Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನಾಟಕ ವಿಮರ್ಶೆ | ಸಾವಿನಾಚೆ ನಿಂತು ಬದುಕಿನ ಅವಲೋಕನ ಮಾಡುವ ‘ಅನೂಹ್ಯ’
    Article

    ನಾಟಕ ವಿಮರ್ಶೆ | ಸಾವಿನಾಚೆ ನಿಂತು ಬದುಕಿನ ಅವಲೋಕನ ಮಾಡುವ ‘ಅನೂಹ್ಯ’

    March 6, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾವಿನಾಚೆಯ ಕುತೂಹಲ ಮನುಕುಲವನ್ನು ಕಾಡುತ್ತಲೇ ಬಂದಿದೆ. ಸತ್ತ ಮೇಲೆ ಏನಾಗುತ್ತದೆ ಎಂದು ಕಂಡು ಬಂದವರಿಲ್ಲ, ಹೀಗಾಗಿ ಮರಣದಾಚೆಯ ಊಹೆಗಳಿಗೆ ಕೊನೆಮೊದಲಿಲ್ಲ. ಸಾವಿನ ನಂತರದ ನಿಗೂಢತೆಯ ಸುತ್ತ ಸ್ವರ್ಗ ನರಕ ಪುನರ್ಜನ್ಮಗಳ ಹುತ್ತ ಬೆಳೆದು ಬಂದಿದೆ. ಇಂತಹ ಸಾವಿನಾಚೆಯ ಕಲ್ಪನೆಗೆ ಹೊಸ ಸೇರ್ಪಡೆ ‘ಅನೂಹ್ಯ’ ರಂಗ ಪ್ರಯೋಗ.

    ‘ವಿಜಯನಗರ ಬಿಂಬ’ ರಂಗಶಿಕ್ಷಣ ಕೇಂದ್ರದ ಹಿರಿಯ ವಿದ್ಯಾರ್ಥಿಗಳು ಅಭಿನಯಿಸಿದ ‘ಅನೂಹ್ಯ’ ನಾಟಕವನ್ನು ಡಾ. ಎಸ್.ವಿ. ಕಷ್ಯಪ್ ಇವರು ರಚಿಸಿ, ನಿರ್ದೇಶಿಸಿದ್ದು ದಿನಾಂಕ 01 ಮಾರ್ಚ್ 2026ರಂದು ಕಲಾಗ್ರಾಮದ ರಂಗಮಂದಿರದಲ್ಲಿ ಪ್ರದರ್ಶನಗೊಂಡಿತು. ‘ಅನೂಹ್ಯ’ ಅಂದರೆ ಕನ್ನಡ ನಿಘಂಟಿನ ಪ್ರಕಾರ ಊಹಿಸಲಾಗದ, ಕಲ್ಪನೆಗೆ ನಿಲುಕದ, ಅನಿರೀಕ್ಷಿತವಾದ, ಅರ್ಥಮಾಡಿ ಕೊಳ್ಳಲಾಗದ ಎಂದರ್ಥವಿದೆ. ಅಂತಹ ಊಹಾತೀತ ಕಾಲ್ಪನಿಕ ನಾಟಕವನ್ನು ಡಾ. ಕಷ್ಯಪ್ ರವರು ರಚಿಸಿ ಸಾವಿನಾಚೆಯ ತ್ರಿಶಂಕು ಮಾದರಿಯನ್ನು ದೃಶ್ಯಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ನಾಟಕದಾದ್ಯಂತ ಅನಿರೀಕ್ಷಿತ ತಿರುವುಗಳನ್ನು ಸೃಷ್ಟಿಸಿದ್ದಾರೆ. ಸುಲಭಕ್ಕೆ ಅರ್ಥವಾಗದ ನಿಗೂಢ ಲೋಕವನ್ನು ಹುಟ್ಟಿಸಿದ್ದಾರೆ.

    ಅದೊಂದು ಸ್ವರ್ಗವೂ ಅಲ್ಲದ ನರಕವೂ ಅಲ್ಲದ ಜಾಗ. ಸತ್ತವರೆಲ್ಲರೂ ಅಲ್ಲಿ ಬಂದು ಸೇರುವ ತಾಣ. ಕಂಪನಿ ಸಿಇಓ, ಮನೆಕೆಲಸದಾಕೆ, ಕವಿ, ರೀಲ್ಸ್ ವ್ಯಸನ ಪೀಡಿತೆ, ಕಾಲೇಜಿನ ವಿದ್ಯಾರ್ಥಿನಿ, ವೃದ್ಧ ದಂಪತಿಗಳು, ಮುಸ್ಲಿಂ ಭಯೋತ್ಪಾದಕ, ಸೈನಿಕ, ರಾಜಕಾರಣಿ ಹೀಗೆ ಭೂಲೋಕದಲ್ಲಿ ಯಾವುಯಾವುದೋ ಕಾರಣಕ್ಕೆ ಮರಣ ಹೊಂದಿದವರೆಲ್ಲಾ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಸತ್ತ ನಂತರ ಇಲ್ಲಿಗೆ ಬಂದು ಸೇರಿರುವುದು ತಿಳಿದು ಅಚ್ಚರಿಪಡುತ್ತಾರೆ. ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುತ್ತಾರೆ, ಟೀಕಿಸುತ್ತಾರೆ, ಸತ್ತ ನಂತರವೂ ಬದುಕಿದ್ದಾಗಿನ ಗುಣಾವಗುಣಗಳನ್ನು ವ್ಯಕ್ತಪಡಿಸುತ್ತಾರೆ. ಆಗ ಐವರು ಮನಸಾಕ್ಷಿ ಪಾತ್ರಗಳ ಪ್ರವೇಶವಾಗುತ್ತದೆ. ಮನುಷ್ಯರ ಅಂತರಂಗದೊಳಗಿನ ರಾಗದ್ವೇಷ ಅಸೂಯೆ ಸ್ವಾರ್ಥ ಸಣ್ಣತನಗಳನ್ನು ಬಹಿರಂಗಪಡಿಸುತ್ತವೆ. ಇಲ್ಲಿ ಸಾವಿನಾಚೆಯ ಕಲ್ಪನೆ ಎಂಬುದು ಕೇವಲ ಒಂದು ರೂಪಕ ಎಂಬಂತೆ ನಿರೂಪಣೆಗೊಂಡಿದ್ದು, ಮನುಷ್ಯರ ಮನಸಿನಾಳದ ಮಾಲಿನ್ಯವನ್ನು ರಂಗದಂಗಳದಲ್ಲಿ ತೋರಿಸುವಂತಿದೆ.

    ಈ ನಾಟಕದ ಸ್ಥಾಯಿ ಭಾವ ಹಾಸ್ಯ. ನೋಡುಗರನ್ನು ನಗಿಸುತ್ತಲೇ ಮನುಷ್ಯರ ಮುಖವಾಡಗಳನ್ನು ಕಳಚುತ್ತಾ, ಅಂತರಂಗ ಬಹಿರಂಗಗಳ ನಡುವಿರುವ ಅಪಾರ ಅಂತರವನ್ನು ಅನಾವರಣಗೊಳಿಸಲಾಗಿದೆ. ಬದುಕಿನ ಬಿಡಿ ಬಿಡಿ ಚಿತ್ರಗಳನ್ನು ಸೇರಿಸಿ ಕೊಲ್ಯಾಜ್ ಮಾದರಿಯ ಕ್ಯಾನ್ವಾಸನ್ನು ಜೋಡಿಸುವ ಪ್ರಯತ್ನ ಮಾಡಲಾಗಿದೆ. ಚಿತ್ತ, ಚೇತನ, ಆತ್ಮ, ಸ್ಥೂಲ ದೇಹ, ಸೂಕ್ಷ್ಮ ದೇಹ ಎನ್ನುವ ಪುರೋಹಿತಶಾಹಿ ಕಲ್ಪನೆಗಳನ್ನು ಈ ನಾಟಕ ಪರೋಕ್ಷವಾಗಿ ಪ್ರತಿಪಾದಿಸಿದರೂ ಹಾಸ್ಯದ ಹೊಳೆಯಲ್ಲಿ ಈ ಸ್ಥಾಪಿತ ವೇದಾಂತಗಳೆಲ್ಲಾ ಕೊಚ್ಚಿಹೋಗುವಂತಿದ್ದು ನೋಡುಗರಿಗೆ ಮನರಂಜನೆ ಕೊಡುವಲ್ಲಿ ಈ ನಾಟಕ ಸಫಲವಾಗಿದೆ.
    ಈ ನಾಟಕಕ್ಕೆ ಕಥೆಯ ಚೌಕಟ್ಟಿಲ್ಲ, ನಿರ್ದಿಷ್ಟ ನಾಯಕ, ನಾಯಕಿ, ಖಳನಾಯಕರು ಎಂಬುವವರಿಲ್ಲ. ವ್ಯಕ್ತಿ ಕೇಂದ್ರಿತವೂ ಅಲ್ಲ. ಎಲ್ಲಾ ಪಾತ್ರಗಳೂ ತಮ್ಮಷ್ಟಕ್ಕೆ ತಾವೇ ನಾಯಕ ನಾಯಕಿ ಎಂದುಕೊಂಡವರೇ, ಆದರೆ ಪ್ರತಿಯೊಬ್ಬರಲ್ಲಿರುವ ಖಳನಾಯಕತ್ವವನ್ನು ತೋರುವ ಪ್ರಯತ್ನ ನಾಟಕದ ಉದ್ದೇಶವಾಗಿದೆ.

    ಇದು ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದಿಂದ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾದ ಪ್ರೊಡಕ್ಷನ್ ಆಗಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ನಟಿಸಲು ಪ್ರಾಮುಖ್ಯತೆ ಕೊಡಲಾಗಿದೆ. ಸುಮಾರು 25ರಷ್ಟು ಸಂಖ್ಯೆಯ ರಂಗಾಸಕ್ತ ಯುವಕ ಯುವತಿಯರು ಅಭಿನಯಿಸಿದ್ದು, ನಾಟಕದಾದ್ಯಂತ ಬಹುತೇಕ ಸಮಯ ಎಲ್ಲರೂ ರಂಗವೇದಿಕೆಯ ಮೇಲೆ ಇರುವಂತೆ ಹಾಗೂ ಎಲ್ಲರಿಗೂ ನಟನೆ ಮತ್ತು ಸಂಭಾಷಣೆಯಲ್ಲಿ ಸಮಪಾಲು ಸಿಗುವಂತೆ ನಿರ್ದೇಶಕರು ನಾಟಕವನ್ನು ವಿನ್ಯಾಸಗೊಳಿಸಿದ್ದಾರೆ. ಕೆಲವಾರು ಅನಿರೀಕ್ಷಿತ ತಿರುವುಗಳ ಮೂಲಕ ಅಚ್ಚರಿಯನ್ನೂ ಸೃಷ್ಟಿಸಿದ್ದಾರೆ.

    ನಿರ್ದಿಷ್ಟ ಕಥಾನಕದ ಚೌಕಟ್ಟಿಲ್ಲದೇ ಚಿತ್ತ ಬಂದತ್ತ ಚಲಿಸುವ ಇಂತಹ ನಾಟಕ ಕನ್ನಡ ರಂಗಭೂಮಿಯ ಪ್ರಯೋಗಶೀಲತೆಗೆ ಸಾಕ್ಷಿಯಾಗಿದೆ. ಪಾರಂಪರಿಕ ಕಥಾನಕದ ಚೌಕಟ್ಟನ್ನು ಬಿಟ್ಟಾಕಿ ಕೇವಲ ಇಂಪ್ರೂವೈಜೆಶನ್ ಮಾದರಿಯಲ್ಲಿ ಎಲ್ಲಾ ನಟನಟಿಯರನ್ನೂ ಬಳಸಿಕೊಂಡು ವ್ಯಕ್ತಿಗಳು ಬಚ್ಚಿಡುವ ಸತ್ಯಗಳ ಬಿಚ್ಚಿಡುವ ಪ್ರಯತ್ನ ಮೆಚ್ಚುವಂತಹುದಾಗಿದೆ.

    ಹೀಗೆ ನಾಟಕವೊಂದನ್ನು ವಿಭಿನ್ನವಾಗಿ ನಿರೂಪಿಸುವಾಗ ಕೆಲವು ಗೊಂದಲಗಳೂ ಸೃಷ್ಟಿಯಾಗಿವೆ. ಕೆಲವು ದೃಶ್ಯಗಳು ಸ್ಪಷ್ಟತೆಯನ್ನು ಬಯಸುತ್ತವೆ. ಸಂಕಿರ್ಣವಾದ ಕಾಲ್ಪನಿಕ ವಿಷಯಗಳನ್ನು ಸರಳವಾಗಿ ಹೇಳುವಾಗ ಸಮರ್ಥನೆಗಳೂ ಮುಖ್ಯವಾಗುತ್ತವೆ. ಊಹಾತ್ಮಕ ಸನ್ನಿವೇಶ ಸೃಷ್ಟಿಸಿ ವಾಸ್ತವವನ್ನೇ ಹೇಳುವಾಗ ಬಳಸಿದ ರೂಪಕಗಳು ನೋಡುಗರ ಚಿತ್ತದಲ್ಲಿ ಗೊಂದಲ ಗೋಜಲುಗಳನ್ನು ಹುಟ್ಟಿಸದಂತೆ ನೋಡಿಕೊಳ್ಳಬೇಕಿದೆ. ಮನಸ್ಸಾಕ್ಷಿ ಪಾತ್ರಗಳ ಮಾತುಗಳಲ್ಲಿ ಇನ್ನೂ ಹೆಚ್ಚು ಸ್ಪಷ್ಟತೆಗಳು ಬೇಕಿವೆ. ಅತೀ ಹೆಚ್ಚು ಪಾತ್ರಗಳು ಏಕಕಾಲಕ್ಕೆ ವೇದಿಕೆಯಲ್ಲಿರುವುದರಿಂದ ಕೆಲವೊಮ್ಮೆ ಗುಂಪು ಗೊಂದಲವು ಸೃಷ್ಟಿಯಾಗಿದೆ. ಒಬ್ಬರಿಗೊಬ್ಬರು ಟೀಕಿಸುವ ಸನ್ನಿವೇಶಗಳು ಪ್ರೇಕ್ಷಕರ ಸಹನೆ ಪರೀಕ್ಷಿಸುವಂತಿದ್ದು ಇನ್ನೊಂದಿಷ್ಟು ಎಡಿಟ್ ಮಾಡಬೇಕಿದೆ. ಅತಿಯಾದ ಮಾತುಗಳಿಗೆ ಒಂದಿಷ್ಟು ಮಿತಿ ಹೇರಬೇಕಿದೆ. ಎಲ್ಲಾ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಸಮಾನ ಅವಕಾಶ ಕಲ್ಪಿಸಿರುವುದು ಹಾಗೂ ಹಾಸ್ಯರಸಾಯನದ ಮೂಲಕ ಮನುಷ್ಯರ ನಿಜಬಣ್ಣ ತೋರಿಸುವ ‘ಅನೂಹ್ಯ’ ನಾಟಕದ ಉದ್ದೇಶ ಈಡೇರಿದೆ.

    ವಿಶ್ವನಾಥ ಮಂಡಿಯವರ ರಂಗ ವಿನ್ಯಾಸ ಅತ್ಯಂತ ಸರಳವಾಗಿದ್ದು, ನಟನಟಿಯರಿಗೆ ಆಕ್ಟಿಂಗ್ ಸ್ಪೇಸ್ ಬಿಟ್ಟುಕೊಟ್ಟಿದೆ. ಮನಸ್ಸಾಕ್ಷಿ ಪಾತ್ರಗಳ ವರ್ಣಾಲಂಕಾರ ಮತ್ತು ವಸ್ತ್ರಾಲಂಕಾರ ಆಕರ್ಷಕವಾಗಿವೆ. ಒಂದೇ ವೇದಿಕೆಯಲ್ಲಿ ಬೇರೆ ಬೇರೆ ಸನ್ನಿವೇಶಗಳು ನಡೆಯುವಾಗ ಮಾಡಲಾದ ಲೈಟಿಂಗ್ ಡಿವಿಜನ್ ಡಿಸೈನ್ ನಾಟಕದ ಅಂದ ಹೆಚ್ಚಿಸಿದೆ. ಈ ನಾಟಕಕ್ಕೆ ರಾಘವೇಂದ್ರ ಬಿಜಾಡಿಯವರ ಸಂಯೋಜನೆಯ ಲೈವ್ ಸಂಗೀತ ಹಾಗೂ ಹಾಡುಗಳು ಕೇಳಲು ಸೊಗಸಾಗಿವೆ. ಶೋಭಾ ವೆಂಕಟೇಶರವರ ಪಾತ್ರೋಚಿತ ವಸ್ತ್ರವಿನ್ಯಾಸ, ಎಸ್.ವಿ. ಸುಷ್ಮಾರವರ ಕೋರಿಯೋಗ್ರಾಫಿ ನಾಟಕದ ಚೆಂದವನ್ನು ಹೆಚ್ಚಿಸಿವೆ.

    ನಾಟಕದಲ್ಲಿ ಗಮನ ಸೆಳೆದಿದ್ದು ಸಿಇಓ ಪಾತ್ರದ ಡಾ. ಎಸ್.ವಿ. ಸುಷ್ಮಾ ಹಾಗೂ ಕೆಲಸದಾಕೆಯಾದ ಡಾ. ಬೃಂದಾರವರ ಜುಗುಲ್ ಬಂದಿ ರೀತಿಯ ಅಭಿನಯ. ಪರಸ್ಪರ ಕಾಲೆಳೆದುಕೊಳ್ಳುವ, ಮಾತು ಮಾತಿಗೂ ಡಿಸ್ಕಸ್ಸಿಂಗ್ ಎನ್ನುವ ಈ ಪಾತ್ರಗಳು ಗಮನ ಸೆಳೆಯುತ್ತವೆ. ಉಳಿದೆಲ್ಲಾ ನಟನಟಿಯರೂ ತಮ್ಮ ಪಾತ್ರಗಳನ್ನು ನಿರ್ದೇಶಕರು ಹೇಳಿಕೊಟ್ಟಂತೆ ನಿರ್ವಹಿಸಿದ್ದಾರೆ. ಯುವ ಕಲಾವಿದರು ತಮ್ಮ ಸಂಭಾಷಣೆಗಳಲ್ಲಿ ಸ್ಪಷ್ಟತೆ ಹಾಗೂ ಮಾತಿನ ಏರಿಳಿತಗಳನ್ನು ರೂಢಿಸಿಕೊಂಡರೆ ನಾಟಕ ಇನ್ನೂ ಕಳೆಗಟ್ಟುತ್ತದೆ.

    “ಸತ್ತ ಮೇಲೆ ಬದುಕಬೇಕು, ಸತ್ತಂತೆ ಬದುಕಬೇಕು, ಸಾಯುವವರೆಗೂ ಬದುಕಬೇಕು” ಎನ್ನುವ ಮೂರು ಆಯ್ಕೆಗಳನ್ನು ನಾಟಕ ಆಡುವವರಿಗೆ ಹಾಗೂ ನೋಡುವವರಿಗೆ ಕೊಡುವ ಮೂಲಕ ‘ಅನೂಹ್ಯ’ ನಾಟಕ ಅಂತ್ಯವಾಗುತ್ತದೆ. ಮನುಷ್ಯರಾಗಿ ಹೇಗೆ ಬದುಕಬೇಕು ಹಾಗೂ ಹೇಗೆ ಬದುಕಬಾರದು ಎನ್ನುವ ಸಂದೇಶವನ್ನು ಕೊಡಲಾಗಿದೆ. ಆಯ್ಕೆಯನ್ನು ಪ್ರೇಕ್ಷಕರಿಗೆ ಬಿಡಲಾಗಿದೆ. ಸತ್ತಂತೆ ಇಲ್ಲವೇ ಸಾಯುವವರೆಗೂ ಬದುಕುವುದೇ ಬದುಕಿನ ಗುರಿಯಾಗದೇ ಸಾಧನೆಯ ಮೂಲಕ ಸತ್ತ ಮೇಲೂ ಬದುಕುವಂತೆ ಜೀವನ ರೂಪಗೊಳ್ಳಬೇಕು ಎನ್ನುವುದೇ ಈ ನಾಟಕದ ಆಶಯವಾಗಿದೆ.

    ಶಶಿಕಾಂತ ಯಡಹಳ್ಳಿ, ರಂಗಕರ್ಮಿಗಳು

    article baikady drama review roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಉದ್ಘಾಟನೆಗೊಂಡ ‘ರಂಗಶ್ರೀ-ರಂಗಹಬ್ಬ’
    Next Article ಬೆಂಗಳೂರಿನ ನೃತ್ಯದರ್ಪಣ್ ಅಕಾಡೆಮಿಯಲ್ಲಿ ‘ದೀಪಧಾರಿಣಿ’ | ಮಾರ್ಚ್ 08
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.