ಕರುಂಬಿತ್ತಿಲ್ ಎಂಬ ಪ್ರಶಾಂತ ವಾತಾವರಣದಲ್ಲಿ ಪ್ರತೀ ಮೇ ತಿಂಗಳಲ್ಲಿ ಒಂದು ಪುಟ್ಟ ಸಂಗೀತ ಲೋಕವೇ ಸೃಷ್ಟಿಯಾಗುತ್ತದೆ. ಮನೆಯ ಸುತ್ತಮುತ್ತಲೂ ಸಂಗೀತದ ವಾತಾವರಣವೇ, ಮೂಲೆಮೂಲೆಗಳಲ್ಲೂ ಸಂಗೀತವು ಮಾರ್ದನಿಸುತ್ತದೆ. ಕಳೆದ 26 ವರ್ಷಗಳಿಂದ, ಅಂದರೆ, 2000ನೇ ವರ್ಷದಿಂದ ಧರ್ಮಸ್ಥಳದ ನಿಡ್ಲೆ ಎಂಬ ಪುಟ್ಟ ಗ್ರಾಮದಲ್ಲಿ ‘ಕರುಂಬಿತ್ತಿಲ್ ಶಿಬಿರ’ ಎನ್ನುವ ಹೆಸರಿನಲ್ಲಿ ಪ್ರತಿ ವರ್ಷವೂ ಸಂಗೀತ ಶಿಬಿರವು ನಡೆಯುತ್ತಿದೆ. ಈ ಬಾರಿಯ ಶಿಬಿರವು ದಿನಾಂಕ 15 ಏಪ್ರಿಲ್ 2026ರಿಂದ 19 ಏಪ್ರಿಲ್ 2026ರವರೆಗೆ ನಡೆಯಲಿದೆ.
ಕರುಂಬಿತ್ತಿಲ್ ಕುಟುಂಬವೇ ಒಂದು ಸಂಪೂರ್ಣ ಸಂಗೀತಮಯವಾದ ಕುಟುಂಬ. ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಶ್ರೀ ವಿಠ್ಠಲ ರಾಮಮೂರ್ತಿ ಚೆನ್ನೈ ಹಾಗೂ ಅವರ ಸಹೋದರಿಯರು ಸೇರಿ ಕುಟುಂಬ ಸಮಾರಂಭದಂತೆ ಆರಂಭಗೊಂಡ ಈ ಸಂಗೀತ ಶಿಬಿರವು ಇದೀಗ ಸರ್ವ ಸಂಗೀತ ವಿದ್ಯಾರ್ಥಿಗಳು ಕಾತರದಿಂದ ಕಾಯುವ ಸಂಗೀತ ಶಿಬಿರವಾಗಿ ಮಾರ್ಪಟ್ಟಿದೆ. ಕೇವಲ ಕೆಲವೇ ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಕರುಂಬಿತ್ತಿಲ್ ಶಿಬಿರವು ಇದೀಗ 200ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನೊಳಗಂಡ ಬೃಹತ್ ಶಿಬಿರವಾಗಿ ಮಾರ್ಪಟ್ಟಿದೆ.
ಈ ಶಿಬಿರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಇತರ ದೂರದೂರಿಂದಲೂ, ವಿದೇಶದಿಂದಲೂ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಒಮ್ಮೆ ಭಾಗವಹಿಸಿದ ಶಿಬಿರಾರ್ಥಿಯು ಮುಂಬರುವ ಶಿಬಿರಗಳಲ್ಲೂ ಭಾಗವಹಿಸಲು ಕಾತರದಿಂದ ಕಾಯುತ್ತಾನೆ. ಪ್ರತಿಯೊಬ್ಬ ಶಿಬಿರಾರ್ಥಿಯೂ ಹಾಗೂ ಭಾಗವಹಿಸುವ ಪ್ರತಿಯೊಬ್ಬ ಕಲಾವಿದನೂ ಕೂಡ ಕರುಂಬಿತ್ತಿಲ್ ಕುಟುಂಬದ ಸದಸ್ಯನೇ ಆಗಿ ಹಿಂತಿರುಗುತ್ತಾನೆ. ಇದು ಈ ಶಿಬಿರದ ಸವಿಶೇಷತೆ. ವಿಶ್ವ ವಿಖ್ಯಾತ ಕಲಾವಿದರಾದ ಶ್ರೀ ಲಾಲ್ಗುಡಿ ಜಿ. ಜಯರಾಮನ್, ವಿದ್ವಾನ್ ಶ್ರೀ ಬಾಲಮುರಳಿಕೃಷ್ಣ, ವಿದ್ವಾನ್ ಶ್ರೀ ಉಮಯಾಳಪುರಂ ಶಿವರಾಮನ್, ವಿದ್ವಾನ್ ಶ್ರೀ ಟಿ.ವಿ. ಗೋಪಾಲಕೃಷ್ಣ, ವಿದ್ವಾನ್ ಶ್ರೀ ಎಂ. ಚಂದ್ರಶೇಖರ್, ವಿದ್ವಾನ್ ಶ್ರೀ ವಿ.ವಿ. ಸುಬ್ರಹ್ಮಣ್ಯಂ, ವಿದ್ವಾನ್ ಶ್ರೀ ಟಿ.ಎಂ. ಕೃಷ್ಣ, ವಿದುಷಿ ಶ್ರೀಮತಿ ಬಾಂಬೆ ಜಯಶ್ರೀ, ವಿದ್ವಾನ್ ಶ್ರೀ ನೈವೇಲಿ ಸಂತಾನಗೋಪಾಲನ್, ವಿದುಷಿ ಶ್ರೀಮತಿ ಸೌಮ್ಯ, ವಿದ್ವಾನ್ ಶ್ರೀ ವಿಜಯಶಿವ ಮುಂತಾದವರು ಈ ಶಿಬಿರಕ್ಕೆ ಭೇಟಿ ನೀಡಿ ಬಹಳ ಸಂತೋಷ ಪಟ್ಟುಕೊಂಡಿದ್ದಾರೆ.
ಈ ವರ್ಷದ ಕರುಂಬಿತ್ತಿಲ್ ಶಿಬಿರವು ದಿನಾಂಕ 15 ಏಪ್ರಿಲ್ 2026ರಂದು ಆರಂಭಗೊಳ್ಳಲಿದೆ. ಈ ಸಲದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ, ಪದ್ಮಶ್ರೀ ಎ. ಕನ್ಯಾಕುಮಾರಿ, ವಿದ್ವಾನ್ ಅಭಿಷೇಕ್ ರಘುರಾಮ್, ವಿದ್ವಾನ್ ಸುರೇಶ್ ವೈದ್ಯನಾಥನ್, ವಿದ್ವಾನ್ ಅರ್ಜುನ್ ಕುಮಾರ್, ವಿದ್ವಾನ್ ಬಿ.ಎಸ್. ಪುರುಷೋತ್ತಮ್, ವಿದ್ವಾನ್ ಎಸ್.ಆರ್. ಮಾರುತಿ ಪ್ರಸಾದ್, ವಿದ್ವಾನ್ ಬಾಲು ಮಾಸ್ತಿ ಹಾಗೂ ಇನ್ನಿತರ ಕಲಾವಿದರುಗಳು ಆಗಮಿಸಲಿದ್ದಾರೆ.
ಈ ಸಲದ ಕರುಂಬಿತ್ತಿಲ್ ಶಿಬಿರವು ಅನೇಕ ವಿಸ್ಮಯಕರ ಅನುಭೂತಿಗಳನ್ನು ಸಂಗೀತಾಸಕ್ತ ಶಿಬಿರಾರ್ಥಿಗಳಿಗೆ ನೀಡಲಿದೆ. ವಿಶೇಷ ಕಚೇರಿಗಳು, ಶ್ರೇಷ್ಠ ಕಲಾವಿದರ ವಿಶೇಷ ಸಂದರ್ಶನಗಳು, ಪ್ರತಿ ಶಿಬಿರಾರ್ಥಿಗೂ ಮೃದಂಗ, ವಯೊಲಿನ್ ಜೊತೆ ಪ್ರದರ್ಶನ ನೀಡುವ ಅವಕಾಶ, ಸಂಗೀತ ಕ್ವಿಜ್, ಸಂಗೀತ ಪ್ರಾತ್ಯಕ್ಷಿಕೆ, ಯಕ್ಷಗಾನ ಹಾಗೂ ಇನ್ನಿತರ ನೂತನ ಚಟುವಟಿಕೆಗಳು ಈ ಸಲದ ಶಿಬಿರಾರ್ಥಿಗಳಿಗಾಗಿ ಕಾದಿದೆ. ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರು, ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿಯವರು, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು, ಡಾ. ಎಂ. ಮೋಹನ್ ಆಳ್ವ, ಡಾ. ಜಿ. ರಾಮಕೃಷ್ಣ ಆಚಾರ್ ಶಿಬಿರವನ್ನು ತಮ್ಮ ಗೌರವ ಉಪಸ್ಥಿತಿಯಿಂದ ಮೆರುಗುಗೊಳಿಸಲಿದ್ದಾರೆ. 15ರಂದು ವಿದ್ವಾನ್ ಶ್ರೀ ಮಾರುತಿ ಪ್ರಸಾದ್ ಅವರ ಸಂಗೀತ ಕಛೇರಿ, 16ರಂದು ಡಾ. ಸುರೇಶ್ ವೈದ್ಯನಾಥನ್ ಹಾಗೂ ತಂಡದವರಿಂದ ಮೃತ್ತಿಕಾ ವೈಭವಮ್ ಎನ್ನುವ ವಿಶಿಷ್ಟ ಕಾರ್ಯಕ್ರಮ, 17ರಂದು ಬಾಲು ಮಾಸ್ತಿ ಇವರ ವೀಣಾ ಕಛೇರಿ ಹಾಗೂ ವಿದುಷಿ ಶ್ರೇಯಾ ಕೊಳತ್ತಾಯ ಹಾಗೂ ವಿದ್ವಾನ್ ನಿರಂಜನ್ ದಿಂದೋಡಿ ಇವರ ಸಂಗೀತ ಕಾರ್ಯಕ್ರಮ, 18ರಂದು ಬೆಳಿಗ್ಗೆ ವಿದ್ವಾನ್ ಬಿ.ಎಸ್. ಪುರುಷೋತ್ತಮ್ ಇವರ ಲಯ ಕಾರ್ಯಾಗಾರ ಮತ್ತು ಸಾಯಂಕಾಲ ಗುರು ವಿದುಷಿ ಸಂಗೀತ ಕಲಾನಿಧಿ ಎ. ಕನ್ಯಾಕುಮಾರಿ ಹಾಗೂ ವಿದ್ವಾನ್ ವಿಠಲ್ ರಂಗನ್ ಅವರ ದ್ವಂದ್ವ ವಯಲಿನ್ ವಾದನ ಕಾರ್ಯಕ್ರಮ ನಡೆಯಲಿದ್ದು, ಶಿಬಿರದ ಕೊನೆಯ ದಿನವಾದ 19ರಂದು ವಿದ್ವಾನ್ ಅಭಿಷೇಕ್ ರಘುರಾಮ್ ಅವರ ನೇತೃತ್ವದಲ್ಲಿ ಶಿಬಿರಾರ್ಥಿಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಹೆಚ್ಚಿನ ವಿವರಗಳಿಗಾಗಿ ನಮ್ಮ FaceBook Pageನ್ನು ನೀವು ಸಂಪರ್ಕಿಸಬಹುದು.
Facebook: https://www.facebook.com/KarunbithilShibira/
Email: [email protected]
ವಿಠ್ಠಲ ರಾಮಮೂರ್ತಿ Mob: 94440 21850 or 96113 08860

