ಕಾಸರಗೋಡು : ಮಂಗಳೂರಿನ ಖ್ಯಾತ ಕನ್ನಡ ಸಂಘಟಕಿಯಾದ ರಾಣಿ ಪುಷ್ಪಲತಾ ದೇವಿ ಅಧ್ಯಕ್ಷೆಯಾದ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ರಿ.) ಇದರ ವತಿಯಿಂದ ದಿನಾಂಕ 25 ಏಪ್ರಿಲ್ 2026ರ ಶನಿವಾರ ಸಂಜೆ ಗಂಟೆ 5-30ಕ್ಕೆ ಮಂಗಳೂರಿನ ಪುರಭವನದ ಎದುರಿನ ರಾಜಾಜಿ ಪಾರ್ಕ್ ನಲ್ಲಿ ನಡೆಯುವ ‘ಕನ್ನಡ ಜೇಂಕಾರ’ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ಸಾರ್ವಜನಿಕ ವಾಚನಾಲಯ, ಕನ್ನಡ ಭವನ ‘ಉಚಿತ ವಸತಿ ಸೌಕರ್ಯ’, ಕನ್ನಡ ಭವನ ಸ್ಥಾಪಿತ ‘ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಮುಂತಾದ ಸಮೂಹ ಸಂಸ್ಥೆಗಳ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿಗಳಿಗೆ ‘ಗಡಿನಾಡು ಕನ್ನಡ ಪೋಷಕ’ ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ ಎಂದು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಪತ್ರ ಮುಖೇನ ತಿಳಿಸಿದ್ದಾರೆ.
ರಾಜಾಜಿ ಪಾರ್ಕ್ ನಲ್ಲಿ ನಡೆಯಲಿರುವ ‘ಕನ್ನಡ ಜೇಂಕಾರ’ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ -ಕವಿಗೋಷ್ಠಿ, ಗೀತಗಾಯನ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ನಡೆಯಲಿರುವುದು. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಅಸ್ಮಿತೆ ಉಳಿಸಿ ಬೆಳೆಸುವಲ್ಲಿ ಅವಿರತ ಶ್ರಮ ವಹಿಸುತ್ತಿರುವ ಕನ್ನಡ ದಂಪತಿಗಳ ಕನ್ನಡ ಸೇವೆಯನ್ನು ಪರಿಗಣಿಸಿ ಇವರಿಗೆ ಸಂಸ್ಥೆಯ ಪ್ರತಿಷ್ಠಿತ ‘ಗಡಿನಾಡು ಕನ್ನಡ ಪೋಷಕ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
