ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 14 ಮಾರ್ಚ್ 2026ರಂದು ‘ಕಾವ್ಯಾಂ ವ್ಹಾಳೊ-12’ ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಿತು.
ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಇವರು ಪ್ರಾಸ್ತಾವಿಕವಾಗಿ ಮಾತಾನಾಡಿ “ಕಾವ್ಯಾಂ ವ್ಹಾಳೊ ಎಂಬ ಕಾರ್ಯಕ್ರಮವನ್ನು 08 ಮಾರ್ಚ್ 2025ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಧರ್ಭದಲ್ಲಿ ಮಹಿಳೆಯರಿಗಾಗಿ ಪ್ರಾರಂಭಿಸಿ, ಇಂದು ಸತತ ಹನ್ನೊಂದು ಮಾಸಿಕ ಕವಿಗೋಷ್ಟಿಗಳ ನಂತರ ಕಾವ್ಯಾಂ ವ್ಹಾಳೊ ಇದರ 12ನೇ ಆವೃತ್ತಿಗೆ ತಲುಪಿದೆ. ಕರ್ನಾಟಕ ಸರ್ಕಾರವು ಕೊಂಕಣಿ ಸಮುದಾಯಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ ಕೊಂಕಣಿ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಕೊಂಕಣಿಗರನ್ನು ಒಗ್ಗೂಡಿಸುವ ಮಹತ್ತರವಾದ ಕೆಲಸವನ್ನು ಮಾಡುತ್ತಿದೆ” ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.
ಮುಖ್ಯ ಅಥಿತಿಗಳಾದ ಕೊಂಕಣಿಯ ಖ್ಯಾತ ಹಿರಿಯ ನಟರಾದ ಶ್ರೀ ಎಡೊಲ್ಫಸ್ ಕುಟಿನ್ಹಾ (ಡೊಲ್ಲಾ ಮಂಗಳೂರು)ರವರು ಮಾತಾನಾಡಿ “ನಟನೆಯು ವಿಶಾಲ ಶ್ರೇಣಿಯ ಕೌಶಲ್ಯಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಕಲ್ಪನೆ, ಭಾವನಾತ್ಮಕ ಮಿಡಿತ, ದೈಹಿಕ ಅಭಿವ್ಯಕ್ತತೆ, ಗಾಯನ, ಮಾತಿನ ಸ್ಪಷ್ಟತೆ ಮತ್ತು ನಾಟಕವನ್ನು ಅರ್ಥೈಸುವ ಸಾಮರ್ಥ್ಯ ಸೇರಿವೆ. ಬಾಲ್ಯದಿಂದಲೂ ಮನುಷ್ಯರು ಅನುಕರಣೆಯಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಮತ್ತು ಪ್ರತಿಯೊಬ್ಬರೂ ಅನುಕರಣೆಯ ವಸ್ತುಗಳನ್ನು ಆನಂದಿಸುವುದು ಅಷ್ಟೇ ಸಹಜ. ಹಾಗಾಗಿ ಕೊಂಕಣಿಯ ಕಲಾರಾಧಕರನ್ನು ಹಾಗೂ ಎಲ್ಲಾ ಕ್ಷೇತ್ರದ ಅನುಭವಿ ವ್ಯಕ್ತಿಗಳನ್ನು ಗುರುತಿಸಿ ಶ್ಲಾಘಿಸುವಂತಹ ಕೆಲಸವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಡಿತ್ತಿದೆ” ಎಂದು ಶುಭ ಹಾರೈಸಿ, ಅಕಾಡೆಮಿಯನ್ನು ಅಭಿನಂದಿಸಿದರು.
ಕೊಂಕಣಿ ಭಾಷೆಯ ಹಿರಿಯ ಕಾರ್ಯಕರ್ತೆ ಹಾಗೂ ಹೆಸರಾಂತ ನಟಿ, ಕವಯತ್ರಿ ಶ್ರೀಮತಿ ಗೀತಾ ಸಿ. ಕಿಣಿ ಇವರನ್ನು ಸನ್ಮಾನಿಲಾಯಿತು.
ಖ್ಯಾತ ಕವಯತ್ರಿಗಳಾದ ಶ್ರೀಮತಿ ಸಲೋಮಿ ಡಿಸೋಜಾರವರು ಕವಿಗೋಷ್ಟಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ವಲೇರಿಯನ್ ಸಿಕ್ವೇರಾ, ಮೆಲ್ವಿನ್ ವಾಸ್ ನೀರ್ಮಾರ್ಗ, ಪ್ಲಾವಿಯಾ ಕ್ಯಾಸ್ತಲಿನೊ, ಆ್ಯಂಟನಿ ಲುವಿಸ್ ಮಣಿಪಾಲ, ರೋಶನ್ ಕ್ಯಾಸ್ತಲಿನೊ, ಶೈಲಾ ಮಂಗ್ಳೂರ್ಕರ್, ಸ್ಟ್ಯಾನಿ ಡಿಸೋಜಾ, ಸತ್ಯವತಿ ಕಾಮತ್, ಸುವರ್ಣ ಗಾಡ ಹೊನ್ನಾವರ ಮತ್ತು ಪೂರ್ಣಿಮಾ ಸುರೇಶ್ ನಾಯಕ್ ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ರೊನಾಲ್ಡ್ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯರಾದ ಶ್ರೀ ಸಮರ್ಥ್ ಭಟ್, ಶ್ರೀ ನವೀನ್ ಲೋಬೊ, ಶ್ರೀಮತಿ ಅಕ್ಷತಾ ನಾಯಕ್ ಉಪಸ್ಥಿತರಿದ್ದರು.
