್ಬನೇ ಕಲಾವಿದ ಇಡೀ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ವಿಶಿಷ್ಟ ರಂಗಪ್ರಕಾರ ಇದು. ಇಲ್ಲಿ ಅಭಿನಯ, ಹಾವಭಾವ, ಮುಖಭಾವ, ದೇಹಚಲನೆ, ಅಂಗಿಕ ಅಭಿನಯ, ಸ್ಪಷ್ಟ ಉಚ್ಚಾರಣೆ ಹಾಗೂ ಧ್ವನಿಯ ಏರಿಳಿತವೇ ನಾಟಕದ ಜೀವಾಳ. ಒಬ್ಬ ಕಲಾವಿದ ವಿವಿಧ ಪಾತ್ರಗಳಿಗೆ ತಕ್ಕಂತೆ ಧ್ವನಿ ಮತ್ತು ಭಾವವನ್ನು ಬದಲಾಯಿಸುತ್ತಾ ಪ್ರೇಕ್ಷಕರ ಕಣ್ಮುಂದೆ ಅದೃಶ್ಯ ಲೋಕವನ್ನೇ ಸೃಷ್ಟಿಸುವ ಅದ್ಭುತ ಕಲೆಯೇ ಏಕವ್ಯಕ್ತಿ ನಾಟಕ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಸುಜಾತ ಅಕ್ಕಿ ಅವರು ಕರ್ನಾಟಕ ಏಕೀಕರಣ ಚಳವಳಿಯ ಕೆಲವು ಮಹತ್ವದ ಘಟನೆಗಳನ್ನು ಸ್ಮರಿಸಿ, ಕನ್ನಡ ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಕೊಡುಗೆಯನ್ನು ನೆನಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಅರಸೀಕೆರೆ ಯೋಗಾನಂದ ಇವರ ನಿರ್ದೇಶನದಲ್ಲಿ, ಡಾ. ಸುಜಾತ ಅಕ್ಕಿ ಇವರ ಕಥೆ ಮತ್ತು ವಿನ್ಯಾಸ, ಜೀವನ್ ಕುಮಾರ್ ಹೆಗ್ಗೋಡು ಇವರ ಬೆಳಕಿನ ವಿನ್ಯಾಸ ಹಾಗೂ ಸಿದ್ದೇಶ್ವರ ಬದನವಾಳು ಇವರ ಸಂಗೀತ ಸಂಯೋಜನೆಯ ‘ಅಹಲ್ಯ’ ಏಕವ್ಯಕ್ತಿ ನಾಟಕ ಪ್ರದರ್ಶನಗೊಂಡಿತು.




ಕಲಾವಿದೆ ಹರಿಣಾಕ್ಷಿ ರಾವ್ ಇವರು ಅಹಲ್ಯ ಪಾತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಪೌರಾಣಿಕ ಕಥೆಯನ್ನು ಹೊಸ ದೃಷ್ಟಿಕೋನದಲ್ಲಿ ಕಟ್ಟಿಕೊಟ್ಟ ಈ ನಾಟಕದಲ್ಲಿ, ತನ್ನದೇನೂ ತಪ್ಪಿಲ್ಲದಿದ್ದರೂ ಇಂದ್ರನ ದುರಾಸೆ ಮತ್ತು ಗೌತಮ ಮುನಿಯ ಶಾಪಕ್ಕೆ ಅಹಲ್ಯ ಬಲಿಯಾಗುವ ಸಂದರ್ಭಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಅಂತಿಮವಾಗಿ ದೇವೇಂದ್ರನ ಪತ್ನಿ ಶಚಿದೇವಿಯ ಮೂಲಕ ಅಹಲ್ಯೆಗೆ ಮುಕ್ತಿ ದೊರೆಯುವುದಲ್ಲದೆ, ಗೌತಮನ ಸಹವಾಸವನ್ನು ತಿರಸ್ಕರಿಸಿ ಪ್ರಕೃತಿಯಲ್ಲಿ ಲೀನವಾಗುವ ಹೊಸ ವ್ಯಾಖ್ಯಾನದೊಂದಿಗೆ ನಾಟಕ ಮುಕ್ತಾಯಗೊಂಡು ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕ ಅರಸೀಕೆರೆ ಯೋಗಾನಂದ, ನಿರಂತರ ಫೌಂಡೇಶನ್ ನಿರ್ದೇಶಕ ಶ್ರೀನಿವಾಸ್ ಪಾಲಹಳ್ಳಿ, ಸಹಾಯಕ ಪ್ರಾಧ್ಯಾಪಕಿ ಡಾ. ದಿವ್ಯ ಬಿ.ಎಸ್. ಸೇರಿದಂತೆ ಹಲವಾರು ರಂಗಾಸಕ್ತರು ಹಾಗೂ ಪ್ರೇಕ್ಷಕರು ಉಪಸ್ಥಿತರಿದ್ದರು.

