ಕಾಸರಗೋಡು : ಸುಳ್ಯಮೆಯ ಸೇನ್ಯ ಎಂಬಲ್ಲಿ ಪೆರುವಾಯಿ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಚೊಚ್ಚಲ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 16 ಮಾರ್ಚ್ 2026ರಂದು ನಡೆಯಿತು.

ಈ ಸಮಾರಂಭದಲ್ಲಿ ಪೆರುವಾಯಿ ಪ್ರತಿಷ್ಠಾನದ ಉದ್ಘಾಟನೆ ಮಾಡಿದ ಒಡಿಯೂರು ಸಂಸ್ಥಾನದ ಶ್ರೀಶ್ರೀ ಗುರುದೇವಾನಂದ ಸ್ವಾಮೀಜಿಯವರು ಮಾತನಾಡಿ “ನಮ್ಮ ಸನಾತನ ಧರ್ಮವನ್ನು ಪಾಲಿಸುತ್ತಾ, ಸಾಮಾಜಿಕರಲ್ಲಿ ಪುರಾಣ ಪುಣ್ಯ ಕಥೆಗಳ ಅಂದವನ್ನು ಕಟ್ಟಿಕೊಡುತ್ತಾ ಹಿಂದಿನ ಅನೇಕ ಕಲಾವಿದರು ಚರಿತ್ರಾರ್ಹರಾಗಿ ಉಳಿದರು. ಅವರನ್ನು ಮರೆಯದೆ ಸದಾ ಅಂತಹವರ ನೆನಪನ್ನು ಹಸಿರಾಗಿರಿಸುತ್ತಾ ಬರಬೇಕಾದುದು ನಮಗೆ ಕರ್ತವ್ಯ. ಪೆರುವಾಯಿಯಂತಹಾ ಗ್ರಾಮೀಣ ಪ್ರದೇಶದಿಂದ ಬಂದು ತನ್ನದೇ ದಾರಿಯಲ್ಲಿ ಸಾಗುತ್ತಾ, ಸದಾ ನೆನಪಲ್ಲಿ ಉಳಿಯುವವರು ದಿ. ಪೆರುವಾಯಿ ನಾರಾಯಣ ಶೆಟ್ಟರು. ತನ್ನ ಸ್ವರ ಭಾರದಿಂದ ವೇಷದ ಸ್ವಭಾವವನ್ನು, ಪಾತ್ರಗಳ ಭಿನ್ನತೆಯನ್ನು ಮನ ಮುಟ್ಟುವಂತೆ ನಿರ್ವಹಣೆ ಮಾಡುತ್ತಿದ್ದ ಶೆಟ್ಟರು ಯಕ್ಷರಂಗದ ದಂತಕಥೆ ಎಂದರೂ ಸರಿಯೇ. ಹೆಚ್ಟೇಕೆ? ಪೆರುವಾಯಿ ಶೈಲಿ ಎಂಬ ಮಾತನ್ನು ಉಳಿಸಿ ಅಳಿದರೂ ಸದಾ ನಮ್ಮೊಂದಿಗೆ ಉಳಿದವರು ಅವರು. ಇಂದು ಪೆರುವಾಯಿ ಪ್ರತಿಷ್ಠಾನ ಎಂಬ ಹೊಸ ಪ್ರತಿಷ್ಠಾನವನ್ನ ಅವರ ಮನೆಯವರು ಅದರಲ್ಲೂ ರವಿ ಶೆಟ್ಟಿ ಪೆರುವಾಯಿಯವರು ಆರಂಭಿಸಿದ್ದಾರೆ. ಇದನ್ನು ಉದ್ಧಾಟಿಸುತ್ತಾ ಈ ಸಂಸ್ಥೆಗೆ ಶುಭ ಕೋರುತ್ತೇನೆ” ಎಂದು ಹೇಳಿದರು.

ಶ್ರೀ ಬೆಂಕಿನಾಥೇಶ್ವರ ಮೇಳದ ಕಾರ್ಯಕ್ರಮದಲ್ಲಿ ಪದ್ಮನಾಭ ರೈ ಯಾನೆ ಮಂಜು ಭಂಡಾರಿ, ಯಕ್ಷಗಾನ ಅಕಾಡೆಮಿಯ ಸದಸ್ಯ ಕೈರಂಗಳ ಗುರುರಾಜ್ ಭಟ್, ವರ್ಕಾಡಿಯ ವಾಸುದೇವ ಮಯ್ಯ ಹಾಗೂ ಇನ್ನಿತರರು ಅತಿಥಿಗಳಾಗಿದ್ದರು. ಯಕ್ಷ ಕಲಾವಿದ ಜಯಂತ ಕಾರಂತರು ಪ್ರಾರ್ಥಿಸಿದರು. ಯಕ್ಷಗಾನ ಕಲಾವಿದ, ಅಕಾಡೆಮಿಯ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ‘ಬೆಂಕಿನಾಥೇಶ್ವರ ಮೇಳದ ಸಂಚಾಲಕ ಗುರುಪುರ ದೋಣಿಂಜೆ ಗುತ್ತು ಸುರೇಂದ್ರ ಮಲ್ಲಿಯವರಿಗೆ ಪ್ರಪ್ರಥಮ ‘ಪೆರುವಾಯಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿದರೆ, ರವಿ ಶೆಟ್ಟಿ ಪೆರುವಾಯಿ ಧನ್ಯವಾದವಿತ್ತರು. ಬಳಿಕ ಬೆಂಕಿನಾಥೇಶ್ವರ ಮೇಳದವರಿಂದ ವಿಜಿತ್ ಶೆಟ್ಟಿ ವಿರಚಿತ ‘ಸ್ವರ್ಣ ತುಲಾಭಾರ’ ಪ್ರಸಂಗ ಪ್ರದರ್ಶನಗೊಂಡಿತು.

