ಮಂಗಳೂರು : ಮಂಗಳೂರಿನ ‘ಬಹು ಓದು ಬಳಗ’ವು ಕಳೆದ ನಾಲ್ಕು ವರ್ಷಗಳಿಂದ ಕರಾವಳಿ ಭಾಗದಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಸಂಘಟಿಸುತ್ತ ಬಂದಿದ್ದು, ಇದೀಗ ಐದನೇ ವರ್ಷಕ್ಕೆ ಕಾಲಿಡುತ್ತಿದೆ. ದಿ. ಮರಿಣಾಪುರ ಸುರೇಶ್ ಮನಮೋಹನ್ ಅವರ ಸಾಹಿತ್ಯ ಸಂಕಲನ ‘ಕಲ್ಲಾಗದೆ ಕಾದವರು’ ಮತ್ತು ಅವರ ಸಾಹಿತ್ಯವನ್ನು ಕುರಿತ ವಿಮರ್ಶಾ ಸಂಕಲನ ‘ಹೆಜ್ಜೆ ಸದ್ದು ನಿಲ್ಲಲಿಲ್ಲ’ ಎಂಬ ಎರಡು ಹೊತ್ತಗೆಗಳನ್ನು ಪ್ರಕಟಿಸುವ ಮೂಲಕ ‘ಬಹು ಓದು ಬಳಗ’ ಅಧಿಕೃತವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ರಂಗಕ್ಕೆ ಕಾಲಿಟ್ಟಿತು. ನಂತರ ನಿರಂತರವಾಗಿ ಚಟುವಟಿಕೆಗಳನ್ನು ವಿಸ್ತರಿಸುತ್ತ ‘ಅವಿಭಜಿತ ದಕ್ಷಿಣ ಕನ್ನಡದ ದಲಿತ ಚಿಂತನೆ’ (557 ಪುಟಗಳು), ‘ಅವಿಭಜಿತ ದಕ್ಷಿಣ ಕನ್ನಡದ ಮಹಿಳಾ ಚಿಂತನೆ’ (635 ಪುಟಗಳು), ಪ್ರೊ. ಅಭಯ್ ಕುಮಾರ್ ಕೌಕ್ರಾಡಿ ಅವರ ಅಭಿನಂದನಾ ಗ್ರಂಥ ‘ಅಭಯಾಭಿನಂದನೆ’ (269 ಪುಟಗಳು), ‘ತಾಯಿಬೇರು – ಮಕ್ಕಳ ಏಳ್ಗೆಗಾಗಿ ಜೀವ ತೇದವರ ಕಥನಗಳು’ (624 ಪುಟಗಳು) ಮತ್ತು ‘ಕರಾವಳಿ ಕವನಗಳು 2001-2025, 300 ಕವಿಗಳ 300 ರಚನೆಗಳು’ (567 ಪುಟಗಳು) ಎನ್ನುವ ಬೃಹತ್ ಸಂಪಾದಿತ ಕೃತಿಗಳನ್ನು ಪ್ರಕಟಿಸಿತು. ಈ ಪ್ರಕಟಣೆಗಳಲ್ಲಿ ಮಂಗಳೂರಿನ ಆಶಯ ಆಕೃತಿ ಪ್ರಕಾಶನವು ನಮ್ಮೊಂದಿಗೆ ಕೈ ಜೋಡಿಸಿದೆ.
‘ಬಹು ಓದು ಬಳಗ’ ಇದೀಗ ‘ಕರಾವಳಿ ಕತೆಗಳು 2000-2026’ ಎನ್ನುವ ಸಂಪಾದಿತ ಕೃತಿಯನ್ನು ಪ್ರಕಟಿಸಲು ಉದ್ದೇಶಿಸಿದೆ. ಕರಾವಳಿ ಭಾಗಕ್ಕೆ ಸೇರಿದ, ಕರಾವಳಿ ಬದುಕಿನ ಚಿತ್ರಣ ಹೊಂದಿರುವ ಹಿರಿಯ-ಕಿರಿಯ ಕತೆಗಾರರ ಪ್ರಕಟಿತ ಸಂಕಲನಗಳಿಂದ ಒಂದು ಕತೆಯನ್ನು ಈ ಸಂಕಲನಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕರಾವಳಿ ಬದುಕು, ಸಾಹಿತ್ಯ, ಸಂಸ್ಕೃತಿಗಳ ಅಧ್ಯಯನವನ್ನು ನಡೆಸುವವರಿಗೆ ಈ ಕೃತಿ ಉಪಯೋಗವಾಗಬಲ್ಲುದೆಂದು ನಮ್ಮ ನಂಬಿಕೆ. ಸಾಹಿತ್ಯವನ್ನು ಜನಜೀವನದ ಭಾಗವಾಗಿಸುವ ಪ್ರಯತ್ನಗಳಿಗೆ ನಾವೂ ಕೈ ಜೋಡಿಸಿದ್ದೇವೆ ಎಂಬುದು ನಮಗೆ ಖುಷಿಯ ವಿಷಯವಾಗಿದೆ.
‘ಬಹು ಓದು ಬಳಗ’ದ ಸದಸ್ಯರ ಹಾಗೂ ಸಂಪಾದರ ಮಂಡಳಿ ಸದಸ್ಯರ ಸ್ವಂತ ಹಣದಿಂದ ಈ ಕೃತಿಗಳನ್ನು ಪ್ರಕಟಿಸಲಾಗುತ್ತದೆ. ಈವರೆಗಿನ ಪ್ರಕಟಣೆಯ ಹಿಂದೆ ವ್ಯಾವಹಾರಿಕ ಉದ್ದೇಶ ಇಲ್ಲ. 25ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳ ಗ್ರಂಥಾಲಯಗಳಿಗೆ ಈ ಪುಸ್ತಕಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಈ ಕಾರಣದಿಂದ ಲೇಖಕರಿಗೆ ಯಾವುದೇ ಸಂಭಾವನೆ ನೀಡಲಾಗುವುದಿಲ್ಲ. ನಮ್ಮ ಈ ಆಶಯಗಳಿಗೆ ನೀವು ಜೊತೆಯಾಗುತ್ತೀರಿ ಎಂಬ ಭರವಸೆ ನಮಗಿದೆ. ನಿಮ್ಮ ಪ್ರಕಟಿತ ಕತೆಗಳ ಪೈಕಿ ನೀವು ಒಂದು ಕತೆಯನ್ನು ಕಳುಹಿಸಿಕೊಡಬೇಕಾಗಿ/ ನಾವು ಆಯ್ಕೆ ಮಾಡಿದ ಕತೆಗಳನ್ನು ಪ್ರಕಟಿಸಲು ತಮ್ಮ ಅನುಮತಿ ನೀಡಬೇಕಾಗಿ ಕೋರಿದೆ.
ಕೊನೆಯ ದಿನಾಂಕ 15 ಜುಲೈ 2026. ಡಾ. ಉಷಾ ಪ್ರಕಾಶ್, ಪ್ರಧಾನ ಸಂಪಾದಕರು. ದೂರವಾಣಿ : 9900246398
