ಧಾರವಾಡ : ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ ಧಾರವಾಡ ಇದರ ವತಿಯಿಂದ ‘ಹಿರಿಯಕ್ಕನ ಅಕ್ಷರ ಸಂಭ್ರಮ’ ಎರಡನೆಯ ಕಾರ್ಯಕ್ರಮ ಅಕ್ಕ ಮಾಲತಿ ಪಟ್ಟಣಶೆಟ್ಟಿಯವರ ಅಕ್ಷರ ಸಂಭ್ರಮವನ್ನು ದಿನಾಂಕ 29 ಮೇ 2026ರಂದು ಸಂಜೆ 5-00 ಗಂಟೆಗೆ ಧಾರವಾಡ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಹಿತಿ ಡಾ. ವೀರಣ್ಣ ರಾಜೂರ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ ಧಾರವಾಡ ಇದರ ಅಧ್ಯಕ್ಷರಾದ ಶ್ರೀಮತಿ ರೂಪಾ ಜೋಶಿ ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಅಧ್ಯಯನ ಪೀಠದ ಪ್ರವಾಚಕಿ ಡಾ. ಅನಿತಾ ಗುಡಿ ಇವರು ಆಶಯ ಭಾಷಣ ಮಾಡಲಿದ್ದು, ಕತೆಗಾರ ವಿಮರ್ಶಕರಾದ ಡಾ. ಸುಭಾಷ್ ಪಟ್ಟಾಜೆ ಇವರು ‘ಕಾವ್ಯ ಸಾಹಿತ್ಯದ ಕುರಿತು’ ಹಾಗೂ ಯುವ ವಿಮರ್ಶಕರಾದ ವಿಕಾಸ ಹೊಸಮನಿ ಇವರು ‘ಕಥಾ ಸಾಹಿತ್ಯದ ಕುರಿತು’ ಉಪನ್ಯಾಸ ನೀಡಲಿದ್ದಾರೆ.

