ಕಾಸರಗೋಡು: ಮಾತಾಪಿತರ ಆಶೀರ್ವಾದ ಯಾವತ್ತೂ ಒಳಿತನ್ನು ಉಂಟುಮಾಡುತ್ತದೆ. ಅವರ ಆಶೀರ್ವಾದ ಕಲ್ಪವೃಕ್ಷಕ್ಕೆ ಸಮಾನವಾದದು. ಕಾಸರಗೋಡಿದ ನೆಲ ಸಾಂಸ್ಕೃತಿಕವಾಗಿಯೂ ಸಾಹಿತ್ಯಿಕವಾಗಿಯೂ ಸಂಪತ್ಭರಿತವಾದದ್ದು, ಈ ನೆಲದಲ್ಲಿ ಆತ್ಮೀಯ ರಂಗಭೂಮಿಯ ಕಲ್ಪನೆ ಯೊಂದಿಗೆ ಜ್ಯೋತಿಶ್ರೀ ಟ್ರಸ್ಟ್ ಮೊದಲ ಹೆಜ್ಜೆ ಇಡುತ್ತಿದೆ. ತನ್ನ ಪತಿದೇವರಿಗೆ ಸಂಗೀತವೆಂದರೆ ಪಂಚಪ್ರಾಣವಾಗಿತ್ತು ಈ ಪರಿಸರದಲ್ಲಿಯೇ ಎಷ್ಟೋ ಸಂಗೀತ ಕಾರ್ಯಕ್ರಮಗಳು ಜರಗಿದೆ ಮತ್ತಷ್ಟು ಸಾಂಸ್ಕೃತಿಕ ಕೆಲಸ ಮಾಡಲು ಯೋಚಿಸಿ ಅಂತರಂಗ ಕಾಸರಗೋಡಿನವರಿಗೆ ತೆರೆದಿದೆ ಎಂದು ಟ್ರಸ್ಟಿನ ಅಧ್ಯಕ್ಷ್ಯೆ ಶ್ರೀಮತಿ ಜ್ಯೋತಿಪ್ರಭಾ ರಾವ್ ಹೇಳಿದರು.
ಅವರು ಕಾಸರಗೋಡಿನ ಶಾಂತ ದುರ್ಗಾಂಭಾ ರಸ್ತೆಯಲ್ಲಿರುವ ‘ಬನಶಂಕರಿ’ಯ ಆವರಣದಲ್ಲಿ ನಿರ್ಮಿಸಲಾದ ‘ಜ್ಯೋತಿಶ್ರೀ’ ಅಂತರಂಗ ರಂಗವೇದಿಕೆ ಹಾಗೂ ಜೋತಿಶ್ರೀ ಟ್ರಸ್ಟ್ ಇದರ ಲಾಂಛನವನ್ನು ಬಿಡುಗಡೆಗೊಳಿಸಿ, ದೀಪ ಬೆಳಗಿಸಿ ಮಾತನಾಡುತ್ತಿದ್ದರು.ಏಪ್ರಿಲ್ ತಿಂಗಳ 12ರಂದು ಬನ ಸುಂದರಿ ಆವರಣದಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗ ನಿರ್ದೇಶಕರು, ಚಲನಚಿತ್ರ ನಟರು, ಟ್ರಸ್ಟಿನ ಉಪಾಧ್ಯಕ್ಷರು ಆಗಿರುವ ಕಾಸರಗೋಡು, ಚಿನ್ನಾ ಮಾತನಾಡಿ “ತಂದೆ ತಾಯಿಯವರ ಹೆಸರಲ್ಲಿ ‘ಆತ್ಮೀಯ ರಂಗಭೂಮಿ’ಯ ಕಲ್ಪನೆಯೊಂದಿಗೆ ಕಾಸರಗೋಡಿನಲ್ಲಿ ಪ್ರಪ್ರಥಮವಾಗಿ ನಿರ್ಮಿಸಿದ ‘ಜ್ಯೋತಿಶ್ರೀ ಅಂತರಂಗ’ ಹೊಸ ಪೀಳಿಗೆಯ ಕಲಾವಿದರಿಗೆ ಒಳ್ಳೆಯ ವೇದಿಕೆಯಾಗಿದೆ. ಇದರ ಸದುಪಯೋಗವನ್ನು ಕಲಾವಿದರು ಪಡೆದುಕೊಳ್ಳಬೇಕು” ಎಂದರು.
ಅತಿಥಿಯಾಗಿ ಭಾಗವಹಿಸಿದ ಕಲಾವಿದ ಸಂಗೀತ ಗುರುಗಳು ಆಗಿರುವ ಶ್ರೀ ವಿಶ್ವಾಸ್ ಕೃಷ್ಣ ರವರು ಮಾತನಾಡಿ “ಜ್ಯೋತಿ ಪ್ರಭಾರವರು ನಿಜವಾದ ಜ್ಯೋತಿಯಾಗಿ ಹಲವು ಕಲಾವಿದರಿಗೆ ದಾರಿದೀಪವಾಗಿದ್ದಾರೆ. ಟ್ರಸ್ಟಿನ ನೇತೃತ್ವದಲ್ಲಿ ಜರಗುವ ಎಲ್ಲಾ ಕಾರ್ಯಕ್ರಮಗಳಿಗೆ ಶುಭವಾಗಲಿ” ಎಂದರು. ಕುಮಾರಿಯರಾದ ಶ್ರೀರಕ್ಷಾ, ಶ್ರೇಯ, ರಚನಾ ಪ್ರಾರ್ಥನೆ ಹಾಡಿದರು. ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಖ್ಯಾತ ವೈದ್ಯರಾದ ಡಾ.ಸುಧೇಶ್ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟಿನ ಸಹ ಕಾರ್ಯದರ್ಶಿ ಡಾ. ಸುಮಾ ಕಾಮತ್ ವಂದಿಸಿದರು
ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ವೈ. ಸತ್ಯನಾರಾಯಣ, ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಕಲ್ಮಾಡಿ ಸದಾಶಿವ ಆಚಾರ್ಯ, ಪ್ರಸಾದನ ಕಲಾವಿದ ಹಾಗೂ ರಂಗಕರ್ಮಿ ಪ್ರಕಾಶ್ ಅರುಣ ನಾಯಕ್ ಹಾಗೂ ಟ್ರಸ್ಟಿನ ಮ್ಯಾನೇಜರ್ ಅನಂತ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ. ಶ್ರೀ ಪಾದ ರಾವ್ ಅವರ ಪ್ರೀತಿಯ ಯಮನ್ ರಾಗದಲ್ಲಿ ಅವರ ಮಗಳು ಡಾ. ಸುಮಾ ಕಾಮತ್, ಶಿವಾನಿ ಬಿ. ಮಯ್ಯ ಅವರು ವಾಯಲಿನ್ ನಲ್ಲಿ, ಮೊಮ್ಮಕ್ಕಳಾದ ಶ್ರೀಯುತ ಶ್ರೇಯ ಸುದೇಶ್ ರಾವ್ (ಆರ್ಗನ್), ಶ್ರೀ ರಕ್ಷಾ ಆರ್. ಕಾಮತ್, ರಚನಾ ಆರ್ ಕಾಮತ್ ಇವರು ಹಾಡುಗಳನ್ನು ಹಾಡಿ ರಂಜಿಸಿದರು.
ಡಾ. ಸುಚೇತ ರಾವ್ ಅವರ ಗಣೇಶ ಸ್ತುತಿಯ ನಾಟ್ಯ, ರಮ್ಯಾ ರಾವ್ ಹಾಗೂ ಅನುಶ್ರೀ ಹೊಳ್ಳ ಅವರ ಯಕ್ಷಗಾನ ನೃತ್ಯ, ಕು. ಪ್ರಣಮ್ಯ ಅವರ ನೃತ್ಯ ಮನಸೂರೆಗೊಂಡಿತು. ಕೊನೆಯಲ್ಲಿ ಕಾಸರಗೋಡು ಚಿನ್ನಾ ಅವರು ಭಾಷಾಂತರಿಸಿ ನಿರ್ದೇಶಿಸಿದ ‘ಒಬ್ಬ ಇನ್ನೊಬ್ಬ’ ಕನ್ನಡ ನಾಟಕವು ಎಲ್ಲರ ಮನ ಮೆಚ್ಚುಗೆ ಪಡೆಯಿತು. ಮಣಿಪಾಲದ ಶಶಿಭೂಷಣ ಕಿಣಿ, ಡಾ. ಸುದೇಶ್ ರಾವ್, ವೆಂಕಟೇಶ್ ಶೇಟ್ ಪಾತ್ರವಹಿಸಿ ಅನಿಲ್ ನಾವೂರು ಸಂಗೀತಾ ಹಾಗೂ ಈಶ್ವರ್ ರವರ ಬೆಳಕು ನಾಟಕಕ್ಕೆ ಪೂರಕವಾಗಿತ್ತು.