ತುಮಕೂರು : ಮಕ್ಕಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ), ಜಿಲ್ಲಾ ಶಾಖೆ ತುಮಕೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಶಿಬಿರವನ್ನು ಆಯೋಜಿಸಲಾಗಿದೆ. ಶ್ರೀ ಷ.ಬ್ರ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಇವರ ಕೃಪಾಶೀರ್ವಾದಗಳೊಂದಿಗೆ, ಕೊರಟಗೆರೆ ತಾಲೂಕಿನ ಶ್ರೀಕ್ಷೇತ್ರ ಸಿದ್ಧರಬೆಟ್ಟದಲ್ಲಿ ಈ ಶಿಬಿರವು ದಿನಾಂಕ 30 ಏಪ್ರಿಲ್ 2026ರಿಂದ 02 ಮೇ 2026ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಶಿಬಿರದಲ್ಲಿ ನಾಡಿನ ಖ್ಯಾತ ಸಾಹಿತಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ, ಮಕ್ಕಳಿಗೆ ಸಾಹಿತ್ಯ, ಸಂಸ್ಕೃತಿ, ಕಲೆ, ಯೋಗ, ಚಾರಣ, ಚಿತ್ರಕಲೆ, ಜಾನಪದ, ಸಂಗೀತ, ವಿಜ್ಞಾನ, ಭಾಷೆ ಹಾಗೂ ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡಲಿದ್ದಾರೆ. ಕೌಶಲ್ಯಾಧಾರಿತ ಚಟುವಟಿಕೆಗಳ ಮೂಲಕ ಮಕ್ಕಳ ಪ್ರತಿಭೆಯನ್ನು ಬೆಳಗಿಸುವ ಪ್ರಯತ್ನ ನಡೆಯಲಿದೆ. 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಒಟ್ಟು 200 ಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಮೊದಲು ನೋಂದಣಿ ಮಾಡಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ.
ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಾಗವಹಿಸುವವರು ತಮ್ಮೊಂದಿಗೆ ಲಘು ಹೊದಿಕೆ, ಹಾಸಿಗೆ, ತಟ್ಟೆ, ಲೋಟ ಹಾಗೂ ದಿನಬಳಕೆ ವಸ್ತುಗಳನ್ನು ತರಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ 94487 31960 ಮತ್ತು 94811 18700 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
