ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ, ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಾಗೂ ಉಡುಪಿಯ ವೆಂಟನಾ ಫೌಂಡೇಶನ್‌ನ ಸಹಯೋಗದಲ್ಲಿ ಆಯೋಜಿಸುತ್ತಿರುವ ‘ಜನಪದ ದೇಶೀಯ ಕಲೆಗಳ ಕಾರ್ಯಾಗಾರ’ವು ದಿನಾಂಕ 28 ಫೆಬ್ರವರಿ 2026ರಂದು ಉಡುಪಿಯ ವಾಸು ಏಜೆನ್ಸೀಸ್ ಬಳಿ ಬಡಗುಪೇಟೆಯ 10.03.28 ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು.

ಈ ಕಾರ್ಯಾಗಾರವನ್ನು ಫೌಂಡೇಶನ್‌ನ ನಿರ್ದೇಶಕಿ ಶಿಲ್ಪಾ ಭಟ್‌ರವರು ಉದ್ಘಾಟಿಸಿ “ಕಲೆ, ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ವಿವಿಧ ನೂತನ ಪ್ರಯೋಗ ಹಾಗೂ ಕಾರ್ಯಕ್ರಮಗಳಿಗೆ ವೆಂಟನಾ ಫೌಂಡೇಶನ್ ಸಹಕಾರ ನೀಡುತ್ತದೆ. ದೇಶೀಯ ಕಲೆಗಳು ಉಳಿಯುವಂತಾಗಲು ಈ ತೆರನಾದ ಕಾರ್ಯಾಗಾರಗಳು ಬಹು ಸಹಕಾರಿ. ಇದೊಂದು ಉಡುಪಿಯಂತಹ ಪುಟ್ಟ ಪಟ್ಟಣಕ್ಕೆ ರಾಷ್ಟ್ರಮಟ್ಟದಲ್ಲಿ ಮಾದರಿಯಾಗಬಹುದಾದ ಕಾರ್ಯಕ್ರಮ.” ಎಂಬುದಾಗಿ ಅಭಿಪ್ರಾಯವಿತ್ತರು.
ಇನ್ನೋರ್ವ ಅತಿಥಿ ಕದಿಕೆ ಟ್ರಸ್ಟಿನ ಸ್ಥಾಪಕ ನಿರ್ದೇಶಕರಾದ ಮಮತಾ ರೈ “ಬಟ್ಟೆಯ ಮೇಲಿನ ಮಾತಾ ನಿ ಪಚೇಡಿ ಶೋಷಣೆಗೆ ಒಳಪಟ್ಟ ಒಂದು ಸಮುದಾಯದ ನೋವೇ ಕಲೆಯಾಗಿ ಮಾರ್ಪಾಟಾದ ಹಿನ್ನೆಲೆಯುಳ್ಳದ್ದು. ನಮ್ಮಲ್ಲಿನ ವಿನ್ಯಾಸಗಾರಿಕೆಯ ಪದವಿ ಪಡೆಯುತ್ತಿರುವಯುವ ಸಮುದಾಯಕ್ಕೆ ಈ ಭಾರತೀಯ ಕಲೆಗಾರಿಕೆಯ ತಾಂತ್ರಿಕ ಅಂಶಗಳು ವಿನೂತನ ಪ್ರಯೋಗಕ್ಕೆ ಎಡೆಮಾಡಿಕೊಡಬಲ್ಲುದು. ಈ ತೆರನಾದ ಕಾರ್ಯಕ್ರಮ ಇನ್ನಷ್ಟು ನಡೆಯಲಿ” ಎಂಬುದಾಗಿ ಹಾರೈಸಿದರು.

ಬಡಗುಪೇಟೆ ಗ್ಯಾಲರಿಯ ಸಂತೋಷ್ ಪೈ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕರಾದ ಜನಾರ್ದನ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು. ಬಟ್ಟೆಗೆ ಅಳಲೇಕಾರಿಯ ರಸವನ್ನು ಸವರಿ, ಬೆಲ್ಲ ಮತ್ತು ಕಬ್ಬಿಣದ ತುಕ್ಕನ್ನು ಕೊಳೆಸಿ ತಯಾರಿಸಿದ ದ್ರಾವಣದಿಂದ ಕಪ್ಪು ವರ್ಣವನ್ನು ಬರುವಂತೆ ಮಾಡಿಕೊಂಡು ಈ ಕಲಂಕಾರಿ ಕಲೆಯ ಚಿತ್ತಾರಗಳು ಬಟ್ಟೆಯ ಮೇಲೆಲ್ಲ ಹರಡಿಕೊಳ್ಳುತ್ತದೆ. ಈ ಕಲೆಯನ್ನು ಸುಮಾರು ನಾಲ್ಕು ದಶಕಗಳಿಗಿಂತಲೂ ಮಿಕ್ಕಿ ರಚಿಸುತ್ತಿರುವ ಜಗದೀಶ್ ಚಿತ್ತಾರವರು ಈ ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ಬಟ್ಟೆಯ ಮೇಲೆ ರಚಿಸಲ್ಪಡುವ ಗುಜರಾತ್‌ನ ಕಲಂಕಾರಿ ಹಾಗೂ ಮಾತಾ ನಿ ಪಚೇಡಿ ಈ ಬಾರಿ ಆಸಕ್ತರಿಗೆ ಕಲಿಸಿಕೊಡುತ್ತಿದ್ದಾರೆ. ಫೆಬ್ರವರಿ 28ನೇ ಶನಿವಾರ ಬ್ಲಾಕ್ ಪ್ರಿಂಟಿಂಗ್ ಕಲಂಕಾರಿ ಮತ್ತು ಮಾರ್ಚ್ 01ನೇ ಭಾನುವಾರ ಮಾತಾ ನಿ ಪಚೇಡಿ ಕಾರ್ಯಾಗಾರಗಳು ಬಡಗುಪೇಟೆಯ ಗ್ಯಾಲರಿಯಲ್ಲಿ ನಡೆಯಲಿದೆ.
