ಕುಂಬಳೆ : ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದಲ್ಲಿ ದಿನಾಂಕ 21 ಜೂನ್ 2026ರಂದು ಕಯ್ಯಾರು ಕೊಕ್ಕೆಚಾಲು ಕಾಮಿಲ್ ಶಾಲಾ ವಠಾರದಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.


ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಇವರು ಮಾತನಾಡಿ “ಕಾಸರಗೋಡಿನ ಕನ್ನಡ ಅಸ್ಥಿತೆ ನಿಜವಾಗಿಯೂ ಸ್ತುತ್ಯರ್ಹವಾದುದು. ಇಲ್ಲಿನವರ ಶುದ್ಧ ಭಾಷಾಪ್ರೇಮ ಕರ್ನಾಟಕಕ್ಕೂ ಮಾದರಿ. ಕಯ್ಯಾರ ಬದುಕು-ಬರಹ ಸಾರ್ವಕಾಲಿಕ ಮೌಲ್ಯದ್ದು” ಎಂದು ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ, “ಕವಿ ನಾಡೋಜ ಕಯ್ಯಾರರು ಕ್ರಾಂತಿ ಮತ್ತು ಕರೆಯ ಅನನ್ಯ ರೂಪಗಳಲ್ಲಿ ಕನ್ನಡ ಭಾಷೆಗೆ ಹೊಸ ವ್ಯಾಖ್ಯಾನ ಬರೆದವರು” ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಎ.ಟಿ.ಎಸ್. ಆಡಳಿತ ನಿರ್ದೇಶಕ ಡಾ. ಮೂಡಂಬೈಲು ರವಿ ಶೆಟ್ಟಿ ದೋಣಿಂಜೆಗುತ್ತು ಇವರಿಗೂ ಪ್ರಶಸ್ತಿ ಪ್ರದಾನಿಸಲಾಯಿತು. ಶಾಸಕ ಎ.ಕೆ.ಎಂ. ಅಶ್ರಫ್ ಅವರು, “ಕನ್ನಡ ಭಾಷೆ, ಸಂಸ್ಕೃತಿಯ ಪ್ರೇಮ ತನ್ನಲ್ಲಿ ಒಡ ಮೂಡಲು ಪದವಿ ತರಗತಿಯಲ್ಲಿ ಅಧ್ಯಯನ ನಡೆಸಿದ್ದ ಕಯ್ಯಾರರ ವಿವಿಧ ಸಾಹಿತ್ಯ ಬರಹಗಳೇ ಕಾರಣ” ಎಂದರು. ಈ ಸಂದರ್ಭ ಶಿವಾನಂದ ಕೋಟ್ಯಾನ್ ಕಟಪಾಡಿ ಇವರು ರಚಿಸಿದ ‘ಪರಂಪರೆಯ ಪಯಣ’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಬಿಡುಗಡೆಗೊಳಿಸಿದರು. ಡಾ. ಪ್ರಸನ್ನ ರೈ ಕಲ್ಲಕಳಿಯ ಇವರು ಕಯ್ಯಾರರ ಗೀತೆಗಳ ಗಾಯನ ನಡೆಸಿದರು.

ಕಯ್ಯಾರು ಚರ್ಚ್‌ನ ಧರ್ಮಗುರು ವಿಶಾಲ್ ಮೋನಿಶ್, ಪೈವಳಿಕೆ ಪಂ. ಅಧ್ಯಕ್ಷೆ ಬದರುನ್ನಿಸ ಸಲೀಂ, ಜಿ.ಪಂ. ಸದಸ್ಯ ಸೋಮಶೇಖರ ಜೆ.ಎಸ್. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಂಜೇಶ್ವರ ಬ್ಲಾಕ್ ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಮೋಹನ್ ರೈ, ಸದಸ್ಯೆ ಚಂದ್ರಾವತಿ ಶೆಟ್ಟಿ ಪೈವಳಿಕೆ ಗ್ರಾ.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀನಾ ಝಡ್.ಎ.ಕಯ್ಯಾರ್, ಪೈವಳಿಕೆ ಗ್ರಾ.ಪಂ. ಸದಸ್ಯೆ ಪ್ರಿನ್ಸಿ ಡಿ’ಸೋಜಾ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ ಮುಖ್ಯ ಅತಿಥಿಗಳಾಗಿದ್ದರು.



ಸಾಮಾಜಿಕ ಕಾರ್ಯಕರ್ತ ದೀಪಕ್ ವಿ.ಕೆ., ಜಾನಪದ ಕಲಾವಿದ ಸೋಮಯ್ಯ ಅಶ್ವತ್ಥಕಟ್ಟೆ, ಪ್ರಗತಿಪರ ಕೃಷಿಕ ರಾಮಣ್ಣ ಅತ್ತಾರ್. ನಾಟಿ ವೈದ್ಯ ಮೊಹಮ್ಮದ್ ಪರಂಬಳ ಇವರಿಗೆ ಗೌರವಾರ್ಪಣೆ ನಡೆಯಿತು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಕರ್ನಾಟಕ ಗಮಕ ಕಲಾಪರಿಷತ್ತು, ಕಾಸರಗೋಡು ಅಧ್ಯಕ್ಷ ತೆಕ್ಕಕೆರೆ ಶಂಕರ ನಾರಾಯಣ ಭಟ್, ಮಂಜೇಶ್ವರ ಬ್ಲಾಕ್ ಪಂ.ಮಾಜಿ ಸದಸ್ಯರಾದ ಬೇಬಿ ಶೆಟ್ಟಿ ಪ್ರಸಾದ್ ರೈ ಕಯ್ಯಾರ್, ಕಾಮಿಲ್ ಅಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಮೊಯ್ದಿನ್ ಕುಂಞ್ಞ ಮಾಸ್ತರ್ ಉಪಸ್ಥಿತರಿದ್ದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿ, ಪುರುಷೋತ್ತಮ ಭಟ್.ಕೆ. ವಂದಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.
