ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪುಸ್ತಕ ಬಹುಮಾನಕ್ಕೆ 2025ರಲ್ಲಿ ಪ್ರಕಟವಾದ ವಿವಿಧ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಿದೆ. ಕಾವ್ಯ ಹಸ್ತಪ್ರತಿ, ಕಾದಂಬರಿ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ, ಆತ್ಮಕತೆ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ (ಪ್ರಾಚೀನ ಕೃತಿಗಳ ಸಂಪಾದನೆ), ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಮಾನವಿಕ ವಿಷಯಗಳು, ಸಂಶೋಧನೆ, ಅನುವಾದ, ಸಂಕೀರ್ಣ, ಗಜಲ್ ಕಾವ್ಯ ಸೇರಿದಂತೆ 23 ವಿಭಾಗಗಳಲ್ಲಿ ಬಹುಮಾನಕ್ಕೆ ಕೃತಿಗಳನ್ನು ಕಳುಹಿಸಬಹುದು.
ಕೃತಿಗಳು 2025ರ ಜನವರಿ 1ರಿಂದ ಡಿಸೆಂಬರ್ 31ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರಬೇಕು. ಮರುಮುದ್ರಣದ ಪುಸ್ತಕಗಳು, ಪಿಎಚ್.ಡಿ. ಪದವಿಗೆ ಸಿದ್ಧಪಡಿಸಿದ ಸಂಶೋಧನಾ ಗ್ರಂಥಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ. ಕೃತಿಯ ನಾಲ್ಕು ಪ್ರತಿಗಳನ್ನು ದಿನಾಂಕ 30 ಜೂನ್ 2026ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, 560002 ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಭೇಟಿ ನೀಡಿ ತಲುಪಿಸಬೇಕು ಎಂದು ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್.ತಿಳಿಸಿದ್ದಾರೆ. ವಿವರಕ್ಕೆ sahithyaacademy.karnataka.gov.in
