ವಿಶ್ವ ಮಾನವ ವಿಚಾರ ವೇದಿಕೆ, ರಂಗಬಂಡಿ ಮಳವಳ್ಳಿ (ರಿ.) ಹಾಗೂ ಯೂನಿವರ್ಸಲ್ ಸೇವಾ ಟ್ರಸ್ಟ್ ಮಳವಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಮಳವಳ್ಳಿಯಲ್ಲಿ ಪ್ರದರ್ಶನಗೊಂಡ ಶಿವಮೊಗ್ಗ ರಂಗಾಯಣದ ‘ಸ್ವಾತಂತ್ರ್ಯದ ಓಟ’ ನಾಟಕವು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆಯನ್ನು ಮೂಡಿಸಿತು. ಬೋಳ್ವಾರ್ ಮಹಮ್ಮದ್ ಕುಂಞಿ ಇವರ ಪ್ರಶಸ್ತಿ ವಿಜೇತ ಕಾದಂಬರಿಯನ್ನು ಆಧರಿಸಿ, ನಿರ್ದೇಶಕ ನಟರಾಜ್ ಹೊನ್ನವಳ್ಳಿ ಇವರ ಕಲಾತ್ಮಕ ನಿರೂಪಣೆಯಲ್ಲಿ ಮೂಡಿಬಂದ ಈ ನಾಟಕವು ದೇಶ ವಿಭಜನೆಯ ದುರಂತ, ಮಾನವ ಸಂಬಂಧಗಳ ಸಂಕೀರ್ಣತೆ ಹಾಗೂ ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಮನೋಜ್ಞವಾಗಿ ಅನಾವರಣಗೊಳಿಸಿತು.
ಚರಕವನ್ನು ಎಳೆಯುವ ಬಾಲಕನ ದೃಶ್ಯದಿಂದ ಆರಂಭವಾಗುವ ನಾಟಕವು ಗಾಂಧೀಜಿ ಅವರ ಚಿಂತನೆಗಳ ಸಾಂಕೇತಿಕ ಅಭಿವ್ಯಕ್ತಿಯಾಗಿ ಪ್ರೇಕ್ಷಕರನ್ನು ಕಥೆಯ ಆಳಕ್ಕೆ ಕರೆದೊಯ್ಯುತ್ತದೆ. ಸಂಗೀತ, ಬೆಳಕು ಮತ್ತು ರಂಗಸಜ್ಜಿಕೆಯ ಅದ್ಭುತ ಸಂಯೋಜನೆ ಪ್ರತಿಯೊಂದು ದೃಶ್ಯವನ್ನೂ ಜೀವಂತ ಚಿತ್ರಣವನ್ನಾಗಿ ರೂಪಿಸಿದೆ. ವಿಭಜನೆಯ ಸಂದರ್ಭದ ವಲಸೆ ದೃಶ್ಯಗಳು ಮನಸ್ಸನ್ನು ತಟ್ಟುವಂತಿದ್ದವು.

ಚಂದ್ ಅಲಿಯ ಬದುಕಿನ ಪಯಣದ ಮೂಲಕ ಮಾನವೀಯತೆ, ಕರ್ತವ್ಯ ಮತ್ತು ನಂಬಿಕೆಯ ಮೌಲ್ಯಗಳನ್ನು ನಾಟಕ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಗಾಂಧೀಜಿಯವರ ಹತ್ಯೆಯ ದೃಶ್ಯವನ್ನು ನೇರವಾಗಿ ತೋರಿಸದೆ, ಪಾತ್ರಗಳ ಭಾವಪ್ರತಿಕ್ರಿಯೆಗಳ ಮೂಲಕ ಕಟ್ಟಿಕೊಟ್ಟಿರುವುದು ನಿರ್ದೇಶಕರ ಪ್ರೌಢಿಮೆಯನ್ನು ಎತ್ತಿಹಿಡಿಯುತ್ತದೆ.
ರಾಘವ ಕಮ್ಮಾರ್ ನೇತೃತ್ವದ ಸಂಗೀತ ತಂಡದ ಗಾಯನ, ಸಹನ ಪಿಂಜಾರರ ವಸ್ತ್ರ ವಿನ್ಯಾಸ, ಕಲಾವಿದರ ಮನೋಜ್ಞ ಅಭಿನಯ ಹಾಗೂ ತಂತ್ರಜ್ಞರ ಶ್ರಮ ನಾಟಕವನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ.
ಒಟ್ಟಾರೆಯಾಗಿ, ‘ಸ್ವಾತಂತ್ರ್ಯದ ಓಟ’ ಕೇವಲ ನಾಟಕವಲ್ಲ, ಅದು ಇತಿಹಾಸ, ಸ್ಮೃತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ಮರುಚಿಂತನೆಗೆ ಹಚ್ಚುವ ಅಪೂರ್ವ ರಂಗ ಯಾನ. ಮಳವಳ್ಳಿಯ ಪ್ರೇಕ್ಷಕರು ನೀಡಿದ ಸ್ಪಂದನೆ ಈ ನಾಟಕದ ಕಲಾತ್ಮಕ ಯಶಸ್ಸಿಗೆ ಸಾಕ್ಷಿಯಾಗಿದೆ.

(ಈ ನಾಟಕ ಜೂನ್ ತಿಂಗಳ 20 ಮತ್ತು 21ರ ಶನಿವಾರ ಮತ್ತು ಭಾನುವಾರ ಸಂಜೆ ರಂಗಾಯಣದಲ್ಲಿ ಪ್ರದರ್ಶನವಿದೆ ದಯವಿಟ್ಟು ತಪ್ಪದೇ ನೋಡಿ)
ಶ್ರೀನಿವಾಸ್ ಪಾಲಹಳ್ಳಿ
