ಕೋಟೇಶ್ವರ : ಶ್ರೀ ಕೋಟಿಲಿಂಗೇಶ್ವರ ದೇಗುಲದಲ್ಲಿ ದಿನಾಂಕ 14 ಏಪ್ರಿಲ್ 2026ರಂದು ನೆರೆದ ಭಕ್ತರ ಸಮ್ಮುಖದಲ್ಲಿ ಅರ್ಥಾಂಕುರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯಕ್ಷಗಾನದ ಹಿರಿಯ ಖ್ಯಾತ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ ಇವರು “ಯಕ್ಷಗಾನ ತಾಳಮದ್ದಳೆಯಲ್ಲಿ ಕ್ಷೇತ್ರದ ಹಿರಿಯ ಅರ್ಥದಾರಿಗಳು ತೆರೆಯಿಂದ ಮರೆಗೆ ಸರಿಯುವ ಕಾಲಘಟ್ಟದಲ್ಲಿದ್ದು, ಹೊಸ ತಲೆಮಾರನ್ನು ಹುಟ್ಟುಹಾಕಬೇಕಾಗಿರುವುದು ಅತೀ ಅಗತ್ಯವಾಗಿದೆ. ಇಂದಿನ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಯುವ ಪೀಳಿಗೆಗಳ ರಂಗ ಪ್ರವೇಶವಾಗುವಂತಾಗಲಿ” ಎಂದರು.

ಹೆಸರಾಂತ ಅರ್ಥಧಾರಿ, ಪ್ರಸಂಗಕರ್ತರು ಪ್ರೊ. ಪವನ್ ಕಿರಣ್ ಕೆರೆ ಮಾತನಾಡಿ, “ಜಗತ್ತಿನಲ್ಲಿ ಒಂದು ಕಲೆಗೆ ಹೋಲುವ ಅನೇಕ ಪ್ರಾಕಾರಗಳಿವೆ. ಆದರೆ ತಾಳಮದ್ದಲೆಯಂತಹ ಒಂದು ಕಾರ್ಯಕ್ರಮವಿರುವುದು ಇಡೀ ವಿಶ್ವದಲ್ಲೇ ಯಕ್ಷಗಾನ ಕಲೆಯಲ್ಲಿ ಮಾತ್ರ” ಎಂದರು.
ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಪ್ರಸ್ತಾವಿಸಿ, ಸ್ವಾಗತಿಸಿದರು. ಸಮಿತಿ ಸದಸ್ಯ ಡಾ. ಸುಧಾಕರ ನಂಬಿಯಾರ್ ಉಪಸ್ಥಿತರಿದ್ದರು. ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಕೋಟಿಲಿಂಗೇಶ್ವರ ದೇಗುಲ, ಯಶಸ್ವಿ ಕಲಾ ವೃಂದ ಕೊಮೆ ತೆಕ್ಕಟ್ಟೆ, ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇವರ ನೇತೃತ್ವದಲ್ಲಿ ವರುಷವಿಡೀ ತಿಂಗಳಿಗೊಮ್ಮೆ ಯಕ್ಷಗಾನ ತಾಳಮದ್ದಳೆ ನಡೆಸುವ ಕಾರ್ಯಕ್ರಮದ ಸಹಭಾಗಿತ್ವ ವಹಿಸಿ, ಈ ಕಾರ್ಯಕ್ರಮದಲ್ಲಿ ‘ವೀರಮಣಿ’ ಯಕ್ಷಗಾನ ತಾಳಮದ್ದಳೆ ರಂಗ ಪ್ರಸ್ತುತಿಗೊಂಡಿತು.
