Subscribe to Updates

    Get the latest creative news from FooBar about art, design and business.

    What's Hot

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನಾಟಕ ವಿಮರ್ಶೆ | ಮನರಂಜನಾತ್ಮಕ ಮಕ್ಕಳ ನಾಟಕ ‘ಬೆಳಗಿನ ಕನಸು’
    Article

    ನಾಟಕ ವಿಮರ್ಶೆ | ಮನರಂಜನಾತ್ಮಕ ಮಕ್ಕಳ ನಾಟಕ ‘ಬೆಳಗಿನ ಕನಸು’

    February 28, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು ಕೊನೆಯದಾಗಿ ರಚಿಸಿದ ಕಿರು ನಾಟಕ ‘ಬೆಳಗಿನ ಕನಸು’. ಅರವಿಂದ ಕುಪ್ಳೀಕರ್ ರವರು ಕಿರುನಾಟಕವನ್ನು ವಿಸ್ತರಿಸಿ ಪೂರ್ಣಾವಧಿ ನಾಟಕವನ್ನಾಗಿಸಿದ್ದಾರೆ. 50 ವರ್ಷ ತುಂಬಿದ ತಮ್ಮದೇ ‘ಸ್ಪಂದನ’ ತಂಡಕ್ಕೆ ‘ಬೆಳಗಿನ ಕನಸನ್ನು’ ಹಿರಿಯ ರಂಗಕರ್ಮಿ ಬಿ. ಜಯಶ್ರೀಯವರು ನಿರ್ದೇಶಿಸಿದ್ದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ‘ಹೊನ್ನಾರು ರಂಗೋತ್ಸವ’ದಲ್ಲಿ ದಿನಾಂಕ 25 ಫೆಬ್ರುವರಿ 2026ರಂದು ಪ್ರದರ್ಶನಗೊಂಡಿತು.

    ರಂಗತಂಡದವರು ಹೇಳಿಕೊಳ್ಳದೇ ಹೋದರೂ ಇದೊಂದು ಪಕ್ಕಾ ಮಕ್ಕಳ ನಾಟಕ. ದೊಡ್ಡವರು ಮಕ್ಕಳಿಗಾಗಿ ಆಡಿರುವ ಫ್ಯಾಂಟಸಿ ಕಲ್ಪನೆಯ ನಾಟಕ. ಮನುಷ್ಯರ ಅಕ್ರಮ ಸಕ್ರಮ ಸಂಬಂಧಗಳನ್ನು ಪಕ್ಷಿಗಳಿಗೆ ಹೋಲಿಸಿ ಕಟ್ಟಿರುವ ವರ್ಣಮಯ ನಾಟಕ. ಶ್ರೀ ಅರಗಿಣಿಯ ಸಂಗಾತಿಯಾದ ಪದ್ಮಿನಿ ಅರಗಿಣಿಗೆ ಮೈನಾ ಹಕ್ಕಿಯ ಜೊತೆ ಮದುವೆಯಾದಂತೆ ಬೆಳ್ಳಂಬೆಳಿಗ್ಗೆ ಕನಸು ಬೀಳುತ್ತದೆ. ಮೈನಾ ಹಕ್ಕಿಗೂ ಅದೇ ರೀತಿ ಕನಸಾಗುತ್ತದಂತೆ. ಹೀಗಾಗಿ ಇವೆರಡೂ ಸಂಗಾತಿಗಳಾಗಲು ನಿರ್ಧರಿಸುತ್ತವೆ. ಬೆಳಗಿನ ಕನಸು ನನಸಾಗುತ್ತದೆ ಎಂಬುದು ಈ ಪಕ್ಷಿಗಳ ನಂಬಿಕೆ. ತನ್ನ ಸಂಗಾತಿಯನ್ನು ಬಿಟ್ಟು ಕೊಡಲು ಒಪ್ಪದ ಶ್ರೀ ಅರಗಿಣಿ ಕೈಲಾಸಪತಿ ಶಿವನಲ್ಲಿಗೆ ಹೋಗಿ ದೂರು ಸಲ್ಲಿಸುತ್ತದೆ. ವಿಚಾರಣೆ ನಡೆಸಿದ ಶಿವನು “ಬೆಳಗಿನ ಕನಸು ನಿಜವಾಗುತ್ತದೆ. ಆದ್ದರಿಂದ ಪದ್ಮಿನಿ ಗಿಣಿ ಮತ್ತು ಮೈನಾಗಳು ಸತಿ ಪತಿಯರಾಗಬಹುದು” ಎಂದು ತೀರ್ಪು ನೀಡುತ್ತಾನೆ. ಅಲ್ಲಿಯೇ ಮಲಗಿದಂತೆ ನಟಿಸಿದ ಶ್ರೀ ಗಿಣಿ “ತಾನೂ ಬೆಳಗಿನ ಈ ಸಮಯದಲ್ಲಿ ಕನಸೊಂದನ್ನು ಕಂಡೆ. ಮದುವೆ ಮಂಟಪದಲ್ಲಿ ನನ್ನ ವಧುವಾಗಿ ಪಾರ್ವತಿ ಇದ್ದಳು” ಎನ್ನುತ್ತದೆ. ಇದರಿಂದ ಕೋಪಗೊಂಡು ರುದ್ರತಾಂಡವ ಆಡಿದ ಶಿವನು ಕೋಪಶಮನವಾದ ನಂತರ ಶ್ರೀ ಗಿಣಿಯ ಉಪಾಯಕ್ಕೆ ತಲೆದೂಗಿ ಶ್ರೀ ಅರಗಿಣಿ ಹಾಗೂ ಪದ್ಮಿಣಿ ಅರಗಿಣಿ ಇಬ್ಬರೂ ದಂಪತಿಗಳೆಂದೂ ಹಾಗೂ ಮೈನಾಗೆ ಜೋಡಿ ಹೆಣ್ಣು ಮೈನಾ ಎಂದೂ ಇತ್ಯರ್ಥ ಮಾಡಿ ಅಂತಿಮ ತೀರ್ಪು ಪ್ರಕಟಿಸುತ್ತಾನೆ. ನಾಟಕಕ್ಕೊಂದು ಸುಖಾಂತ್ಯ ಕೊಡುತ್ತಾನೆ.

    ಇದು ‘ಬೆಳಗಿನ ಕನಸು’ ನಾಟಕದ ಒಂದೆಳೆ ಕಥೆ. ‘ಬೆಳಗ್ಗೆ ಬಿದ್ದ ಕನಸು ನನಸಾಗುತ್ತದೆ’ ಎಂಬುದು ಜನಜನಿತವಾದ ನಂಬಿಕೆ. ಇದಕ್ಕೆ ಯಾವ ವೈಜ್ಞಾನಿಕ ಸಮರ್ಥನೆಗಳಿಲ್ಲದೇ ಹೋದರೂ, ಯಾವಾಗಲೂ ಬೆಳಿಗ್ಗೆ ಬಿದ್ದ ಕನಸುಗಳು ಸತ್ಯವಾಗದೇ ಹೋದರೂ ಅಂತಹುದೊಂದು ನಂಬಿಕೆ ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಿಕೊಂಡು ಬಂದಿದೆ. ಇದನ್ನೇ ಕೇಂದ್ರವಾಗಿಟ್ಟುಕೊಂಡು ಹಕ್ಕಿಗಳ ಮೂಲಕ ನಾಟಕ ಕಟ್ಟುವ ಪ್ರಯತ್ನವನ್ನು ಮಾಡಲಾಗಿದೆ. ಅದಕ್ಕೆ ಪರಶಿವನನ್ನೇ ತೀರ್ಪುಗಾರನನ್ನಾಗಿಸಲಾಗಿದೆ. ಯಾವಾಗ ತನ್ನ ಬುಡಕ್ಕೆ ಸಮಸ್ಯೆ ಸುತ್ತಿಕೊಂಡಿತೋ, ತನ್ನದೇ ತೀರ್ಪಿನ ಪ್ರಕಾರ ಪತ್ನಿ ಪಾರ್ವತಿಯನ್ನು ಬಿಟ್ಟುಕೊಡಬೇಕಾಗಿ ಬಂತೋ ಆಗ ಎಚ್ಚೆತ್ತುಕೊಂಡ ಬೋಲೇನಾಥನು ತನ್ನದೇ ತೀರ್ಪನ್ನು ಬದಲಾಯಿಸಬೇಕಾಗುತ್ತದೆ. ಬೆಳಗಿನ ಕನಸಿನ ಸುತ್ತ ಹಬ್ಬಿದ ಸುಳ್ಳು ಸಂಕಥನದ ನಂಬಿಕೆಯನ್ನು ತಿರಸ್ಕರಿಸಬೇಕಾಗುತ್ತದೆ.

    ಇಡೀ ನಾಟಕವನ್ನು ಹಾಸ್ಯದ ಮೂಲಕ ಕಟ್ಟಿಕೊಟ್ಟಿದ್ದರಿಂದಾಗಿ ನೋಡುಗರಿಗೆ ಖುಷಿಕೊಡುತ್ತದೆ. ಇಲ್ಲಿ ಪಾತ್ರೋಚಿತ ಅನುಸೂಚಿತ ನಡೆ ನುಡಿ ಬಿಟ್ಟ ಶಿವ, ನಂದಿ ಪಾತ್ರಗಳೂ ಕಾಮಿಡಿ ಪೀಸ್ ಗಳಾಗಿವೆ. ಕಾಮಿಡಿ ಕಿಲಾಡಿಗಳಂತಹ ರಿಯಾಲಿಟಿ ಶೋ ನೋಡಿದಂತೆ ಭಾಸವಾಗುತ್ತದೆ. ಯಾವುದೇ ಲಾಜಿಕ್ ಇಲ್ಲದೇ ಮ್ಯಾಜಿಕ್ ಸೃಷ್ಟಿಸುವಲ್ಲಿ ನಾಟಕ ಸಫಲವಾಗಿದೆ. ನಗಿಸುವುದೊಂದೇ ಈ ನಾಟಕದ ಪರಮ ಗುರಿಯಾಗಿದೆ.

    ಇಲ್ಲಿ ಹಕ್ಕಿಗಳು ಕೇವಲ ಮಾನವ ಪಾತ್ರಗಳ ರೂಪಕ ಮಾತ್ರ. ಮನುಷ್ಯರ ಸಂಬಂಧಗಳು ಪ್ರಮುಖವಾಗಿ ಎರಡು ರೀತಿಯಲ್ಲಿರುತ್ತವೆ. ಒಂದು ಭಾವನಾತ್ಮಕ ಸಂಬಂಧವಾದರೆ ಇನ್ನೊಂದು ಸಾಮಾಜಿಕ ಬಂಧ. ಕೌಟುಂಬಕ ವ್ಯವಸ್ಥೆಯ ಕಟ್ಟುಪಾಡುಗಳು ವೈವಾಹಿಕೇತರ ಪ್ರೇಮ ಸಂಬಂಧಗಳನ್ನು ಮಾನ್ಯ ಮಾಡುವುದಿಲ್ಲ. ಆದರೆ ಮನಸ್ಸು ಯಾರ ಹಿಡಿತದಲ್ಲೂ ಇರುವುದಿಲ್ಲ. ತನ್ನ ಸಂಗಾತಿಯನ್ನು ಬಿಟ್ಟು ಬೇರೆಯವರನ್ನು ಪ್ರೀತಿಸಲು ವ್ಯವಸ್ಥೆ ಅನುಮತಿಸುವುದಿಲ್ಲ. ಇಲ್ಲಿ ಮದುವೆಯಾದ ಹೆಣ್ಣು ಗಿಣಿ ಗಂಡನನ್ನು ಬಿಟ್ಟು ಮೈನಾವನ್ನು ಪ್ರೀತಿಸುವುದನ್ನು ಸಮಾಜ ಒಪ್ಪಲಾರದು ಎನ್ನುವ ಕಾರಣಕ್ಕೆ ಪರಸ್ಪರ ಪ್ರೀತಿಸಿದ ಪದ್ಮಿಣಿ ಗಿಣಿ ಹಾಗೂ ಮೈನಾ ಹಕ್ಕಿಗಳು ಬೆಳಗಿನ ಕನಸು ನಿಜವೆಂಬ ನಂಬಿಕೆಯನ್ನೇ ಮುಂದೆ ಮಾಡಿ ಜೊತೆ ಇರಲು ಬಯಸುತ್ತವೆ. ಆದರೆ ಗಂಡು ಗಿಣಿ ದೇವರ ಮೊರೆಹೋಗುತ್ತದೆ. ಮೊದಲು ಪರಶಿವ ಈ ಪ್ರೇಮಿಗಳ ಸಂಬಂಧವನ್ನು ಒಪ್ಪಿಕೊಂಡರೂ ತನ್ನ ಪತ್ನಿ ಪಾರ್ವತಿಯ ಪ್ರಶ್ನೆ ಬಂದಾಗ ನಿರಾಕರಿಸಿ ದಾಂಪತ್ಯದ ಯಥಾ ಸ್ಥಿತಿ ಕಾಪಾಡಿಕೊಂಡು ಹೋಗುವ ತೀರ್ಪು ನೀಡುತ್ತದೆ. ಈ ನಾಟಕದಲ್ಲೂ ಪ್ರೇಮಕ್ಕೆ, ಪ್ರೇಮಿಗಳಿಗೆ ಸೋಲಾಗುತ್ತದೆ. ಸಾಮಾಜಿಕ ಕಟ್ಟುಪಾಡು ಗೆಲ್ಲುತ್ತದೆ.

    ಸೂಕ್ಷ್ಮವಾಗಿ ಗಮನಿಸಿದರೆ ಈ ನಾಟಕದಲ್ಲಿ ಜಾತಿ ಪ್ರಶ್ನೆಯೂ ಪರೋಕ್ಷವಾಗಿ ಗಮನಕ್ಕೆ ಬರುತ್ತದೆ. ಯಾಕೆಂದರೆ ಇಲ್ಲಿ ಗಿಣಿ ಮತ್ತು ಮೈನಾ ಹಕ್ಕಿಗಳೇ ಆದರೂ ರೂಪ ಆಕಾರ ಪ್ರಕಾರಗಳಿಂದ ಭಿನ್ನವಾಗಿವೆ. ಬೇರೆ ಜಾತಿಗಳಿಗೆ ಸೇರಿದವುಗಳಾಗಿವೆ. ಆದರೆ ಭಿನ್ನ ಜಾತಿಯ ಗಂಡು ಹೆಣ್ಣು ಪರಸ್ಪರ ಪ್ರೀತಿಸಿ ಒಂದಾಗ ಬಯಸಿದರೆ ಸಮಾಜ ಒಪ್ಪಲಾರದು. ಅನ್ಯ ಜಾತಿಯ ವಿವಾಹೇತರ ಸಂಬಂಧಗಳಂತೂ ನಿಷಿದ್ದ. ಆದರೂ ಪ್ರೀತಿಸಿ ಮದುವೆಯಾದ ಪರಶಿವನು ಭಿನ್ನ ಜಾತಿಯ ಪಕ್ಷಿಗಳ ಪ್ರೀತಿಯನ್ನು ಒಪ್ಪಿ ತೀರ್ಪು ನೀಡುತ್ತಾನೆ. ಆದರೆ ನಂತರ ಹೆಂಡತಿಯನ್ನು ಕಳೆದುಕೊಂಡ ಗಂಡು ಗಿಣಿಯ ತಂತ್ರಗಾರಿಕೆಯ ಒತ್ತಡಕ್ಕೆ ಸಿಲುಕಿದ ಶಿವನೇ ತನ್ನ ತೀರ್ಪು ಬದಲಾಯಿಸಿ ಸ್ವಜಾತಿ ದಾಂಪತ್ಯ ಸಂಬಂಧವನ್ನೇ ಸ್ಥಾಪಿಸುತ್ತಾನೆ. ಪ್ರೀತಿಸಿದ ಜೀವಿಗಳನ್ನು ದೂರ ಮಾಡುತ್ತಾನೆ. ಇಲ್ಲಿ ಭಾವನಾತ್ಮಕ ಸಂಬಂಧಕ್ಕಿಂತಾ ಸ್ವಜಾತಿಯ ಸಾಮಾಜಿಕ ಬಂಧವೇ ಕಾನೂನುಬದ್ದ ಎನ್ನುವುದನ್ನು ಸಮರ್ಥಿಸಿಕೊಳ್ಳಲಾಗಿದೆ. ಇದೇ ನಾಟಕದ, ನಾಟಕಕಾರರ, ನಿರ್ದೇಶಕರ ಆಶಯವೂ ಆಗಿದೆ. ಮನುಷ್ಯರ ಮೇಲೆ ವಿಧಿಸಲಾದ ಸಾಮಾಜಿಕ ನೀತಿ ನಿಯಮ ನಿಯಂತ್ರಣಗಳನ್ನು ಆ ದೇವರೇ ಇಚ್ಛಿಸಿದರೂ ಬದಲಾಯಿಸಲಾಗುವುದಿಲ್ಲ ಎಂಬುದನ್ನು ಈ ನಾಟಕ ಹೇಳುತ್ತದೆ. ಹಕ್ಕಿಗಳ ರೂಪಕದ ಮೂಲಕ ಮಕ್ಕಳ ಮನಸಲ್ಲಿ ಇಂತಹುದನ್ನೇ ಬಿತ್ತಲು ಪ್ರಯತ್ನಿಸುತ್ತದೆ.

    ಹಿಡನ್ ಅಜೆಂಡಾ ಏನೇ ಇರಲಿ, ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡ ಈ ನಾಟಕ ವರ್ಣರಂಜಿತವಾಗಿ ಮೂಡಿ ಬಂದಿದೆ. ಸರಳವಾದ ರಂಗವಿನ್ಯಾಸ ಸೊಗಸಾಗಿದೆ, ರಾಮಕೃಷ್ಣ ಬೆಳ್ತೂರರವರ ವರ್ಣಾಲಂಕಾರ ಹಾಗೂ ಮುಖವಾಡಗಳ ವಿನ್ಯಾಸ ಅತ್ಯಂತ ಆಕರ್ಷಣೀಯವಾಗಿದೆ. ಪ್ರತಿಯೊಬ್ಬ ಕಲಾವಿದರ ಅಭಿನಯ ನೋಡುವುದೇ ಚೆಂದ. ಹಿರಿಯ ನಟ ರಮೇಶ್ ಪಂಡಿತರವರ ಮಾತು ಹಾಗೂ ಶಿವನ ಪಾತ್ರದಲ್ಲಿ ಅಭಿನಯಿಸಿದ ಅವರ ಮಗಳಾದ ಶ್ರೀಯಾ ಪಂಡಿತ್ ನಟನೆ ಇಡೀ ನಾಟಕದ ಹೈಲೈಟ್ ಆಗಿದೆ. ಹಾಸ್ಯ ಪ್ರಧಾನ ನಾಟಕಗಳ ಸಂಭಾಷಣೆಗಳಲ್ಲಿ ಟೈಮಿಂಗ್ ಹಾಗೂ ಪಂಚಿಂಗ್ ಬಹಳ ಮುಖ್ಯವಾಗಿರುತ್ತದೆ. ಇವೆರಡನ್ನೂ ಪ್ರತಿಯೊಬ್ಬ ಪಾತ್ರಧಾರಿಯೂ ಸಮರ್ಥವಾಗಿ ಬಳಸಿದ್ದರಿಂದಾಗಿ ಪ್ರದರ್ಶನ ಪರಿಣಾಮಕಾರಿಯಾಗಿ ಮೂಡಿಬಂದಿದೆ.

    ನಿರ್ದೇಶಕರು ನಿಗದಿಪಡಿಸಿದ ಮ್ಯಾಜಿಕಲ್‌ ದೃಶ್ಯಗಳ ಬ್ಲಾಕಿಂಗ್, ಪಾತ್ರಧಾರಿಗಳ ಪ್ಲೇಸ್ಮೆಂಟ್ ಮತ್ತು ಮೂವ್‌ಮೆಂಟ್ ಗಳು ನೋಡುಗರನ್ನು ಸೆಳೆಯುವಂತಿವೆ. ಅತ್ಯಂತ ಸರಳ ಕಥೆಯ ಎಳೆಯನ್ನಿಟ್ಟುಕೊಂಡು ಫ್ಯಾಂಟಸಿ ಲೋಕವನ್ನು ಕಟ್ಟಿಕೊಟ್ಟ ನಿರ್ದೇಶಕಿ ಬಿ. ಜಯಶ್ರೀಯವರಿಗೆ ಅಭಿನಂದನೆಗಳು. ಈ ನಾಟಕ ಏನನ್ನೂ ಹೇಳದೇ ಹೋದರೂ, ಯಾವುದೇ ಸಂದೇಶವನ್ನು ಕೊಡದೇ ಹೋದರೂ ಕಣ್ಮನ ಸೆಳೆಯುವಲ್ಲಿ, ನಗುವಿನ ಹೊನಲು ಹರಿಸುವಲ್ಲಿ, ನೋಡಿದವರ ಮನ ರಂಜಿಸುವಲ್ಲಿ ಯಶಸ್ವಿಯಾಗಿದೆ. ಮಕ್ಕಳ ಮನಸ್ಸನ್ನು ಸೂರೆಗೊಳ್ಳುವಂತೆ ಮಾಂತ್ರಿಕ ದೃಶ್ಯ ಸೃಷ್ಟಿಸುವಲ್ಲಿ ಸಫಲವಾಗಿದೆ.

    ವಿಮರ್ಶಕರು : ಶಶಿಕಾಂತ ಯಡಹಳ್ಳಿ, ರಂಗಕರ್ಮಿಗಳು

    article baikady drama review roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಹರಿಹರಪುರದಲ್ಲಿ ‘ಜಾಬಾಲಿ – ನಂದಿನಿ’ ಯಕ್ಷಗಾನ ತಾಳಮದ್ದಳೆ
    Next Article ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ : ಸಾಹಿತ್ಯ ಸ್ಪರ್ಧೆಗಳ ವಿಜೇತರು
    roovari

    Add Comment Cancel Reply


    Related Posts

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026

    ‘ಜನಪ್ರಿಯ ವಿಜ್ಞಾನ ಪುಸ್ತಕ ಪ್ರಶಸ್ತಿ’ಗೆ ಕನ್ನಡ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 2026

    July 11, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.