ಉಡುಪಿ : ಸಂಗಮ ಕಲಾವಿದೆರ್ ಮಣಿಪಾಲ (ರಿ.), ಮಣಿಪಾಲ ಪದವಿ ಪೂರ್ವ ಕಾಲೇಜು, ರೋಟರಿ ಕ್ಲಬ್ ಮಣಿಪಾಲ ಹಾಗೂ ಪೆರಂಪಳ್ಳಿ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದೊಂದಿಗೆ ನಡೆದ 10 ದಿನಗಳ ಮಕ್ಕಳ ರಂಗ ತರಬೇತಿ ಶಿಬಿರ ‘ಕಾಮನಬಿಲ್ಲು’ ಇದರ ಸಮಾರೋಪ ಸಮಾರಂಭವು ದಿನಾಂಕ 20 ಮೇ 2026ರಂದು ಯಕ್ಷಗಾನ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ಶಿಬಿರದಲ್ಲಿ ಸುಮಾರು 100 ಮಕ್ಕಳು ಪಾಲ್ಗೊಂಡಿದ್ದರು. 10 ದಿನಗಳ ಅವಧಿಯಲ್ಲಿ ಮಕ್ಕಳಿಗೆ ರಂಗ ತರಬೇತಿಯೊಂದಿಗೆ ‘ಬೆಂಕಿಯಿಲ್ಲದ ಅಡುಗೆ’, ಶಿಬಿರ ಗೀತೆ, ಮುಖವರ್ಣಿಕೆ (ಮೇಕಪ್) ಮತ್ತು ಚಿತ್ರಕಲೆ (ಪೈಂಟಿಂಗ್) ಮುಂತಾದ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರೋಪ ಸಮಾರಂಭದ ಮುನ್ನುಡಿಯಾಗಿ ಶಿಬಿರದ ಮಕ್ಕಳು ಪ್ರಸ್ತುತಪಡಿಸಿದ ಶಿಬಿರ ಗೀತೆ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಣಿಪಾಲ ಹೈಸ್ಕೂಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಸಂಚಾಲಕರಾದ ಕೆ. ಪ್ರಕಾಶ್ ಶೆಟ್ಟಿ, ಲೇಖಕರು ಹಾಗೂ ರಂಗಭೂಮಿ ಕಲಾವಿದರಾದ ಸಚಿನ್ ಅಂಕೋಲಾ ಉಪಸ್ಥಿತರಿದ್ದರು. ವೇದಿಕೆಯಲ್ಲಿ ರೊಟೇರಿಯನ್ ಶಶಿಕಲಾ ರಾಜ ವರ್ಮಾ, ಯುವಕ ಮಂಡಲ (ರಿ.) ಪೆರಂಪಳ್ಳಿ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಶಶಾಂಕ್ ಶಿವತ್ತಾಯ ಹೆಚ್. ಸಂಗಮ ಕಲಾವಿದೆರ್ ಮಣಿಪಾಲ(ರಿ.) ಇದರ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ್, ಕಾರ್ಯದರ್ಶಿ ಪವನ್ ಪೂಜಾರಿ, ಶಿಬಿರದ ನಿರ್ದೇಶಕರಾದ ಸಂತೋಷ್ ಶೆಟ್ಟಿ ಹಿರಿಯಡ್ಕ ಹಾಗೂ ಸಂಚಾಲಕರಾದ ವೈಷ್ಣವಿ ಭಂಡಾರ್ಕರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ರೋಹಿತ್ ಎಸ್. ಬೈಕಾಡಿ ಇವರ ನಿರ್ದೇಶನದ ‘ಜೈ ಬೇತಾಳ’, ರಮೇಶ್ ಬೆಣಕಲ್ ಇವರ ನಿರ್ದೇಶನದ ‘ದುರ್ಬಲರ ದಂಗೆ’, ಭುವನ್ ಮಣಿಪಾಲ್ ಇವರ ನಿರ್ದೇಶನದ ‘ರೇಸ್’ ಹಾಗೂ ರಂಜಿತ್ ಶೆಟ್ಟಿ ಕುಕ್ಕುಡೆ ಇವರ ನಿರ್ದೇಶನದ ‘ಕೋಟು ಗುಮ್ಮ’ ಎಂಬ ನಾಲ್ಕು ಮಕ್ಕಳ ನಾಟಕ ಶಿಬಿರದ ಮಕ್ಕಳಿಂದ ಯಶಸ್ವಿಯಾಗಿ ಪ್ರದರ್ಶನಗೊಂಡಿತು.



