ಕಾಸರಗೋಡು : ಕಲಾಕುಂಚ ಗಡಿನಾಡು ಘಟಕ, ಕೇರಳ ಶಾಖೆಯ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಕೊಂಡವೂರು ಇಲ್ಲಿ ಶ್ರೀಮತಿ ಲಕ್ಷ್ಮೀ ವಿ ಭಟ್ ಇವರ ಭಕ್ತಿಮಂಜರಿ, ಸುಚರಿತರು, ಕಲರವ, ಭಾರತಾಂಬೆಗೆ ನಮನ ಮತ್ತು ಭಾವಸ್ಪರ್ಶ ಎಂಬ ಐದು ಕವನ ಸಂಕಲನಗಳು ಶ್ರೀ ಕ್ಷೇತ್ರದ ಗಾಯತ್ರಿ ಮಂಟಪದಲ್ಲಿ ಲೋಕಾರ್ಪಣೆಗೊಂಡವು. ‘ಭಕ್ತಿ ಮಂಜರಿ’ ಕೃತಿ ಬಿಡುಗಡೆ ಮಾಡಿ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ಮಾಡಿದರು. ಈ ಸಂದರ್ಭದಲ್ಲಿ ಆಶಯ ನುಡಿಗಳನಾಡುತ್ತಾ ಕೃತಿಗಳ ಮುನ್ನುಡಿ, ಬೆನ್ನುಡಿ ಬರೆದು ಸಹಾಯ ಮಾಡಿದವರ ಹೆಸರುಗಳನ್ನು ಕವಯತ್ರಿ ಶ್ರೀಮತಿ ಲಕ್ಷ್ಮೀ ವಿ. ಭಟ್ ಸ್ಮರಿಸಿಕೊಂಡರು.
ಶ್ರೀ ನಾರಾಯಣ ಮೂಡಿತ್ತಾಯ ‘ಸುಚರಿತರು’, ಶ್ರೀ ವಿ.ಬಿ.ಕುಳಮರ್ವ ‘ಕಲರವ’, ಶ್ರೀಮತಿ ಮೀನಾಕ್ಷಿ ರಾಮಚಂದ್ರನ್ ‘ಭಾರತಾಂಬೆಗೆ ನಮನ’, ಡಾ. ಸುರೇಶ ನೆಗಳಗುಳಿ ‘ಭಾವಸ್ಪರ್ಶ’ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಕೃತಿಯ ಅವಲೋಕನ ಮಾಡಿದರು. ಈ ಎಲ್ಲಾ ಕೃತಿಗಳ ಮುದ್ರಕರಾದ ಶ್ರೀ ಪಿ.ವಿ. ಪ್ರದೀಪ್ ಕುಮಾರ್ ಶುಭ ಹಾರೈಸಿದರು. ಕುಮಾರಿ ಸುಪ್ರಭಾ ರಾವ್, ರಾಧಾಮಣಿ ಆರ್. ರಾವ್, ದಿವಾಕರ ಬಲ್ಲಾಳ್, ದೇವಾಂಶು ಕಾರಂತ್, ವೇದಾಂತ ಕಾರಂತ್, ಕು. ಪ್ರಾರ್ಥನಾ ಅಡಿಗ, ಕು. ಕೀರ್ತನ ಅಡಿಗ, ಶ್ರೀಮತಿ ರೂಪಶ್ರೀ ಬಲ್ಲಾಳ್ ಕೃತಿಯಿಂದ ಆಯ್ದ ಕವನಗಳನ್ನು ಹಾಡಿದರು.
ಕುಮಾರಿ ಅದಿತಿಲಕ್ಷ್ಮೀಯವರ ಪೂಜಾ ನೃತ್ಯದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಕಲಾ ಕುಂಚ ಘಟಕದ ಅಧ್ಯಕ್ಷೆಯಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಸ್ವಾಗತಿಸಿ, ಶ್ರೀ ದಿವಾಕರ ಬಲ್ಲಾಳ ನಿರೂಪಿಸಿ, ಶ್ರೀ ಯೋಗೀಶ್ ರಾವ್ ಚಿಗುರುಪಾದೆ ವಂದಿಸಿದರು.