ಬಂಟ್ವಾಳ : ಅಮು೦ಜೆಯಲ್ಲಿ ಇತ್ತೀಚಿಗೆ ನಡೆದ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಜ್ಞಾನ ಫಲ್ಗುಣಿ’ ಬಿಡುಗಡೆ ಕಾರ್ಯಕ್ರಮ ಬಿ.ಸಿ.ರೋಡ್ ಕೈಕುಂಜೆಯಲ್ಲಿರುವ ಬಂಟ್ವಾಳ ಕನ್ನಡ ಭವನದಲ್ಲಿ ದಿನಾಂಕ : 15-07-2023ರಂದು ನಡೆಯಿತು.
ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಕಾರ್ಯಕ್ರಮ ಉದ್ಘಾಟಿಸಿ, “ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲೆಯಲ್ಲಿರುವ ಹಿರಿಯ ಸಾಹಿತಿಗಳಾದ ಪ್ರೊ. ಕೆ.ಟಿ. ಗಟ್ಟಿ, ಡಾ. ವಾಮನ ನಂದಾವರ, ಶ್ರೀ ಸದಾನಂದ ಸುವರ್ಣ ಹಾಗೂ ಶ್ರೀ ಕೇಶವ ಕುಡ್ಲ ಇವರುಗಳ ಮನೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಲಾಯಿತು. ನಿರಂತರ ಕಾರ್ಯಕ್ರಮದ ಮೂಲಕ ಸಾಹಿತ್ಯವನ್ನು ಮನೆ, ಮನೆಗೆ ಪರಿಚಯಿಸುವ ಕಾರ್ಯದಲ್ಲಿ ಕಸಾಪ ನಿರತವಾಗಿದೆ. ಸಮ್ಮೇಳನದ ದಾಖಲೀಕರಣ ಮತ್ತು ಇದನ್ನು ಶಾಶ್ವತವಾಗಿ ನೆನಪಿನಲ್ಲಿಡುವ ನಿಟ್ಟಿನಲ್ಲಿ ಸ್ಮರಣ ಸಂಚಿಕೆಯ ಅಗತ್ಯವಿದೆ. ಬಹುತೇಕ ತಾಲೂಕಿನ ಸಾಹಿತ್ಯ ಸಮ್ಮೇಳನಗಳ ಸ್ಮರಣ ಸಂಚಿಕೆ ಬಿಡುಗಡೆಯಾಗಿದ್ದು, ಶೀಘ್ರವೇ ಜಿಲ್ಲಾ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ” ಎಂದರು.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಎ.ಮಂಜಯ್ಯ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಬಾಲಕೃಷ್ಣ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಲುವಿಝ ಕುಟಿನ್ಹೊ, ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಉಮೇಶ್ ಸಾಲಿಯಾನ್ ಬೆಂಜನಪದವು, ಪ್ರಧಾನ ಕಾರ್ಯದರ್ಶಿ ಜನಾರ್ದನ ಅಮ್ಮುಂಜೆ, ಅಬ್ದುಲ್ ರಹಿಮಾನ್ ಡಿ.ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
22ನೇ ಬಂಟ್ವಾಳ ತಾಲೂಕು ಕಸಾಪ ಸಮ್ಮೇಳನದ ಪ್ರಧಾನ ಸಂಚಾಲಕ ಅಬುಬಕ್ಕರ್ ಅಮ್ಮುಂಜೆ ಪ್ರಸ್ತಾವನೆಗೈದರು. ರಮಾನಂದ ನೂಜಿಪಾಡಿ ಸ್ವಾಗತಿಸಿ, ರವೀಂದ್ರ ಕುಕ್ಕಾಜೆ ನಿರೂಪಿಸಿ, ವಿ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಇದಕ್ಕೂ ಮೊದಲು ಜಿಲ್ಲೆಯ ಪ್ರಸಿದ್ಧ ಅರ್ಥಧಾರಿಗಳಿಂದ ‘ಶರಸೇತು ಬಂಧನ’ ಯಕ್ಷಗಾನ ತಾಳಮದ್ದಳೆ ನಡೆಯಿತು.