ದಶಕಗಳ ಹಿಂದೆ, ಅನಂತಮೂರ್ತಿಯವರ ‘ಸೂರ್ಯನ ಕುದುರೆ’ ಕಥೆಯನ್ನು ದೀಪಾವಳಿ ಸಂಚಿಕೆಯಲ್ಲಿ ಓದಿದ್ದರ ನೆನಪು. ಮೊದಲ ಓದಿಗೆ ಅಷ್ಟು ದಕ್ಕಲಿಲ್ಲವಾದರೂ, ನಂತರದ ಹಲವು ಓದುಗಳಿಂದ ಅದರ ಧ್ವನಿ ಮತ್ತು ಭಾಷೆಯ ಸೌಂದರ್ಯವನ್ನು ಸ್ವಲ್ಪ ತಿಳಿಯುವಂತಾಯಿತು. ಹೀಗಾಗಿ ಪರಿವರ್ತನ ತಂಡ ಈ ಕಥೆಯ ನಾಟಕ ರೂಪವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ತಿಳಿದಾಗ ಹೆಚ್ಚು ಕುತೂಹಲ ಉಂಟಾಗಿತ್ತು.
ಕಥೆ ಅಥವಾ ಕಾದಂಬರಿಯನ್ನು ನಾಟಕವಾಗಿಸಲು ಹೊರಟಾಗ ಸಾಮಾನ್ಯವಾಗಿ ಎದುರಾಗುವ ಸಮಸ್ಯೆಗಳಲ್ಲಿ ಎರಡು ಮುಖ್ಯವಾದವು – ಪರಿಸರದ ವಿವರಗಳನ್ನು ನಾಟಕದಲ್ಲಿ ಹೇಗೆ ತರುವುದು ಎಂಬುದು ಒಂದಾದರೆ, ನಿರೂಪಕನ ಅಥವಾ ಇತರರ ಸೈಂಧಾತಿಕ ಮತ್ತು ತಾತ್ವಿಕ ಆಯಾಮಗಳನ್ನು ಮತ್ತು ಅವರ ಮನಸ್ಸಿನಲ್ಲಿ ಮೂಡುವ ತಲ್ಲಣಗಳನ್ನು ಸಂಭಾಷಣೆಯ ಮೂಲಕವೇ ಪ್ರೇಕ್ಷಕರಿಗೆ ತಲುಪಿಸುವುದು ಹೇಗೆ ಎನ್ನುವುದು. ಈ ಎರಡೂ ಆಯಾಮಗಳಲ್ಲೂ ಈ ನಾಟಕ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ ಎನ್ನಬಹುದು.

ಅನಂತು ಪಾತ್ರಧಾರಿ ರವಿತೇಜ, ಆ ಪಾತ್ರಕ್ಕೆ ತಕ್ಕುದಾದ ಗಾಂಭೀರ್ಯ ಮತ್ತು ಚಿಕ್ಕಂದಿನ ಗೆಳೆಯನೊಂದಿಗೆ ಇರಬೇಕಾದ ಸಲಿಗೆಯ ಎರಡು ಧ್ರುವಗಳನ್ನು ಪ್ರೇಕ್ಷಕರಿಗೆ ತೋರಿಸುವಲ್ಲಿ ಯಶಸ್ವಿಯಾದರು. ಅನಂತು ಪಾತ್ರ ನಾಟಕದ ಉದ್ದಕ್ಕೂ ತನ್ನ ತುಮುಲಗಳನ್ನು ಶಿಷ್ಟ ಭಾಷೆಯಲ್ಲಿ ವ್ಯಕ್ತಪಡಿಸುವ ದೃಶ್ಯಗಳು ಒಟ್ಟು ನಾಟಕದ ಹೊರಗೇ ನಿಂತುಬಿಟ್ಟವು ಎನ್ನಿಸುತು. ಹಡೆ ವೆಂಕಟನ ವ್ಯಕ್ತಿತ್ವಕ್ಕೂ, ಅನಂತನ ತುಮುಲಗಳಿಗೂ ಇರುವ common ಭೂಮಿಕೆ ಯಾವುದಿರಬಹುದು ಎಂಬ ಪ್ರಶ್ನೆ ನನ್ನನ್ನು ಕಾಡಿತು. ಆ ತುಮುಲಗಳು ಇಲ್ಲ ಎಂದಾಗಲೀ, ಅವುಗಳನ್ನು ವ್ಯಕ್ತಪಡಿಸಿರುವ ಭಾಷೆ ಮತ್ತು ನಟನೆ ಸೂಕ್ತವಾಗಿರಲಿಲ್ಲ ಎಂದಲ್ಲ. ಆದರೆ, ಅವುಗಳ ನಡುವೆ ಸಾವಯಯ ಸಂಬಂಧವಿಲ್ಲದಿರುವುದು ಮತ್ತೆ ಮತ್ತೆ ಕಾಣುತ್ತಿತ್ತು.
ಇಡೀ ನಾಟಕದಲ್ಲಿ ನಟನೆಯಲ್ಲಿ ಎದ್ದು ಕಾಣುತ್ತಿದ್ದುದು ರುಕ್ಕು ಮತ್ತು ಸುಬ್ಬು ಪಾತ್ರ. ತಮಗೆ ಸಿಕ್ಕ ಅವಕಾಶವನ್ನು ಇಬ್ಬರೂ ಅನುಭವಿಸಿ ನಮ್ಮ ಮುಂದೆ ಇರಿಸಿದರು. ಬಂದ ಅತಿಥಿಯ ಮುಂದೆ ಕುಟುಂಬದ ಸಮಸ್ಯೆಯನ್ನು ಹೇಳುವಾಗ ಅನುಭವಿಸುವ ಇಬ್ಬಂದಿ ಮತ್ತು ತನ್ನ ಗಂಡನ ಅಸಡ್ಡೆಯ ಬಗ್ಗೆ ಮಾತನಾಡಲೇಬೇಕಾದ ಅಗತ್ಯ – ಈ ಎರಡೂ ಭಾವನೆಗಳು ಕ್ಷಣ ಮಾತ್ರದಲ್ಲಿ ಬದಲಾಗುವುದನ್ನು ದೀಪಾ ಸೊಗಸಾಗಿ ಅಭಿನಯಿಸಿದರು. ಇವೆಲ್ಲವೂ ಮಾತಿನಿಂದ ಮಾತ್ರ ವ್ಯಕ್ತವಾಗದೇ, ದೇಹ ಭಾಷೆ, ಕಣ್ಣಿನ ಚಲನೆ ಇವುಗಳಿಂದಲೂ ವ್ಯಕ್ತವಾಗುತ್ತಿತ್ತು. ಸುಬ್ಬು ಪಾತ್ರ ಮಾಡಿದ ಪರಮ್ ವ್ಯಗ್ರನಾಗಿ ತಂದೆಯ ಮೇಲೆ ಕೈ ಮಾಡುವಾಗ ಮತ್ತು ತಾನು ಊರು ಬಿಟ್ಟುಹೋಗುತ್ತೇನೆ ಎಂದು ನುಡಿಯುವಾಗ ತೋರಿದ ಸಿಟ್ಟು, ಆ ಸಂದರ್ಭದಲ್ಲಿ ಆಡಿದ ಮಾತು ಇವೆಲ್ಲ ಒಟ್ಟಾಗಿ ದೃಶ್ಯ ಕಟ್ಟುವಲ್ಲಿ ಸಫಲವಾಯಿತು. ಇನ್ನು ಉಳಿದಂತೆ, ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಪಾತ್ರೋಚಿತವಾಗಿ ನಟಿಸಿದರು. ವೆಂಕಟ, ಅನಂತು, ರುಕ್ಕು ಮತ್ತು ಸುಬ್ಬು ಪಾತ್ರ ಬಿಟ್ಟರೆ, ಇನ್ನೆಲ್ಲ ಪಾತ್ರಗಳೂ ಪಾತ್ರ ಪೋಷಣೆಯಿಲ್ಲದೆ ಸೊರಗಿದವು ಎನ್ನಬೇಕಾಗುತ್ತದೆ. ಕಥೆಯಲ್ಲಿ ಇರುವ ಪಾತ್ರಗಳೆಲ್ಲವೂ ರಂಗದ ಮೇಲೆ ಇರಬೇಕೇ ಎನ್ನುವ ಮೂಲ ಪ್ರಶ್ನೆ ಇಲ್ಲಿಯೂ ಸಲ್ಲುತ್ತದೆ.

ಹಡೆ ವೆಂಕಟನಿಗೆ ಇರಬೇಕಾದ ಉಡುಪು, ಹಾವ ಭಾವ, ಚಲನೆ, ಕೊಂಚ ಉಡಾಫೆ ಮತ್ತು ನಿರುಮ್ಮಳ ಪ್ರೀತಿ – ಇವೆಲ್ಲವನ್ನೂ ರವಿಕುಮಾರ್ ಆವಿರ್ಭಸಿಕೊಂಡಿದ್ದರು. ಅವರ ಆಡಿದ ಎಲ್ಲ ಮಾತುಗಳೂ ಪ್ರೇಕ್ಷಕರಿಗೆ ತಲುಪುವ ಹಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಮತ್ತೆ ಮತ್ತೆ ಕೇಳಿಕೊಳ್ಳುವ ಹಾಗಾಯಿತು.

ಈ ನಾಟಕವನ್ನೂ ಒಳಗೊಂಡಂತೆ ನನ್ನನ್ನು ಹಲವಾರು ಬಾರಿ ಕಾಡುತ್ತಿರುವ ಪ್ರಶ್ನೆ, ಎಂಥ ಭಾಷೆಯನ್ನು ನಾವು ಆಡಬೇಕು ಎನ್ನುವುದು. ಮತ್ತು ನಾಟಕದುದ್ದಕ್ಕೂ ಅದರ consistency ಯನ್ನು ಕಾಪಾಡಿಕೊಂಡು ಬರುವುದು ಹೇಗೆ ಎನ್ನುವ ಪ್ರಶ್ನೆ. ನಾಟಕದ ಪಠ್ಯವನ್ನೇ ಯಥಾವತ್ತಾಗಿ ಹೇಳಿದರೆ, ಅದು ತುಂಬ ಕೃತಕ ಎನ್ನಿಸಬಹುದು. ಆದರೆ, ಕೆಲವೊಂದು ಬಾರಿ ಅಂಥ ಕೃತಕತೆಯೇ ನಾಟಕಕ್ಕೆ ಬೇಕಾಗಬಹುದು. ಉದಾಹರಣೆಗೆ, ಸ್ವಗತ ಅಥವಾ ಪ್ರೇಕ್ಷಕರನ್ನು ಉದ್ದೇಶಿಸಿ ಯಾವುದೋ ಸೈದ್ಧಾಂತಿಕ ನೆಲೆಯನ್ನು ವಿವರಿಸುವ ಮಾತುಗಳು. ಆದರೆ, ಇಬ್ಬರ ಸಂಭಾಷಣೆ ಇರುವ ಕಡೆ, ಪುಸ್ತಕದ ಭಾಷೆ ಕೃತಕವಾಗುತ್ತದೆ. ಇಂತಹ consistency ಯ ಅಭಾವ ಈ ನಾಟಕದಲ್ಲೂ ಕಾಣಿಸಿತು.

ಅನಂತಮೂರ್ತಿ ಅವರ ಕವಿತೆ ‘ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ’ಯನ್ನು ಬಳಸಿಕೊಂಡರೂ, ಅದು ನಾಟಕಕ್ಕೆ ಪೂರಕ ಎನಿಸಲಿಲ್ಲ. ಅದೇ ರೀತಿ ನಾಟಕದ ಮೊದಲು ಹಾಡುವ ‘ಕೊಡೆ ಕೊಡೆ’ ಹಾಡು. ಬೆಳಕು ಮತ್ತು ಸಂಗೀತ ನಾಟಕಕ್ಕೆ ಪೂರಕವಾಗಿದ್ದರೂ ಅವು ನಾಟಕದ ಹೊರಗೆ ನಿಂತು ಕೆಲಸ ಮಾಡುತ್ತಿದ್ದ ಅನುಭವ ಆಯಿತು. ಬೆಳಕಿನ ಜವಾಬ್ದಾರಿಯನ್ನು ವಹಿಸಿರುವರು ಮತ್ತು ನಟರ ಮಧ್ಯೆ ಇರಬೇಕಾದ ಪಾಲುದಾರಿಕೆಯ ಅಭಾವ ಈ ಪ್ರದರ್ಶನದಲ್ಲಿ ಅಲ್ಲಲ್ಲಿ ಢಾಳವಾಗಿ ಕಂಡಿತು.

ಇಡೀ ನಾಟಕದಲ್ಲಿ ಸೋತಿದ್ದು ಎಂದರೆ, ಧ್ವನಿವರ್ಧಕದ ವ್ಯವಸ್ಥೆ. ಪಾತ್ರಧಾರಿಗಳು ಯಾವುದೋ ಒಂದು ಸ್ಥಳದಲ್ಲಿ ನಿಂತರೆ ಮಾತ್ರ ಅವರ ಮಾತು ಸ್ಪಷ್ಟವಾಗಿ ಕೇಳುತ್ತಿತ್ತು. ರಮಾಗೋವಿಂದ ರಂಗಮಂದಿರದಲ್ಲಿ ಇರುವ ಧ್ವನಿವ್ಯವಸ್ಥೆಯನ್ನೇ ಬಳಸಿಕೊಳ್ಳುವ ಮಿತಿ ಇದ್ದುದರಿಂದ ಹೀಗಾಯಿತೋ, ಪ್ರದರ್ಶನದ ಮೊದಲು ಟೆಸ್ಟ್ ಮಾಡಿಕೊಳ್ಳಲು ಸಮಯ ಸಾಕಾಗಲಿಲ್ಲವೋ – ಕಾರಣ ಏನೇ ಇರಬಹುದು. ಇದು ನಾಟಕದ ಒಟ್ಟು ಆಸ್ವಾದನೆಗೆ ಅಡ್ಡಿ ಬಂದಿತೆಂಬುದಂತೂ ಸತ್ಯ. ಮುಖ್ಯವಾಗಿ ಹಡೆ ವೆಂಕಟನ ಪಾತ್ರಧಾರಿ ರವಿಕುಮಾರ್ ಅವರ ಮಾತುಗಳು ರಂಗಮಂಚದ ಹಲವು ಭಾಗಗಳಿಂದ ಕೇಳುತ್ತಲೇ ಇರಲಿಲ್ಲ. ನುರಿತ ನಟ ರವಿಕುಮಾರ್ ಅವರ ದೇಹ ಭಾಷೆ, ಚಲನವಲನ, ಹಡೆ ವೆಂಕಟನನ್ನು ಆಹ್ವಾನಿಸಿಕೊಂಡ ಹಾಗಿತ್ತಾದರೂ, ಮಾತು ಕೇಳಲಿಲ್ಲವಾದ್ದರಿಂದ, ಒಟ್ಟು ಪರಿಣಾಮಕ್ಕೆ ತೀವ್ರ ತೊಂದರೆ ಉಂಟು ಮಾಡಿತು. ಇದು ನಾಟಕ ಪ್ರದರ್ಶಿಸುವ ತಂಡದ ಜವಾಬ್ದಾರಿ ಮಾತ್ರವಲ್ಲ, ರಂಗಮಂದಿರದ ಜವಾಬ್ದಾರಿಯೂ ಆಗಿದೆ. ರಮಾಗೋವಿಂದ ರಂಗಮಂದಿರ ಮೈಸೂರಿನ ಖಾಸಗಿ ರಂಗಮಂದಿರಗಳಲ್ಲಿ ತುಂಬ ಪ್ರಮುಖವಾದದ್ದು ಮತ್ತು ಎಲ್ಲರಿಗೂ ಕೈಗೆಟುಕುವ ಹಾಗೆ ನಿರ್ಮಾಣಗೊಂಡಿದೆ. ಆದರೆ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಸರಿ ಇಲ್ಲದಿದ್ದರೆ, ಇಂತಹ ಸೂಕ್ಷ್ಮ ಸಂವೇದನೆ ಇರುವಂಥ ನಾಟಕಗಳನ್ನು ನೋಡುವ ವಾತಾವರಣವೇ ಇಲ್ಲದಂತಾಗುತ್ತದೆ. ಇಂಥ ವ್ಯವಸ್ಥೆ ಒಂದು ಬಾರಿ ಮಾಡಿಬಿಟ್ಟರೆ ಸಾಕಾಗುವುದಿಲ್ಲ. ಅದರ maintenance ನ್ನು ನಿರಂತರವಾಗಿ ಮಾಡಬೇಕಾಗುತ್ತದೆ. ವಿಶ್ವದ ಅನೇಕ ರಂಗಮಂದಿರಗಳಲ್ಲಿ ಇಂಥ technical ವ್ಯವಸ್ಥೆಗಳನ್ನು ಕಲ್ಪಿಸುವ ಮತ್ತು ನಿರಂತರವಾಗಿ maintain ಮಾಡುವ ಸಂಸ್ಕೃತಿ, ನಮ್ಮಲ್ಲೂ ಬರುವ ದಿನಗಳಿಗಾಗಿ ಕಾಯುತ್ತಿದ್ದೇನೆ.

ಒಳ್ಳೆಯ ಕಥೆಯನ್ನು ರಂಗಕ್ಕೆ ತರುವ ಸಾಹಸ ಮಾಡಿದ ಪರಿವರ್ತನ ತಂಡಕ್ಕೆ ಶುಭಾಶಯಗಳು. ಮೊದಲ ಪ್ರದರ್ಶನದಲ್ಲಿ ಕಂಡ ಕೆಲವು ಕೊರತೆಗಳನ್ನು ನೀಗಿಕೊಂಡು ಈ ನಾಟಕ ಹಲವು ಪ್ರದರ್ಶನ ಕಾಣಲಿ ಎಂದು ಹಾರೈಸುತ್ತೇನೆ.

ವಿಮರ್ಶಕರು : ಶಶಿಧರ್ ಡೋಂಗ್ರಿ
