ಮಂಗಳೂರು : ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ರಜತ ಪರ್ವ ಸಂಭ್ರಮದ ಅಂಗವಾಗಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ಇದರ ವರ್ಣರಂಜಿತ ಲಾಂಛನವು ದಿನಾಂಕ 07 ಮೇ 2026ರಂದು ಬಿಡುಗಡೆಗೊಂಡಿತು.
ಲಾಂಛನವನ್ನು ಬಿಡುಗಡೆಗೊಳಿಸಿದ ಮುಂಬೈ ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ, ಮಹಾದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿಯವರು ಮಾತನಾಡಿ “ಯಾವುದೇ ಸಾಂಸ್ಕೃತಿಕ ಸಂಸ್ಥೆ ಇಪ್ಪತ್ತೈದು ವರ್ಷಗಳನ್ನು ಪೂರೈಸುವುದು ಅದರ ಸಾಧನೆಯಲ್ಲೊಂದು ಮೈಲಿಗಲ್ಲು. ಮುಂಬೈಯಲ್ಲಿ ಯಕ್ಷಗಾನ ತರಬೇತಿ, ಊರಿನ ಪ್ರಸಿದ್ಧ ಕಲಾವಿದರಿಂದ ಸರಣಿ ತಾಳಮದ್ದಳೆ, ಬಯಲಾಟ ಪ್ರದರ್ಶನ, ಯಕ್ಷ ರಕ್ಷಾ ಪ್ರಶಸ್ತಿ ಪ್ರದಾನ, ಗ್ರಂಥ ಪ್ರಕಟಣೆ, ಕಲಾವಿದರಿಗೆ ನೆರವು, ಸನ್ಮಾನ – ಗೌರವಗಳನ್ನು ನೀಡುತ್ತಿರುವ ಅಜೆಕಾರು ಕಲಾಭಿಮಾನಿ ಬಳಗ ತನ್ನ ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ಒಂದು ಬೃಹತ್ ಸಮ್ಮೇಳನದ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಮುಂಬಯಿ ಯಕ್ಷಗಾನ ಸಮ್ಮೇಳನ ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗುವುದರಲ್ಲಿ ಅನುಮಾನವಿಲ್ಲ. ಇಂತಹ ಸತ್ಕಾರ್ಯಕ್ಕೆ ಯಕ್ಷಗಾನ ಕಲಾಭಿಮಾನಿಗಳು, ಉದ್ಯಮಿಗಳು ಹಾಗೂ ಸಮಾಜದ ಗಣ್ಯರು ಮುಕ್ತ ಮನಸ್ಸಿನಿಂದ ಕೈಜೋಡಿಸಬೇಕು” ಎಂದು ನುಡಿದರು.

ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಮತ್ತು ಸಮ್ಮೇಳನದ ಕಾರ್ಯಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಮಾತನಾಡಿ “ಈ ಹಿಂದೆ ಅಕ್ಟೋಬರ್ 24ಕ್ಕೆ ನಿಗದಿಯಾಗಿದ್ದ ಮುಂಬಯಿ ಯಕ್ಷಗಾನ ಸಮ್ಮೇಳನವನ್ನು ಸಮಯಾನುಕೂಲತೆಗಾಗಿ ಅದೇ ತಿಂಗಳ ಮೊದಲನೇ ವಾರದಲ್ಲಿ ದಿನಾಂಕ 03 ಮತ್ತು 04 ಅಕ್ಟೋಬರ್ 2026ರಂದು ಶನಿವಾರ ಹಾಗೂ ಭಾನುವಾರ ಮುಂಬೈ ಕುರ್ಲಾದ ಬಂಟರ ಭವನದಲ್ಲಿ ಎರಡು ದಿನ ಪರ್ಯಂತ ನಡೆಸಲು ನಿರ್ಧರಿಸಲಾಗಿದೆ” ಎಂದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲೆಯ ಮಹಾಪೋಷಕರು ಮತ್ತು ಕೊಡುಗೈ ದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿಯವರು ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ನೀಡುವರೆಂದು ಅವರು ಘೋಷಿಸಿದರು.

ಸಮ್ಮೇಳನದ ಪ್ರಧಾನ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ “ಮುಂಬಯಿ ಯಕ್ಷಗಾನ ಸಮ್ಮೇಳನದ ಸ್ಮರಣಾರ್ಥವಾಗಿ “ಯಕ್ಷ ಮುಂಬೆಳಗು” ಎಂಬ ಸವಿ ಸಂಪುಟವನ್ನು ಬಿಡುಗಡೆಗೊಳಿಸಲಾಗುವುದು. ಇದು ನೂರೆಂಟು ವಿದ್ವಾಂಸರ ಸಂಶೋಧನಾತ್ಮಕ ಬರಹಗಳನ್ನೊಳಗೊಂಡು ಒಂದು ಸಂಗ್ರಾಹ್ಯ ಗ್ರಂಥವಾಗಲಿದೆ. ಅದಕ್ಕಾಗಿ ಸ್ಮರಣ ಸಂಚಿಕೆ ಸಮಿತಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ” ಎಂದರು. ಸಮ್ಮೇಳನ ಸಮಿತಿ ಪದಾಧಿಕಾರಿಗಳಾದ ವಿಜಯ ಶೆಟ್ಟಿ ಅಜೆಕಾರು, ದೀವಿತ್ ಎಸ್.ಕೆ. ಪೆರಾಡಿ ಮತ್ತು ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಉಪಸ್ಥಿತರಿದ್ದರು.

