ಗೋವಾ : ಕೊಂಕಣಿಯ ಪಂಚಲಿಪಿಗಳನ್ನು ಒಂದೇ ಛತ್ರದಡಿ ಒಗ್ಗೂಡಿಸಿ, ಕೊಂಕಣಿ ಭಾಷೆಯನ್ನು ಬೆಳೆಸುವ ಉದ್ದೇಶದಿಂದ ದಿನಾಂಕ 30 ಮೇ 2026ರಂದು ಗೋವಾದ ವೆರ್ನಾ ಇಲ್ಲಿಯ ರೆಟ್ಜಿಂಗರ್ ಸಭಾಂಗಣದಲ್ಲಿ ಅಖಿಲ ಭಾರತ ಮಟ್ಟದ ಪ್ರಥಮ ಕೊಂಕಣಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಮಹಾಸಮ್ಮೇಳನವನ್ನು ಆಯೋಜಿಸಲಾಗಿದೆ. ‘ಕೊಂಕಣಿ ತಾಯಿಯ ಅಪ್ಪುಗೆಯಲ್ಲಿರೋಣ’ ಎಂಬ ಧ್ಯೇಯ ವಾಕ್ಯದೊಡನೆ ಜಾಗತಿಕ ರೋಮಿ ಲಿಪಿ ಅಭಿಯಾನ್ ನೇತೃತ್ವದಲ್ಲಿ ನಡೆಯುವ ಈ ಸಮಾವೇಶದಲ್ಲಿ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರಗಳ ಸುಮಾರು 30ಕ್ಕೂ ಮಿಕ್ಕಿ ಸಂಘಟನೆಗಳು ಸಹಕಾರ ನೀಡಿವೆ.
ಈ ಸಮಾವೇಶದಲ್ಲಿ ವಿವಿಧತೆಯಲ್ಲಿ ಏಕತೆ ಎಂಬ ವಿಷಯದ ಮೇಲೆ ಮೂರು ಪರಿಸಂವಾದಗಳು ನಡೆಯಲಿವೆ. ಯುವ ಜನತೆಗಾಗಿ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ದಿ. ಎರಿಕ್ ಒಝೇರಿಯೊರವರು ವಿನ್ಯಾಸಗೊಳಿಸಿದ ಕೊಂಕಣಿ ಬಾವುಟವನ್ನು ಸ್ವೀಕರಿಸಿ ಅಳವಡಿಸಿಕೊಳ್ಳಲಾಗುವುದು. ಕೊಂಕಣಿ ಗೀತೆಯನ್ನು ಲೋಕಾರ್ಪಣೆ ಮಾಡಲಾಗುವುದು ಮತ್ತು ‘ಒಂದು ಲಿಪಿ, ಒಂದು ಭಾಷೆ; ಲಾಭವೇನು? ನಷ್ಟವೇನು?’ – ತಾರಾ ಲವೀನಾ ಫೆರ್ನಾಂಡಿಸ್, ‘ಸಾಹಿತ್ಯದಿಂದ ಒಗ್ಗಟ್ಟು’ – ಅಧ್ಯಕ್ಷತೆ- ರೊಯ್ ಕ್ಯಾಸ್ತೆಲಿನೊ, ‘ಸಂಸ್ಕೃತಿಯಿಂದ ಒಗ್ಗಟ್ಟು’ – ಸ್ಟೀಫನ್ ಕ್ವಾಡ್ರಸ್ ಈ ಬಗ್ಗೆ ವಿಚಾರಗೋಷ್ಟಿಗಳು ನಡೆಯಲಿವೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿದ ಮಾರ್ಸೆಲ್ ಡಿಸೋಜ (ಕನ್ನಡ ಲಿಪಿಯ ಮಾನ್ಯತೆಗಾಗಿ ಹೋರಾಟ) ವಿದ್ಯಾರಂಗ ಮಿತ್ರಮಂಡಳಿ (ಸಾಂಸ್ಕೃತಿಕ ಕ್ಷೇತ್ರ), ಪ್ಯಾಟ್ರಿಕ್ ಮೊರಾಸ್ (ಕನ್ನಡ ಲಿಪಿಯ ಹಿರಿಯ ಕೊಂಕಣಿ ಸಾಹಿತಿ) ಇವರನ್ನು ಸನ್ಮಾನಿಸಲಾಗುವುದು.
ಹೊರನಾಡಿನಲ್ಲಿ ಕೊಂಕಣಿ ಜಾಗೃತಿ ಮೂಡಿಸುವ ಈ ಕಾರ್ಯಕ್ರಮಕ್ಕೆ ಕೊಂಕಣಿ ಅಕಾಡೆಮಿಯು ಸಹಯೋಗ ನೀಡಿದ್ದು, ನಾಡಿನ ಕೊಂಕಣಿಗರು ಭಾಗವಹಿಸಿ ಈ ಸಮಾವೇಶವನ್ನು ಯಶಸ್ವಿಗೊಳಿಸಲು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಕರೆಕೊಟ್ಟಿದ್ದಾರೆ.
