ಓದಿದ್ದು ಎಂ.ಬಿ.ಎ. ಕೆಂಜಾರು ಮಿಲ್ಕ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆಲಸ. ಯಕ್ಷಗಾನ ಹಾಗೂ ನಾಟಕ ಎಂದರೆ ಪಂಚಪ್ರಾಣ. ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಯ ಕೆಂಜಾರಿನ ಉಮಾನಾಥ ಪೂಜಾರಿ ಮತ್ತು ಗೀತಾ ಇವರ ಮಗಳಾಗಿ ದಿನಾಂಕ 2 ಅಕ್ಟೋಬರ್ 1991ರಂದು ಹರಿಣಿ ಕೆಂಜಾರ್ ಇವರ ಜನನ.
ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ, ಆದ್ರೆ ಮನೆಯಲ್ಲಿ ಹೆಣ್ಣು ಎನ್ನುವ ಕಾರಣಕ್ಕಾಗಿ ಸಪೋರ್ಟ್ ಇರಲಿಲ್ಲ (ತಂದೆ ತಾಯಿ ಹೆದರಿಕೆ ಆಗಿರಬಹುದು ಎಲ್ಲಿ ನನ್ನ ಮಗಳು ದಾರಿ ತಪ್ಪುತ್ತಾಳೋ ಎನ್ನುವ ಹಾಗೆ). ಯಾಕಂದ್ರೆ ನಮ್ಮದು ಕಲಾವಿದರ ಕುಟುಂಬ ಅಲ್ಲವೇ ಅಲ್ಲ. ಹಾಗಾಗಿ ಅದರ ಬಗ್ಗೆ ಯಾರೂ ಉತ್ಸಾಹ ತೋರಿಸುವವರೇ ಇರಲಿಲ್ಲ. ಆದ್ರೆ ಯಕ್ಷಗಾನ ಕಲಿಯಬೇಕೆಂದು ಆಸೆ ಇತ್ತು. ಹಾಗಾಗಿ ಪಿ.ಯು.ಸಿ.ಗೆ ಕಟೀಲ್ ಕಾಲೇಜುಗೆ ಸೇರಿದೆ. ಅಲ್ಲಿಂದ ಸ್ವಲ್ಪ ಕಲಿತುಕೊಂಡೆ. ಪಿ.ಯು.ಸಿ. ಹಾಗೂ ಡಿಗ್ರಿ ಕಾಲೇಜಿನಲ್ಲಿ ಕಲಿತದ್ದು ವಾರ್ಷಿಕೋತ್ಸವಕ್ಕೆ ಮಾತ್ರ ಸೀಮಿತವಾಗಿತ್ತು. ಆ ಸಮಯದಲ್ಲಿ ಎಲ್ಲೂ ಕೂಡ ಪ್ರತ್ಯೇಕ ಕ್ಲಾಸ್ ಎಂಬುದು ಇರಲಿಲ್ಲ. ಒಂದು ದಿನ ದೇವಿ ಮಹಾತ್ಮೆ ಯಕ್ಷಗಾನ ನಡೆಯುವಲ್ಲಿ ಯಕ್ಷಗಾನ ನೋಡುವಾಗ ದೇವಿ ಪ್ರತ್ಯಕ್ಷ ಆಗುವ ಹೊತ್ತಿಗೆ ತುಂಬಾ ಬಾಹುಕಳಾಗಿದ್ದೆ, ಮನಸ್ಸಿನಲ್ಲೇ ಜಗನ್ಮಾತೆಯಲ್ಲಿ ಹೇಳಿಕೊಂಡೆ ನಾನು ಯಾವಾಗ ಯಕ್ಷಗಾನ ಸಂಪೂರ್ಣವಾಗಿ ಕಲಿಯುತ್ತೇನೆಯೋ ಇಲ್ಲವೋ. ನಿನ್ನ ಪಾತ್ರ ಮಾಡಬೇಕೆನ್ನುವ ಕನಸು ಕನಸಾಗಿಯೇ ಉಳಿಯುತ್ತದೆಯೋ ಏನೋ ಎನ್ನುವ ಹಾಗೆ ಯೋಚಿಸಿ ಕಣ್ಣಲ್ಲಿ ನೀರು ಬಂತು. ನಾನು ಕೇಳಿದ್ದು ಜಗನ್ಮಾತೆಗೆ ಮುಟ್ಟಿತೋ ಏನೋ. ನಾನು ಕೇಳಿಕೊಂಡು ಒಂದು ವರ್ಷದೊಳಗೆ, ಲಕ್ಷ್ಮಣ ಕುಮಾರ್ ಮರಕಡ ಅವರು ಯಕ್ಷಗಾನ ತರಗತಿಯನ್ನು ಹೊಸದಾಗಿ ಪ್ರಾರಂಭಿಸುತ್ತಾರೆ ಎಂದು ನನ್ನ ತಂದೆ ತಿಳಿಸಿದ್ದರು. ಆ ಸಮಯದಲ್ಲಿ ಮಾವನಲ್ಲಿ ಹೇಳಿಸಿ ತಂದೆಯ ಒಪ್ಪಿಗೆ ಪಡೆದು ಯಕ್ಷಗಾನ ನಾಟ್ಯಾಭ್ಯಾಸಕ್ಕೆ ಸೇರಿಕೊಂಡೆ. ಅದೇ ಸಮಯದಲ್ಲಿ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಇವರಲ್ಲಿ ಭರತನಾಟ್ಯಕ್ಕೆ ಸೇರಿಸಿದ್ದರು. ಅಲ್ಲಿಂದ ನನ್ನ ಹೊಸ ಬಣ್ಣದ ಬದುಕು ಶುರುವಾಯಿತು. ಆಮೇಲೆ ನಾಟಕ, ಫಿಲಂ, ಧಾರಾವಾಹಿಯಲ್ಲಿ ಅಭಿನಯಿಸಿ ಯಶಸ್ವಿಯಾದೆ.


ಯಕ್ಷಗಾನದಲ್ಲಿ ನನ್ನ ಸಾಧನೆಗೆ ನನ್ನ ಗುರುಗಳೇ ಪ್ರೇರಣೆ. ಒಂದು ದಿವಸ ಶುಭವರ್ಣ ಸಂಸ್ಥೆಯ ವಾರ್ಷಿಕೋತ್ಸವಕ್ಕೆ ನನಗೆ ಬಣ್ಣದ ವೇಷ ಯಮಧರ್ಮನ ಪಾತ್ರವಿತ್ತು. ಆ ದಿವಸ ನನಗೆ ಚಿಟ್ಟಿ ಇಟ್ಟು ಬಣ್ಣ ಹಾಕಿದವರು ಕಟೀಲು ಮೇಳದ ಬಣ್ಣದ ವೇಷದ ಕಲಾವಿದರಾದ ಬಾಲಕೃಷ್ಣ ಮಿಜಾರ್. ಆ ಮುಖವರ್ಣಿಕೆಯನ್ನು ನೋಡಿ ನಾನು ಪ್ರೇರಿತರಾಗಿ ಹೇಗೆ ಮಾಡುವುದು ಎಂದು ಅವರಲ್ಲಿ ಕೇಳಿಕೊಂಡೆ. ಆ ದಿವಸ ನನಗೆ ಬಣ್ಣದ ವೇಷದವ್ರಿಗೆ ಎಷ್ಟು ಕಷ್ಟ ಇದೆ ಎಂದು ಅರಿವಾಯಿತು. ಆಮೇಲೆ ಕಟೀಲು ಮೇಳದ ಕಲಾವಿದರಾದ ರಂಜಿತ್ ರೈ ಮಡಂದೂರು ಇವರಲ್ಲಿ ಚಿಟ್ಟಿ ಇಡುವ ಬಗ್ಗೆ ಹಾಗೂ ಅದರ ಹದ ಮಾಡುವ ಬಗ್ಗೆ (ಸುಣ್ಣ, ಸಫೇದ್ ಹಾಗೂ ಅಕ್ಕಿಯ ಹಿಟ್ಟು ಸರಿಯಾದ ಪ್ರಮಾಣ ಹಾಕಿದ್ರೆ ಮಾತ್ರ ಅದು ಮಲ್ಲಿಗೆಯ ಮೊಗ್ಗಿನ ಹಾಗೆ ಬರಬೇಕು) ಕೇಳಿ ತಿಳಿದುಕೊಂಡೆ. ನಿರಂತರ ಗುರುಗಳಲ್ಲಿಯೂ ಕೇಳಿ ಮಾಹಿತಿ ಪಡೆದುಕೊಂಡು ನಾನೇ ಮುಖವರ್ಣಿಕೆ ಮಾಡಲು ಅಭ್ಯಸಿಸಿ ಉಡುಪಿಯಲ್ಲಿ ನಡೆದ ಯಕ್ಷಗಾನದ ಸಂದರ್ಭದಲ್ಲಿ ನಾನೇ ಮುಖವರ್ಣಿಕೆ ಮಾಡಿದೆ. ಗುರುಗಳ ಆಶೀರ್ವಾದದಿಂದ ಮತ್ತು ಜಗನ್ಮಾತೆಯ ಅನುಗ್ರಹದಿಂದ ಪ್ರಯತ್ನ ಸಫಲವಾಯಿತು. ಎಲ್ಲೆಡೆ ಖ್ಯಾತಿ ಪಡೆದೆ. ಚಿಟ್ಟಿ ಇಟ್ಟು ಬಣ್ಣದ ವೇಷ ಮಾಡಿದ ಪ್ರಥಮ ಮಹಿಳೆ ಎನ್ನುವ ನೆಗಳ್ತೆಗೆ ಪಾತ್ರವಾದೆ. ಆ ಹೊತ್ತಿಗೆ ಡಾ. ಶ್ರುತಕೀರ್ತಿ ನನ್ನಲ್ಲಿ ಮಾಹಿತಿ ಪಡೆದುಕೊಂಡು ಕಟೀಲಿನ ಮಾಸ ಪತ್ರಿಕೆ “ಯಕ್ಷ ಪ್ರಭಾದಲ್ಲಿ” ಲೇಖನ ಬರೆದರು. ಇದು ನನ್ನ ಜೀವನದ ಬಹು ದೊಡ್ಡ ಗೆಲುವು. ‘ಬೊಳ್ಳಿ ಮಲೆತ ಶಿವಶಕ್ತಿಲು’ ನಾಟಕದಲ್ಲಿ ಕೂಡ ಭಗವತಿಯ ಪಾತ್ರದಲ್ಲಿ ನನಗೆ ಬಹಳ ಖ್ಯಾತಿ ಲಭಿಸಿದೆ. ಒಟ್ಟಾರೆಯಾಗಿ ಅಂದು ನಾನು ಕಣ್ಣೀರಿಟ್ಟು ಕೇಳಿದ್ದೆಲ್ಲವನ್ನೂ ನನಗೆ ತಾಯಿ ಕರುಣಿಸಿದ್ದಾಳೆ.


ಯಕ್ಷಗಾನದ ಗುರುಗಳು:-
ದೇವಿಪ್ರಸಾದ್ ಕಟೀಲು, ಲಕ್ಷ್ಮಣ ಕುಮಾರ್ ಮರಕಡ, ಪೂರ್ಣೇಶ್ ಆಚಾರ್ಯ, ವಿಜಿತ್ ಶೆಟ್ಟಿ ಆಕಾಶ ಭವನ, ಸಂಜೀವ ಕಜೆಪದವು.
ನಾಟಕ ರಂಗದ ಗುರುಗಳು:-
ಡಾ. ಎಂ. ದೇಜಪ್ಪ ದಲ್ಲೋಡಿ, ಪರಮಾನಂದ ಸಾಲಿಯಾನ್, ಕುಮಾರ್ ಮಾಲೆಮಾರ್, ಗಂಗಾಧರ್ ಕಿರೋಡಿಯನ್, ನವನೀತ್ ಶೆಟ್ಟಿ, ಲಾವಣ್ಯವಿಶ್ವಾಸ್ ದಾಸ್, ಅಶೋಕ್ ಆಂಬ್ಲಮೊಗರು, ಶ್ರೀಧರ್ ಶೆಟ್ಟಿ.
ನೆಚ್ಚಿನ ಪ್ರಸಂಗಗಳು:-
ದೇವಿಮಹಾತ್ಮೆ, ಮಹಿಮೆದಪ್ಪೆ ಮಂತ್ರದೇವತೆ, ಕಾಳೀಯ ಮಥನ, ಶಬರಿಮಲೆ ಅಯ್ಯಪ್ಪ, ಅಂಬಾ ಶಪಥ, ರಕ್ತ ರಾತ್ರಿ ಇತ್ಯಾದಿ.
ನಿರ್ವಹಿಸಿದ ಪಾತ್ರಗಳು:-
ಸೀತೆ, ಸರಸ್ವತಿ, ಶ್ರೀದೇವಿ, ಮಂತ್ರದೇವತೆ, ಯಮಧರ್ಮ, ಕೃಷ್ಣ, ರಾಮ, ಹನುಮಂತ, ಶಿವ, ಕಾಳಿಂಗ, ದೇವೇಂದ್ರ, ಬಲರಾಮ, ಕೌಶಿಕೆ, ಮಧು-ಕೈಟಭ, ಚಂದುಗಿಡಿ, ರಕ್ತಬೀಜ, ಶಭರಾಸುರ, ಕಂಸ, ಜಮದಗ್ನಿ.
ಪ್ರಸ್ತುತ ತಾಳಮದ್ದಳೆಯಲ್ಲಿಯೂ ಅರ್ಥಧಾರಿಯಾಗಿ ಪಾತ್ರ ನಿರ್ವಹಿಸುತ್ತೇನೆ.
ನೆಚ್ಚಿನ ಭಾಗವತರು ಹಾಗೂ ಚೆಂಡೆ – ಮದ್ದಳೆ ವಾದಕರು:-
ಬಲಿಪರು, ಕೌಶಿಕ್ ರಾವ್.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಪರಂಪರೆಯ ಯಕ್ಷಗಾನಕ್ಕೆ ಪ್ರಾಧಾನ್ಯತೆ ನೀಡಬೇಕು. ಈಗಿನ ಯುವಪೀಳಿಗೆ ಯಕ್ಷಗಾನದ ಚೌಕಟ್ಟನ್ನು ಮೀರಿ ಪಾತ್ರ ನಿರ್ವಹಿಸುವಂತದ್ದು, ಹಾಸ್ಯದ ಬಳಕೆ ಕೆಲವೊಂದು ವಿಷಯಗಳು ಬೇಸರ ತರುತ್ತದೆ. ಒಟ್ಟಾರೆಯಾಗಿ ಪರಂಪರೆಯ ಯಕ್ಷಗಾನಕ್ಕೆ ಒತ್ತು ಕೊಡಬೇಕು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಈಗಿನ ಪ್ರೇಕ್ಷಕರು ಯಕ್ಷಗಾನದ ಮೇಲೆ ಒಲವು ಇರುವವರು ಅನೇಕ ಜನರಿದ್ದಾರೆ. ಹಾಸ್ಯವನ್ನು ಮಾತ್ರ ಅಪೇಕ್ಷೆ ಪಡದೆ ಕಥೆಯಲ್ಲಿ ಎಷ್ಟು ಮೌಲ್ಯವಿದೆಯಂದು ತುಲನೆ ಮಾಡುವವರು ಅನೇಕ ಜನರಿದ್ದಾರೆ.
ನಾಟಕದಲ್ಲಿ ಮಾಡುವ ಪಾತ್ರ ಯಕ್ಷಗಾನದಲ್ಲಿ ಹಾಗೂ ಯಕ್ಷಗಾನದಲ್ಲಿ ಮಾಡುವ ಪಾತ್ರ ಎರಡು ಹೇಗೆ ಸಹಕಾರಿಯಾಗಿದೆ:-
ಯಕ್ಷಗಾನ ಎಂಬುದು ಗಂಡುಕಲೆ ಎಂದೇ ಪ್ರಸಿದ್ಧಿಯಾಗಿದೆ. ಹಾಗಾಗಿ ಪಾತ್ರ ನಿರ್ವಹಿಸುವಾಗ ಗಂಡು ಮಕ್ಕಳ ಹಾಗೆ ಶೈಲಿ ಮಾಡಬೇಕು. ಯಕ್ಷಗಾನೀಯ ಶೈಲಿ ಮತ್ತು ನಾಟಕದ ಶೈಲಿ ಬೇರೆಯೇ. ತುಂಬಾ ವ್ಯತ್ಯಾಸವಿದೆ. ನಾಟಕದಲ್ಲಿ ಬಹಳ ನಾಜೂಕಾಗಿ ಪಾತ್ರ ನಿರ್ವಹಿಸಬೇಕು. ಪೌರಾಣಿಕ ನಾಟಕ ಮಾಡುವಾಗ ಯಕ್ಷಗಾನ ಗೊತ್ತಿರುವವರಿಗೆ ಇತರರಿಗಿಂತ ತುಂಬಾ ಸುಲಭ ಎನಿಸುತ್ತದೆ. ಆದ್ರೆ ಸಾಮಾಜಿಕ ನಾಟಕದಲ್ಲಿ ನಮ್ಮ ಮಾತು ನಡೆ ನುಡಿ ಎಲ್ಲವೂ ನಾಜೂಕಾಗಿರಬೇಕು.
ಮಹಿಳಾ ಯಕ್ಷಗಾನದಲ್ಲಿ ನೀವು ಕಂಡುಕೊಂಡ ಸಾಧಕ ಹಾಗೂ ಬಾಧಕಗಳು:-
ನನಗೆ ವೈಯಕ್ತಿಕವಾಗಿ ಮಹಿಳೆ ಎನ್ನುವ ಕಾರಣಕ್ಕಾಗಿ ಚಿಕ್ಕಂದಿನಲ್ಲಿ ಯಕ್ಷಗಾನ ನಾಟ್ಯ ಮಾತ್ರ ಅಲ್ಲ. ಯಕ್ಷಗಾನ ನೋಡುವುದಕ್ಕೂ ಅವಕಾಶ ಮನೆಯವರು ಕೊಡ್ತಾ ಇರ್ಲಿಲ್ಲ. ಈಗ ತುಂಬಾ ಬದಲಾವಣೆಯಾಗಿದೆ. ಮಹಿಳೆಯರಿಗೆ ಪ್ರಾಧಾನ್ಯತೆ ಇದೆ. ಆದರೂ ನಾವು ಹವ್ಯಾಸಿಯಾಗಿಯೇ ಮಾಡಬೇಕು ಹೊರತು ಮಹಿಳೆಯರದ್ದೇ ಒಂದು ಮೇಳ ಆದ್ರೆ ಬಹಳ ಸಂತೋಷದಾಯಕ.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಇನ್ನೂ ಅನೇಕ ಪರಂಪರೆಯ ವೇಷ ಮಾಡಿ ಪರಂಪರೆಯ ಯಕ್ಷಗಾನದ ಸೊಗಡನ್ನು ಬಿಂಬಿಸಬೇಕು. ಮಹಿಳೆಯರದ್ದೇ ಒಂದು ಮೇಳ ಮಾಡಿ ಪರಂಪರೆಯ ಯಕ್ಷಗಾನವನ್ನು ಮಾಡಬೇಕು ಎನ್ನುವ ಕನಸು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನ ಎಂಬುದು ಸಮುದ್ರ. ನದಿಯನ್ನು ದಾಟಿ ಸಮುದ್ರಕ್ಕೆ ಇಳಿದಿದ್ದೇನೆ. ಕಲಿಯಲು ಇನ್ನಷ್ಟು ಇದೆ. ಇನ್ನಷ್ಟು ಸಾಧನೆ ಮಾಡುವುದಕ್ಕಿದೆ.

ಭಾಗವಹಿಸಿದ ನಾಟಕ ತಂಡ ಮತ್ತು ನಿರ್ವಹಿಸಿದ ಪಾತ್ರಗಳು:-
* ಮಂಗಳ ಕಲಾವಿದರ್ ಕುಡ್ಲ- ಕಟ್ಟೆದ ಗುಳಿಗೆ – ಹಾಸ್ಯ (ಪ್ರೇತ).
* ಪವನ ಕಲಾವಿದೆರ್ ಕುಡ್ಲ ‘ತುಯಿಲೇಕ ಅತ್ತ್’ – ನಾಯಕಿ ‘ಪನೋಡೆನ’ ಡ್ರಾಮಾ – ನಾಯಕಿ.
* ನಮನ ಕಲಾವಿದೆರ್ ಕುಡ್ಲ – ‘ಶಿರಡಿ ಸಾಯಿಬಾಬ’.
* ಕಲಾಮೃತ ಕಲಾವಿದೆರ್ ವಾಮಂಜೂರ್ ‘ಕಥೆ ಏರ್ ಬರೆಪೆರ್’ – ನಾಯಕಿ.
* ಪರಮ ಪದ್ಮ ಕಲಾವಿದೆರ್ – ‘ಕಾರ್ಣಿಕದ ಅಮರ್ ಸಿರಿಕುಳು’ (ಅಬ್ಬಗ ದಾರಗ) – ಪಾತ್ರ ಅಬ್ಬಗ, ‘ಏಳುವೆರ್ ದೆಯ್ಯಂಗಳು’ – ರಂಭಾಮಣಿ.
* ಸಾಯಿ ಶಕ್ತಿ ಕಲಾ ಬಳಗ ‘ಬೊಳ್ಳಿ ಮಲೆತ ಶಿವಶಕ್ತಿಲು’ – ಭಗವತಿ
* ‘ಜೋಡು ಜೀಟಿಗೆ’ – ರಾಣಿ.
ಕಿರುಚಿತ್ರ – ಕಾಂಪೌಂಡ್ ಗೋಚರ, ಸುಸುರುಕಡ್ಡಿ, ಶಿವ ಸ್ವರೂಪಿ, ರಿಕ್ಷಾ ಡ್ರೈವರ್, ತೆಲಿಕೆದ ಗೊಂಚಿಲ್, MG road 4th block, ಮಾಯೋದ ನಿರೆಲ್, ನಮ್ಮ ಟೀಚರ್, ಕಾರ್ಣಿಕದ ಕರಿಯಜ್ಜೆ ಆಲ್ಬಂ.
ಚಿತ್ರಗಳು:-
ನೇಮೊದ ಬೂಲ್ಯ, ಪುಂಡಿಪಣವ್, ಪಿರ್ಕಿಲು ಹಾಗೂ ಕನ್ನಡ ಹಾರರ್ ಮೂವೀ.
ಹವ್ಯಾಸಗಳು:-
ಸ್ಟೋರಿ ಬುಕ್ ಓದುವುದು, ಕಿರುಚಿತ್ರ ಮತ್ತು ಫಿಲಂ ಆಕ್ಟಿಂಗ್, ಡ್ರಾಮಾ, ಭಜನೆ, ರಂಗೋಲಿ.
ಹರಿಣಿ ಕೆಂಜಾರ್ ಅವರು 23.03.2023ರಂದು ದಯಾನಂದ ಎನ್.ಎಸ್. ಇವರನ್ನು ಮದುವೆಯಾಗಿ ಸುಖೀ ಸಂಸಾರ ನಡೆಸುತ್ತಿದ್ದಾರೆ.

ಸನ್ಮಾನ ಹಾಗೂ ಪ್ರಶಸ್ತಿ:-
ಚಿಟ್ಟಿ ಇಟ್ಟು ಬಣ್ಣದ ವೇಷ ಮಾಡಿದ ಪ್ರಥಮ ಹೆಣ್ಣುಮಗಳು ಎನ್ನುವಂತಹ ನೆಗಳ್ತೆಗೆ ಪಾತ್ರವಾಗಿದ್ದು ಬಹಳ ಖುಷಿ. ‘ಚಿಟ್ಟಿಯ ಬೆಡಗಿ’ ಎಂದು ಬಿರುದು ಕೊಟ್ಟು ಅನೇಕ ಕಡೆಗಳಲ್ಲಿ ಗುರುತಿಸಿ ಸನ್ಮಾನಿಸಿದ್ದಾರೆ. ಮೂರು ವರ್ಷಗಳ ಹಿಂದೆ ಶ್ರುತಕೀರ್ತಿಯವರು ನನ್ನ ಬಗ್ಗೆ ಕಟೀಲಿನ ‘ಯಕ್ಷಪ್ರಭಾ’ದಲ್ಲೂ ಚಿಟ್ಟಿಯ ಬೆಡಗಿ ಹರಿಣಿ ಕೆಂಜಾರ್ ಎನ್ನುವ ಲೇಖನ ಬಂದದ್ದು ಸಾರ್ಥಕ್ಯವೆನಿಸಿತು. ಈಗ ಬಹಳ ಕಡೆ ಸನ್ಮಾನ ಆಗಿದ್ದನ್ನು ನೋಡಿ ತಂದೆ ತಾಯಿಗೆ ಬಹಳ ಖುಷಿ ಇದೆ. ಈಗ ಮನೆಯಲ್ಲೂ ತಂದೆ ತಾಯಿ, ಅಕ್ಕ ತಮ್ಮ, ಭಾವ, ಚಿಕ್ಕಪ್ಪ ಎಲ್ಲರೂ ತುಂಬಾ ಸಪೋರ್ಟ್ ಮಾಡುತ್ತಾರೆ. ಮತ್ತೊಂದು ವಿಷಯ ನಾನು ಹೇಳಲೇ ಬೇಕು. ನನ್ನ ಗಂಡ ನನ್ನ ಸಾಧನೆಯ ಬೆನ್ನೆಲುಬು, ನಿನ್ನ ಆಶಯವನ್ನು ನೆರವೇರಿಸು ನಾನು ಯಾವತ್ತೂ ಜೊತೆ ಇರುತ್ತೇನೆ ಎನ್ನುವ ಹಾಗೆ ನನಗೆ ತುಂಬಾ ಪ್ರೋತ್ಸಾಹ ಮಾಡಿದ್ದಾರೆ. ಪ್ರತೀ ಸಮಯದಲ್ಲೂ ನನಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ ಮತ್ತು ನನ್ನ ಗೆಳತಿಯರು ಎಲ್ಲಾ ಸಂದರ್ಭದಲ್ಲೂ ನನ್ನ ಜೊತೆ ನಿಂತು ನನಗೆ ಸಹಾಯ ಮಾಡಿದ್ದಾರೆ (ಕೃಪಾ, ಶಾಲಿನಿ, ಮೀನ, ಅಕ್ಷಿತಾ, ಚೈತ್ರಾ) ನಾನು ದೊಡ್ಡ ಕಲಾವಿದೆಯಾಗಬೇಕೆಂದು ಅವರದ್ದೂ ಕೂಡ ಕನಸಾಗಿತ್ತು. ಯಕ್ಷಗಾನದಲ್ಲಿ ದೇವಿ ಪಾತ್ರ ಮಾಡುವುದಿದ್ರೆ ಅಥವಾ ಫಿಲಂ ಶೂಟಿಂಗ್ ಇದ್ರೆ ನನ್ನ ಜೊತೆ ಯಾರಾದ್ರು ಒಬ್ಬರು ಬಂದು ನನಗೆ ಎಲ್ಲಾ ರೀತಿಯಲ್ಲೂ ರೆಡಿಯಾಗ್ಲಿಕ್ಕೆ ಸಹಾಯ ಮಾಡುತ್ತಿದ್ದರು. ಇಂತಹ ನಿಷ್ಕಲ್ಮಶ ಗೆಳತಿಯರು ಸಿಕ್ಕಿದ್ದು ಕೂಡ ನನ್ನ ಬಹು ದೊಡ್ಡ ಪುಣ್ಯ. ಇನ್ನೂ ತುಂಬಾ ಸಾಧನೆ ಮಾಡಬೇಕು, ಪರಂಪರೆಯ ವೇಷವನ್ನು ಮುಂದುವರೆಸಿಕೊಂಡು ಹೋಗಬೇಕು ಎನ್ನುವ ಆಶಯ ಮಗದಷ್ಟಿದೆ. ಲೇಖನ ಬರೆಯಲು ನನ್ನನ್ನು ಆಯ್ಕೆ ಮಾಡಿದಕ್ಕಾಗಿ ನಿಮಗೂ ಆಭಾರಿಯಾಗಿದ್ದೇನೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಮಂದಾರ್ತಿ ದುರ್ಗಾಪರಮೇಶ್ವರೀ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.

ಶ್ರವಣ್ ಕಾರಂತ್ ಕೆ.
‘ಸುಪ್ರಭಾತ’, ಶಕ್ತಿನಗರ, ಮಂಗಳೂರು.
+91 8317463705
