ಪೆರಿಯ : ಬೇಕಲದ ಗೋಕುಲಂ ಗೋಶಾಲೆಯಲ್ಲಿ ಜರುಗುತ್ತಿರುವ ಮೂರನೇ ಆವೃತ್ತಿಯ ‘ವೈಶಾಖ ನಟನಂ’ ರಾಷ್ಟ್ರೀಯ ನೃತ್ಯೋತ್ಸವದಲ್ಲಿ, ಖ್ಯಾತ ಚಲನಚಿತ್ರ ಹಾಗೂ ಕಿರುತೆರೆ ನಟಿ ರಚನಾ ನಾರಾಯಣನ್‌ಕುಟ್ಟಿ ಇವರ ಕುಚಿಪುಡಿ ನೃತ್ಯ ಪ್ರದರ್ಶನವು ಕಲಾಭಿಮಾನಿಗಳಿಗೆ ಮರೆಯಲಾಗದ ದೈವಿಕ ಅನುಭವವನ್ನು ನೀಡಿತು.
ಕಾವಾಲಂ ನಾರಾಯಣ ಪಣಿಕ್ಕರ್ ಇವರ ‘ಬಾಲಗಣಪತಿ ಸ್ತುತಿ’ಯೊಂದಿಗೆ ಕಾರ್ಯಕ್ರಮ ಆರಂಭಿಸಿದ ರಚನಾ, ನಂತರದ ‘ದುರ್ಗಾ ತರಂಗಂ’ ಪ್ರಸ್ತುತಿಯಲ್ಲಿ ತಮ್ಮ ಅಭಿನಯ ಚಾತುರ್ಯವನ್ನು ಪೂರ್ಣ ಪ್ರಮಾಣದಲ್ಲಿ ಅನಾವರಣಗೊಳಿಸಿದರು. ಪ್ರಸಿದ್ಧ ಭಕ್ತಿಗೀತೆ ‘ಗುರುವಾಯೂರು ಏಕಾದಶಿ ತೊಝುವಾನ್’ ಹಾಡಿಗೆ ನರ್ತಿಸುತ್ತಾ ಪ್ರೇಕ್ಷಕರ ನಡುವೆ ಇಳಿದು ಬಂದಾಗ, ಇಡೀ ಸಭಾಂಗಣವು ಭಕ್ತಿಭಾವದಲ್ಲಿ ಲೀನವಾಯಿತು.


ಸತತ ಮೂರನೇ ವರ್ಷವೂ ಗೋಶಾಲೆಯ ಈ ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸುತ್ತಿರುವ ರಚನಾ ನಾರಾಯಣನ್‌ಕುಟ್ಟಿಯವರು
“ಗೋಕುಲಂ ಗೋಶಾಲೆಯು ನನ್ನ ಅತ್ಯಂತ ಪ್ರಿಯವಾದ ವೇದಿಕೆಗಳಲ್ಲಿ ಒಂದಾಗಿದೆ. ಇಲ್ಲಿ ನೃತ್ಯ ಪ್ರದರ್ಶಿಸುವುದನ್ನು ನನಗೆ ಲಭಿಸಿದ ಪುಣ್ಯವೆಂದು ಭಾವಿಸುತ್ತೇನೆ” ಎಂದರು. ಹಿನ್ನೆಲೆಯಲ್ಲಿ ಗುರುವಾಯೂರು ಭಾಗ್ಯಲಕ್ಷ್ಮಿ ಇವರ ಗಾಯನಕ್ಕೆ ಕಾರ್ತಿಕ ಅವರು ನಟ್ಟುವಾಂಗಂ ನಿರ್ವಹಿಸಿದರು. ಕಲಮಂಡಲಂ ನವೀನ್ (ಮೃದಂಗ) ಮತ್ತು ಶ್ರೀಜಿತ್ ಕಮ್ಮತ್ (ಕೊಳಲು) ವಾದ್ಯ ಸಹಕಾರ ನೀಡಿದರು.


