ಒಡಿಸ್ಸಾ : ತಜ್ಞರಿಂದ ಜ್ಞಾನವನ್ನು ಪಡೆದುಕೊಳ್ಳುವ ವಿನೂತನ ಜಾಗತಿಕ ಕಾರ್ಯಕ್ರಮವಾದ ‘ಟೆಡ್ ಎಕ್ಸ್’ ಒಡಿಸ್ಸಾದ ಭುವನೇಶ್ವರದಲ್ಲಿರುವ ಪ್ರತಿಷ್ಠಿತ ಕಳಿಂಗ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 30 ಮಾರ್ಚ್ 2026ರಂದು ಜರಗಿದ್ದು, ಜಾದೂಗಾರ ಕುದ್ರೋಳಿ ಗಣೇಶ್ ರವರು ಜಾದೂ ಕಲೆಯ ಮಹತ್ವದ ಆಯಾಮದ ಬಗ್ಗೆ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನೀಡಿದರು. “ಮನುಷ್ಯನ ಮನಸ್ಸಿಗೆ ಹಾಗೂ ಪಂಚೇಂದ್ರಗಳಿಗೆ ಇರುವ ಇತಿಮಿತಿಗಳನ್ನು ಬಳಸಿಕೊಂಡು ಜಾದೂಗಾರರು ಅಚ್ಚರಿಯನ್ನು ಹೇಗೆ ಸೃಷ್ಟಿ ಮಾಡುತ್ತಾರೆ” ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಕುದ್ರೋಳಿ ಗಣೇಶ್ ವಿವಿಧ ಜಾದೂ ತಂತ್ರಗಳನ್ನು ಪ್ರದರ್ಶಿಸಿ ವಿಚಾರ ಮಂಡಿಸಿದರು.
ಕಳಿಂಗ ಮಹಾವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ. (ಡಾ.) ಸರನ್ಜಿತ್ ಸಿಂಗ್ ರವರು ಕುದ್ರೋಳಿ ಗಣೇಶ್ ರವರನ್ನು ಸನ್ಮಾನಿಸಿದರು. ವಿಶ್ವ ವಿದ್ಯಾಲಯದ ಉನ್ನತ ಅಧಿಕಾರಿಗಳು ಹಾಗೂ ಸಂಘಟನಾ ಸಮಿತಿಯವರು ಉಪಸ್ಥಿತರಿದ್ದರು. ದೇಶದ ವಿವಿಧೆಡೆಯಿಂದ ಆಗಮಿಸಿದ ವಿವಿಧ ಕ್ಷೇತ್ರಗಳ ಒಟ್ಟು 10 ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ನಡೆದ ಟೆಡ್ ಎಕ್ಸ್ ವಿಚಾರ ಸಂಕಿರಣದಲ್ಲಿ ಕೆಐಐಟಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

