ಕುಂದಾಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕ ಇವರ ಸಹಯೋಗದಲ್ಲಿ ಕನಕ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಕನಕದಾಸ ಕೀರ್ತನೆಗಳ ಗಾಯನ ಮತ್ತು ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 30-11-2023ರಂದು ಕುಂದಾಪುರದ ‘ನುಡಿ’ಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರದ ಖ್ಯಾತ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಮಾತನಾಡಿ “ಪುರಾಣ ಹಾಗೂ ಆಧುನಿಕ ಕಾವ್ಯಗಳ ಸುಲಭ ಅರ್ಥೈಸುವಿಕೆಗೆ ಗಮಕ ಕಲೆ ಪೂರಕವಾದುದು. ಕಾವ್ಯಗಳಲ್ಲಿನ ಸಾಂದರ್ಭಿಕವಾದ ಸಾಹಿತ್ಯ ಶ್ರೀಮಂತಿಕೆಗೆ ರಸಬದ್ಧವಾದ ರಾಗಗಳ ಸಂಯೋಜನೆಯು ಶೋತೃಗಳಿಗೆ ಹೃದ್ಯವಾಗುತ್ತದೆ. ಮನೆಮನೆಗಳಲ್ಲಿ ಗಮಕ ಕಲೆ ಪ್ರಸ್ತುತಗೊಳ್ಳಬೇಕು ಯುವ ಮನಸುಗಳನ್ನು ಅರಳಿಸಬೇಕು.” ಎಂದು ಅವರು ಅಭಿಪ್ರಾಯಪಟ್ಟರು.
ಗಮಕಿಯಾಗಿ ಶ್ರೀಮತಿ ಮಂಜುಳಾ ಸುಬ್ರಮಣ್ಯ ಮಂಚಿ ಹಾಗೂ ವ್ಯಾಖ್ಯಾನಕಾರರಾಗಿ ಸಂಸ್ಕೃತ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರೆ ಇವರು ದ.ರಾ. ಬೇಂದ್ರೆಯವರ ಮೇಘದೂತ ಕಾವ್ಯ ಭಾಗವನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಮಾರ್ ಕೆಮ್ಮಣ್ಣು ಅಧ್ಯಕ್ಷತೆ ವಹಿಸಿ, ಶ್ರೀಮತಿ ಸುಧಾ ಹೆಬ್ಬಾರ್ ಉಪಸ್ಥಿತರಿದ್ದರು.
ಉಡುಪಿ ತಾಲೂಕು ಗಮಕ ಕಲಾಪರಿಷತ್ ಅಧ್ಯಕ್ಷರಾದ ಎಂ.ಎಲ್. ಸಾಮಗ ಸ್ವಾಗತಿಸಿ, ಗಮಕ ಕಲಾ ಪರಿಷತ್ ಕುಂದಾಪುರ ಘಟಕದ ಅಧ್ಯಕ್ಷರಾದ ಎಚ್. ಸುಜಯೀ0ದ್ರ ಹಂದೆ ಕಾರ್ಯಕ್ರಮವನ್ನು ನಿರ್ವಹಿಸಿ, ಕಾರ್ಯದರ್ಶಿ ವಿಶ್ವನಾಥ ಕರಬ ವಂದಿಸಿದರು.