ಮಡಿಕೇರಿ : ಕೊಡವ ಮಕ್ಕಡ ಕೂಟದ 108ನೇ ಮತ್ತು ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ರಚಿತ 10ನೇ ಪುಸ್ತಕ ‘ಜೇನು ಗೂಡು’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 12 ಜನವರಿ 2025ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ‘ಬ್ಲೂ ಡಾರ್ಟ್’ ಸಲಹೆಗಾರ ಹಾಗೂ ಹಿರಿಯ ಕ್ರೀಡಾಪಟು ಬಾಳೆಯಡ ಕಾಳಪ್ಪ ಮಾತನಾಡಿ “ಬರವಣಿಗೆಗೆ ಮನುಷ್ಯನ ಜೀವನವನ್ನು ಬದಲಾಯಿಸುವ ಅದ್ಭುತವಾದ ಶಕ್ತಿ ಇದೆ. ಪುಸ್ತಕಗಳು ಮನುಷ್ಯನ ಜೀವನದಲ್ಲಿ ಬದಲಾವಣೆಯನ್ನು ತರಲು ಶಕ್ತವಾಗಿವೆ. ಬರಹಗಾರರು ತಮಗಾಗಿ ಅಥವಾ ಸಮಾಜದ ಕಲ್ಯಾಣಕ್ಕಾಗಿ ಪುಸ್ತಕಗಳನ್ನು ಬರೆಯಬಹುದು. ಆದರೆ ಬರವಣಿಗೆಯಲ್ಲಿರುವ ಶಕ್ತಿ ಸಾಮಾಜಿಕ ಪರಿವರ್ತನೆಗೆ ಸಹಕಾರಿಯಾಗಿದೆ. ಪುಸ್ತಕಗಳನ್ನು ಹೆಚ್ಚು ಓದುವ ಮೂಲಕ ಉತ್ತಮ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬರೆಯುವುದರಿಂದ ಅಥವಾ ಓದುವ ಹವ್ಯಾಸದಿಂದ ಜೀವನದ ಕುಂದು ಕೊರತೆ ಮತ್ತು ವ್ಯತ್ಯಾಸಗಳು ದೂರವಾಗುತ್ತವೆ. ಮಕ್ಕಳ ಜೀವನದಲ್ಲಿ ತಂದೆ ತಾಯಿಗಳ ಪಾತ್ರ ದೊಡ್ಡದಾಗಿರುತ್ತದೆ. ತಂದೆ ನಂಬಿಕೆಯಾದರೆ ತಾಯಿ ಸತ್ಯವಾಗುತ್ತಾಳೆ ಇವರಿಬ್ಬರು ದೇವರಿಗೆ ಸಮಾನರು. ಇಂದು ಬಿಡುಗಡೆಯಾದ ‘ಜೇನು ಗೂಡು’ ಪುಸ್ತಕ ಮನುಷ್ಯನ ಜೀವನದ ವಾಸ್ತವಕ್ಕೆ ಹತ್ತಿರವಾಗಿದೆ. ಬರವಣಿಗೆಯಲ್ಲಿ ಬಲವಿದೆ, ಪ್ರಭಾವ ಬೀರುವ ಶಕ್ತಿ ಹೊಂದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಜೇನು ಗೂಡು’ ಪುಸ್ತಕದ ಬರಹಗಾರ್ತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ “ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅಂಶಗಳು ಪುಸ್ತದಲ್ಲಿದ್ದು, ಓದುಗರು ಇದನ್ನು ಗಮನಿಸಿದರೆ ನನ್ನಲ್ಲಿ ಧನ್ಯತಾಭಾವ ಮೂಡಲಿದೆ” ಎಂದರು.
ಮಡಿಕೇರಿ ಕೊಡವ ಸಮಾಜದ ನಿರ್ದೇಶಕಿ ಬೊಪ್ಪಂದ ಸರಳ ಕರುಂಬಯ್ಯ ಮಾತನಾಡಿ “ಮಕ್ಕಳು ಪುಸ್ತಕಗಳನ್ನು ಹೆಚ್ಚು ಓದಬೇಕು, ಈಗಿನ ಮಕ್ಕಳು ಇಂಗ್ಲೀಷ್ ಪುಸ್ತಕಗಳನ್ನಷ್ಟೇ ಓದುವ ಹವ್ಯಾಸ ಹೊಂದಿದ್ದಾರೆ. ಇಂಗ್ಲೀಷ್ ನೊಂದಿಗೆ ಕನ್ನಡವನ್ನು ಕೂಡ ಓದಲಿ. ನಮ್ಮ ಮನಸ್ಸಿನ ಕಲ್ಪನೆಗಳಿಗೆ ಭಾವನೆಗಳನ್ನು ತುಂಬಿ ಸಾಹಿತ್ಯದ ರೂಪ ನೀಡಲಾಗುತ್ತದೆ. ಬರವಣಿಗೆಯನ್ನು ಪುಸ್ತಕದ ರೂಪದಲ್ಲಿ ಹೊರ ತರಲು ಪ್ರೋತ್ಸಾಹ ನೀಡುತ್ತಿರುವ ಕೊಡವ ಮಕ್ಕಡ ಕೂಟದ ಸಾಹಿತ್ಯಾಸಕ್ತಿ ಮತ್ತು 108 ಪುಸ್ತಕಗಳ ಸಾಧನೆ ಶ್ಲಾಘನೀಯ” ಎಂದರು. ಮೂರ್ನಾಡು ಕೊಡವ ನಮಾಜದ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಪಳಂಗಂಡ ರೇಖಾ ತಮ್ಮಯ್ಯ ಮಾತನಾಡಿ “ಜೇನು ಗೂಡು” ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಾಹಿತ್ಯಾಸಕ್ತಿ ಇನ್ನೂ ಹೆಚ್ಚಾಗಿ ಪ್ರಶಸ್ತಿಗಳು ಲಭಿಸಲಿ” ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ “ಪತ್ರಕರ್ತ ಹಾಗೂ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರು ಬರೆದ ‘ಕೊಡವ ಮಕ್ಕಡ ಕೂಟ’ ಹೊರತಂದ 1955ರ ಯುದ್ಧ ಹಾಗೂ ಕೊಡಗಿನ ಮಹಾವೀರ (ಮಹಾವೀರ ಪುರಸ್ಕೃತ ನ್ಯಾ.ಲೀ ಅಜ್ಜಮಾಡ ಬಿ.ದೇವಯ್ಯ ಅವರ ಜೀವನಾಧರಿತ) ಕುರಿತಾದ ಪುಸ್ತಕ ‘ಸೈ ಪೋರ್ನ್’ ಎಂಬ ಹೆಸರಿನಲ್ಲಿ ಬಾಲಿವುಡ್ ಚಿತ್ರವಾಗಿದೆ. ಈ ಚಿತ್ರ 24 ಜನವರಿ 2025ರಂದು ತೆರೆ ಕಾಣುತ್ತಿದ್ದು, ಇದು ಕೊಡವ ಮಕ್ಕಡ ಕೂಟದ ಹೆಗ್ಗಳಿಕೆಗೆ ಕಾರಣವಾಗಿದೆ ಮತ್ತು ಕೊಡಗು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ. ಈಗಾಗಲೇ ಮಹತ್ವಾಕಾಂಕ್ಷೆಯ 100ನೇ ಪುಸ್ತಕವನ್ನು ಸಾಹಿತ್ಯ ಲೋಕಕ್ಕೆ ಅದ್ದೂರಿಯಾಗಿ ಸಮರ್ಪಿಸಿರುವ ‘ಕೊಡವ ಮಕ್ಕಡ ಕೂಟ’ 2024ರಲ್ಲಿ ಬರೋಬರಿ 27 ಪುಸ್ತಕಗಳನ್ನು ಬಿಡುಗಡೆ ಮಾಡಿ ಪ್ರಶಂಸೆಗೆ ಪಾತ್ರವಾಗಿದೆ. ಕೂಟ ಪ್ರಕಟಿಸಿರುವ 107 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ‘ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿದ್ದು, ‘ಚಿಗುರೆಲೆಗಳು’ ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ‘ಅಗ್ನಿಯಾತ್ರೆ’ ಪುಸ್ತಕಕ್ಕೆ “ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಚೆಪ್ಪುಡಿರ ಎ.ಕಾರ್ಯಪ್ಪ ಅವರು ಬರೆದ ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ ಎಂಬ ದಾಖಲೀಕರಣ ಪುಸ್ತಕದ 1500 ಪ್ರತಿಗಳನ್ನು ಮುದ್ರಿಸಿ ಕೊಡಗಿನಾದ್ಯಂತ ಶಾಲಾ-ಕಾಲೇಜು ಮತ್ತು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಲಾಗಿದೆ” ಎಂದರು. ಕೊಡವ ಮಕ್ಕಡ ಕೂಟದ ನಿರ್ದೇಶಕಿ ಹಾಗೂ ಬರಹಗಾರ್ತಿ ಕರವಂಡ ಸೀಮಾ ಗಣಪತಿ ಉಪಸ್ಥಿತರಿದ್ದರು.
ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ :
ಕನ್ನಡ ನಾಡಿನ ಲೇಖಕಿಯರಲ್ಲಿ ಹಂಚೆಟ್ಟಿರ ಪ್ಯಾನ್ಸಿ ಮುತ್ತಣ್ಣ ಅವರ ಹೆಸರು ಪ್ರಮುಖವಾದುದು. ‘ಕಾಡು ಹಕ್ಕಿಯ ಹಾಡು’ ಹಾಗೂ ‘ತನದರಿಕೆ’ ಎಂಬ ಕವನ ಸಂಕಲನಗಳು, ‘ಕಾಡಿನ ನೆನಪುಗಳು’ ಹಾಗೂ ‘ಒಡಲು ಉರಿ’ ಕಥಾ ಸಂಕಲನ ರಚಿಸಿರುವ ಇವರು ತಮ್ಮ ಮಾತೃ ಭಾಷೆಯಾದ ಕೊಡವ ಭಾಷೆಯಲ್ಲಿ ‘ಪಾರು’ ಎಂಬ ಕಾದಂಬರಿ ಹಾಗೂ ‘ಬದ್‌ಕ್‌ರ ನಡೆ’ ಲೇಖನಗಳ ಸಂಗ್ರಹ, ‘ಪೂಬಳ್ಳಿ’ ಕವನ ಸಂಕಲ, ‘ಕೂಪರಿ’ ಸಣ್ಣ ಕಥೆಗಳ ಸಂಗ್ರಹ ಹೊರತಂದಿದ್ದಾರೆ. ಇವರ ‘ಪಾರು’ ಕೊಡವ ಕಾದಂಬರಿಗೆ ‘ಕೊಡವ ಸಾಹಿತ್ಯ ಅಕಾಡೆಮಿಯ ರಾಜ್ಯ ಪ್ರಶಸ್ತಿ’ ದೊರೆತಿದೆ. ತಮ್ಮ ಮೂರನೇ ಕೃತಿಗೆ ರಾಜ್ಯ ಪ್ರಶಸ್ತಿ ಪಡೆದ ಹೆಮ್ಮೆ ಇವರದು. ‘ಜೇನುಗೂಡು’ ಇವರ ಹತ್ತನೆಯ ಕೃತಿ. ಕೊಡಗು ಜಿಲ್ಲೆಯ ಕೊಳ್ಳಿಮಾಡ ಗಪ್ಪು ಗಣಪತಿ ಹಾಗೂ ಹೊಳ್ಳಿಮಾಡ ಲಲಿತ ಗಣಪತಿ ದಂಪತಿಗಳ ಪುತ್ರಿಯಾಗಿ ಜನಿಸಿದ ಫ್ಯಾನ್ಸಿ ಮುತ್ತಣ್ಣ ಪೊನ್ನಂಪೇಟೆಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಪಡೆದರು. ಕವಯತ್ರಿಯಾಗಿ, ಕಥೆಗಾರ್ತಿಯಾಗಿ ಹಾಗೂ ಲೇಖಕಿಯಾಗಿ ಈಗಾಗಲೇ ಅಪಾರ ಸಹೃದಯರ ಮನಸೆಳೆದಿರುವ ಇವರು ಗ್ರಾಮಾಂತರ ಬುದ್ದಿಜೀವಿಗಳ ಬಳಗದಿಂದ ‘ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ’, ‘ಜಯ ಕರ್ನಾಟಕ ಪ್ರಶಸ್ತಿ’ ಹಾಗೂ ‘ಜೆ. ಸಿ. ಸಾಹಿತ್ಯರತ್ನ ಪ್ರಶಸ್ತಿ’, ‘ಶಿವರಾಮ ಕಾರಂತ ಪ್ರಶಸ್ತಿ’, ವಿಜಯ ರಾಘವ ಚಾರಿಟೇಬಲ್ ಟ್ರಸ್ಟ್ ಧರ್ಮದರ್ಶಿಯವರ ಧತ್ತಿನಿಧಿ ಪ್ರಶಸ್ತಿ ಹಾಗೂ ಅಂತರಾಷ್ಟ್ರೀಯ ಪ್ರತಿಷ್ಟಿತ ‘ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ’ಗೂ ಪಾತ್ರರಾಗಿದ್ದಾರೆ. ಇವರಿಗೆ ಕೊಡವ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಜಾನಪದ ಪರಿಷತ್ತಿನಲ್ಲಿ ಸೇವೆ ಮಾಡಿದ ಅನುಭವವಿದೆ.