ಉಜಿರೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿಂದ ಪ್ರಥಮ ಬಾರಿಗೆ ರಾಜ್ಯ ಮಹಿಳಾ ಗೋಷ್ಠಿ ದಿನಾಂಕ 27 ಅಕ್ಟೋಬರ್ 2024ರಂದು ಧರ್ಮಸ್ಥಳದ ನೇತ್ರಾವತಿ ಬಳಿಯ ಸೂರ್ಯ ಕಮಲ್ ಸಭಾಂಗಣದಲ್ಲಿ ನಡೆಯಲಿದೆ.
ಬೆಳಗ್ಗೆ 9.30ಕ್ಕೆ ‘ಆಸರೆ’ ಚಾರಿಟೆಬಲ್ ಟ್ರಸ್ಟ್ ಇದರ ಅಧ್ಯಕ್ಷೆಯಾದ ಡಾ. ಆಶಾಜ್ಯೋತಿ ರೈ ಗೋಷ್ಠಿಯನ್ನು ಉದ್ಘಾಟಿಸಲಿದ್ದು, ವಿನುತಾ ಕೆ. ಆರ್. ರಾಮನಗರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಡಾ. ಪ್ರಮೀಳಾ ರಾವ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ.
ಸಭಾಕಾರ್ಯಕ್ರಮದ ಬಳಿಕ ಕವಯತ್ರಿ ಸಮ್ಮಿಲನ ನಡೆಯಲಿದ್ದು, ಸಾಹಿತಿ ಶೈಲಜಾ ಗೋರನಮನೆ ಅವಲೋಕನ ಮಾಡಲಿದ್ದಾರೆ. ಕವಿಗೋಷ್ಠಿಯಲ್ಲಿ ನಾಡಿನ ಸುಮಾರು 20 ಮಂದಿ ಕವಯತ್ರಿಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಘಂಟೆ 2.00ರಿಂದ ‘ಕನ್ನಡ ಸಾಹಿತ್ಯದಲ್ಲಿ ಸ್ತ್ರೀ’ ಎಂಬ ವಿಷಯದಲ್ಲಿ ಸಾಹಿತ್ಯ ಗೋಷ್ಠಿ ನಡೆಯಲಿದ್ದು, ವಚನ ಸಾಹಿತಿ ಡಾ. ಶಕುಂತಲಾ ಗೋಪಶೆಟ್ಟಿ ರಾಯಚೂರು ಉಪನ್ಯಾಸ ನೀಡಲಿದ್ದಾರೆ. ‘ಜನಪದ ಸಾಹಿತ್ಯದಲ್ಲಿ ಸ್ತ್ರೀ’ ವಿಷಯದ ಕುರಿತು ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಮಂಜುಳಾ ಕಲ್ಬುರ್ಗಿ ವಿಚಾರ ಮಂಡನೆಯನ್ನು ಮಾಡಲಿದ್ದು, ‘ವಚನ ಸಾಹಿತ್ಯದಲ್ಲಿ ಸ್ತ್ರೀ’ ಎಂಬ ವಿಷಯದಲ್ಲಿ ಬೀದರ್ ಇಲ್ಲಿನ ಹುಮ್ನಾಬಾದ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಜಗದೇವಿ ತಿಬಶೆಟ್ಟಿ ವಿಚಾರ ಮಂಡಿಸಲಿದ್ದಾರೆ. ‘ಆಧುನಿಕ ಸಾಹಿತ್ಯದಲ್ಲಿ ಸ್ತ್ರೀ’ ವಿಷಯದಲ್ಲಿ ಕವಿಗಳಾದ ರತ್ನಾ ಬಡವನಹಳ್ಳಿ ಮಧುಗಿರಿ ವಿಚಾರ ಮಂಡಿಸಲಿದ್ದಾರೆ.
ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಾಹಿತಿ ಶಾಂತಾ ನಾಗಮಂಗಲ ಸಮಾರೋಪ ಭಾಷಣ ಮಾಡಲಿದ್ದಾರೆ.