Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನಾಟಕ ವಿಮರ್ಶೆ | ಸಾಮಾಜಿಕ ವ್ಯಾಧಿಗೆ ರಂಗಭೂಮಿಯ ಚುಚ್ಚುಮದ್ದು
    Article

    ನಾಟಕ ವಿಮರ್ಶೆ | ಸಾಮಾಜಿಕ ವ್ಯಾಧಿಗೆ ರಂಗಭೂಮಿಯ ಚುಚ್ಚುಮದ್ದು

    June 26, 2026No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸ್ವಾತಂತ್ರ್ಯದ ಓಟ ನಮ್ಮ ಒಳಗಿನ ತುಮುಲಗಳಿಗೆ ಸ್ಪಂದಿಸಿ ಸಾಂತ್ವನ ನೀಡುವ ಕಲಾಭಿವ್ಯಕ್ತಿ

    ರಂಗಭೂಮಿಯನ್ನು ಸಾಮಾನ್ಯ ಕಲಾ ಸಂಕಥನಗಳಲ್ಲಿ ಸಂವಹನ-ದೃಶ್ಯ ಕಲೆ ಅಥವಾ ಪ್ರದರ್ಶನ ಕಲೆ ಎಂದು ಗುರುತಿಸಲಾಗುತ್ತದೆ. ಸಮಕಾಲೀನ ಸನ್ನಿವೇಶದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಇದನ್ನು ಚಿಕಿತ್ಸಕ ಕಲೆ ಎಂದೂ ನಿರ್ವಚಿಸಬಹುದು. ಭಾರತ ಸಾಗುತ್ತಿರುವ ಹಾದಿ ಮತ್ತು ವಿಕಸಿತ ಭಾರತದ ಆತ್ಯಂತಿಕ ಗುರಿಯನ್ನು ಗಮನಿಸಿದಾಗ, 50 ವರ್ಷಗಳ ಹಿಂದೆ ಇದ್ದಂತಹ ಭಾರತ ಇಂದು ಬಹುಮಟ್ಟಿಗೆ ಕಾಣದಂತಾಗಿರುವುದು ಆತಂಕ ಹುಟ್ಟಿಸುತ್ತದೆ. ಬದಲಾವಣೆ ಅನಿವಾರ್ಯ (Change is inevitable) ಎಂಬ ಸೂತ್ರ ಸಾರ್ವತ್ರಿಕವಾದರೂ, ಬದಲಾವಣೆಯ ಗಾಳಿ ಎತ್ತ ಕಡೆ ಬೀಸುತ್ತಿದೆ ಎಂಬ ಪ್ರಶ್ನೆಗೆ ಏಕರೂಪದ ಉತ್ತರ ಕಾಣುವುದಿಲ್ಲ. ಭಾರತ ಬದಲಾಗುತ್ತಿದೆ ನಿಜ ಆದರೆ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಕಂಡಂತಹ ಎಲ್ಲ ಕನಸುಗಳನ್ನೂ ಸುಟ್ಟು ಹೊಸ ರೂಪ ಪಡೆದುಕೊಳ್ಳುತ್ತಿದೆ.

    ಈ ಭಸ್ಮದಿಂದ ಹೊಸ ಕನಸುಗಳನ್ನು ಹೊತ್ತ ನವ ಭಾರತ ಉರಿದೆದ್ದು ನಿಲ್ಲಬೇಕಿದೆ. ಮನುಜ ಸಂಬಂಧಗಳು, ಲಿಂಗ ಸೂಕ್ಷ್ಮತೆ, ಸೌಹಾರ್ದ-ಸಮನ್ವಯತೆ, ಬಂಧುತ್ವ ಈ ಎಲ್ಲ ಔದಾತ್ಯಗಳನ್ನು ಬೂದಿಯ ರಾಶಿಯೊಳಗಿಂದ ಮರುಸೃಷ್ಟಿಸುವ ಒಂದು ಸನ್ನಿವೇಶ ಎದುರಾಗಬಹುದು. ಈಗ ಅರೆ ಭಗ್ನಾವಸ್ಥೆಯಲ್ಲಿರುವ ಭಾರತೀಯ ಸಮಾಜ ತಾನು ಹಂತಹಂತವಾಗಿ ಕಳೆದುಕೊಳ್ಳುತ್ತಿರುವ ಮಾನವೀಯ ಮೌಲ್ಯಗಳನ್ನು ಕಾಪಿಟ್ಟುಕೊಳ್ಳುವ ಬಗೆ ಹೇಗೆ? ಅಧಿಕಾರ ರಾಜಕಾರಣವನ್ನು ಮೂಲೆಗೊತ್ತಿ ನೋಡಿದಾಗ ನಮಗೆ ಗೋಚರಿಸುವುದು ದಾರ್ಶನಿಕರು ಬಿಟ್ಟುಹೋದ ಹಾದಿಗಳು ಮತ್ತು ಸಮಕಾಲೀನ ಸಮಾಜದ ಸಾಹಿತ್ಯ-ಕಲಾಭಿವ್ಯಕ್ತಿಗಳು ಮಾತ್ರ. ಇವೆರಡರ ಪೈಕಿ ರಂಗಭೂಮಿ ಹೆಚ್ಚು ಸಶಕ್ತ, ಸ್ವಾಯತ್ತ, ಸೃಜನಶೀಲ ಅಭಿವ್ಯಕ್ತಿಯಾಗಿ ಕಾಣುತ್ತದೆ.

    ನಿರಂತರವಾಗಿ ಕರಗಿಹೋಗುತ್ತಿರುವ ಮನುಜ ಸಂವೇದನೆ ಮತ್ತು ಈ ಔದಾತ್ಯದ ತಾತ್ವಿಕ ಅಡಿಪಾಯಗಳಾದ ಸಮನ್ವಯ, ಸೌಹಾರ್ದತೆ ಹಾಗೂ ಬಂಧುತ್ವದ ಕಲ್ಪನೆಗಳನ್ನು ಜೀವಂತವಾಗಿರಿಸುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಈ ಕ್ರಿಯಾಶೀಲ ಪ್ರಯತ್ನಕ್ಕೆ ಅಗತ್ಯ ಎನಿಸುವ ಇಂಧನದ ಹೆಸರು ಗಾಂಧಿ, ಅಂಬೇಡ್ಕರ್‌, ಮಾರ್ಕ್ಸ್‌ ಏನೇ ಇರಲಿ, ಅಂತಿಮವಾಗಿ ಸಮಾಜದ ಕಾಲ್ನಡಿಗೆಯನ್ನು ಕವಲು ಹಾದಿಗಳಿಂದ ಹೆದ್ದಾರಿಗೆ ಕರೆತರುವುದು ನಮ್ಮ ಆದ್ಯತೆಯಾಗಬೇಕಿದೆ. ಇಂತಹ ಒಂದು ಸೃಜನಶೀಲ ಪ್ರಯತ್ನವನ್ನು ಸಾಹಿತಿ ಬೋಳುವಾರು ಮಹಮದ್ ಕುಂಞ್ ತಮ್ಮ ಸ್ವಾತಂತ್ರ್ಯದ ಓಟ ಎಂಬ ಬೃಹತ್‌ ಕಾದಂಬರಿಯಲ್ಲಿ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾವಿರದ ನೂರು ಪುಟಗಳ ಈ ಕೃತಿಯನ್ನು ರಂಗರೂಪಕ್ಕೆ ಇಳಿಸುವ ಸಾಹಸವನ್ನು ಶಿವಮೊಗ್ಗ ರಂಗಾಯಣದ ತಂಡ ಮಾಡಿರುವುದು ಪ್ರಶಂಸಾರ್ಹ.

    ರಂಗಭೂಮಿಯ ಶಕ್ತಿ-ಸೌಂದರ್ಯ : ರಂಗಭೂಮಿಯ ಸೌಂದರ್ಯ ಇರುವುದು ರಂಗಪ್ರಯೋಗಗಳ ಸ್ವಾಯತ್ತತೆ ಮತ್ತು ಸೃಜನಶೀಲತೆಯಲ್ಲಿ. ಮೂಲ ಕಥಾ ಹಂದರಕ್ಕೆ ಚ್ಯುತಿ ಬರದಂತೆ ರಂಗರೂಪಕ್ಕಿಳಿಸಿ ಪ್ರೇಕ್ಷಕರ ಮುಂದಿರಿಸುವಾಗ ನಿರ್ದೆಶಕರು ಮತ್ತು ಇಡೀ ನಾಟಕ ತಂಡ, ನಾಟಕ ಕರ್ತೃವಿನ ಮೂಲ ಆಶಯ, ಕೃತಿಯ ತಾತ್ವಿಕ ಅಡಿಪಾಯ ಹಾಗೂ ಪ್ರೇಕ್ಷಕರು ಪ್ರತಿನಿಧಿಸುವ ಸಮಾಜದ ನಿರೀಕ್ಷೆಗಳು ಈ ಮೂರನ್ನೂ ಗಮನದಲ್ಲಿಡಬೇಕಾಗುತ್ತದೆ. ಚರಿತ್ರೆ ಪುರಾಣಗಳನ್ನು ಸಮಕಾಲೀನಗೊಳಿಸುವ ಹಾಗೆಯೇ, ವರ್ತಮಾನದ ಸಾಹಿತ್ಯಾಭಿವ್ಯಕ್ತಿಯನ್ನು, ದೃಶ್ಯ ರೂಪದಲ್ಲಿ ಇನ್ನೂ ಪರಿಣಾಮಕಾರಿಯಾಗಿ ಸಮಾಜಕ್ಕೆ ತಲುಪಿಸುವುದು ನಿರ್ದೇಶಕರ ಕಲಾಕೌಶಲ್ಯ ಮತ್ತು ಸೃಜನಶೀಲತೆ. ರಂಗಪ್ರಯೋಗಗಳಲ್ಲಿ ಅಳವಡಿಸುವ ಪ್ರತಿಮೆ, ರೂಪಕ-ಅಲಂಕಾರಗಳು ಈ ನಿಟ್ಟಿನಲ್ಲಿ ಪ್ರಭಾವಶಾಲಿಯಾಗುತ್ತವೆ. ನಟನೆ, ರಂಗವಿನ್ಯಾಸ, ವಸ್ತ್ರವಿನ್ಯಾಸ, ಬೆಳಕು-ಧ್ವನಿ ಮತ್ತು ಹಿನ್ನೆಲೆ ಸಂಗೀತ-ಗಾಯನ ಇವೆಲ್ಲವೂ ಸಹ ನಾಟಕದ ಸೌಂದರ್ಯವನ್ನು ವೃದ್ಧಿಸುತ್ತವೆ.

    ಎಲ್ಲವನ್ನೂ ಮೇಳೈಸಿಕೊಂಡು, 200 ನಿಮಿಷಗಳ ಕಾಲ ಪ್ರೇಕ್ಷಕ ವೃಂದವನ್ನು ಮಂತ್ರಮುಗ್ಧರಾಗಿಸಿ, ಕುರ್ಚಿಗಳಿಂದ ಅಲ್ಲಾಡದಂತೆ ಕೂರಿಸುವ ಒಂದು ರಂಗಪ್ರಯೋಗ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಡಿ. ಪ್ರಸನ್ನ ಇವರ ಪರಿಕಲ್ಪನೆಯಲ್ಲಿ, ನಟರಾಜ ಹೊನ್ನವಳ್ಳಿಯವರ ಸಮರ್ಥ ನಿರ್ದೇಶನದಲ್ಲಿ ಕರ್ನಾಟಕದ ರಂಗಾಸಕ್ತರ ಮುಂದಿದೆ. ಒಂದು ರಂಗಪ್ರಯೋಗ ಪರಿಪೂರ್ಣತೆಯನ್ನು ಪಡೆದುಕೊಳ್ಳುವುದಕ್ಕೆ ಅಗತ್ಯವಾದ ರಂಗಸಜ್ಜಿಕೆ, ಸಂಗೀತ, ಬೆಳಕು ಮತ್ತು ವಸ್ತ್ರವಿನ್ಯಾಸ ಇವೆಲ್ಲವೂ ಸಹ ʼಸ್ವಾತಂತ್ರ್ಯದ ಓಟʼವನ್ನು ಒಂದೇ ಓಘದಲ್ಲಿ ಪ್ರೇಕ್ಷಕರ ಎದೆಯಾಳಕ್ಕಿಳಿಸುತ್ತದೆ. ಇವೆಲ್ಲವನ್ನೂ ಸಾಕ್ಷಾತ್ಕರಿಸಿ ಮುಂದೆ ಕುಳಿತ ರಂಗಾಸಕ್ತರ ಪ್ರತಿ ಗಳಿಗೆಯೂ ವೇದಿಕೆಯ ಕಡೆಗೇ ಇರುವಂತೆ ಮಾಡುವ 22 ಕಲಾವಿದರ ಅದ್ಭುತ ಅಭಿನಯ, ʼಸ್ವಾತಂತ್ರ್ಯದ ಓಟʼವನ್ನು ಕುಂಚ ಕಲಾವಿದರೊಬ್ಬರ ಚಿತ್ರಕಲೆಯ ಹಾಗೆ ಅಚ್ಚೊತ್ತಿಬಿಡುತ್ತದೆ.

    ಕಥಾ ಹಂದರ ಸಮಕಾಲೀನ ನೆಲೆಯಲ್ಲಿ : ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಂಭವಿಸಿದ ವಿಭಜನೆ ಮತ್ತು ನವ ಭಾರತದಲ್ಲಿ ನಡೆದ ಗಾಂಧಿ ಹತ್ಯೆ, ಇವೆರಡೂ ಶಾಶ್ವತ ಕರಾಳ ಗಳಿಗೆಗಳು. ಭೌಗೋಳಿಕವಾಗಿ ದೇಶ ಇಬ್ಭಾಗವಾದರೂ, ಆಂತರಿಕವಾಗಿ ಮನಸ್ಸುಗಳೂ ಸಹ ಛಿದ್ರವಾಗಿದ್ದುದನ್ನು ಸದಾ ನೆನಪಿನಲ್ಲುಳಿಸುವುದು ಗಾಂಧಿ ಹತ್ಯೆ. ವಿಭಜನೆಯ ಹೊತ್ತಿನಲ್ಲಿ ಸಂಭವಿಸಿದ ಹತ್ಯೆ, ದೌರ್ಜನ್ಯ, ಅತ್ಯಾಚಾರ ಮತ್ತು ಅಟ್ಟಹಾಸಗಳು ಎರಡೂ ದೇಶದ ಸಹೃದಯ ಮನಸ್ಸುಗಳನ್ನು ಕಾಡಿದಷ್ಟೇ ಗಾಢವಾಗಿ ಗಡಿರೇಖೆಯ ಇಬ್ಬದಿಗಳಲ್ಲಿ ಬಾಹುಗಳನ್ನು ತೆರೆದು ತಮ್ಮ ಬಂಧು ಬಾಂಧವರ ಆಲಿಂಗನಕ್ಕಾಗಿ ಹಾತೊರೆಯುವ ದೃಶ್ಯಗಳೂ ಕಾಡುತ್ತವೆ. ಇಂತಹ ಒಂದು ಸನ್ನಿವೇಶವನ್ನು ಬೋಳುವಾರು ಅವರು ಸಿಖ್‌ ಧರ್ಮದ ಇಬ್ಬರು ಹೆಣ್ಣುಮಕ್ಕಳ ಪಯಣದಲ್ಲಿ ಗುರುತಿಸುತ್ತಾರೆ.

    ಸೋದರಿ ಭಾವದ ತನ್ವೀರ್‌ ತಾಯ್ಮಮಮತೆಯ ಮೊಹಿಂದರ್‌ ಇವರಿಬ್ಬರನ್ನು ಗಡಿದಾಟಿಸಲು ರೈಲು ನಿಲ್ದಾಣಕ್ಕೆ ಕರೆತರುವ ಚಾಂದ್‌ ಅಲಿ ಎಂಬ ಲಾಹೋರಿನ ಯುವಕ, ಅವರನ್ನೂ ಕಳೆದುಕೊಂಡು ಕೊನೆಗೆ ತಲುಪುವುದು ಭಾರತದ ನೆಲವನ್ನು. ತನ್ನ ಮಾತೃಭೂಮಿಗೆ ತಲುಪಲಾಗದ ಇಕ್ಕಟ್ಟಿನ ಸನ್ನಿವೇಶಗಳಿಗೆ ಸಿಲುಕುವ ಚಾಂದ್‌ ಅಲಿ, ಗಾಂಧಿ ಹತ್ಯೆಯಿಂದ ವಿಚಲಿತನಾಗಿ, ಅನ್ಯ ಮಾರ್ಗವೇ ಕಾಣದೆ ಭಾರತೀಯನಾಗಿ ತನ್ನನ್ನು ಗುರುತಿಸಿಕೊಳ್ಳುವ ಪ್ರಯತ್ನಗಳನ್ನೂ ಮಾಡುತ್ತಾ ಹೋಗುತ್ತಾನೆ. ತನ್ನ ಮೂಲ ಗುರುತನ್ನು (ಅಸ್ಮಿತೆಯನ್ನು) ಮುಚ್ಚಿಟ್ಟುಕೊಂಡೇ ದೆಹಲಿಯಿಂದ ದಕ್ಷಿಣದವರೆಗೆ ಪಯಣಿಸುವ ಚಾಂದ್‌ ಅಲಿಗೆ ಹಾದಿಯಲ್ಲಿ ಸಂಗಾತಿಯಾಗುವುದು ಕಾಲಜ್ಞಾನಿ ಸೂಫಿ ಸಂತ ನಿಜಾಮುದ್ದಿನ್‌ ಔಲಿಯಾ (ಬದ್ರುದ್ದೀನ್).‌ ನಾನು ಯಾರು ನನ್ನ ಅಸ್ತಿತ್ವವೇನು ಎಂಬ ಪ್ರಶ್ನೆಗಳಿಗೆ ಉತ್ತರವನ್ನೇ ಕಾಣಲಾಗದೆ ಚಾಂದ್‌ ಅಲಿ ಮುತ್ತುಪ್ಪಾಡಿ ಎಂಬ ಹಳ್ಳಿಗೆ ಬಂದು ತಲುಪುತ್ತಾನೆ.

    ಮುತ್ತುಪ್ಪಾಡಿಯಲ್ಲಿ ಚಾಂದ್‌ ಅಲಿಗೆ ಮುಖಾಮುಖಿಯಾಗುವ ಸಮಾಜ ಅವನ ಬದುಕಿನ ದರ್ಶನವನ್ನೇ ಬದಲಿಸಿಬಿಡುತ್ತದೆ. ಮನುಷ್ಯ ಸಂಬಂಧಗಳಿಗೆ ಹುಟ್ಟಿದ ನೆಲ ಅಥವಾ ಕಟ್ಟಿಕೊಂಡ ಧರ್ಮದ ಅಸ್ಮಿತೆಗಳು ಅಗತ್ಯವೇ ಇಲ್ಲ ಎಂಬ ಔದಾತ್ಯವನ್ನು ಚಾಂದ್‌ ಅಲಿ ಪ್ರತಿಯೊಂದು ಪ್ರಸಂಗಗಳಲ್ಲೂ ಕಾಣುತ್ತಾ ಹೋಗುತ್ತಾನೆ. ಪ್ರೀತಿ, ಮಮತೆ, ವಾತ್ಸಲ್ಯ ಇವುಗಳ ಮೂಲಕ ಮನುಜ ಸಂಬಂಧಗಳನ್ನು ಬೆಸೆಯುವ ಒಂದು ಸಾಮಾಜಿಕ ಪ್ರಜ್ಞೆ ಮುತ್ತುಪ್ಪಾಡಿಯಲ್ಲಿ ಒಂದೊಂದಾಗಿ ಅನಾವರಣಗೊಳ್ಳುತ್ತದೆ. ಸ್ವಾತಂತ್ರ್ಯದ 50 ವರ್ಷಗಳ ನಂತರ ವಾಘಾ ಗಡಿಯಲ್ಲಿ ಎರಡೂ ದೇಶಗಳಲ್ಲಿರುವ ಜನರು ಗಡಿಯ ಅತ್ತಕಡೆ ಇರುವ ತಮ್ಮ ಬಂಧು ಬಾಂಧವರನ್ನು ಹುಡುಕುವ, ಸಿಗದೆ ನಿರಾಶರಾಗುವ, ಸಿಕ್ಕಾಗ ಸಂಭ್ರಮಿಸುವ ಒಂದು ಪ್ರಸಂಗವನ್ನು ನಾಟಕದ ಸಾಂಕೇತಿಕ ರೂಪದಲ್ಲಿ, ಕ್ಲೈಮಾಕ್ಸ್‌ ಆಗಿ ಬಿಂಬಿಸಲಾಗಿದೆ.

    ಈ ಐವತ್ತು ವರ್ಷಗಳ ಸ್ವಾತಂತ್ರ್ಯದ ಓಟದಲ್ಲಿ ದೇಶ ಕಂಡ ಕೋಮು ವೈಮನಸ್ಯ, ದ್ವೇಷ, ಆಳುವವರ ದಬ್ಬಾಳಿಕೆ, ಸಮಾಜಗಳನ್ನು ವಿಭಜಿಸುವ ಧಾರ್ಮಿಕ ದ್ವೇಷ, ಮತ್ಸರ, ಅಸೂಯೆ ಮತ್ತು ಇದಕ್ಕೆ ಬಲಿಯಾಗುವ ಸಾವಿರಾರು ಅಮಾಯಕ ಕುಟುಂಬಗಳು ಇವೆಲ್ಲವನ್ನೂ ಚಾಂದ್‌ ಅಲಿಯ ಮುತ್ತುಪ್ಪಾಡಿ ವಾಸದಲ್ಲಿ ಪರಿಣಾಮಕಾರಿಯಾಗಿ ಕಾಣಿಸಲಾಗಿದೆ. ತನ್ನ ವೃದ್ಧಾಪ್ಯವನ್ನು ತಲುಪುವ ಚಾಂದ್‌ ಅಲಿಗೆ, ಮಾನವ ಸಂಬಂಧಗಳು ಇರುವುದು ಕರುಣೆ, ಅನುಭೂತಿ, ಸಹನೆ ಮತ್ತು ಸಹಬಾಳ್ವೆಯಲ್ಲಿ ಎಂದು ಮನದಟ್ಟಾಗುತ್ತಾ ಹೋಗುತ್ತದೆ. ಅಂತಿಮವಾಗಿ ತನ್ನೊಳಗಿನ ಒಬ್ಬ ಮನುಷ್ಯನನ್ನು ಚಾಂದ್‌ ಅಲಿ ಗುರುತಿಸಿಕೊಂಡು, ಉಳಿದೆಲ್ಲಾ ಅಸ್ಮಿತೆಗಳನ್ನು ಕಳಚಿಹಾಕಿ, ತಾಯಿ ಸ್ವರೂಪದ ಮೊಹಿಂದರ್‌ ಕಾಪಾಡಲು ಕೊಟ್ಟಿದ್ದ ಒಡವೆಗಳನ್ನು ಭೂತಾಯಿಯ ಮಡಿಲಲ್ಲಿರಿಸುವ ಮೂಲಕ ಸಮುದಾಯದ ಪ್ರಜ್ಞೆಯಾಗಿ ನಿಲ್ಲುತ್ತಾನೆ.

    ರಂಗ ರೂಪದ ವಿಶಿಷ್ಟ ಕ್ಷಣಗಳು : ಸ್ವಾತಂತ್ರ್ಯದ ಓಟವನ್ನು ಹರಿವ ನದಿಯ ನಿನಾದದ ಹಾಗೆ ನಿರಂತರವಾಗಿ ಕಾಪಾಡಿಕೊಂಡು ಬರುವ ನಿರ್ದೆಶಕರು, ಚಾಂದ್‌ ಅಲಿಯನ್ನು ಕೇಂದ್ರದಲ್ಲಿಟ್ಟು ಅವನ ಸುತ್ತಲೂ ಅನಾವರಣಗೊಳ್ಳುವ ಎಲ್ಲ ಪ್ರಸಂಗಗಳನ್ನೂ ಉಪನದಿಗಳ ಹಾಗೆ ಬಿಂಬಿಸುತ್ತಾ, ಎಲ್ಲವೂ ಕೊನೆಗೆ ಸಹಬಾಳ್ವೆ-ಸಮನ್ವಯದ ಸಾಗರದಲ್ಲಿ ಒಂದಾಗುವ ಭಾವನೆಯನ್ನು ಪ್ರೇಕ್ಷಕರಲ್ಲಿ ಸೃಷ್ಟಿಸುತ್ತಾರೆ. ಚಾಂದ್‌ ಅಲಿ ಕೊನೆಯಲ್ಲಿ ಚಾಂದ್‌ ಅಲಿಯಾಗಿಯೇ ಉಳಿಯುತ್ತಾನೋ ಅಥವಾ ಚಂದನ್‌ ಆಗಿರುತ್ತಾನೋ ಎಂಬ ಪ್ರಶ್ನೆಯೇ ಅಪ್ರಸ್ತುತವಾಗುವ ಹಾಗೆ ಪಾತ್ರ ಸನ್ನಿವೇಶಗಳನ್ನು ರೂಪಿಸಲಾಗಿದೆ. ಅವನ ಪಯಣದುದ್ದಕ್ಕೂ ಹರಿಯುವ ಸಂಗೀತ ಗಂಗೆಯಲ್ಲಿ ಸೂಫಿ, ಕಬೀರ ಪರಂಪರೆಯ ರಾಗಭಾವಗಳ ಸಮ್ಮಿಲನ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಚಾಂದ್‌ ಅಲಿಯ ಬದುಕಿನ ಒಂದು ಭಾಗವಾಗಿಬಿಡುವ ಕೈಜುನ್ನೀಸಾ, ರಾಘಣ್ಣ, ಪಂಡಿತ, ಸುಮತಿ ಎಲ್ಲರೂ ಸಹ ಮುತ್ತುಪ್ಪಾಡಿಯ ಜೀವನ ಸೌಂದರ್ಯದ ಸಮ್ಮೋಹನಕ್ಕೊಳಗಾಗಿರುವಂತೆ ಘಟನೆಗಳನ್ನು ಅನಾವರಣಗೊಳಿಸಲಾಗಿದೆ.

    ಕಬೀರ ದೋಹಾ, ಖವ್ವಾಲಿ, ಸೂಫಿ ಗಾಯನಗಳು ಪ್ರೇಕ್ಷಕರ ಮನಮುಟ್ಟುವಷ್ಟೇ ಪರಿಣಾಮಕಾರಿಯಾಗಿ ಕೆಲವು ದೃಶ್ಯಗಳೂ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಚಾಂದ್‌ ಅಲಿ ಯುವಕನಾಗಿ, ವಯಸ್ಕನಾಗಿ, ವೃದ್ಧನಾಗಿ ಎದುರಿಸುವ ತಲ್ಲಣದ ಕ್ಷಣಗಳು ಇಡೀ ಸಮಾಜದ ತುಮುಲಗಳ ಒಂದು ಸಂಕೇತವಾಗಿ ಕಾಣುತ್ತವೆ. ಗಾಂಧಿ ಹತ್ಯೆಯ ದೃಶ್ಯ ಸದಾ ಕಾಲ ನೆನಪಿನಲ್ಲುಳಿಯುತ್ತದೆ. ಈ ದೃಶ್ಯದಲ್ಲಿ ಗಾಂಧಿ ಅಹಿಂಸೆ, ಸಹನೆ ಮತ್ತು ಮಾನವತೆಯ ಅಗೋಚರ ರೂಪಕವಾಗಿರುತ್ತಾರೆ, ಭಗ್ನವಾಗುವ ಗಾಂಧಿಯ ಚರಕ ಈ ಔದಾತ್ಯಗಳ ಮೇಲೆ ಮತಾಂಧರಿಂದ ನಡೆಯುವ ಅಮಾನುಷ ಹಲ್ಲೆಯ ಪ್ರತ್ಯಕ್ಷ ರೂಪಕವಾಗಿ ಕಾಣುತ್ತದೆ. ಈ ಚರಕವನ್ನು ಮಡಿಲಲ್ಲಿ ಹೊತ್ತು, ಸೂಫಿ ಸಂತನ ಹಿಂದೆ ಸಾಗುವ ಚಾಂದ್‌ ಅಲಿ, ಒಂದೇ ಚೌಕಟ್ಟಿನಲ್ಲಿ ಸೌಹಾರ್ದತೆ ಮತ್ತು ದ್ವೇಷರಾಜಕಾರಣದ ಪ್ರತಿಮೆಯಾಗಿ ಕಾಣುತ್ತಾನೆ. ಈ ದೃಶ್ಯ ಕೆಲವು ಪ್ರೇಕ್ಷಕರಲ್ಲಾದರೂ (ನನ್ನನ್ನೂ ಸೇರಿದಂತೆ) ಕಂಬನಿ ಮೂಡಿಸಿದ್ದರೆ ಅಚ್ಚರಿಯೇನಿಲ್ಲ.

    ಕಳೆದು ಹೋದ ಚಾಂದ್‌ ಅಲಿಗಾಗಿ ತನ್ವೀರ್ ಮತ್ತು ಮೊಹಿಂದರ್‌ ಚಡಪಡಿಸುವುದು, ಅಟ್ಟಿಸಿಕೊಂಡು ಬರುವ ಪೊಲೀಸರಿಂದ ತಪ್ಪಿಸಿಕೊಳ್ಳಲು ಚಾಂದ್‌ ಅಲಿ ಪರದಾಡುವುದು, ವಾಘಾ ಗಡಿಯಲ್ಲಿ ಮೊಹಿಂದರ್‌ ಇಲ್ಲವಾದ ಸುದ್ದಿ ಕೇಳಿ ಕುಸಿದು ಬಿದ್ದರೂ ತನ್ವೀರ್‌ಳನ್ನು ಅಪ್ಪಿಕೊಂಡು ಸಂತೈಸುವ ಹೃದಯಂಗಮ ದೃಶ್ಯ, ಅದೇ ದೃಶ್ಯದಲ್ಲಿ ತನ್ನ ಈ ಬದಿಯಲ್ಲಿರುವ ಚಾಂದ್‌ ಅಲಿ, ತನ್ನ ತಾಯ್ಮಡಿಲನ್ನು ಕಳೆದುಕೊಂಡು ಆಕೆಯ ಅಭರಣಗಳನ್ನು ಭೂತಾಯಿಗೆ ಒಪ್ಪಿಸಿ ಧನ್ಯನಾಗುವ ದೃಶ್ಯ ಇವೆಲ್ಲವೂ ಮನಕಲಕುವಂತಿದೆ. ಇಂತಹ ದೃಶ್ಯಗಳು ನಾಟಕದುದ್ದಕ್ಕೂ ಬರುತ್ತಲೇ ಇರುತ್ತವೆ. ನಡುನಡುವೆ ತೆಳು ಹಾಸ್ಯ, ಜಗಳ, ಕದನ, ಹೊಡೆದಾಟ, ವೈಮನಸ್ಯ ಈ ಎಲ್ಲ ಮಾನವ ಸಹಜ ಗುಣಗಳೂ ಸಹ ಅನಾವರಣಗೊಳ್ಳುತ್ತವೆ. ಈ ಎಲ್ಲ ದೃಶ್ಯಗಳೂ ಹೃದಯಸ್ಪರ್ಶಿಯಾಗುವುದು ರಂಗದ ಮೇಲಿನ ನಟರ ಭಾವಾಭಿನಯ ಮತ್ತು ಸಂವಹನದ ಸ್ಪಷ್ಟತೆಯಿಂದ.

    ಮೂಸಜ್ಜನ ಮರಣಾನಂತರ ಆಸ್ತಿ ವಿಲೇವಾರಿಗಾಗಿ ನಡೆಯುವ ಜಮಾತ್‌ ಸಭೆಯ ದೃಶ್ಯವನ್ನು ಬಾಹ್ಯ ಸಮಾಜದಲ್ಲಿ ನೋಡಬಹುದಾದ ನೈಜ ಪ್ರಸಂಗದ ಹಾಗೆ ನಿರ್ವಹಿಸಲಾಗಿದೆ. ಈ ದೃಶ್ಯದಲ್ಲಿ ಕಾಣುವ ಎಲ್ಲ ಕಲಾವಿದರ ಸಹಜಾಭಿನಯ ಮತ್ತು ಸಿಟ್ಟು, ಸೆಡವು, ತಾಳ್ಮೆ, ಆಕ್ರೋಶಗಳ ಭಾವಾಭಿವ್ಯಕ್ತಿ ನಿಜಕ್ಕೂ ಮೆಚ್ಚುವಂತಹುದು. ಆದಿಯಿಂದ ಅಂತ್ಯದವರೆಗೂ ಗುರುತಿಸಬಹುದಾದ ಸಮಾನ ಎಳೆ ಎಂದರೆ ಎಲ್ಲ ಕಲಾವಿದರ ಸಹಜಾಭಿನಯ, ಸಂಭಾಷಣೆಯ ಸ್ಪಷ್ಟತೆ, ಪಾತ್ರ ತಲ್ಲೀನತೆ ಮತ್ತು ಭಾವಾಭಿವ್ಯಕ್ತಿಯ ತನ್ಮಯತೆ. ರಂಗದ ಮೇಲಿನ ಈ ಕಲಾಕೌಶಲ್ಯಕ್ಕೆ ತಕ್ಕಂತೆ ಒದಗಿಸಲಾಗಿರುವ ಹಿನ್ನೆಲೆ ಸಂಗೀತ, ಹಾಡುಗಾರಿಕೆ, ಸ್ಪಷ್ಟ ಉಚ್ಛಾರಣೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಒಂದೆರಡು ಕಡೆ ವಾದ್ಯಗಳ ಅಬ್ಬರ, ಹಿನ್ನೆಲೆ ಸಂಗೀತದ ಹೆಚ್ಚಿನ ಸದ್ದು ಕಂಡುಬಂದರೂ, ಅದು ಗಾಯನಕ್ಕೆ ಭಂಗ ತರುವುದಿಲ್ಲ. ಬೆಳಕಿನ ವಿನ್ಯಾಸ, ರಂಗ ಸಜ್ಜಿಕೆ ಮತ್ತು ವಸ್ತ್ರ ವಿನ್ಯಾಸವನ್ನು ವಿಮರ್ಶಿಸಲು ಅವಕಾಶವೇ ಇಲ್ಲದ ಹಾಗೆ ನಿರ್ವಹಿಸಲಾಗಿದೆ.

    ವರ್ತಮಾನಕ್ಕೆ ಸ್ಪಂದಿಸುವ ಪ್ರಯೋಗ : ʼಸ್ವಾತಂತ್ರ್ಯದ ಓಟʼ ಒಂದು ಕಾದಂಬರಿಯಾಗಿ ಸಹ ಯಾವುದೇ ನಿರ್ದಿಷ್ಟ ಸಿದ್ದಾಂತಗಳಿಗೆ ಅಂಟಿಕೊಂಡಂತೆ ಕಾಣುವುದಿಲ್ಲ. ಈ ಕಾದಂಬರಿಯ ಮೂಲದಿಂದ ಕೊಂಚ ಬದಲಾವಣೆ ಮಾಡಿ ಚಾಂದ್‌ ಅಲಿ ಎಂಬ ವ್ಯಕ್ತಿಯ ಸುತ್ತಲೂ ನಾಟಕವನ್ನು ಹೆಣೆಯಲಾಗಿದೆ. ಇದೇ ಇಡೀ ನಾಟಕಕ್ಕೆ ಮೆರುಗು ನೀಡುವ ಒಂದು ಪ್ರಯತ್ನ. ಇದು ಸ್ವಾತಂತ್ರ್ಯ-ವಿಭಜನೆಯ ಹಿನ್ನೆಲೆಯಲ್ಲಿ ಹೆಣೆದಿರುವ ಕಥನವಾಗಿರುವುದರಿಂದ ಇಲ್ಲಿ ಗಾಂಧಿ ಅನಿವಾರ್ಯವಾಗುತ್ತಾರೆ. ಹಾಗೆಯೇ ವರ್ತಮಾನದ ದ್ವೇಷ ರಾಜಕಾರಣ, ಮತಾಂಧತೆ, ಹಿಂಸೆ, ಕ್ರೌರ್ಯ ಮತ್ತು ದೌರ್ಜನ್ಯಗಳ ಭಾರತದಲ್ಲಿ ಮನುಜ ಸಂಬಂಧಗಳ ಸೂಕ್ಷ್ಮತೆಯನ್ನು ಹೆಣೆಯಲು ಅಗತ್ಯವಾದ ಶಾಂತಿ-ಸೌಹಾರ್ದತೆ ಮತ್ತು ಸಮನ್ವಯ-ಸಹಬಾಳ್ವೆಗೆ ಗಾಂಧಿ ಅನಿವಾರ್ಯವಾಗುತ್ತಾರೆ. ತಾತ್ವಿಕವಾಗಿ ಗಾಂಧಿಯನ್ನು ಒಪ್ಪದವರೂ ಇದನ್ನು ಒಪ್ಪಲೇಬೇಕಾಗುತ್ತದೆ.

    ಈ ದೃಷ್ಟಿಯಿಂದ ನೋಡಿದಾಗ ಸ್ವಾತಂತ್ರ್ಯದ ಓಟ ರಂಗಮಂಚದ ಮೇಲಿನ ಓಟದಲ್ಲಿ ಮೊದಲ ಸ್ಥಾನ ಪಡೆಯುತ್ತದೆ. ಸಮಾಜದಲ್ಲಿ ಸೋದರತ್ವ-ಸೋದರಿತ್ವದ ಭಾವನೆ, ಸಹಬಾಳ್ವೆಯ ಚಿಂತನೆ, ಸಮನ್ವಯದ ಆಲೋಚನೆ ಹಾಗೂ ಜಾತಿ ಮತ ಧರ್ಮಗಳ ಅಸ್ಮಿತೆಗಳನ್ನು ಕಳಚಿ ಹಾಕಿ ಮಾನವರಾಗಿ ಬದುಕುವ ಔದಾತ್ಯ ಇಂದು ಅತ್ಯವಶ್ಯವಾಗಿ ಬೇಕಾಗಿದೆ. ಈ ಔದಾತ್ಯಗಳನ್ನು ಉತ್ಪಾದಿಸಲಾಗುವುದಿಲ್ಲ ಇದು ಸಮಾಜದಲ್ಲಿ ರೂಢಿಗತವಾಗಿ ಬೇರೂರಬೇಕು. ಈಗ ಸಡಿಲವಾಗಿರುವ ಈ ಬೇರುಗಳನ್ನು ಗಟ್ಟಿ ಮಾಡುವುದೇ ಅಲ್ಲದೆ ಸೌಹಾರ್ದತೆಯ ಹೊಸ ಬೀಜಗಳನ್ನು ಬಿತ್ತುವುದೂ ವರ್ತಮಾನದ ತುರ್ತು. ಬೋಳುವಾರು ಇವರ ಸ್ವಾತಂತ್ರ್ಯದ ಓಟ ರಂಗಭೂಮಿಯ ಮುಖಾಂತರ ಈ ಬೀಜ ಬಿತ್ತುವಲ್ಲಿ ಯಶಸ್ವಿಯಾಗುತ್ತದೆ.

    ಈ ಅದ್ಭುತ ರಂಗಪ್ರಯೋಗದ ಕಾರಣಕರ್ತರಾದ ಶಿವಮೊಗ್ಗ ರಂಗಾಯಣದ ನಿರ್ದೇಶಕ ಡಿ. ಪ್ರಸನ್ನ ಮತ್ತು ಅವರ ಸಮಸ್ತ ಸಿಬ್ಬಂದಿವರ್ಗ, ನಿರ್ದೇಶಕ ನಟರಾಜ್‌ ಹೊನ್ನವಳ್ಳಿ ಹಾಗೂ ರಂಗದ ಮೇಲೆ/ಪರದೆಯ ಹಿಂದೆ, ಸಾಕ್ಷಾತ್ಕರಿಸಿದ ಎಲ್ಲ ಕಲಾವಿದರೂ ಅಭಿನಂದನಾರ್ಹರು. ಉಚಿತವಾಗಿ ರಾಜ್ಯದೆಲ್ಲೆಡೆ ಪ್ರದರ್ಶನಗೊಳ್ಳುತ್ತಿರುವ ಸ್ವಾತಂತ್ರ್ಯದ ಓಟ ನಾಟಕವನ್ನು ರಾಜ್ಯಾದ್ಯಂತ ಸರ್ಕಾರದ ಪ್ರದರ್ಶಿಸಲು ರಾಜ್ಯ ಸರ್ಕಾರ ಸೂಕ್ತ ಸಹಕಾರ ನೀಡಿದರೆ, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನೂ ನಾಟಕದ ಉದಾತ್ತ ಸಂದೇಶ ತಲುಪುವಂತಾಗುತ್ತದೆ.

    ಜೂನ್ ತಿಂಗಳ 26 ಮತ್ತು 27ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ.

    ವಿಮರ್ಶಕರು : ನಾ ದಿವಾಕರ

    article baikady drama review roovari theatre
    Share. Facebook Twitter Pinterest LinkedIn Tumblr WhatsApp Email
    Previous Article‘ಹಕ್ಕಿ ಮತ್ತು ಅವಳು’ ಕಾವ್ಯ ಹಂದೆ ಎಚ್. ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ | ಜೂನ್ 27
    Next Article ವಿಶ್ವ ಕೊಂಕಣಿ ಕೇಂದ್ರದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರಕ್ಕೆ ಚಾಲನೆ
    roovari

    Add Comment Cancel Reply


    Related Posts

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.