ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ಇದರ ಕನ್ನಡ ಡಿಂಡಿಮ ಸರಣಿಯ ಮೂರನೆಯ ಕಾರ್ಯಕ್ರಮವು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹೆಬ್ರಿಯ ಅಕ್ಷರ ಸಾಹಿತ್ಯ ಸಂಘ ಮತ್ತು ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ದಿನಾಂಕ 18-08-2023 ಶುಕ್ರವಾರದಂದು ನಡೆಯಿತು.
ಈ ಕಾರ್ಯಕ್ರಮವು ಕ.ಸಾ.ಪ. ಹೆಬ್ರಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಕ.ಸಾ.ಪ. ಕೋಶಾಧ್ಯಕ್ಷರಾದ ಶ್ರೀ ಮನೋಹರ ಪಿ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಎಸ್.ಆರ್. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ದೀಪಕ್ ಎನ್. ಅವರು ನಿಯೋಜಿತ ಉಪನ್ಯಾಸ ನೀಡುತ್ತಾ “ಕನ್ನಡ ಸಾಹಿತ್ಯವು ಸಮೃದ್ದ ಸಾಹಿತ್ಯವನ್ನು ಹೊಂದಿದೆ. ಆಸ್ಥಾನ ಪರಂಪರೆಯಲ್ಲಿದ್ದ ಕನ್ನಡವು ನಡುಗನ್ನಡ ಸಮಯದಲ್ಲಿ ಜನಸಾಮಾನ್ಯರತ್ತ ಹೊರಳಿತು. ವಚನಕಾರರು ಜನ ಸಾಮಾನ್ಯರಿಗೆ ಅರ್ಥವಾಗುವಂತಹ ಸಾಹಿತ್ಯ ರಚನೆಯನ್ನು ಮಾಡಿದರು. ಸಾಹಿತ್ಯ ಶ್ರೀಮಂತವಾಯಿತು. ಸಾಹಿತ್ಯವು ಜನಸಾಮಾನ್ಯರೆಡೆಗೆ ಬಂದಾಗ ಉಳಿಯುತ್ತದೆ” ಎಂದರು.
ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿ “ಹೆಬ್ರಿ ಕಸಾಪ ಘಟಕವು ಕನ್ನಡ ಡಿಂಡಿಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಸಾಹಿತ್ಯದೆಡೆಗೆ ಸೆಳೆಯುವ ಕಾರ್ಯಕ್ರಮ ಉತ್ತಮವಾಗಿ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಮತ್ತು ಪುಸ್ತಕ ಪ್ರೀತಿಯನ್ನು ಬೆಳೆಸಿದಾಗ ಮುಂದಿನ ಪೀಳಿಗೆ ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿ ಉಳಿಯುತ್ತದೆ” ಎಂದರು.
ಶರಣ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಅಧ್ಯಕ್ಷರಾದ ಶಾರದಾ ವಿನಯ್, ಉಪ ಪ್ರಾಂಶುಪಾಲರಾದ ದಿವಾಕರ ಮರಕಾಲ ಎಸ್., ಕ.ಸಾ.ಪ. ಹೆಬ್ರಿ ಘಟಕದ ಗೌರವ ಕಾರ್ಯದರ್ಶಿ ಮಂಜುನಾಥ ಕೆ. ಶಿವಪುರ, ಸುರೇಶ ಭಂಡಾರಿ, ಜನಾರ್ಧನ್ ಹೆಬ್ರಿ, ಅಕ್ಷರ ಸಾಹಿತ್ಯ ಸಂಘದ ಅಧ್ಯಕ್ಷೆ ವಿದ್ಯಾರ್ಥಿನಿ ಸನ್ವಿತಾ ವೇದಿಕೆಯಲ್ಲಿದ್ದರು.
ಕ.ಸಾ.ಪ. ಹೆಬ್ರಿ ಘಟಕದ ಸಂಘಟನಾ ಕಾರ್ಯದರ್ಶಿ ಪ್ರೀತೇಶ್ ಕುಮಾರ್ ಸ್ವಾಗತಿಸಿ, ವಿದ್ಯಾ ಜನಾರ್ದನ್ ಹೆಬ್ರಿ ವಂದಿಸಿ, ಅಧ್ಯಾಪಕರಾದ ಪ್ರಕಾಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಸಂಗೀತಾ ಬಹುಮಾನ ಪಟ್ಟಿಯನ್ನು ವಾಚಿಸಿದರು. ಕನ್ನಡ ಡಿಂಡಿಮ ಕಾರ್ಯಕ್ರಮದನ್ವಯ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.