ಮಣಿಕೃಷ್ಣಸ್ವಾಮಿ ಅಕಾಡೆಮಿ ರಿ. ಹಾಗೂ ನಾಗರಿಕ ಸೇವಾ ಸಮಿತಿ ಜಂಟಿಯಾಗಿ ಸುರತ್ಕಲ್‌ನ ನಾಗಬನ ರಸ್ತೆಯಲ್ಲಿರುವ ಈಶವಾಸ್ಯದ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ದಿನಾಂಕ 20 ಮೇ 2026ರಂದು ಕಥಾ ಕೀರ್ತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಇವರು ‘ಶ್ರೀ ಕೃಷ್ಣತುಲಾಭಾರ’ ಹರಿಕಥೆಯನ್ನು ಪ್ರಸ್ತುತಪಡಿಸಿದರು.
ಸರ್ವೇಸಾಮಾನ್ಯ ಪರಂಪರೆಯಂತೆ ಯಮನ್ ರಾಗದಲ್ಲಿ ಶ್ಲೋಕ ಶ್ರೀ ಗಣೇಶ ಕೀರ್ತನೆಯನ್ನು ಹಾಡಿ ದುರ್ಗಾ ರಾಗದಲ್ಲಿ ಕೇಳನೋ ಹರಿ ತಾಳನೋ… ಪುರಂದರ ದಾಸರ ಕೀರ್ತನೆಯನ್ನು ಎತ್ತಿಕೊಂಡು ಉತ್ತಮ ದಾಸ ಸಂದೇಶವನ್ನು ಪೀಠಿಕೆಯಾಗಿ ಬಿತ್ತರಿಸಿದರು. ಭಜನೆ, ಆರಾಧನೆಗಳೇ ಭಕ್ತಿಯಲ್ಲ. ಅಹಂ ರಹಿತವಾದ ಸದ್ಗುಣಪೂರ್ಣ ಕರ್ತವ್ಯ ಕರ್ಮದಿಂದ ದೇವರ ಅನುಗ್ರಹ ಪ್ರಾಪ್ತಿ ಸಾಧ್ಯ ಎಂಬ ವಿಚಾರಗಳೊಂದಿಗೆ ಡಿವಿಜಿಯವರ ಕಗ್ಗ ಕನಕದಾಸರ ತತ್ತ್ವದ ಉದಾಹರಣೆಗಳನ್ನು ನೀಡಿದರು.
ಸಮಾಜದ ಮಧ್ಯೆ ನಡೆಯುವ ಮೋಸ, ಗೃಹ ಸತ್ಕಾರದಲ್ಲಿನ ನಿಯಮ, ಪತ್ನಿಗೆ ಹೆದರುವವರ ಸಂಗತಿ… ಇತ್ಯಾದಿ ಅನೇಕ ಹಾಸ್ಯ ಚಟಾಕಿಗಳನ್ನು ಹರಿದಾಸರು ಕಥಾ ಮಧ್ಯ ಸಾಂದರ್ಭಿಕವಾಗಿ ಹರಿಸಿ ಕೇಳುಗರ ಕುತೂಹಲ ಹೆಚ್ಚಿಸಿದರು. ಶ್ರೀ ಕೃಷ್ಣ ರುಕ್ಕಿಣಿಯ ರೈವತಗಿರಿ ವಿಹಾರ ದೇಶ್ ರಾಗದಲ್ಲಿ ಹಾಡಿ ನಾರದರ ಮೂಲಕ ಸಿಕ್ಕ ಪಾರಿಜಾತ ಸುಮ ರುಕ್ಕಿಣಿಯ ಮುಡಿಗೇರಿದ ವಾರ್ತೆಯನ್ನು ದುರ್ವಾರ್ತೆಯಾಗಿ ಸ್ವೀಕರಿಸಿದ ಸತ್ಯಭಾಮಾ ದೇವಿಯ ದುಃಖ ವಾಸಂತಿ ರಾಗದ ಪದ್ಯದೊಂದಿಗೆ ಮುಂದುವರಿದು ಶ್ರೀ ಕೃಷ್ಣ ಭಾಮೆಯನ್ನು ಸಮಾಧಾನಗೊಳಿಸುವ ಸನ್ನಿವೇಶವನ್ನು ಮಾಂಡ್, ಅಬೇರಿ ರಾಗಗಳಲ್ಲಿ ಬಿಂಬಿಸಿದರು. ಸುರಲೋಕ ದಾಳಿಗೆ ಹಂಸಧ್ವನಿಯ ಚುರುಕು ನಡೆಯ ಹಾಡು, ಭಾಮೆಯ ವ್ರತ ನಿರ್ವಹಣೆಗೆ ಶಿವರಂಜಿನಿ ರಾಗದ ಜತೆಗೆ ನಾರದರ ಹಾಡುಗಳನ್ನು ಕೇದಾರ, ಮೋಹನ ಛಾಯೆಯಲ್ಲಿ ಪ್ರೇಕ್ಷಕರಲ್ಲಿ ಭಜನೆ ಮಾಡಿಸಿದರು. ಅನಂತರ ಪತಿದಾನ ಸ್ವೀಕರಿಸಲೊಲ್ಲದ ಶರಣರು ಬಡವರು ನಾವಯ್ಯ… ಹಾಡನ್ನು ಷಣ್ಣುಖಪ್ರಿಯ ರಾಗದಲ್ಲಿ ಹಾಡಿದರು. ಕೊನೆಯಲ್ಲಿ ರುಕ್ಕಿಣಿಯ ಮೂಲಕ ಭಕ್ತಿಯ ತುಲಾಭಾರ ಹೇಗೆಂಬುದನ್ನು ತುಲಸಿ ದಳ ಅರ್ಪಣೆಯ ಮೂಲಕ ಭೈರವಿ ಸ್ತುತಿಯೊಂದಿಗೆ ಕಥಾಭಾಗ ಸಂಪನ್ನಗೊಳಿಸಿ ಮಧ್ಯಮಾವತಿ ರಾಗದಲ್ಲಿ ಮಂಗಳ ಹಾಡಿದರು.
ಹರಿಕಥಾ ಕಲೆಯಲ್ಲಿ ಹರಿದಾಸರಿಗೆ ನಿರೂಪಣೆ ಜತೆಗೆ ಕರ್ನಾಟಕ, ಹಿಂದುಸ್ತಾನಿ, ಜನಪದ ಯಕ್ಷಗಾನೀಯ ಛಾಯೆಗಳನ್ನೆಲ್ಲ ಬಳಸುವ ಸ್ವಾತಂತ್ಯವಿದೆ. ಹಾಗಾಗಿ ಈ ಎಲ್ಲ ಪ್ರತಿಭೆಯನ್ನು ಹೊಂದಿರುವ ತೋನ್ಸೆ ಇವರಿಂದ ನಡೆದ ಈ ಹರಿಕಥಾ ಕೀರ್ತನೆ, ಭಕ್ತಿ ಭಾವದ ಜತೆಗೆ ಒಂದು ಅದ್ಭುತವಾದ ರಂಜನೆ ನೀಡಿತು. ಹರಿಕಥೆ ಕಾರ್ಯಕ್ರಮಕ್ಕೆ ಅಷ್ಟೇ ಪೂರಕವಾದ ಹಿಮ್ಮೇಳ ಅಗತ್ಯ. ಕೇವಲ ಹಾಡಿಗಷ್ಟೇ ನುಡಿಸುವುದಲ್ಲ ಸೀಕ್ವೆನ್ಸ್ ನೀಡುವ ಸಂಗೀತ ಅನುಭವವು ಬೇಕು. ಸತೀಶ್ ಸುರತ್ಕಲ್ ಕೀಬೋರ್ಡ್ ನಲ್ಲಿ ದೀಪಕ್ ರಾಜ್ ಉಳ್ಳಾಲ್ ತಬಲಾದಲ್ಲಿನ ತಬಲಾದಲ್ಲಿ ಸಾಥ್ ನೀಡಿದರು. ಅಭಿಷೇಕ್ ತಾಳ ಮತ್ತು ಸಹಗಾನದಲ್ಲಿ ಸಹಕರಿಸಿದರು.
– ಜಾಹ್ನವಿ, ಸುರತ್ಕಲ್
