ಕೋಟ : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಾಹೆ ಹಾಗೂ ವಿವೇಕಾ ಪದವಿಪೂರ್ವ ಕಾಲೇಜು ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಿಸ್ತರಣಾ ಉಪನ್ಯಾಸ ಮಾಲಿಕೆಯ 6ನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 17-11-2023ರಂದು ಕೋಟದ ವಿವೇಕಾ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ‘ಕನಕದಾಸರ ಸಾಹಿತ್ಯದ ಭಾಷೆ-ಸಮಕಾಲೀನ ಪ್ರಜ್ಞೆ’ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಕುಂದಾಪುರ ಹಕ್ಲಾಡಿಯ ಸರಕಾರಿ ಪ್ರೌಢಶಾಲೆಯ ಕನ್ನಡ ಉಪನ್ಯಾಸಕರಾದ ಡಾ. ಕಿಶೋರ್ ಕುಮಾರ್ ಶೆಟ್ಟಿಯವರು “ಕನಕದಾಸರು ಕಾವ್ಯ ಮತ್ತು ಕೀರ್ತನ ಕ್ಷೇತ್ರಗಳಲ್ಲಿ ಕೃಷಿ ಮಾಡಿದವರು. ಹಿರಿಯ ಮಾನವ ಬಂಧು ಎಂಬ ವಿಚಾರವನ್ನು ಸಾಂಸಾರಿಕ ಬದುಕಿನ ಅನುಭವ ರಹಸ್ಯವನ್ನು ಸಮಾಜದ ಲೋಪ, ದೋಷಗಳನ್ನು ಸಮರ್ಥವಾಗಿ ಗುರುತಿಸಿ ಮೃದುವಾಗಿ ಟೀಕಿಸಿದವರು. ರಾಮಾಯಣ, ಮಹಾಭಾರತ, ಭಾಗವತ, ವೇದೋಪನಿಷತ್ತು ಹಾಗೂ ಪುರಾಣ ಮುಂತಾದವುಗಳನ್ನು ಚೆನ್ನಾಗಿ ಬಲ್ಲ ಕನಕದಾಸರು ಸಂಗೀತದ ಸಹಚರ್ಯೆಯ ಸರಳ ಕನ್ನಡದ ಮೂಲಕ ಸಮಕಾಲೀನ ಸಮಾಜದ ಆರ್ಥಿಕ, ಸಾಮಾಜಿಕ, ನೈತಿಕ, ತಾತ್ವಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಕಾವ್ಯ ಮತ್ತು ಕೀರ್ತನೆಗಳ ಮೂಲಕ ಅಭಿವ್ಯಕ್ತಿಗೊಳಿಸಿದರು. ಸರಳ ಸಾಹಿತ್ಯ, ಸರಳ ಕನ್ನಡವನ್ನು ದೇಶಛಂದೋರೂಪಗಳನ್ನು ಜನಪದಸತ್ವವನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡರು. ಆದಿಪ್ರಾಸ, ಒಳಪ್ರಾಸ ಶಬ್ದಾಲಂಕಾರ, ದ್ವಿರುಕ್ತಿ ಬಳಕೆಯೊಂದಿಗೆ ಕೀರ್ತನೆ ಮತ್ತು ಕಾವ್ಯಗಳ ರಚನೆಗೆ ಮುಂದಾದ ಕನಕದಾಸರು ಮಾತ್ರೆಗಳಿಗಿಂತ ಹೆಚ್ಚಾಗಿ ಲಯಕ್ಕೆ ಒತ್ತು ನೀಡಿದರು. ಕೀರ್ತನೆಗಳ ರಚನೆಯಲ್ಲಿ ಅಂಶಗಣ ಛಂದಸ್ಸನ್ನು ಹೆಚ್ಚು ಹೆಚ್ಚು ಬಳಸಿದರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಕನಕದಾಸರ ಸಾಹಿತ್ಯದ ಬಹುಮುಖ್ಯ ವಿಶಿಷ್ಟತೆಯೆಂದರೆ ತದ್ಭವಗಳನ್ನು ಯಥೇಚ್ಛವಾಗಿ ಕೀರ್ತನೆ ಹಾಗೂ ಕಾವ್ಯಗಳಲ್ಲಿ ಬಳಸಿಕೊಂಡಿರುವುದು. ಮಾತ್ರವಲ್ಲದೆ ಕನಕದಾಸರ ಸಾಹಿತ್ಯದಲ್ಲಿ ಸಮಕಾಲೀನ ಪ್ರಜ್ಞೆ ಹಾಸುಹೊಕ್ಕಾಗಿದೆ. ಅವರು ಜ್ಞಾನಮಾರ್ಗ ಬಿಟ್ಟು ಭಕ್ತಿಮಾರ್ಗ ಅನುಸರಿಸುವುದಕ್ಕೆ ಹೆಚ್ಚು ಒತ್ತು ನೀಡಿದರು. ಕನಕದಾಸರು ಕಾಲದ ಸಮುದಾಯ ಜೀವನದ ಅಗತ್ಯತೆಗಳನ್ನು ಒತ್ತಿ ಹೇಳಿದ್ದಾರೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ್ ನಾವಡ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಜಗದೀಶ್ ಬಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತಾಡಿ, ವಿದ್ಯಾರ್ಥಿನಿ ಕುಮಾರಿ ಸಹನಾ ಕಾಮತ್ ನಿರೂಪಿಸಿ ವಂದಿಸಿದರು.